ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಮಲಾಪುರ: ಗರ್ಭಿಣಿ ಮೇಲೂ ಲಾಕ್‌ಡೌನ್‌ ಉಲ್ಲಂಘನೆ ಪ್ರಕರಣ!

Last Updated 19 ಏಪ್ರಿಲ್ 2020, 15:23 IST
ಅಕ್ಷರ ಗಾತ್ರ

ಕಮಲಾಪುರ: ಲಾಕ್‌ಡೌನ್ ನಿಯಮ ಉಲ್ಲಂಘನೆ ಆರೋಪದಡಿ ತುಂಬು ಗರ್ಭಿಣಿ ಹಾಗೂ ಅವರ ಮೂವರು ಪಾಲಕರ ಮೇಲೆ ಕಮಲಾಪುರ ಪೊಲೀಸರು ಪ್ರಕರಣ ದಾಖಲಿಸಿದ್ದು, ತಡವಾಗಿ ಬೆಳಕಿಗೆ ಬಂದಿದೆ.‌

ತಾಲ್ಲೂಕಿನ ಗೊಬ್ಬೂರವಾಡಿ ಗ್ರಾಮದ ಎಂಟು ಜನರ ಒಂದು ಕುಟುಂಬ ಕೂಲಿ ಅರಸಿ ಹೈದರಾಬಾದ್‌ಗೆ ಹೋಗಿತ್ತು. ಈ ಕುಟುಂಬದಲ್ಲೇ 25 ವರ್ಷದ ಗರ್ಭಿಣಿ ಕೂಡ ಇದ್ದಾರೆ. ಈಗಾಗಲೇ ಇಬ್ಬರು ಮಕ್ಕಳಿದ್ದು, ಈಗ ಮೂರನೇ ಹರಿಗೆಗೆ ಎರಡು ವಾರ ಮಾತ್ರ ಬಾಕಿ ಇದೆ. ಲಾಕ್‌ಡೌನ್‌ನಿಂದಾಗಿ ಕೈಯಲ್ಲಿ ಕೆಲಸವೂ ಇಲ್ಲ, ಹಣವೂ ಇಲ್ಲ. ಪ್ರಸವ ಹತ್ತಿರ ಬರುತ್ತಿದ್ದ ಕಾರಣ ತಮ್ಮ ತವರಿಗೆ ಮರಳಲು ಅವಕಾಶ ಕೊಡಬೇಕು ಎಂದು ಗರ್ಭಿಣಿಯ ಪಾಲಕರು ತೆಲಂಗಾಣ ಪೊಲೀಸ್‌ ಆಯುಕ್ತರಲ್ಲಿ ಮನವಿ ಮಾಡಿದ್ದರು. ಗರ್ಭಿಣಿ ಹಾಗೂ ಅವರ ಪತಿಗೆ ಮಾತ್ರ ಊರಿಗೆ ತೆರಳಲು ಪೊಲೀಸರು ಅನುಮತಿ ನೀಡಿದ್ದರು.

ಗರ್ಭಿಣಿಯ ಪತಿ, ಇಬ್ಬರು ಮಕ್ಕಳು, ತಂದೆ, ತಾಯಿ ಹಾಗೂ ಕಿರಿಯ ಸಹೋದರಿಯರು ಸೇರಿ ಎಂಟು ಮಂದಿ ಸೇರಿಕೊಂಡು ಒಂದು ಟಂಟಂ ವಾಹನದಲ್ಲಿ ತಮ್ಮ ಮೂಲ ನೆಲೆ ಗೊಬ್ಬರವಾಡಿ ಊರಿಗೆ ಬಂದಿದ್ದಾರೆ. ಇವರೆಲ್ಲರನ್ನೂ ಹೋಂ ಕ್ವಾರಂಟೈನ್‌ ಮಾಡಲಾಗಿತ್ತು. ಆದರೆ, ಎರಡು ದಿನಗಳ ಬಳಿಕೆ ಗರ್ಭಿಣಿಯ ಪತಿ ಹಾಗೂ ತಾಯಿ ಸಮೀಪದ ಬೋಳವಾಡ ಗ್ರಾಮಕ್ಕೆ ತೆರಳಿದ್ದರು.‌ ವಿಷಯ ತಿಳಿದ ಪೊಲೀಸರು, ಗರ್ಭಿಣಿಯೂ ಸೇರಿದಂತೆ ಪತಿ, ತಾಯಿ ಹಾಗೂ ತಂದೆಯ ಮೇಲೂ ಏ. 16ರಂದು ಪ್ರಕರಣ ದಾಖಲಿಸಿದ್ದಾರೆ.‌

ತಮ್ಮ ಮೇಲೆ ಪ್ರಕರಣ ದಾಖಲಾದ ವಿಷಯ ಈ ಕುಟುಂಬಕ್ಕೆ ಭಾನುವಾರವೇ ಗೊತ್ತಾಗಿದೆ. ಸದ್ಯ ಗರ್ಭಿಣಿಯ ಆರೋಗ್ಯ ತಪಾಸಣೆ ಮಾಡಿಸಿದ್ದು, ಮನೆಯಲ್ಲೇ ಇರಲು ಅವಕಾಶ ನೀಡಲಾಗಿದೆ. ಅವರ ತಂದೆಯನ್ನು ಕಮಲಾಪುರ ಪಟ್ಟಣದ ಕ್ವಾರಂಟೈನ್‌ ಸೆಂಟರ್‌ಗೆ ಸೇರಿಸಲಾಗಿದ್ದು, ತಾಯಿ ಹಾಗೂ ಪತಿಯನ್ನೂ ಅಲ್ಲೇ ಸೇರಿಸುವುದಾಗಿ ಪೊಲೀಸರು ತಿಳಿಸಿದ್ದಾರೆ.

ತುಂಬು ಗರ್ಭಿಣಿ ಮೇಲೆ ಕೇಸ್‌ ದಾಖಲಿಸಿದ ಪೊಲೀಸರು ಜನರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಪ್ರಸವ ಸಂದರ್ಭದಲ್ಲಿ ಪತಿ ಅಥವಾ ತಾಯಿ ಗರ್ಭಿಣಿಯ ಪಕ್ಕದಲ್ಲೇ ಇರಬೇಕು. ಅವರನ್ನು ಕ್ವಾರಂಟೈನ್‌ ಸೆಂಟರ್‌ಗೆ ದಾಖಲಿಸಿದರೆ ಗರ್ಭಿಣಿ ಅಸಹಾಯಕರಾಗುತ್ತಾರೆ ಎಂದು ಜನ ದೂರಿದ್ದಾರೆ. ತೆಲಂಗಾಣ ಪೊಲೀಸ್‌ ಆಯುಕ್ತರಿಂದ ಅನುಮತಿ ಪಡೆದಿದ್ದರೂ ಗರ್ಭಿಣಿ ಮೇಲೆ ಕೇಸ್‌ ಮಾಡಲು ಏನು ಕಾರಣ ಎಂದೂ ಜನ ಪ್ರಶ್ನೆ ಎತ್ತಿದ್ದಾರೆ.

ಮಾತ್ರವಲ್ಲ; 200 ಕಿಲೋ ಮೀಟರ್‌ಗೂ ಹೆಚ್ಚು ದೂರವನ್ನು ಟಂಟಂ ವಾಹನದಲ್ಲೇ ಪ್ರಯಾಣಿಸಿದ ತುಂಬು ಗರ್ಭಿಣಿಯ ಆರೋಗ್ಯದ ಬಗ್ಗೆಯೂ ಜನ ಆತಂಕ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT