ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಥಣಿ: ಲಾಕ್‌ಡೌನ್‌ನಿಂದ ತೊಂದರೆ ವ್ಯರ್ಥವಾಗುತ್ತಿದೆ ಸಾವಿರಾರು ಲೀಟರ್ ಹಾಲು!

Last Updated 19 ಏಪ್ರಿಲ್ 2020, 11:49 IST
ಅಕ್ಷರ ಗಾತ್ರ

ಅಥಣಿ (ಬೆಳಗಾವಿ ಜಿಲ್ಲೆ): ತಾಲ್ಲೂಕಿನ ಕೃಷ್ಣಾ ನದಿ ತೀರದಲ್ಲಿರುವ ಮಹಿಷವಾಡಗಿ, ಜನವಾಡ, ನಂದೇಶ್ವರ, ಸತ್ತಿ, ಸವದಿ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಹೈನುಗಾರಿಕೆ ಅವಲಂಬಿಸಿರುವ ತಮಗೆ ಲಾಕ್‌ಡೌನ್‌ನಿಂದಾಗಿ ಅಪಾರ ಹಾನಿಯಾಗುತ್ತಿದೆ ಎಂದು ಗೌಳಿಗರು ತಿಳಿಸಿದರು.

ಸಂಗ್ರಹವಾದ ಹಾಲನ್ನು ಸಾಗಿಸಲಾಗದೆ ಆರ್ಥಿಕ ಸಂಕಷ್ಟ ಎದುರಿಸುವಂತಾಗಿದೆ ಎಂದು ಮಹಿಷವಾಡಗಿಯ ಗೌಳಿಗರು ಹೇಳಿದರು.

ತಾಲ್ಲೂಕಿನ ದಕ್ಷಿಣ ಭಾಗಗಳ ಗ್ರಾಮಗಳ ಗೌಳಿಗರಿಂದ ಸಂಗ್ರಹವಾದ ಹಾಲನ್ನು ಜಮಖಂಡಿ ತಾಲ್ಲೂಕಿನ ಹಿಪ್ಪರಗಿ, ಮುಧೋಳ ತಾಲ್ಲೂಕಿನ ಮಹಾಲಿಂಗಪೂರಕ್ಕೆ ಸಾಗಿಸಲಾಗುತ್ತಿತ್ತು. ಆದರೆ, ಲಾಕ್‌ಡೌನ್‌ನಿಂದಾಗಿ ಹಿಪ್ಪರಗಿ ಡ್ಯಾಂ ಮೇಲಿನ ರಸ್ತೆ ಬಂದ್‌ ಮಾಡಿದ್ದರಿಂದ ಹಾಲು ತೆಗೆದುಕೊಂಡು ಹೋಗಲು ವಾಹನ ಬರುತ್ತಿಲ್ಲ. ಕೃಷ್ಣಾ ನದಿಯಲ್ಲಿ ಮಹಿಷವಾಡಗಿ-ರಬಕವಿ ಮದ್ಯೆ ಸಂಚರಿಸಿ ಹಾಲು ಸಾಗಿಸಲು ಬೋಟ್‌ ವ್ಯವಸ್ಥೆ ಮಾಡಿಕೊಂಡಿದ್ದರು. ಈ ಬೋಟ್ ವ್ಯವಸ್ಥೆಯನ್ನು ಸಹ ಅಧಿಕಾರಿಗಳು ಬಂದ್‌ ಮಾಡಿಸಿದ್ದಾರೆ. ಪರಿಣಾಮ, ಹಾಲನ್ನು ಕೃಷ್ಣಾ ನದಿಯಲ್ಲಿ ಸುರಿಯುವ ಅನಿವಾರ್ಯತೆ ಉಂಟಾಗಿದೆ ಎಂದು ತಿಳಿಸಿದರು.

ಈ ಭಾಗದ ಮೂರ್ನಾಲ್ಕು ಗ್ರಾಮಗಳಲ್ಲಿ ನಿತ್ಯ 8ಸಾವಿರ ಲೀಟರ್‌ಗಿಂತಲೂ ಹೆಚ್ಚಿನ ಹಾಲು ಸಂಗ್ರಹವಾಗುತ್ತದೆ. ಸಾಗಿಸಲು ಯಾವುದೇ ಇಲಾಖೆಯಯವರು ಸಹಕಾರ ನೀಡುತ್ತಿಲ್ಲ. ಆದ್ದರಿಂದ ಗೌಳಿಗರು ರೈತರಿಂದ ಹಾಲು ಸಂಗ್ರಹಿಸಲು ಹಿಂದೇಟು ಹಾಕುತ್ತಿದ್ದಾರೆ. ಪರಿಣಾಮ, ಹೈನುಗಾರಿಕೆಯನ್ನೆ ಅವಲಂಬಿಸಿ ಜೀವನ ಸಾಗಿಸುತ್ತಿದ್ದ ಅನೇಕ ಕುಟುಂಬಗಳು ತೊಂದರೆ ಅನುಭವಿಸುತ್ತಿವೆ. ಹಾಲನ್ನು ಬೀದಿ ನಾಯಿಗಳಿಗೆ ಹಾಕುತ್ತಿರುವ ಉದಾಹರಣೆಗಳೂ ಇವೆ ಎಂದು ರೈತರು ತಿಳಿಸುತ್ತಾರೆ.

‘ಹಾಲು ಸಾಗಿಸಲು ನಿತ್ಯವೂ ತುಂಬಾ ತೊಂದರೆ ಅನುಭವಿಸುತ್ತಿದ್ದೇವೆ. ಹೀಗಾಗಿ, ರೈತರಿಂದ ಹಾಲು ಸಂಗ್ರಹ ಮಾಡುವುದನ್ನೆ ನಿಲ್ಲಿಸುವ ನಿರ್ಧಾರಕ್ಕೆ ಬಂದಿದ್ದೇವೆ. ಗ್ರಾಮದ ಬೀಟ್ ಪೊಲೀಸರು ‌ಕೂಡ ಕಿರುಕುಳ ನೀಡುತ್ತಿದ್ದಾರೆ. ಈ ಬಗ್ಗೆ ಕ್ರಮ ಕೈಗೊಳ್ಳಬೇಕು’ ಎಂದು ಮಹಿಷವಾಡಗಿಯ ಅನಿಲ ಶಿರಹಟ್ಟಿ ಒತ್ತಾಯಿಸಿದರು. ಗೌಳಿಗರಾದ ಚೇತನ ತೇರದಾಳ, ಸುಭಾಸ ಲಾಲಸಿಂಗಿ, ಲಕ್ಷ್ಮಣ ಪಡಸಲಗಿ, ಶ್ರೀಧರ ಶಿರಹಟ್ಟಿ, ರಾಜು ಯಲ್ಲಟ್ಟಿ, ಶಾಂತಿನಾಥ ನಂದಗಾಂವ, ಗುರುರಾಜ ತಮದಡ್ಡಿ, ಸಿದ್ದಪ್ಪ ಬಳವಾಡ, ಪರಶು ಸುಂಕದ ದನಿಗೂಡಿಸಿದರು.

‘ಗೌಳಿಗರು ಹಾಲು ಸಾಗಾಟಕ್ಕೆ ತೊಂದರೆ ಆಗುತ್ತಿರುವುದು ಗಮನಕ್ಕೆ ಬಂದಿದೆ. ಈ ಕುರಿತು ಸಂಬಂಧಿಸಿದವರ ಜೊತೆ ಚರ್ಚಿಸಿ ಅನುಕೂಲ ಮಾಡಿಕೊಡಲಾಗುವುದು’ ಎಂದು ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ನಿರ್ದೇಶಕ ಅಪ್ಪಾಸಾಬ ಅವತಾಡೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT