ತಾರಕಕ್ಕೆ ಬೈಗುಳ ರಾಜಕಾರಣ: ಆರೋಪ –ಪ್ರತ್ಯಾರೋಪಗಳದ್ದೇ ಅಬ್ಬರ

ಶುಕ್ರವಾರ, ಏಪ್ರಿಲ್ 19, 2019
27 °C
ಕಾವೇರುತ್ತಿದೆ ಪ್ರಚಾರ

ತಾರಕಕ್ಕೆ ಬೈಗುಳ ರಾಜಕಾರಣ: ಆರೋಪ –ಪ್ರತ್ಯಾರೋಪಗಳದ್ದೇ ಅಬ್ಬರ

Published:
Updated:

ಬೆಂಗಳೂರು: ರಾಜ್ಯದಲ್ಲಿ ಮೊದಲ ಹಂತದ ಚುನಾವಣೆ ನಡೆಯಲಿರುವ ಕ್ಷೇತ್ರಗಳಲ್ಲಿ ಮತಯಾಚನೆ ಬಿರುಸು ಗೊಂಡಿದೆ. ದೂಷಣೆ, ಕಟು ಮಾತು ಗಳನ್ನು ನೇತಾರರು ಉದುರಿಸುತ್ತಿದ್ದು, ಬೈಗುಳದ ರಾಜಕಾರಣ ತಾರಕಕ್ಕೇರುತ್ತಿದೆ.

2014ರ ಲೋಕಸಭೆ ಚುನಾವಣೆ ವೇಳೆ ಅಂದಿನ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರನ್ನು ‘ನರಹಂತಕ’ ಎಂದು ಜರೆದಿದ್ದ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅದೇ ಮಾದರಿಯ ಮಾತನ್ನು ಸೋಮವಾರ ಪುನರುಚ್ಚರಿಸಿದ್ದಾರೆ. 

ಇಲ್ಲಿ ನಡೆದ ಸಂವಾದದಲ್ಲಿ ಮಾತ ನಾಡಿದ ಅವರು, ‘ಮೋದಿ ಚೌಕಿದಾರ ಅಲ್ಲ. ಗೋಧ್ರಾ ಹತ್ಯಾಕಾಂಡದ ಬಳಿಕ ನಡೆದ ಗಲಭೆ ವೇಳೆ ನರೇಂದ್ರ ಮೋದಿ ಅವರೇ ಗುಜರಾತ್‌ನಲ್ಲಿ ಮುಖ್ಯಮಂತ್ರಿಯಾಗಿದ್ದರು. ಮನುಷ್ಯರ ಕೊಲ್ಲಿಸುವವರನ್ನು ನರಹಂತಕ ಅನ್ನದೇ ಇನ್ನೇನು ಅನ್ನಬೇಕು’ ಎಂದು ಕಟುವಾಗಿ ಪ್ರಶ್ನಿಸಿದ್ದಾರೆ.

ಮೋದಿ ಅವರನ್ನು ಬೈಯುವಲ್ಲಿ ತಾನೇನು ಕಡಿಮೆ ಎಂಬಂತೆ ಕೆ.ಆರ್. ಪೇಟೆಯಲ್ಲಿ ಮಾತನಾಡಿರುವ ಲೋಕೋಪಯೋಗಿ ಸಚಿವ ಎಚ್.ಡಿ. ರೇವಣ್ಣ, ‘ನರೇಂದ್ರ ಮೋದಿ ಅವರಿಂದ ದೇಶದ ಕೋಮು ಸಾಮರಸ್ಯಕ್ಕೆ ಧಕ್ಕೆ ಒದಗಿದೆ.ಉದ್ದೇಶಪೂರ್ವಕವಾಗಿ ಎರಡು ಸಮುದಾಯಗಳ ನಡುವೆ ಅವರು ಜಗಳ ಹಚ್ಚಿ ಹಾಕಿದ್ದಾರೆ’ ಎಂದು ಕಿಡಿ ಕಾರಿದ್ದಾರೆ.

ಇದಕ್ಕೆ ಪ್ರತ್ಯುತ್ತರ ನೀಡುವಂತೆ ಕೊಪ್ಪಳದಲ್ಲಿ ಮಾತನಾಡಿದ ಬಿಜೆಪಿ ಶಾಸಕ ಕೆ.ಎಸ್. ಈಶ್ವರಪ್ಪ, ‘ಚೌಕೀದಾರನ ಬಗ್ಗೆ ಸಿದ್ದರಾಮಯ್ಯಗೆ ಏನು ಗೊತ್ತಿದೆ. ಅವರ ತಲೆಯಲ್ಲಿ ಲದ್ದಿ ತುಂಬಿದೆ’ ಎಂದು ಕುಟುಕಿದ್ದಾರೆ.

‘ಮುಸ್ಲಿಂ ಸಮುದಾಯದವರು ನಮ್ಮನ್ನು ಅಪ್ಪಿಕೊಂಡಿಲ್ಲ. ಹೀಗಾಗಿ ನಾವೂ ಅವರನ್ನು ಅಪ್ಪಿಕೊಂಡಿಲ್ಲ. ಅದಕ್ಕಾಗಿ ನಮ್ಮ ಪಕ್ಷದಿಂದ ಅವರಿಗೆ ಟಿಕೆಟ್ ನೀಡಿಲ್ಲ. ಕಾಂಗ್ರೆಸ್ ವೋಟ್ ಬ್ಯಾಂಕ್  ರೀತಿ ಮುಸ್ಲಿಮರನ್ನು ಬಳಸಿಕೊಳ್ಳುತ್ತಿದೆ. ಈಗ ಅವರಿಗೂ ಬುದ್ಧಿ ಬಂದಿದ್ದು, ನಮ್ಮನ್ನು ಬೆಂಬಲಿಸಲು ಶುರು ಮಾಡಿದ್ದಾರೆ’ ಎಂದೂ ಅವರು ಪ್ರತಿಪಾದಿಸಿದ್ದಾರೆ. 

ಭಾನುವಾರ ನಡೆದ ಜೆಡಿಎಸ್‌–ಕಾಂಗ್ರೆಸ್‌ ಸಮಾವೇಶದಲ್ಲಿ ಡೈರಿ ಪ್ರಕರಣವನ್ನು ಪ್ರಸ್ತಾಪಿಸಿದ್ದ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ಹರಿಹಾಯ್ದಿರುವ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ, ‘ರಾಹುಲ್ ಒಬ್ಬ ಬಚ್ಚಾ. ಅವರ ಹೇಳಿಕೆಗೆ ನಾನು ಯಾಕೆ ರಾಜಕೀಯ ನಿವೃತ್ತಿ ಪಡೆಯಲಿ’ ಎಂದು ಪ್ರಶ್ನಿಸಿದ್ದಾರೆ. 

ಅದಕ್ಕೆ ಪ್ರತಿಯೇಟು ಕೊಟ್ಟಿರುವ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ, ‘ಯಡಿಯೂರಪ್ಪ ನಾಲಿಗೆ ಬಿಗಿ ಹಿಡಿದು ಮಾತನಾಡಲಿ’ ಎಂದು ಎಚ್ಚರಿಕೆಯನ್ನೂ ನೀಡಿದ್ದಾರೆ.

ಮತ್ತೆ ಮುನ್ನೆಲೆಗೆ ಬಂದ ‘ಗೌಡ್ತಿ’: ಮಂಡ್ಯ ಕ್ಷೇತ್ರದಲ್ಲಿ ಪಕ್ಷೇತರವಾಗಿ ಸ್ಪರ್ಧಿಸಿರುವ ಸುಮಲತಾ ಅಂಬರೀಷ್‌ ಅವರ ಪರ–ವಿರೋಧದ ಮಾತುಗಳು ಮತ್ತೆ ಮುನ್ನೆಲೆಗೆ ಬಂದಿವೆ.

ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಸುಮಲತಾ ಘೋಷಿಸಿದ ಆರಂಭಿಕ ಹೊತ್ತಿನಲ್ಲಿ, ‘ಅವರು ಮಂಡ್ಯ ಗೌಡ್ತಿ ಅಲ್ಲ’ ಎಂದು ವಿಧಾನಪರಿಷತ್ತಿನ ಜೆಡಿಎಸ್ ಸದಸ್ಯ ಕೆ.ಟಿ. ಶ್ರೀಕಂಠೇಗೌಡ ಹೇಳಿದ್ದು, ವಿವಾದದ ಕಿಡಿ ಎಬ್ಬಿಸಿತ್ತು.

ಗೌಡ್ತಿ ಹೌದೋ ಅಲ್ಲವೋ ಎಂಬ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಮಟ್ಟದ ಚರ್ಚೆಯೂ ನಡೆದಿತ್ತು. ಬಳಿಕ ಅದು ತಣ್ಣಗಾಗಿತ್ತು.

ಸೋಮವಾರ ಮಂಡ್ಯದಲ್ಲಿ ಮಾತನಾಡಿದ ಸಂಸದ ಎಲ್.ಆರ್. ಶಿವರಾಮೇಗೌಡ ಮತ್ತೆ ಅದೇ ವಾದವನ್ನು ಮಂಡಿಸಿದ್ದಾರೆ. ‘ಅಂಬರೀಷ್ ಅವರು ಅಂತರ್ಜಾತಿ ಮದುವೆಯಾಗಿದ್ದರು. ಹಾಗಂದ ಮಾತ್ರಕ್ಕೆ ನಾಯ್ಡು ಜಾತಿಗೆ ಸೇರಿದ ಸುಮಲತಾ ಅವರು ಗೌಡ್ತಿ ಆಗುವುದಿಲ್ಲ’ ಎಂದು ಟೀಕಿಸಿದ್ದಾರೆ.

‘ಶಿವರಾಮೇಗೌಡರ ಮಾತಿಗೆ ನಾನು ಪ್ರತಿಕ್ರಿಯಿಸುವುದಿಲ್ಲ.  ಹಾಲಿ ಸಂಸದರಾದ ಅವರಿಗೆ ಜೆಡಿಎಸ್‌ನವರು ಟಿಕೆಟ್ ಕೊಟ್ಟಿಲ್ಲ. ಟೀಕೆ ಮಾಡಲಿ ಬಿಡಿ’ ಎಂದು ಸುಮಲತಾ ವ್ಯಂಗ್ಯವಾಡಿದ್ದಾರೆ.

ಸುಮಲತಾ ಬೆಂಬಲಕ್ಕೆ ನಿಂತಿರುವ ವಿಧಾನಪರಿಷತ್ತಿನ ಬಿಜೆಪಿ ಸದಸ್ಯ ತೇಜಸ್ವಿನಿ ಗೌಡ, ‘ಚುನಾವಣೆ ಹೊತ್ತಿನಲ್ಲಿ ಜಾತಿ ಪ್ರಸ್ತಾಪ ಮಾಡಿರುವ ಶಿವರಾಮೇಗೌಡ ನೀತಿ ಸಂಹಿತೆ ಉಲ್ಲಂಘನೆ ಮಾಡಿದ್ದಾರೆ. ಅವರ ವಿರುದ್ಧ ಚುನಾವಣಾ ಆಯೋಗ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದ್ದಾರೆ.

ರಾಜಕಾರಣಿಗಳು ಮಾತ್ರವಲ್ಲ; ಅವರ ಅಭಿಮಾನಿಗಳು ಕೂಡ ನಾಲಿಗೆ ಹರಿಬಿಡಲು ಶುರುವಿಟ್ಟಿದ್ದಾರೆ. ಸುಮಲತಾ ವಿರುದ್ಧದ ಟೀಕೆಗೆ ತಿರುಗೇಟು ಕೊಟ್ಟಿರುವ ಅಂಬರೀಷ್ ಅಭಿಮಾನಿ ಶಂಕರೇಗೌಡ, ‘ಸುಮಲತಾ ವಿರುದ್ಧ ಮಾತನಾಡಿದರೆ ಎಕ್ಕಡದಲ್ಲಿ ಹೊಡೆದು ಬುದ್ಧಿ ಕಲಿಸುತ್ತೇವೆ’ ಎಂದು ಎಚ್ಚರಿಕೆ ನೀಡಿದ್ದೂ ನಡೆದಿದೆ.

ಕತ್ತಿ ಸೋದರರ ಕೋಪ ಶಮನ
ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ ಟಿಕೆಟ್ ಸಿಗದೇ ಕೋಪಗೊಂಡಿದ್ದ ‘ಕತ್ತಿ ಸೋದರರು’  ಬಿಜೆ‍‍ಪಿ ರಾಜ್ಯ ಘಟಕದ ಅಧ್ಯಕ್ಷ ಯಡಿಯೂರಪ್ಪ ನಡೆಸಿದ ಸಂಧಾನದಿಂದ ಸಮಾಧಾನಗೊಂಡಿದ್ದಾರೆ.

ಶಾಸಕ ಉಮೇಶ ಕತ್ತಿ ತಮ್ಮ ರಮೇಶ ಕತ್ತಿ ಈ ಕ್ಷೇತ್ರದಲ್ಲಿ ಟಿಕೆಟ್‌ ಆಕಾಂಕ್ಷಿಯಾಗಿದ್ದರು. ಅವರ ಬದಲು ನಿಪ್ಪಾಣಿ ಶಾಸಕಿ ಶಶಿಕಲಾ ಜೊಲ್ಲೆ ಅವರ ಪತಿ ಅಣ್ಣಾಸಾಹೇಬ ಜೊಲ್ಲೆ ಅವರಿಗೆ ಬಿಜೆಪಿ ಟಿಕೆಟ್ ನೀಡಿತ್ತು. ಇದರಿಂದ ಕತ್ತಿ ಸೋದರರು ಮುನಿಸಿಕೊಂಡಿದ್ದರು. ರಮೇಶ ಅವರನ್ನು ಕಾಂಗ್ರೆಸ್‌ಗೆ ಸೆಳೆದು ಬೆಳಗಾವಿಯಿಂದ ಕಣಕ್ಕೆ ಇಳಿಸಲು ಕೈ ನಾಯಕರು ತಯಾರಿ ನಡೆಸಿದ್ದರು. ಈ ಸುದ್ದಿ ಗೊತ್ತಾಗುತ್ತಿದ್ದಂತೆ ಬೆಳಗಾವಿ ತೆರಳಿದ ಯಡಿಯೂರಪ್ಪ, ಮಾತುಕತೆ ನಡೆಸಿದ್ದಾರೆ. ‘ಯಾವುದೇ ಅಸಮಾಧಾನವಿಲ್ಲ, ಬಿಜೆಪಿ ಗೆಲ್ಲಿಸಲು ಕೆಲಸ ಮಾಡುತ್ತೇವೆ’ ಎಂದು ಕತ್ತಿ ಸೋದರರು ಹೇಳಿದ್ದಾರೆ.

ಜಾಧವ ಸ್ಪರ್ಧೆ ದಾರಿ ಸಲೀಸು

ಚಿಂಚೋಳಿ ಕ್ಷೇತ್ರದ ಡಾ. ಉಮೇಶ ಜಾಧವ ಅವರು ಕಾಂಗ್ರೆಸ್‌ ಶಾಸಕ ಸ್ಥಾನಕ್ಕೆ ನೀಡಿದ್ದ ರಾಜೀನಾಮೆಯನ್ನು ವಿಧಾನಸಭಾಧ್ಯಕ್ಷ ಕೆ.ಆರ್.ರಮೇಶ ಕುಮಾರ್ ಅಂಗೀಕರಿಸಿದ್ದಾರೆ.

ಗುಲಬರ್ಗಾ ಲೋಕಸಭಾ ಕ್ಷೇತ್ರದಲ್ಲಿ ಮಲ್ಲಿಕಾರ್ಜುನ ಖರ್ಗೆ ಎದುರು ಬಿಜೆಪಿಯಿಂದ ಸ್ಪರ್ಧಿಸುವ ಸಲುವಾಗಿ ಜಾಧವ ಅವರು ರಾಜೀನಾಮೆ ನೀಡಿದ್ದರು. ‘ಜಾಧವ ಅವರು ಬಿಜೆಪಿಯ ಆಮಿಷಕ್ಕೆ ಒಳಗಾಗಿದ್ದು, ಅವರ ರಾಜೀನಾಮೆ ಅಂಗೀಕರಿಸಬಾರದು. ಅವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಬೇಕು’ ಎಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು ಸಭಾಧ್ಯಕ್ಷರಿಗೆ ಮನವಿ ಮಾಡಿದ್ದರು.

ಹೀಗಾಗಿ, ಸುಮಾರು ಒಂದು ತಿಂಗಳಿನಿಂದ ರಾಜೀನಾಮೆ ವಿಷಯ ಗೊಂದಲದಲ್ಲೇ ಉಳಿದಿತ್ತು. ಜಾಧವ ಅವರು ಲೋಕಸಭೆಗೆ ಸ್ಪರ್ಧಿಸಲು ಈ ಸಂಗತಿ ಅಡ್ಡಿಯಾಗಬಹುದು ಎಂಬ ಚರ್ಚೆಯೂ ನಡೆದಿತ್ತು. ಇದೀಗ ರಾಜೀನಾಮೆ ಅಂಗೀಕಾರವಾಗಿರುವುದರಿಂದ ಜಾಧವ ಸ್ಪರ್ಧೆಯ ದಾರಿ ಸುಗಮವಾದಂತಾಗಿದೆ.

**

ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನ ಮಂತ್ರಿಯಾದರೆ ದೇಶದಲ್ಲಿ ಹಿಂದೂ–ಮುಸ್ಲಿಂ ಸಂಘರ್ಷವಾಗಲಿದೆ

–ಎಚ್.ಡಿ. ರೇವಣ್ಣ, ಲೋಕೋಪಯೋಗಿ ಸಚಿವ

**
ಅಂಬರೀಷ್‌ ಅವರನ್ನು ಮದುವೆಯಾದ ಮಾತ್ರಕ್ಕೆ ನಾಯ್ಡು ಜನಾಂಗಕ್ಕೆ ಸೇರಿದ ಸುಮಲತಾ, ಗೌಡ್ತಿ ಆಗುವುದಿಲ್ಲ. ಅವರ ಜಾತಿ ಯಾವುದೇ ಕಾರಣಕ್ಕೂ ಬದಲಾಗುವುದಿಲ್ಲ.

–ಎಲ್.ಆರ್. ಶಿವರಾಮೇಗೌಡ, ಮಂಡ್ಯ ಜೆಡಿಎಸ್‌ ಸಂಸದ

ಬರಹ ಇಷ್ಟವಾಯಿತೆ?

 • 2

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !