ಲೋಕಸಭೆ, ವಿಧಾನಸಭೆ ಉಪಚುನಾವಣೆ: ‘ಮೈತ್ರಿ’ ಪ್ರತಿಷ್ಠೆಗೆ ಕಮಲ ಸವಾಲು

7
‘ಪದ್ಮವ್ಯೂಹ’ ಭೇದಿಸುವ ಕಟ್ಟಾಳುಗಳಿಗೆ ಶೋಧ

ಲೋಕಸಭೆ, ವಿಧಾನಸಭೆ ಉಪಚುನಾವಣೆ: ‘ಮೈತ್ರಿ’ ಪ್ರತಿಷ್ಠೆಗೆ ಕಮಲ ಸವಾಲು

Published:
Updated:

ಬೆಂಗಳೂರು: ಮೂರು ಲೋಕಸಭಾ ಮತ್ತು ಎರಡು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಜೆಡಿಎಸ್‌–ಕಾಂಗ್ರೆಸ್‌ ಮೈತ್ರಿಕೂಟಕ್ಕೆ ಪ್ರತಿಷ್ಠೆಯ ವಿಷಯವಾಗಿದೆ. ‘ಈ ಸರ್ಕಾರಕ್ಕೆ ಜನಾದೇಶ ಇಲ್ಲ’ ಎಂದು ಆರೋಪಿಸುತ್ತಲೇ ಬಂದಿರುವ ಬಿಜೆಪಿಗೆ ಇದನ್ನು ಸಾಬೀತುಪಡಿಸುವ ಸವಾಲು ಎದುರಾಗಿದೆ.

ಲೋಕಸಭಾ ಚುನಾವಣೆಯಲ್ಲೂ ಹೊಂದಾಣಿಕೆ ಮುಂದುವರಿಸಿಕೊಂಡು ಕಮಲ ಪಕ್ಷವನ್ನು ಹಣಿಯಲು ‘ದೋಸ್ತಿ ಪಕ್ಷ’ಗಳು ನಿರ್ಧರಿಸಿವೆ. ಈ ಉಪಚುನಾವಣೆ ಮುಂಬರುವ ಲೋಕಸಭಾ ಚುನಾವಣೆಗೆ ದಿಕ್ಸೂಚಿ ಎಂದು ಪಕ್ಷಗಳು ಭಾವಿಸಿವೆ. ಒಂದು ವೇಳೆ ಉಪಚುನಾವಣೆಯಲ್ಲಿ ಗೆಲುವು ಒಲಿದರೆ ಮೈತ್ರಿ ಮತ್ತಷ್ಟು ಗಟ್ಟಿಯಾಗಲಿದೆ.

ಲೋಕಸಭಾ ಚುನಾವಣೆಗೆ ಆರೇಳು ತಿಂಗಳುಗಳಷ್ಟೇ ಉಳಿದಿವೆ. ಈ ಹೊತ್ತಿನಲ್ಲಿ, ಮೂರು ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿಕ್ಕಿಲ್ಲ ಎಂಬ ಭಾವನೆಯಲ್ಲಿ ಕಾಂಗ್ರೆಸ್‌ ಇತ್ತು. ಚುನಾವಣೆ ಘೋಷಣೆಯಿಂದ ತರಾತುರಿಯಲ್ಲಿ ಅಭ್ಯರ್ಥಿಗಳ ಶೋಧ ನಡೆಸಬೇಕಿದೆ.

ಶಿವಮೊಗ್ಗ ಹಾಗೂ ಬಳ್ಳಾರಿ ಲೋಕಸಭಾ ಕ್ಷೇತ್ರಗಳು ಬಿಜೆಪಿ ತೆಕ್ಕೆಯಲ್ಲಿವೆ. ಬಿಜೆಪಿ ಪ್ರಾಬಲ್ಯ ಇರುವ ಎರಡು ಕ್ಷೇತ್ರಗಳನ್ನು ‘ಕೈ’ವಶ ಮಾಡಿಕೊಳ್ಳುವ ಮೂಲಕ ಅಲ್ಲೂ ಬೇರು ಗಟ್ಟಿಮಾಡಿಕೊಳ್ಳುವುದು ಮೈತ್ರಿ ಪಕ್ಷಗಳ ಚಿಂತನೆ. ಶಿವಮೊಗ್ಗ ಕ್ಷೇತ್ರ ಬಿಜೆಪಿ ಭದ್ರ ನೆಲೆ. ಇಲ್ಲಿ ಬಿ.ವೈ.ರಾಘವೇಂದ್ರ ಅಭ್ಯರ್ಥಿ ಎಂದು ಯಡಿಯೂರಪ್ಪ ಪ್ರಕಟಿಸಿದ್ದಾರೆ. ಬಳ್ಳಾರಿಯಲ್ಲಿ ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡು ಬರುವ ಹೊಣೆಯನ್ನು ಶಾಸಕ ಬಿ.ಶ್ರೀರಾಮುಲು ಅವರಿಗೆ ವಹಿಸಲಾಗಿದೆ. ‘ಪದ್ಮವ್ಯೂಹ’ ಭೇದಿಸುವ ಕಟ್ಟಾಳುಗಳು ಮೈತ್ರಿಕೂಟದ ‘ಕೈ’ಗೆ ಇನ್ನೂ ಸಿಕ್ಕಿಲ್ಲ. ದೋಸ್ತಿ ಪಕ್ಷಗಳು ಹಳೆ ಮುಖಗಳನ್ನೇ ನೆಚ್ಚಿಕೊಳ್ಳಬೇಕಿವೆ.  

ಮಂಡ್ಯ ‘ತೆನೆ ಹೊತ್ತ ಮಹಿಳೆ’ಯ ಮಡಿಲಿನಲ್ಲಿದೆ. ಜಿಲ್ಲೆಯಲ್ಲಿ ಬಿಜೆಪಿಗೆ ಭದ್ರ ನೆಲೆ ಇಲ್ಲ. ಗೌಡರ ಕುಟುಂಬದ ಅಭೇದ್ಯ ಕೋಟೆಗೆ ನುಗ್ಗುವ ಬಲಾಢ್ಯ ಅಭ್ಯರ್ಥಿಗಳೂ ಇಲ್ಲ. ಈ ನಡುವೆ, ಜೆಡಿಎಸ್‌ ಜತೆಗಿನ ಮೈತ್ರಿಗೆ ಚೆಲುವರಾಯಸ್ವಾಮಿ ಸೇರಿದಂತೆ ಕಾಂಗ್ರೆಸ್‌ನ ಸ್ಥಳೀಯ ಮುಖಂಡರು ವಿರೋಧ ವ್ಯಕ್ತಪಡಿಸಿದ್ದಾರೆ. ಈ ಒಳ ಏಟಿನ ಲಾಭ ಪಡೆಯುವ ನಿರೀಕ್ಷೆಯಲ್ಲಿ ಕಮಲ ಪಾಳೆಯ ಇದೆ.

‘ಆಪರೇಷನ್‌ ಕಮಲ’ದ ಮೂಲಕ ಮೈತ್ರಿಕೂಟದ 20 ಶಾಸಕರನ್ನು ಸೆಳೆಯಲು ಬಿಜೆಪಿ ಶತ‍ಪ್ರಯತ್ನ ನಡೆಸಿತ್ತು. ವಿಧಾನಸಭಾ ಉಪಚುನಾವಣೆಯಲ್ಲಿ ಮುನ್ನಡೆ ಸಾಧಿಸಿದರೆ ‘ಆಪರೇಷನ್‌ ಕಮಲ’ ಮತ್ತೆ ಶುರುವಾಗಬಹುದು. ಎರಡೂ ಸ್ಥಾನಗಳನ್ನೂ ಗೆದ್ದರೆ ಪಕ್ಷದ ಬಲ 106ಕ್ಕೆ ಏರಲಿದೆ. ರಾಮನಗರದ ಬಗ್ಗೆ ಪಕ್ಷ ಹೆಚ್ಚು ಆಸೆ ಇರಿಸಿಕೊಂಡಿಲ್ಲ. ಜಮಖಂಡಿಯಲ್ಲಿ ಕಳೆದ ಚುನಾವಣೆಯಲ್ಲಿ ಪಕ್ಷ 3 ಸಾವಿರ ಮತಗಳ ಅಂತರದಿಂದ ಸೋತಿತ್ತು. ಸಂಗಮೇಶ ನಿರಾಣಿ ಬಂಡಾಯ ಬಿಜೆಪಿಗೆ ಹೊಡೆತ ನೀಡಿತ್ತು. ಈಗ ನಿರಾಣಿ ಪಕ್ಷಕ್ಕೆ ಮರಳಿದ್ದಾರೆ. ಹೀಗಾಗಿ, ಸ್ಪಲ್ಪ ಪ್ರಯತ್ನ ಮಾಡಿದರೆ ಗೆಲುವಿನ ದಡ ಸೇರಬಹುದು ಎಂಬುದು ಯಡಿಯೂರಪ್ಪ ಲೆಕ್ಕಾಚಾರ.

ಎರಡೂ ಕ್ಷೇತ್ರಗಳಲ್ಲಿ ಗೆದ್ದು ಸರ್ಕಾರವನ್ನು ಮತ್ತಷ್ಟು ಸುಭದ್ರ ಮಾಡಿಕೊಳ್ಳಬೇಕು ಎಂಬುದು ಜೆಡಿಎಸ್‌– ಕಾಂಗ್ರೆಸ್‌ ಹವಣಿಕೆ. ಕಾಂಗ್ರೆಸ್‌ ಮುಖಂಡರು ಜಮಖಂಡಿಯ ಕಡೆಗೆ ಹೆಚ್ಚು ದೃಷ್ಟಿ ನೆಟ್ಟಿದ್ದಾರೆ. ಸಿದ್ದು ನ್ಯಾಮಗೌಡ ನಿಧನದಿಂದ ತೆರವಾದ ಸ್ಥಾನಕ್ಕೆ ಅವರ ಪುತ್ರ ಆನಂದ್‌ ನ್ಯಾಮಗೌಡ ಅವರನ್ನೇ ಅಭ್ಯರ್ಥಿಯನ್ನಾಗಿ ಮಾಡುವ ಮೂಲಕ ಅನುಕಂಪದ ಅಲೆಯ ಮೇಲೆ ಸವಾರಿ ಮಾಡಲು ಕಾಂಗ್ರೆಸ್‌ ಹೊರಟಿದೆ.

‘ಕೈ’ಗೆ ಸಂಪುಟ ಸಂಕಟ

ಸಚಿವ ಸಂಪುಟ ವಿಸ್ತರಣೆ ಮುಂದೂಡಿಕೆಯಾಗಲಿದೆ ಎಂಬುದು ಖಚಿತವಾಗುತ್ತಿದ್ದಂತೆ ‘ಕೈ’ ಪಾಳಯದಲ್ಲಿ ಅಸಮಾಧಾನ ಕಟ್ಟೆಯೊಡೆದಿದೆ.

‘ಪಕ್ಷದಲ್ಲಿ ಸರ್ವಾಧಿಕಾರ ತಾಂಡವವಾಡುತ್ತಿದೆ’ ಎಂದು ಹಿರೇಕೆರೂರ ಶಾಸಕ ಬಿ.ಸಿ. ಪಾಟೀಲ ಅವರು ನಾಯಕರ ವಿರುದ್ಧ ಬಹಿರಂಗವಾಗಿ ಅತೃಪ್ತಿ ವ್ಯಕ್ತಪಡಿಸಿದ್ದಾರೆ. ಸಚಿವ ಸ್ಥಾನದ ಆಕಾಂಕ್ಷಿಯಾಗಿರುವ ಅವರು ಈ ಸಂಬಂಧ ಭಾನುವಾರ ಟ್ವೀಟ್‌ ಮಾಡಿದ್ದಾರೆ.

ಸಚಿವ ಸ್ಥಾನದ ಆಕಾಂಕ್ಷಿಗಳು ಇದೇ 10 ಅಥವಾ 12ರಂದು ಸಂಪುಟ ವಿಸ್ತರಣೆ ಆಗಬಹುದೆಂದು ನಿರೀಕ್ಷಿಸಿದ್ದರು. ಲೋಕಸಭೆ ಮತ್ತು ವಿಧಾನಸಭೆ ಕ್ಷೇತ್ರಗಳಿಗೆ ಉಪಚುನಾವಣೆ ಘೋಷಣೆಯಾಗಿರುವುದರಿಂದ ನ. 3ರವರೆಗೆ ಸಂಪುಟ ವಿಸ್ತರಣೆ ಸಾಧ್ಯವಿಲ್ಲ ಎಂಬ ಮಾತು ಕಾಂಗ್ರೆಸ್‌ ವಲಯದಲ್ಲಿ ಹರಿದಾಡುತ್ತಿದೆ.

‘ಸಂಪುಟ ವಿಸ್ತರಣೆ ವಿಳಂಬ ಮಾಡುವ ಮೂಲಕ ಶಾಸಕರಿಗೆ ಅವಮಾನ ಮಾಡಲಾಗುತ್ತಿದೆ’ ಎಂದು ರೋಷ ವ್ಯಕ್ತಪಡಿಸಿರುವ ಪಾಟೀಲ, ಪಕ್ಷ  ಪ್ರಜಾಪ್ರಭುತ್ವದ ಕೊಲೆ ಮಾಡುತ್ತಿದೆ ಎಂದೂ ಕಿಡಿಕಾರಿದ್ದಾರೆ.

ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿಯಾದ ಎಂ.ಬಿ.ಪಾಟೀಲ ಅವರು ಶನಿವಾರ ರಾತ್ರಿಯೇ ದೆಹಲಿಗೆ ತೆರಳಿದ್ದಾರೆ. ಈ ವಾರವೇ ಸಂಪುಟ ವಿಸ್ತರಣೆ ಮಾಡಬೇಕು ಎಂದು ಅವರು ಪಟ್ಟು ಹಿಡಿದಿದ್ದಾರೆ. ಉಪಚುನಾವಣೆಯ ಕಾವು ಏರುವ ಹೊತ್ತಿನಲ್ಲೇ ಇನ್ನಷ್ಟು ಆಕಾಂಕ್ಷಿಗಳು ಸ್ಥಾನಕ್ಕಾಗಿ ಪಟ್ಟು ಹಿಡಿದು ‘ಮೈತ್ರಿ’ಗೆ ಮುಜುಗರ ಉಂಟು ಮಾಡುವ ಸಾಧ್ಯತೆಯೂ ಇದೆ.

ಈ ಮಧ್ಯೆ, ಸಂಪುಟ ಸೇರಲು ತುದಿಗಾಲಲ್ಲಿ ನಿಂತಿರುವ ಕಾಂಗ್ರೆಸ್‌ನ ಕೆಲವು ಹಿರಿಯ ಶಾಸಕರೂ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ದೆಹಲಿಗೆ ತೆರಳಿ ವರಿಷ್ಠರಿಗೆ ಮನವಿ ಸಲ್ಲಿಸುವ ಬಗ್ಗೆಯೂ ಕೆಲವು ಶಾಸಕರು ಚರ್ಚೆ ನಡೆಸಿದ್ದಾರೆ ಎಂದು ಗೊತ್ತಾಗಿದೆ.

ಉಪಚುನಾವಣೆ ಮುಂದಿರುವಾಗ ಸಂಪುಟ ವಿಸ್ತರಣೆಗೆ ಕೈ ಹಾಕಿದರೆ ಭಿನ್ನಮತ ಭುಗಿಲೆದ್ದು ಗೊಂದಲ ಸೃಷ್ಟಿಯಾಗಬಹುದು ಎಂಬ ಆತಂಕ ಕಾಂಗ್ರೆಸ್‌ ನಾಯಕರನ್ನು ಕಾಡುತ್ತಿದೆ. ಜೆಡಿಎಸ್‌ ಕೂಡಾ ಇದೇ ನಿಲುವು ಹೊಂದಿದೆ.

'ಸಂಪುಟ ವಿಸ್ತರಣೆ ಮುಂದೂಡುವಂತೆ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರಿಗೆ ನಾನು ಸಲಹೆ ನೀಡಿಲ್ಲ' ಎಂದು ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ತಿಳಿಸಿದರು.

‘ದೆಹಲಿಯಲ್ಲಿ ಕಾಂಗ್ರೆಸ್‌ ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ್‌ ಅವರನ್ನು ಭೇಟಿ ಮಾಡಿದ್ದೆ. ಆದಷ್ಟು ಬೇಗ ಸಂಪುಟ ವಿಸ್ತರಣೆ ಹಾಗೂ ನಿಗಮ ಮಂಡಳಿಗಳಿಗೆ ಅಧ್ಯಕ್ಷರನ್ನು ನೇಮಕ ಮಾಡುವಂತೆ ಸಲಹೆ ನೀಡಿದ್ದೆ’ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.

ಬರಹ ಇಷ್ಟವಾಯಿತೆ?

 • 3

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !