ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಲು ಉತ್ಪಾದನೆ ಹೆಚ್ಚಳ; ಮಾರಾಟ ಕುಸಿತ!

ಲಾಕ್ ಡೌನ್‌ ಹಿನ್ನೆಲೆಯಲ್ಲಿ ಬೆಮುಲ್‌ಗೆ ನಷ್ಟ
Last Updated 31 ಮಾರ್ಚ್ 2020, 19:30 IST
ಅಕ್ಷರ ಗಾತ್ರ

ಬೆಳಗಾವಿ: ಜಿಲ್ಲೆಯಲ್ಲಿ ಹಾಲು ಉತ್ಪಾದನೆ ಪ್ರಮಾಣ ಹೆಚ್ಚಾಗಿದೆ. ಆದರೆ, ಕೊರೊನಾ ವೈರಾಣು ಸೋಂಕು ಹರಡುವುದನ್ನು ತಡೆಯುವ ಉದ್ದೇಶದಿಂದ ಲಾಕ್‌ಡೌನ್‌ ಘೋಷಿಸಿರುವುದರಿಂದ ಮಾರಾಟ ಕುಸಿದಿದೆ. ಇದರಿಂದ ಹಾಲು ಒಕ್ಕೂಟ, ಖಾಸಗಿ ಡೈರಿಗಳವರು ಹಾಗೂ ಹೈನುಗಾರರು ನಷ್ಟ ಅನುಭವಿಸುವಂತಾಗಿದೆ.

ಇಲ್ಲಿ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ (ಬೆಮುಲ್‌) ಜಾಲ ದೊಡ್ಡದಿದೆ. ಅದರೊಂದಿಗೆ ಖಾಸಗಿ ಕಂಪನಿಗಳು ಕೂಡ ಸಕ್ರಿಯವಾಗಿವೆ. ಇವೆಲ್ಲವುಗಳಿಗೂ ಹಾಲಿನ ಬೇಡಿಕೆ ಕಡಿಮೆಯಾಗಿದೆ.

ಇಲ್ಲಿಂದ ನೆರೆಯ ಮಹಾರಾಷ್ಟ್ರಕ್ಕೆ ಭಾರಿ ಪ್ರಮಾಣದಲ್ಲಿ ಹಾಲು ಪೂರೈಕೆ ಮಾಡಲಾಗುತ್ತಿತ್ತು. ಆದರೆ, ಅಲ್ಲಿ ಕೋವಿಡ್–19 ಪೀಡಿತರ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಕರ್ಫ್ಯೂ ವಿಧಿಸಲಾಗಿದೆ. ಹಲವು ನಿರ್ಬಂಧಗಳನ್ನು ಹೇರಲಾಗಿದೆ. ಹೀಗಾಗಿ, ಅಲ್ಲಿಗೆ ಹಾಲು ಪೂರೈಕೆಯ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿದೆ. ಅಲ್ಲದೇ, ರಾಜ್ಯದಿಂದಲೂ ನೆರೆಯ ಆ ರಾಜ್ಯಕ್ಕೆ ವಾಹನಗಳ ಸಾಗಣೆಗೆ ನಿರ್ಬಂಧ ವಿಧಿಸಲಾಗಿತ್ತು. ಪರಿಣಾಮ, ಹಲವು ದಿನಗಳಿಂದಲೂ ಹಾಲಿನ ಮಾರಾಟ ಚೇತರಿಸಿಕೊಂಡಿಲ್ಲ.

ಪೂರೈಕೆ ನಿಂತಿದೆ:

ಲಾಕ್‌ಡೌನ್‌ನಿಂದಾಗಿ ಹೋಟೆಲ್‌ಗಳು, ಬೇಕರಿಗಳು, ಢಾಬಾಗಳು, ಸಣ್ಣ ಪುಟ್ಟ ಟೀ ಅಂಗಡಿಗಳು, ಲಾಡ್ಜ್‌ಗಳು, ರೆಸ್ಟೋರೆಂಟ್‌ಗಳನ್ನು ಬಂದ್ ಮಾಡಿಸಲಾಗಿದೆ. ಹೀಗಾಗಿ, ಅವುಗಳಿಂದ ಹಾಲು, ಮೊಸರು, ಮಜ್ಜಿಗೆಗೆ ಬೇಡಿಕೆ ಇಲ್ಲ. ಬಹುಪಾಲು ಸರ್ಕಾರಿ ಶಾಲೆಗಳು, ಕಚೇರಿಗಳು, ಹಾಸ್ಟೆಲ್‌ಗಳು, ವಸತಿ ಶಾಲೆಗಳಿಗೆ ರಜೆ ನೀಡಲಾಗಿದೆ. ಆದ್ದರಿಂದ ಅಲ್ಲಿಗೆ ಹಾಲು ಪೂರೈಕೆ ನಿಂತಿದೆ.

ಬೆಮುಲ್‌ನಲ್ಲಿ 130 ಮಂದಿ ಕಾಯಂ ಸೇರಿ 200 ಮಂದಿ ಕಾರ್ಯನಿರ್ವಹಿಸುತ್ತಿದ್ದರು. ಪ್ರಸ್ತುತ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕಿರುವುದರಿಂದ ನೌಕರರ ಸಂಖ್ಯೆ ಕಡಿತಗೊಳಿಸಲಾಗಿದೆ. ಸರಾಸರಿ 120 ಮಂದಿ ಕೆಲಸ ಮಾಡುತ್ತಿದ್ದಾರೆ. ಕೆಲಸಗಾರರ ಕೊರತೆ ಇರುವುದರಿಂದ ಪೇಡ ತಯಾರಿಕೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.

ಬೇಡಿಕೆ ನಿಂತಿದೆ:

ಈ ಬಗ್ಗೆ ಪ್ರತಿಕ್ರಿಯಿಸಿದ ಬೆಮುಲ್‌ ವ್ಯವಸ್ಥಾಪಕ ನಿರ್ದೇಶಕ ಉಬೇದುಲ್ಲಾ ಖಾನ್‌, ‘ಹೋದ ವರ್ಷದ ಇದೇ ಅವಧಿಯಲ್ಲಿ ನಿತ್ಯ 1.85 ಲಕ್ಷ ಲೀಟರ್ ಹಾಲು ಸಂಗ್ರಹವಾಗುತ್ತಿತ್ತು. ಪ್ರಸ್ತುತ 2 ಲಕ್ಷ ಲೀಟರ್‌ ಸಮೀಪಿಸಿದೆ. ನಿತ್ಯ ಸರಾಸರಿ 15ರಿಂದ 20ಸಾವಿರ ಲೀಟರ್‌ ಹೆಚ್ಚಿದೆ. 1.30 ಲಕ್ಷ ಲೀಟರ್‌ ಮಾರಾಟ ಆಗಬೇಕಿತ್ತು. ಆದರೆ, ಈ ಪ್ರಮಾಣವು 50ಸಾವಿರದಿಂದ 60ಸಾವಿರ ಲೀಟರ್‌ಗೆ ಕುಸಿದಿದೆ. ಬೇಡಿಕೆ ಕಡಿಮೆಯಾಗಿರುವುದು ಇದಕ್ಕೆ ಕಾರಣ’ ಎಂದು ಮಾಹಿತಿ ನೀಡಿದರು.

‘ಹೆಚ್ಚುವರಿ ಹಾಲನ್ನು ಹಾಲಿನ ಪುಡಿಯಾಗಿ ಪರಿವರ್ತಿಸಲು ಹಾಗೂ ಬೆಣ್ಣೆ ತಯಾರಿಸಲೆಂದು ಧಾರವಾಡ, ಜಮಖಂಡಿಯ ಡೆಂಪೊ ಮತ್ತು ಯಲಹಂಕದ ಮದರ್‌ ಡೇರಿಗೆ ಕಳುಹಿಸುತ್ತಿದ್ದೇವೆ. ಸಾಮಾನ್ಯ ದಿನಗಳಲ್ಲಿ ಗೋವಾಕ್ಕೆ ಸರಾಸರಿ 45ಸಾವಿರದಿಂದ 60ಸಾವಿರ ಲೀಟರ್‌ ರವಾನಿಸಲಾಗುತ್ತಿತ್ತು. ಈಗ ಈ ಪ್ರಮಾಣ 18ಸಾವಿರದಿಂದ 20ಸಾವಿರಕ್ಕೆ ಬಂದಿದೆ. ಅದೇ ರೀತಿ, ಮಹಾರಾಷ್ಟ್ರಕ್ಕೆ 30ಸಾವಿರದಿಂದ 5ಸಾವಿರ ಲೀಟರ್‌ಗೆ ಇಳಿದಿದೆ. ಕೆಲವೇ ದಿನಗಳಲ್ಲಿ ಪರಿಸ್ಥಿತಿ ಸುಧಾರಿಸುವ ನಿರೀಕ್ಷೆ ಇದೆ’ ಎನ್ನುತ್ತಾರೆ ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT