ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಕ್‌ಡೌನ್‌: ಹೆಜ್ಜೆ ಹಿಂದಿಟ್ಟ ಸರ್ಕಾರ

ದ್ವಿಚಕ್ರ ವಾಹನ ಓಡಾಟಕ್ಕಿಲ್ಲ ಅವಕಾಶ: ಐಟಿ–ಬಿಟಿ ಸಿಬ್ಬಂದಿಗೆ ಮನೆಯಿಂದಲೇ ಕೆಲಸ
Last Updated 18 ಏಪ್ರಿಲ್ 2020, 20:09 IST
ಅಕ್ಷರ ಗಾತ್ರ

ಬೆಂಗಳೂರು: ಕೋವಿಡ್ 19 ಪ್ರಕರಣಗಳು ಪತ್ತೆಯಾದ ಪ್ರದೇಶಗಳನ್ನು ಹೊರತುಪಡಿಸಿ ಉಳಿದ ಕಡೆಗಳಲ್ಲಿ ಲಾಕ್‌ಡೌನ್‌ ನಿರ್ಬಂಧ ಸಡಿಲಿಸುವುದಾಗಿ ಶನಿವಾರ ಮಧ್ಯಾಹ್ನ ಪ್ರಕಟಿಸಿದ್ದ ರಾಜ್ಯ ಸರ್ಕಾರ, ಕೆಲವೇ ಗಂಟೆಗಳಲ್ಲಿ ಇಟ್ಟ ಹೆಜ್ಜೆಯಿಂದ ಹಿಂದೆ ಸರಿದಿದೆ.

ಇದೇ 20ರಿಂದ ದ್ವಿಚಕ್ರ ವಾಹನ ಓಡಾಟಕ್ಕೆ ಹಾಗೂ ಐ.ಟಿ–ಬಿಟಿ ಕಂಪನಿಗಳ ಸಿಬ್ಬಂದಿ ಶೇ 33ರಷ್ಟು ಮಂದಿ ಕಚೇರಿಗೆ ತೆರಳಲು ಅವಕಾಶ ಕಲ್ಪಿಸಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಪ್ರಕಟಿಸಿದ್ದರು. ಲಾಕ್‌ಡೌನ್ ಸಡಿಲಗೊಳಿಸುವ ತೀರ್ಮಾನದ ಬಗ್ಗೆ ಸಾರ್ವಜನಿಕ ವಲಯದಲ್ಲಿ ವಿರೋಧ ವ್ಯಕ್ತವಾಗಿತ್ತು.

ಈ ಬೆಳವಣಿಗೆ ಬೆನ್ನಲ್ಲೇ, ಮುಖ್ಯಮಂತ್ರಿ ಜತೆ ಚರ್ಚಿಸಿದ ಅವರ ಸಚಿವ ಸಂಪುಟದ ಸಹೋದ್ಯೋಗಿಗಳು, ಸೋಮವಾರ ಸಚಿವ ಸಂಪುಟ ಸಭೆ ನಡೆಯಲಿದೆ. ಅದಕ್ಕೆ ಮುನ್ನವೇ ಲಾಕ್ ಡೌನ್ ಸಡಿಲಗೊಳಿಸುವ ತೀರ್ಮಾನ ತೆಗೆದುಕೊಂಡಿರುವುದು ಸರಿಯಲ್ಲ. ಸಂಪುಟ ಸಭೆಯಲ್ಲಿ ಚರ್ಚಿಸಿ ನಿರ್ಧಾರ ಕೈಗೊಳ್ಳಬಹುದಿತ್ತು ಎಂದು ಪ್ರತಿಪಾದಿಸಿದರು. ಹೀಗಾಗಿ, ನಿರ್ಧಾರದಿಂದ ಹಿಂದೆ ಸರಿಯಲಾಯಿತು ಎಂದು ಮೂಲಗಳು ಹೇಳಿವೆ.

ಲಾಕ್‌ಡೌನ್ ಸಡಿಲಗೊಳಿಸುವ ತೀರ್ಮಾನಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಕೂಡ ಆಕ್ಷೇಪ ವ್ಯಕ್ತಪಡಿಸಿದ್ದರು.

ಪ್ರಮುಖ ತೀರ್ಮಾನಗಳು

ಹಿರಿಯ ಸಚಿವರು ಮತ್ತು ಅಧಿಕಾರಿಗಳ ಜೊತೆ ಶನಿವಾರ ಸಭೆ ನಡೆಸಿದ್ದ ಯಡಿಯೂರಪ್ಪ, ಲಾಕ್‌ಡೌನ್‌ ಸಡಿಲಿಸುವ ಕುರಿತಂತೆ ಕೆಲವು ಮಹತ್ವದ ತೀರ್ಮಾನಗಳನ್ನು ಕೈಗೊಂಡಿದ್ದರು.

ಈ ಪೈಕಿ, ಸೋಂಕು ಪತ್ತೆಯಾದ ಪ್ರದೇಶವನ್ನು ‘ನಿಯಂತ್ರಣ ವಲಯ’ (ಕಂಟೇನ್ಮೆಂಟ್ ಝೋನ್) ಎಂದು ಘೋಷಿಸಿ ಕಠಿಣ ನಿರ್ಬಂಧ ಹೇರುವುದು. ಇತರ ವಲಯಗಳಲ್ಲಿ ದ್ವಿಚಕ್ರ ವಾಹನಗಳ ಮುಕ್ತ ಓಡಾಟಕ್ಕೆ ಅನುಮತಿ ಮತ್ತು ಐಟಿ ಬಿಟಿ ವಲಯಗಳಲ್ಲಿ ಶೇ 33 ರಷ್ಟು ಮಂದಿ ಕಚೇರಿಗಳಿಗೆ ಹಾಜರಾಗಲು ಅವಕಾಶ ಕೂಡಾ ಸೇರಿತ್ತು. ವಿರೋಧ ಬಳಿಕ ಈ ಎರಡು ನಿರ್ಧಾರಗಳನ್ನು ಕೈಬಿಡಲಾಗಿದೆ.

‘ನಿಯಂತ್ರಣ ವಲಯಗಳ ಮೇಲ್ವಿಚಾರಣೆಗೆ ಇನ್ಸಿಡೆಂಟ್ ಕಮಾಂಡರ್ ನೇಮಿಸಿ, ಮ್ಯಾಜಿಸ್ಟೀರಿಯಲ್‌ ಅಧಿಕಾರ ನೀಡಲಾಗುವುದು. ನಿಯಂತ್ರಣ ವಲಯದಲ್ಲಿ ಯಾರೂ ಮನೆಯಿಂದ ಹೊರಬರುವಂತಿಲ್ಲ. ಅಗತ್ಯ ವಸ್ತುಗಳನ್ನು ಮನೆ ಬಾಗಿಲಿಗೆ ತಲುಪಿಸಲಾಗುವುದು. ಬಫರ್‌ ವಲಯಗಳಲ್ಲಿ ಹೆಚ್ಚಿನ ಮನ್ನೆಚ್ಚರಿಕೆ ವಹಿಸಲಾಗುವುದು.

‘ನಗರಗಳಲ್ಲಿ ಕಾರ್ಮಿಕರ ವಾಸ್ತವ್ಯಕ್ಕೆ ವ್ಯವಸ್ಥೆ ಇರುವ ಕಡೆಗಳಲ್ಲಿ ಕಟ್ಟಡ ನಿರ್ಮಾಣ ಚಟುವಟಿಕೆ ಆರಂಭಿಸಲು ಅನುಮತಿ ನೀಡಲಾಗುವುದು. ಗ್ರಾಮೀಣ ಪ್ರದೇಶಗಳಲ್ಲಿ ಉತ್ಪಾದನಾ ವಲಯದ ಕೈಗಾರಿಕೆಗಳು ಹಾಗೂ ನಗರಗಳಲ್ಲಿ ವಿಶೇಷ ಆರ್ಥಿಕ ವಲಯಗಳ (ಎಸ್ಇಝಡ್), ಕೈಗಾರಿಕಾ ವಸಾಹತುಗಳ ಮತ್ತು ಕೈಗಾರಿಕಾ ಟೌನ್‌ಷಿಪ್‌ಗಳ ಕಾರ್ಯನಿರ್ವಹಣೆಗೂ ಅವಕಾಶ ನೀಡಲಾಗುವುದು’

‘ಅಂತರ ಜಿಲ್ಲೆ ಪ್ರಯಾಣಕ್ಕೆ ಅವಕಾಶವಿಲ್ಲ. ಬೆಂಗಳೂರು, ರಾಮನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳನ್ನು ಕೈಗಾರಿಕೆಗಳ ಉದ್ಯೋಗಿಗಳ ಓಡಾಟದ ದೃಷ್ಟಿಯಿಂದ ಒಂದು ಜಿಲ್ಲೆಯಾಗಿ ಪರಿಗಣಿಸಲಾಗುವುದು. ಹಿರಿಯ ನಾಗರಿಕರು ಮನೆಯಿಂದ ಹೊರಬರಬಾರದು. ಮಾಸ್ಕ್ ಧರಿಸುವುದು ಕಡ್ಡಾಯ. ಎಲ್ಲ ಕಡೆಗಳಲ್ಲಿ ಅಂತರ ಪಾಲನೆ ಕಡ್ಡಾಯ. ಉಗುಳುವುದನ್ನು ನಿಷೇಧಿಸಲಾಗಿದೆ. ಲಾಕ್‌ಡೌನ್‌ ಘೋಷಿಸಿರುವ (ಮೇ 3) ಅವಧಿವರೆಗೂ ನಿಷೇಧಾಜ್ಞೆ (ಸೆಕ್ಷನ್ 144) ಮುಂದುವರಿಯಲಿದೆ’.

ರಾಜ್ಯದಲ್ಲಿ ಮೃತರ ಸಂಖ್ಯೆ 14ಕ್ಕೆ

ಕೊರೊನಾ ಸೋಂಕಿತ ವ್ಯಕ್ತಿಗಳೊಂದಿಗೆ ನೇರ ಸಂಪರ್ಕ ಹೊಂದಿದ್ದ ವಿಜಯಪುರದ ವ್ಯಕ್ತಿಯೊಬ್ಬರು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದು, ರಾಜ್ಯದಲ್ಲಿ ಕೋವಿಡ್‌ನಿಂದ ಮೃತಪಟ್ಟವರ ಸಂಖ್ಯೆ 14ಕ್ಕೆ ಏರಿದೆ.

42 ವರ್ಷದ ಕಾರುಚಾಲಕವಿಜಯಪುರದ 65 ವರ್ಷ (ರೋಗಿ 306) ಹಾಗೂ 37 ವರ್ಷದ ವ್ಯಕ್ತಿಗಳ (ರೋಗಿ 308) ಜತೆಗೆ ಬೆಂಗಳೂರಿಗೆ ಪ್ರಯಾಣ ಮಾಡಿದ್ದರು. ಸಹ ಪ್ರಯಾಣಿಕರಿಗೆ ಸೋಂಕು ತಗುಲಿದೆ ಎಂಬ ಸುದ್ದಿ ಏ.16 ರಂದು ತಿಳಿಯುತ್ತಿದ್ದಂತೆ ಹೃದಯಾಘಾತಕ್ಕೆ ಒಳಗಾಗಿ ಮೃತಪಟ್ಟಿದ್ದರು. ಅವರ ರಕ್ತ ಹಾಗೂ ಗಂಟಲಿನ ದ್ರವವನ್ನು ಪರೀಕ್ಷೆಗೆ ಪ್ರಯೋಗಾಲಯಗಳಿಗೆ ಕಳುಹಿಸಲಾಗಿತ್ತು. ವರದಿ ಶನಿವಾರ ಬಂದಿದ್ದು, ಅವರಿಗೆ ಸೋಂಕು ಇರುವುದು ದೃಢಪಟ್ಟಿದೆ.

ರಾಜ್ಯದಲ್ಲಿ ಶನಿವಾರ ಹೊಸದಾಗಿ 25 ಪ್ರಕರಣಗಳು ವರದಿಯಾಗಿದ್ದು, ಸೋಂಕಿತರ ಸಂಖ್ಯೆ 384ಕ್ಕೆ ತಲುಪಿದೆ.

ವಿದೇಶಿಯರು ‍ಪತ್ತೆ

‘ನಂಜನಗೂಡಿನ ಫಾರ್ಮಾ ಕಂಪನಿಗೆ ಭೇಟಿ ನೀಡಿದ್ದ 10 ಮಂದಿ ವಿದೇಶಿಯರ ಪೈಕಿ 9 ಮಂದಿಯನ್ನ ಸಂಪರ್ಕಿಸಲಾಗಿದೆ. ಆರೋಗ್ಯವಾಗಿರುವುದಾಗಿ ಅವರು ಮಾಹಿತಿ ನೀಡಿದ್ದಾರೆ. ಆದರೆ, ಅವರು ಕೋವಿಡ್‌–19 ಪರೀಕ್ಷೆಗಳನ್ನು ಈವರೆಗೂ ಮಾಡಿಸಿಕೊಂಡಿರುವುದಿಲ್ಲ’ ಎಂದು ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT