ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋದಿಗೆ ಸಂಸತ್ತಿನ ಬಗ್ಗೆ ಗೌರವವಿಲ್ಲ,ಮನವರಿಕೆ ಮಾಡಿಕೊಡುವ ಸಾಮರ್ಥ್ಯ ಇಲ್ಲ: ಖರ್ಗೆ

Last Updated 14 ಮಾರ್ಚ್ 2019, 14:39 IST
ಅಕ್ಷರ ಗಾತ್ರ

ಬೆಂಗಳೂರು:‘ನಿಮ್ಮಲ್ಲಿ ಬದ್ಧತೆ, ರಾಜಕೀಯ ಶಕ್ತಿ ಇದ್ದರೆ ಜನರಿಗೆ ಅಧಿಕಾರದ ಲಾಭ ಕೊಡಬಹುದು. ಅದಕ್ಕಾಗಿ ನಾನು ರಾಜಕೀಯಕ್ಕೆ ಬಂದಿದ್ದೇನೆ. ಅದು ಬಿಟ್ರೆ, ನಾನು ಸೀನಿಯರ್ ಇದ್ದೀನಿ ನನಗೆ ಪ್ರಧಾನಿ ಮಾಡಿ ಅಂತ ಕೇಳಲ್ಲ’ ಎಂದು ಹೈದರಾಬಾದ್ ಕರ್ನಾಟಕದ ಈ ಪ್ರಭಾವಿ ನಾಯಕ, ಲೋಕಸಭೆಯಲ್ಲಿ ಕಾಂಗ್ರೆಸ್‌ನ ದನಿಯಾಗಿರುವ ಮಲ್ಲಿಕಾರ್ಜುನ ಖರ್ಗೆ ಅಭಿಪ್ರಾಯ ಹಂಚಿಕೊಂಡರು.

ಖಡಕ್ ಮಾತುಗಳಿಂದ ಪ್ರಧಾನಿಯನ್ನು ನೇರಾನೇರ ತರಾಟೆಗೆ ತೆಗೆದುಕೊಳ್ಳುವ ಖರ್ಗೆ ಅವರ ಮೇಲೆ ಈ ಬಾರಿ ಕಾಂಗ್ರೆಸ್ ಭಾರೀ ನಿರೀಕ್ಷೆ ಇಟ್ಟುಕೊಂಡಿದೆ. ‘ಪ್ರಜಾವಾಣಿ’ ಕಚೇರಿಯಲ್ಲಿ ಗುರುವಾರ ನಡೆದ ‘ಪ್ರಜಾ ಮತ’ ಸಂವಾದದಲ್ಲಿ ಖರ್ಗೆ ಮಾತುಗಳ ಪೂರ್ಣ ಸಾರ ಇಲ್ಲಿದೆ.

ಪ್ರ.ವಾ: ಮೋದಿ ಅವರ ವೈಶಿಷ್ಟ್ಯ ಮತ್ತು ದೌರ್ಬಲ್ಯ ಹೇಗೆ ಗುರುತಿಸುತ್ತೀರಿ?
ಖರ್ಗೆ: ಮೋದಿ ಅವರ ಜೊತೆಗೆ ಕೇವಲ ಲೋಕಸಭೆಯಲ್ಲಿ ಮಾತ್ರವೇ ಮುಖಾಮುಖಿಯಾಗಿದ್ದಲ್ಲ. ಸಿಬಿಐ ಸೆಲೆಕ್ಷನ್, ಸಿವಿಸಿ ಮೀಟಿಂಗ್ ಸೇರಿದಂತೆ ಹಲವು ಕಡೆ ನಾನು ಅವರ ಜೊತೆಗೆ ಮಾತನಾಡಿದ್ದೇನೆ. ಮೋದಿ ಅವರ ಒಂದು ವಿಚಾರ ಅಂದ್ರೆ ಸ್ವತಃ ಯಾವುದನ್ನೂ ಚರ್ಚಿಸುವುದಿಲ್ಲ. ನಿಮ್ಮ ಕಣ್ಣಿಗೆ ಕಣ್ಣು ಕೊಟ್ಟು ಇದು ತಪ್ಪು, ಇದು ಸರಿ ಅಂತ ಹೇಳಲ್ಲ. ನಾನು ಹೇಳೋದು ಸರಿ ಅಂತ ವಾದ ಮಾಡಲ್ಲ. ತಮ್ಮ ಒಬ್ಬಿಬ್ಬರು ಅಧಿಕಾರಿಗಳಿಂದ ವಿವರಣೆ ಕೊಡಿಸ್ತಾರೆ. ಅವರಿಗೆ ಬೇಕಾದ ಮೆಂಬರ್ ಕಡೆಯಿಂದ ಪ್ರಸ್ತಾವನೆ ಮಾಡಿಸ್ತಾರೆ. ಅಲ್ಲಿಗೆ ಚರ್ಚೆ ಮುಗಿಯುತ್ತೆ. ನಾನು ಅದರ ವಿರುದ್ಧ ಹೇಳಿದರೆ ಅಥವಾ ನಕಾರಾತ್ಮಕ ಪ್ರತಿಕ್ರಿಯೆ ಮಾಡಿದ್ರೆ ಅವರು ’ಟೀಕ್ ಹೇ‘ ಅಂತ ಹೇಳ್ತಾರೆ. 2:1 ಬಹುಮತದಲ್ಲಿ ನಿರ್ಧಾರಗಳು ಪಾಸ್ ಆಗುತ್ತವೆ. ವಿವರಣೆ ಕೊಟ್ಟು ಮನವರಿ ಮಾಡಿಕೊಡುವ ಸಾಮರ್ಥ್ಯ ಅವರಿಗೆ ಇಲ್ಲ. ಮಾತೂ ಆಡಲ್ಲ, ಚರ್ಚೆಗಳಲ್ಲಿ ಪಾಲ್ಗೊಳ್ಳುವುದೂ ಇಲ್ಲ. ಸಂಸತ್ತಿನಲ್ಲೂ ಅವರು ನಮ್ಮ ಪ್ರಶ್ನೆಗಳಿಗೆ ಉತ್ತರ ಕೊಡಲ್ಲ. ಸಂಸತ್ತಿನಲ್ಲಿ ಸಂಬಂಧಿಸಿದ ಸಚಿವರು ಉತ್ತರ ಕೊಡುವುದು ಸರಿ, ಆದರೆ ಕನಿಷ್ಠ ವಿದೇಶ ಪ್ರವಾಸ ಮುಗಿಸಿದ ನಂತರವಾದರೂ ಅದರ ಬಗ್ಗೆ ವಿವರಣೆ ಕೊಡುವುದಿಲ್ಲ.

ಮೋದಿ ವಿದೇಶಕ್ಕೆ ಹೋಗಿ ಬಂದ ಮೇಲೆ ಯಾರು ವಿವರಣೆ ಕೊಡಬೇಕು? ಎಂದು ಪ್ರಶ್ನಿಸಿದ ಖರ್ಗೆ, ಇಡೀ ಸಂಸತ್ತಿಗೆ ಅವರು ಸ್ವಲ್ಪ ನಿರ್ಲಕ್ಷ್ಯ ಮಾಡುವ ಸ್ವಭಾವ ನಾನು ಕಂಡಿದ್ದೇನೆ, ಅನುಭವಿಸಿದ್ದೇನೆ. ಅಡ್ವಾಣಿ, ಮುರಳಿಮನೋಹರ ಜೋಶಿಯಂಥ ಹಿರಿಯರನ್ನೂ ಗಮನಿಸದೇ ಮುಂದೆ ಹೋಗ್ತಾರೆ. ನಿಮ್ಮದೇ ಪಕ್ಷದ ಹಿರಿಯರನ್ನೂ ಅವರು ಕೈಮುಗಿದು ಗೌರವಿಸುವುದಿಲ್ಲ. ಅವರು ಕಟ್ಟಿದ್ದರಿಂದ ನಿಮ್ಮ ಪಕ್ಷ ಮುಂದೆ ಬಂತು ಅಲ್ವಾ? ಹಿರಿಯರಿಗೆ ಗೌರವ ಕೊಡುವುದಿಲ್ಲ. ನೀವು ಪ್ರಧಾನಿ, ರಾಷ್ಟ್ರಪತಿ ಅಥವಾ ಯಾವುದೇ ಉನ್ನತ ಸ್ಥಾನದಲ್ಲಿರಲಿ– ನಮ್ಮ ಹಿರಿಯರಿಗೆ ಗೌರವ ಕೊಡುವುದು ಅಗತ್ಯ. ಬೇರೆ ಕಡೆ ಮಾಡ್ತೀರಿ ಸರಿ, ವಾಲ್ಮೀಕಿ ಜನರಿಗೆ ಕಾಲು ತೊಳೀತೀರಿ ಸರಿ. ಇದು ನಾನು ಕಂಡ ಮೋದಿ ಅವರ ನಡವಳಿಕೆ.

ಪ್ರ.ವಾ: ಮೋದಿ ಅವರ ನಡವಳಿಕೆಗೆ ಕೆಲಸದ ಒತ್ತಡ ಕಾರಣವೇ?
ಖರ್ಗೆ:
ಸಂಸತ್ತಿಗೆ ನೀವು ಬದ್ಧರಾಗಿರಬೇಕು ಅಲ್ವಾ? ನೀವು ಸಂಸತ್ತಿನಲ್ಲಿ ಏನು ನಡೆಯುತ್ತೆ ಅಂತ ಟೀವಿಯಲ್ಲಿ ನೋಡ್ತೀರಿ. ಬಂದು ವಿವರಣೆ ಕೊಡಲು ಆಗುವುದಿಲ್ವಾ? ಪ್ರಧಾನಿ ಸಂಸತ್ತಿನಲ್ಲಿ ಏನು ಹೇಳ್ತಾರೆ ಅಂತ ಜನರು ಕುತೂಹಲದಿಂದ ಗಮನಿಸ್ತಾರೆ. ಈ ಹಿಂದಿನ ಪ್ರಧಾನಿಗಳು ಕೆಲಸ ಮಾಡ್ತಾ ಇರ್ಲಿಲ್ವಾ? ಇಂದಿರಾ, ಶಾಸ್ತ್ರಿಜಿ, ನೆಹರು ಅವರು ಹೀಗೇ ವರ್ತಿಸ್ತಾ ಇದ್ರಾ? ಅವರಿಗೆ ಕೆಲಸದ ಒತ್ತಡ ಇರಲಿಲ್ವಾ? ನೀವು ಸಂಸತ್ತಿನ ಮೂಲಕ ಈ ದೇಶಕ್ಕೆ ಉತ್ತರ ಕೊಡಬೇಕು. ಆಗ ಎಲ್ಲರಿಗೂ ನೀವು ಏನು ಮಾಡ್ತಿದ್ದೀರಿ ಅನ್ನೋದು ಗೊತ್ತಾಗುತ್ತೆ. ಸುಮ್ಮನೆ ಬಂದು ಒಂದು ದೊಡ್ಡ ಭಾಷಣ ಮಾಡಿ, ಹೋಗುವುದು ಸರಿಯೇ? ಇದು ನನ್ನ ಕಂಪ್ಲೆಂಟ್.

‘ಒಮ್ಮೆ ಸುಷ್ಮಾ ಅವರು ಪ್ರಧಾನಿ ಬಂದಿದ್ದಾರೆ, ಅವರ ದರ್ಶನ ತಗೊಳ್ಳಿ ಅಂತ ಹೇಳಿದ್ರು. ನಾನು ತಕ್ಷಣ ಅವರೇನು ದೇವರಾ ಅಂತ ಕೇಳಿದೆ. ಪ್ರಧಾನಿ ಸಂಸತ್ತಿಗೆ ಬರೋದು ಕೆಲಸ ಮಾಡೋಕೆ ಅಲ್ವಾ? ಇದು ಅತಿಯಾಯ್ತು.

‘ಮೋದಿ ಎಷ್ಟು ಸಲ ವಿಷಯದ ಮೇಲೆ ಮಾತನಾಡಿದ್ದಾರೆ ದೇಶದ ಜನರಿಗೆ ಗೊತ್ತಿದೆ. ಮನಮೋಹನ್ ಸಿಂಗ್ ಸಹ ಮಾತನಾಡುತ್ತಿರಲಿಲ್ಲ ಅನ್ನೋದು ಹಲವರ ದೂರು. ಆದರೆ ಸಿಂಗ್ ಅವರು ಸಂಕ್ಷಿಪ್ತವಾಗಿ ಮಾತನಾಡ್ತಾ ಇದ್ರು. ಅವರ ಪೂರ್ತಿ ವಿವರಣೆಗಳನ್ನು ಪ್ರಿಂಟ್ ಮಾಡಲಾಗುತ್ತಿತ್ತು.

‘ಮೋದಿ ಅವರು 70 ವರ್ಷಗಳಿಂದ ಏನೂ ಆಗಿಲ್ಲ ಅಂತ ಬೈಯುವಾಗ ತಮ್ಮವರೇ ಆದ ವಾಜಪೇಯಿ ಅವರನ್ನು ಮರೆತು ಹೋಗ್ತಾರೆ.

‘ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ’

‘ಈಗ ದೇಶದಲ್ಲಿರುವುದು ಘೋಷಣೆಯಾಗದ ತುರ್ತು ಪರಿಸ್ಥಿತಿ’ ಎಂದು ಟೀಕಿಸಿದ ಮಲ್ಲಿಕಾರ್ಜುನ ಖರ್ಗೆ, ನಮ್ಮ ವಿವರಣೆ ಈಗ ಪ್ರಸಾರವಾಗುವುದೇ ಇಲ್ಲ. ಅಮೃತ್ ಬಜಾರ್ ಪತ್ರಿಕೆ, ಎನ್‌ಡಿಟಿವಿ, ದಿ ಹಿಂದೂ ಸೇರಿದಂತೆ ಹಲವರು ಕಷ್ಟು ಅನುಭವಿಸುತ್ತಿದ್ದಾರೆ. ನಾಳೆ ನೀವೂ ಸಹ ಅನುಭವಿಸಬಹುದು. ನಿಮ್ಮ ಸೆಂಟರ್ ಪೇಜ್ ಆರ್ಟಿಕಲ್ ಮತ್ತು ಎಡಿಟೋರಿಯಲ್ ನಾನು ಓದ್ತೀನಿ ಎಂದರು.

‘ಮೋದಿ ಅವರು 90 ನಿಮಿಷ ಭಾಷಣ ಮಾಡಿದ್ರೂ ಪ್ರಪಂಚದ ಎಲ್ಲ ಪತ್ರಿಕೆಗಳು ಕಡಿಮೆ ಮಾತನಾಡಿದಮನಮೋಹನ್ ಸಿಂಗ್ಅವರಿಗೇ ಆದ್ಯತೆ ಕೊಟ್ಟವು.

‘ಕಪ್ಪುಹಣ ವಾಪಸ್ ತಂದು ಎಲ್ಲ ದೇಶವಾಸಿಗಳ ಜೇಬಿಗೆ ದುಡ್ಡು ಹಾಕ್ತೀವಿ ಅಂದಿದ್ರು ಮೋದಿ. ಈಗ ಏನಾಯ್ತು? ಎಂದು ಖರ್ಗೆ ಪ್ರಶ್ನಿಸಿದರು.

‘ಹಿಂದಿನ ಸರ್ಕಾರದವರು ಏನೂ ಮಾಡಿಲ್ಲ. ನಾನು ಪ್ರತಿವರ್ಷ 2 ಕೋಟಿ ನೌಕರಿ ಸೃಷ್ಟಿ ಮಾಡ್ತೀನಿ ಅಂದಿದ್ರು. 10 ವರ್ಷಗಳಲ್ಲಿ ಐದು ಕೋಟಿ ನೌಕರಿ ಕೊಡ್ತೀನಿ’ ಅಂದ್ರು. ಈಗ ಪರಿಸ್ಥಿತಿ ಏನಾಗಿದೆ. ಕಾರ್ಮಿಕ ವರದಿಗಳು ಮತ್ತು ಸಾಂಖ್ಯಿಕ ಇಲಾಖೆ ವರದಿಗಳ ಪ್ರಕಾರ ನಾವು ಇದ್ದ ನೌಕರಿ ಕಳೆದುಕೊಂಡಿದ್ದೇವೆ. 1.75 ಕೋಟಿ ಉದ್ಯೋಗಗಳು ಮಾತ್ರ ಸೃಷ್ಟಿಯಾಗಿವೆ.

‘ರೈತರಿಗೆ ಉತ್ಪಾದನಾ ವೆಚ್ಚದ ಜೊತೆಗೆ ಶೇ 50ರ ಲಾಭ ಕೊಡ್ತೀನಿ’ ಅಂದ್ರಿ ಏನಾಯ್ತು? ’ಯುಪಿಎ ಅವಧಿಯಲ್ಲಿ ರೈತರಿಗೆ ಸಿಕ್ಕ ಲಾಭಕ್ಕೂ ಈ ಸರ್ಕಾರದಲ್ಲಿ ಆದ ಲಾಭಕ್ಕೂ ವ್ಯತ್ಯಾಸವಾಗಿದೆ.

‘ಈ ಮಾಧ್ಯಮದ ಮೂಲಕ ದೇಶದ ಯುವಕರಿಗೆ, ಮತದಾರರಿಗೆ ರಾಹುಲ್‌ಗೆ ಒಂದು ಅವಕಾಶ ಕೊಡಿ ಅಂತ ಕೇಳಿಕೊಳ್ತಿದ್ದೀನಿ.
‘13.5 ವರ್ಷ ಮೋದಿ ಗುಜರಾತ್ ಮುಖ್ಯಮಂತ್ರಿಯಾಗಿದ್ದರು. ಈ ಅವಧಿಯಲ್ಲಿ ಅವರ ಸಾಧನೆ ಏನು? ಒಮ್ಮೆ ಹುಡುಕಿ. ಸರ್ಕಾರ ಹೇಗಿತ್ತು. ಜಿಡಿಪಿ ಹೇಗಿತ್ತು? ಯೋಚಿಸಿ. ಮಾರ್ಕೆಟಿಂಗ್‌ನವರು ತಮ್ಮ ಉತ್ಪನ್ನಳನ್ನು ಮಾರುತ್ತಾರೆ. ಮೋದಿ ಒಬ್ಬ ಮಾರ್ಕೆಟಿಂಗ್ ಮನುಷ್ಯ. ಚೆನ್ನಾಗಿದೆಯೋ ಇಲ್ಲವೋ ತನ್ನ ಸರಕು ಮಾರುತ್ತಾನೆ.

‘ಮೋದಿ ನೇರವಾಗಿ ಮಧ್ಯಪ್ರದೇಶದಿಂದ ಪ್ರಚಾರಕ್ ಆಗಿ ಬಂದು ಗುಜರಾತ್ ಮುಖ್ಯಮಂತ್ರಿ ಆದರು. ನಂತರ ಎಂಎಲ್‌ಎ ಆದ್ರು. ಈಗ ದೇಶದ ಎಲ್ಲೆಡೆ ಓಡಾಡ್ತಾರೆ. ತಮ್ಮ ಆಲೋಚನೆ ಹಂಚಿಕೊಳ್ತಾರೆ. ಕೆಲವೊಮ್ಮೆ ಜನರನ್ನು ಅವರ ಸಾಮರ್ಥ್ಯಕ್ಕೆ ಮೀರಿ ಪ್ರೊಜೆಕ್ಟ್ ಮಾಡಲಾಗುತ್ತೆ. ಅದಕ್ಕೆ ಮೋದಿ ಉದಾಹರಣೆ.

ಪ್ರ.ವಾ: ನೀವೇಕೆ ಪ್ರಧಾನಿ ಹುದ್ದೆಗೆ ಬರುವುದಿಲ್ಲ?
ಖರ್ಗೆ:
ಬಿಜೆಪಿಯಲ್ಲಿ ಆಡ್ವಾಣಿ ಇಲ್ವಾ? ಅವರನ್ನು ಒಮ್ಮೆ ನೋಡಿ. ನಾನು ಸಮಾಜದಲ್ಲಿ ಬದಲಾವಣೆ ತರಬೇಕೆಂದು ರಾಜಕೀಯಕ್ಕೆ ಬಂದವನು. ಯಾವ ರಾಜಕೀಯ ಪಕ್ಷಕ್ಕೆ ಎಲ್ಲರನ್ನೂ ಒಳಗೊಳ್ಳುವ ಗುಣ ಇರುತ್ತೋ ಅದಕ್ಕೆ ಸೇರಬೇಕು ಅಂತ ಬಂದೆ. ನಾನು 26ನೇ ವರ್ಷಕ್ಕೆ ಕಾಂಗ್ರೆಸ್‌ಗೆ ಬಂದವನು. ಈಗ ನನಗೆ 78 ವರ್ಷ. ನಾನು ಇಲ್ಲಿಗೆ ಬಂದಿದ್ದು ನನ್ನ ಕೆಲವು ಯೋಜನೆಗಳಾದನ್ನಾದರೂ ಜಾರಿ ಮಾಡುವ ಆಸೆಯಿಂದ. ನಾನು ಶಿಕ್ಷಣ ಮಂತ್ರಿಯಾದಾಗ ಬ್ಯಾಕ್‌ಲಾಗ್ ಭರ್ತಿ ಮಾಡಿದೆ, ಭೂ ಸುಧಾರಣೆ ನೂರಕ್ಕೆ ನೂರು ಜಾರಿ ಮಾಡಿದೆ. ಮೀಸಲಾತಿ ಗೊಂದಲ ಸರಿಪಡಿಸಲು ಯತ್ನಿಸಿದೆ.

371 ಜೆ ಜಾರಿ ಮಾಡಲು ಯತ್ನಿಸಿದಾಗ ನನ್ನ ಪಕ್ಷಕ್ಕೆ ಸರಳ ಬಹುಮತವೂ ಇರಲಿಲ್ಲ. ಆಡ್ವಾಣಿ ಇದಕ್ಕೆ ಅವಕಾಶ ಮಾಡಿಕೊಡಲು ಅಗಲ್ಲ ಅಂತ ಕಸದಬುಟ್ಟಿಗೆ ಹಾಕಿದ್ರು. ಅದನ್ನು ನಾನು ದೂಳುಕೊಡವಿ ಮುಂದಿಟ್ಟು ಜಾರಿ ಮಾಡಿಸಿದೆ. ಈಗ ನಮ್ಮ ಭಾಗದ ಸಾವಿರಾರು ಯುವಕರಿಗೆ ಅವಕಾಶ ಸಿಕ್ಕಿದೆ. ನಮಗೆ ಬೆಂಬಲ ಕೊಟ್ಟಿರುವ ಜನರು, ರಾಜ್ಯದಲ್ಲಿ ಅತ್ಯಂತ ಹಿಂದುಳಿದ ಭಾಗ, ಸಮಾಜದ ಕಡೆಗೆ ಗಮನ ಕೊಡಲು ಯತ್ನಿಸುತ್ತಿದ್ದೇನೆ.

ನಿಮ್ಮಲ್ಲಿ ಬದ್ಧತೆ, ರಾಜಕೀಯ ಶಕ್ತಿ ಇದ್ದರೆ ಜನರಿಗೆ ಅಧಿಕಾರದ ಲಾಭ ಕೊಡಬಹುದು. ಅದಕ್ಕಾಗಿ ನಾನು ರಾಜಕೀಯಕ್ಕೆ ಬಂದಿದ್ದೇನೆ. ಅದು ಬಿಟ್ರೆ, ನಾನು ಸೀನಿಯರ್ ಇದ್ದೀನಿ ನನಗೆ ಪ್ರಧಾನಿ ಮಾಡಿ ಅಂತ ಕೇಳಲ್ಲ ಎಂದು ಖರ್ಗೆ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT