61.66 ಕೋಟಿ ಯೂನಿಟ್ ವಿದ್ಯುತ್ ಉತ್ಪಾದನೆ

ಕಾರ್ಗಲ್ (ಶಿವಮೊಗ್ಗ): ಕೊರೊನಾ ಸೋಂಕು ಹರಡುವ ಭೀತಿ ನಡುವೆಯೂ ಶರಾವತಿ ಕೊಳ್ಳ ಹಾಗೂ ಭದ್ರಾ ಜಲವಿದ್ಯುದಾಗರಗಳು ನಿರಂತರ ವಿದ್ಯುತ್ ಉತ್ಪಾದನೆಗೆ ಒತ್ತು ನೀಡಿವೆ. ಲಾಕ್‌ಡೌನ್ ಇದ್ದ ಒಂದು ತಿಂಗಳಲ್ಲಿ 61.66 ಕೋಟಿ ಯೂನಿಟ್ ವಿದ್ಯುತ್ ಉತ್ಪಾದಿಸಿವೆ.
ಶರಾವತಿ ಕೊಳ್ಳದ 24 ಘಟಕಗಳ ಪೈಕಿ 21ರಲ್ಲಿ ವಿದ್ಯುತ್ ಉತ್ಪಾದನೆ ನಡೆಯುತ್ತಿವೆ. ಮೂರು ಘಟಕಗಳು ದುರಸ್ತಿಯಲ್ಲಿವೆ. ಇಲ್ಲಿ, 57.18 ಕೋಟಿ ಯೂನಿಟ್ ವಿದ್ಯುತ್ ಉತ್ಪಾದಿಸಲಾಗಿದೆ. ಭದ್ರಾ ಜಲಾಶಯದಲ್ಲಿ ಸಂಗ್ರಹವಾಗುವ ನೀರನ್ನು ಕೃಷಿ ಚಟುವಟಿಕೆಗೂ ಹಾಯಿಸುವುದರಿಂದ ಇಲ್ಲಿ 4.48 ಕೋಟಿ ಯೂನಿಟ್ ವಿದ್ಯುತ್ ಅನ್ನು ಉತ್ಪಾದಿಸಲಾಗಿದೆ.
ಶರಾವತಿ ವಿದ್ಯುದಾಗರದ ಎ.ಬಿ.ಸೈಟಿನ 11 ಘಟಕಗಳ ಪೈಕಿ 10 ಘಟಕಗಳಿಂದ ನಿತ್ಯ ಸರಾಸರಿ 950 ಮೆಗಾವಾಟ್ ವಿದ್ಯುತ್ ಉತ್ಪಾದಿಸಲಾಗುತ್ತಿದೆ. ಮಹಾತ್ಮಗಾಂಧಿ ವಿದ್ಯುದಾಗರದಲ್ಲಿ ಆರು ಘಟಕಗಳು ಕಾರ್ಯನಿರ್ವಹಿಸುತ್ತಿದ್ದು, ನಿತ್ಯ ಸರಾಸರಿ 50 ಮೆಗಾವಾಟ್ ಉತ್ಪಾದಿಸಲಾಗುತ್ತಿದೆ.
ಲಿಂಗನಮಕ್ಕಿಯ ಎರಡು ಘಟಕಗಳಿಂದ 30 ಮೆಗಾವಾಟ್, ಗೇರುಸೊಪ್ಪದ ನಾಲ್ಕು ಘಟಕಗಳಿಂದ 190 ಮೆಗಾವಾಟ್ ವಿದ್ಯುತ್ ಲಭ್ಯವಾಗುತ್ತಿದೆ. ನಾಲ್ಕುಕಡೆ ಉತ್ಪಾದನೆಯಾಗುವ ವಿದ್ಯುತ್ ಅನ್ನು ಉತ್ತರ ಕನ್ನಡ, ಬಳ್ಳಿಗಾವಿ, ಶಿರಸಿ, ಶಿವಮೊಗ್ಗ, ತಾಳಗುಪ್ಪದಲ್ಲಿ ವಿದ್ಯುತ್ ಸ್ವೀಕರಣಾ ಕೇಂದ್ರಗಳಿಗೆ ರವಾನಿಸಲಾಗುತ್ತಿದೆ ಎಂದು ಕೆಪಿಸಿ ಮುಖ್ಯ ಎಂಜಿನಿಯರ್ ಚೈತನ್ಯ ಪ್ರಭು ತಿಳಿಸಿದರು.
‘ಲಿಂಗನಮಕ್ಕಿ ಜಲಾಶಯದಲ್ಲಿ ಸದ್ಯ ಸಮುದ್ರಮಟ್ಟದಿಂದ 1778.95 ಅಡಿ (ಶೇ 38.9) ನೀರಿನ ಸಂಗ್ರಹವಿದೆ.
ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಈ ವರ್ಷ 10 ಅಡಿ ಹೆಚ್ಚಿದೆ. ಜೂನ್ 15ರವರೆಗೆ ವಿದ್ಯುತ್ ಉತ್ಪಾದಿಸಲು ಸಾಕಾಗಲಿದೆ’ ಎಂದು ವಿವರಿಸಿದರು.
**
ಕೋವಿಡ್–19 ಭೀತಿಯ ಹಿನ್ನೆಲೆಯಲ್ಲಿ ಶರಾವತಿ ಕಣಿವೆ ಯೋಜನಾ ಪ್ರದೇಶದ ಜಲವಿದ್ಯುದಾಗರಗಳಲ್ಲಿ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಲಾಗಿದೆ.
-ಚೈತನ್ಯ ಪ್ರಭು, ಮುಖ್ಯ ಎಂಜಿನಿಯರ್, ಕೆ.ಪಿ.ಸಿ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.