ತುಮಕೂರು ವಾಪಸ್‌ಗೆ ‘ಕೈ’ ಪಟ್ಟು: ಮಿತ್ರರಿಗೆ ‘ಮೈತ್ರಿ’ ಕಗ್ಗಂಟು

ಶನಿವಾರ, ಮಾರ್ಚ್ 23, 2019
31 °C
4 ಕ್ಷೇತ್ರಗಳಲ್ಲಿ ಅತೃಪ್ತಿ– ಆಕ್ರೋಶ

ತುಮಕೂರು ವಾಪಸ್‌ಗೆ ‘ಕೈ’ ಪಟ್ಟು: ಮಿತ್ರರಿಗೆ ‘ಮೈತ್ರಿ’ ಕಗ್ಗಂಟು

Published:
Updated:

ಬೆಂಗಳೂರು: ‘ಮಿತ್ರ ಪಕ್ಷ’ಗಳ (ಜೆಡಿಎಸ್‌–ಕಾಂಗ್ರೆಸ್‌) ವರಿಷ್ಠರು ಕ್ಷೇತ್ರ ಹಂಚಿಕೆ ಗೊಂದಲಕ್ಕೆ ಸುಖಾಂತ್ಯ ಹಾಡಿದರೂ, ಸ್ಥಳೀಯ ನಾಯಕರು ಈ ‘ಒಪ್ಪಂದ’ದ ವಿರುದ್ಧ ಅಪಸ್ವರ ಎತ್ತಿರುವುದು ಉಭಯ ಪಕ್ಷಗಳನ್ನು ಸಂಕಷ್ಟಕ್ಕೆ ಈಡು ಮಾಡಿದೆ.

28 ಕ್ಷೇತ್ರಗಳ ಪೈಕಿ, 12 ಕ್ಷೇತ್ರಗಳಿಗೆ ಪಟ್ಟುಹಿಡಿದಿದ್ದ ಜೆಡಿಎಸ್‌ ಅನ್ನು ಎಂಟಕ್ಕೆ ಸಮಾಧಾನಪಡಿಸಿ 20 ಅನ್ನು ‘ಕೈ’ಯಲ್ಲಿ ಉಳಿಸಿಕೊಂಡರೂ ತುಮಕೂರು ಕ್ಷೇತ್ರವನ್ನು ಬಿಟ್ಟುಕೊಟ್ಟಿರುವುದು ರಾಜ್ಯ ಕಾಂಗ್ರೆಸ್‌ ನಾಯಕರೊಳಗೇ ಅಸಮಾಧಾನಕ್ಕೆ ಭುಗಿಲೇಳುವಂತೆ ಮಾಡಿದೆ.

‘ತುಮಕೂರು ಕ್ಷೇತ್ರದಿಂದ ಜೆಡಿಎಸ್‌ ವರಿಷ್ಠ ಎಚ್‌.ಡಿ. ದೇವೇಗೌಡ ಕಣಕ್ಕಿಳಿಯಬೇಕು. ಇಲ್ಲದೇ ಇದ್ದರೆ, ಆ ಕ್ಷೇತ್ರವನ್ನು ವಾಪಸು ನೀಡಬೇಕು’ ಎಂದು ಉಪ ಮುಖ್ಯಮಂತ್ರಿ ಜಿ. ಪರಮೇಶ್ವರ ಮತ್ತು ಹಾಲಿ ಸಂಸದ ಮುದ್ದಹನುಮೇಗೌಡ ಬೇಡಿಕೆ ಮುಂದಿಟ್ಟಿದ್ದಾರೆ. ಅದಕ್ಕೆ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಕೂಡಾ ಧ್ವನಿಗೂಡಿಸಿದ್ದಾರೆ.

ಪಕ್ಷಕ್ಕೆ ಸಾಂಪ್ರದಾಯಿಕ ಮತಗಳಿರುವ ಉಡುಪಿ– ಚಿಕ್ಕಮಗಳೂರು, ಉತ್ತರ ಕನ್ನಡ ಮತ್ತು ವಿಜಯಪುರ ಕ್ಷೇತ್ರಗಳನ್ನು ಜೆಡಿಎಸ್‌ಗೆ ಬಿಟ್ಟುಕೊಟ್ಟಿರುವುದೂ ಸ್ಥಳೀಯ ‘ಕೈ’ ನಾಯಕರ ಹಾಗೂ ಕಾರ್ಯಕರ್ತರ ಅತೃಪ್ತಿಗೆ ಕಾರಣವಾಗಿದೆ. ಈ ಕ್ಷೇತ್ರಗಳಲ್ಲಿ ಜೆಡಿಎಸ್‌ ಪ್ರಾಬಲ್ಯ ಹೊಂದಿಲ್ಲ. ಅಷ್ಟೇ ಅಲ್ಲ, ಸಮರ್ಥ ಅಭ್ಯರ್ಥಿಗಳೂ ಇಲ್ಲ ಎಂದೂ ವಾದ ಮಂಡಿಸಿದ್ದಾರೆ.

ವಿಜಯಪುರ ಕಾಂಗ್ರೆಸ್‌ ‘ಕೈ’ ತಪ್ಪಿರುವುದಕ್ಕೆ ಕಾರ್ಯಕರ್ತರು ಸೇರಿದಂತೆ ದಲಿತ ಬಲಗೈ ಸಮುದಾಯದವರ ಆಕ್ರೋಶ ಸ್ಫೋಟಗೊಂಡಿದೆ. ಆ ಬೆನ್ನಿಗೆ ಸಚಿವರಾದ ಎಂ.ಬಿ. ಪಾಟೀಲ, ಶಿವಾನಂದ ಪಾಟೀಲ, ಶಾಸಕ ಯಶವಂತರಾಯಗೌಡ ಪಾಟೀಲ ಸೇರಿದಂತೆ ಸ್ಥಳೀಯ ಕೆಲವು ನಾಯಕರು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರನ್ನು ಶುಕ್ರವಾರ ಭೇಟಿ ಮಾಡಿ ಚರ್ಚೆ ನಡೆಸಿದರು. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಅಭ್ಯರ್ಥಿ ಆಯ್ಕೆ ಮಾಡುವುದಾಗಿ ಮುಖ್ಯಮಂತ್ರಿ ಭರವಸೆ ನೀಡಿದ್ದಾರೆ.

ಉತ್ತರ ಕನ್ನಡ ಕ್ಷೇತ್ರವನ್ನು ಬಿಟ್ಟುಕೊಟ್ಟಿರುವುದಕ್ಕೆ ಅಸಮಾಧಾನಗೊಂಡಿರುವ ಕಾಂಗ್ರೆಸ್‌ ಕಾರ್ಯಕರ್ತರು, ಪಕ್ಷದ ಜಿಲ್ಲಾ ಘಟಕದ ಕಾರ್ಯಾಲಯದ ಎದುರು ಟೈರ್‌ಗೆ ಬೆಂಕಿ ಹಚ್ಚಿ, ಕುರ್ಚಿಗಳನ್ನು ಮುರಿದು ರೋಷ ವ್ಯಕ್ತಪಡಿಸಿದರು.

ಜೆಡಿಎಸ್‌ಗೆ ನೆಲೆಯೇ ಇಲ್ಲ: ಉಡುಪಿ– ಚಿಕ್ಕಮಗಳೂರು ಕ್ಷೇತ್ರದಲ್ಲೂ ಜೆಡಿಎಸ್‌ಗೆ ನೆಲೆ ಇಲ್ಲ. ಆದರೂ ಕ್ಷೇತ್ರ ಬಿಟ್ಟುಕೊಟ್ಟ ಹೈಕಮಾಂಡ್‌ ನಿಲುವಿಗೆ ಈ ಭಾಗದ ಕಾಂಗ್ರೆಸ್‌ ಮುಖಂಡರು, ಕಾರ್ಯಕರ್ತರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿ ಜೆಡಿಎಸ್‌ಗೆ ಜನಪ್ರತಿನಿಧಿಗಳೇ ಇಲ್ಲ. ಬ್ಲಾಕ್‌ಮಟ್ಟದಲ್ಲೂ ಆ ಪಕ್ಷ ಕ್ರಿಯಾಶೀಲವಾಗಿಲ್ಲ.

ಆದರೆ, ಕಾಂಗ್ರೆಸ್‌ ಬೂತ್‌ಮಟ್ಟದಲ್ಲಿ ಕಾರ್ಯಕರ್ತರನ್ನು ಹೊಂದಿದೆ. ಅಲ್ಲದೆ, ಹಾಲಿ ಸಂಸದೆ ಬಿಜೆಪಿಯ ಶೋಭಾ ಕರಂದ್ಲಾಜೆ ವಿರುದ್ಧ ಕ್ಷೇತ್ರದಲ್ಲಿ ವಿರೋಧವಿದೆ. ಹೀಗಾಗಿ, ಈ ಕ್ಷೇತ್ರದಿಂದ ಪಕ್ಷದ ಅಭ್ಯರ್ಥಿಯನ್ನು ಕಣಕ್ಕಿಳಿಸಬೇಕು ಎಂದು ಜಿಲ್ಲಾ ಕಾಂಗ್ರೆಸ್‌ ಸಭೆ ನಿರ್ಣಯ ಕೈಗೊಂಡಿದೆ.

ಚಾಮರಾಜನಗರಕ್ಕೆ ಶ್ರೀನಿವಾಸ್ ಪ್ರಸಾದ್‌
ಚಾಮರಾಜನಗರ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಮಾಜಿ ಸಚಿವ ವಿ. ಶ್ರೀನಿವಾಸ ಪ್ರಸಾದ್‌ ನಿರ್ಧರಿಸಿದ್ದಾರೆ. ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಅವರನ್ನು ಶುಕ್ರವಾರ ಭೇಟಿ ಮಾಡಿದ ಬಳಿಕ ಅವರು ಈ ನಿರ್ಧಾರ ಪ್ರಕಟಿಸಿದರು.

ಡಿಕೆಶಿಗೆ ಶಿವಮೊಗ್ಗ ಹೊಣೆ!
ಬಿಜೆಪಿಯ ಭದ್ರಕೋಟೆಯಾಗಿದ್ದ ಬಳ್ಳಾರಿ ಲೋಕಸಭಾ ಕ್ಷೇತ್ರಕ್ಕೆ ನಡೆದ ಉಪ ಚುನಾವಣೆಯಲ್ಲಿ ‘ಕೈ’ ಮೇಲಾಗುವಂತೆ ಮಾಡಿದ್ದ ಸಚಿವ ಡಿ.ಕೆ. ಶಿವಕುಮಾರ್‌ ಅವರಿಗೇ  ಶಿವಮೊಗ್ಗದ ‘ಮೈತ್ರಿ’ ಅಭ್ಯರ್ಥಿ ಜೆಡಿಎಸ್‌ನ ಮಧು ಬಂಗಾರಪ್ಪ ಅವರನ್ನು ಗೆಲ್ಲಿಸುವ ಹೊಣೆಯನ್ನು ನೀಡಲಾಗಿದೆ. ಹಿರಿಯ ಕಾಂಗ್ರೆಸ್‌ ನಾಯಕ ಕಾಗೋಡು ತಿಮ್ಮಪ್ಪ ನೇತೃತ್ವದಲ್ಲಿ ಚುನಾವಣೆ ಎದುರಿಸಲು ಸಿದ್ಧತೆ ನಡೆದಿದೆ.

ಬರಹ ಇಷ್ಟವಾಯಿತೆ?

 • 9

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !