ಮಂಗಳೂರು: ಬದಲಾವಣೆಯೂ ಬೇಕು, ಮೋದಿಯೂ ಬೇಕು

ಬುಧವಾರ, ಏಪ್ರಿಲ್ 24, 2019
27 °C

ಮಂಗಳೂರು: ಬದಲಾವಣೆಯೂ ಬೇಕು, ಮೋದಿಯೂ ಬೇಕು

Published:
Updated:
Prajavani

ಮಂಗಳೂರು: ‘ತುಂಬಾ ಕಷ್ಟಗಳು ಬಂದಾಗ ನಾವು ದೇವರನ್ನು ನಂಬುವುದೇ ಬೇಡ ಎಂದು ನಿರ್ಧರಿಸಿಬಿಡುತ್ತೇವೆ. ಆದರೆ, ದೇವಸ್ಥಾನದ ಮುಂದೆ ಹಾದು ಹೋಗುವಾಗ ನಮಗೆ ಗೊತ್ತಿಲ್ಲದಂತೆಯೇ ಕೈಮುಗಿದು ಬಿಡುತ್ತೇವೆ. ಮೋದಿಯೂ ಹಾಗೆಯೇ. ಮತ ಹಾಕುವ ಹೊತ್ತಿನಲ್ಲಿ ಮೋದಿಗೆ ಸಹಜವಾಗಿಯೇ ಮತ ಹಾಕಿ ಬಿಡುತ್ತೇವೆ’ ಎಂದು ಜೋರಾಗಿ ನಗುತ್ತಲೇ ಹೇಳಿದವರು ಉಪ್ಪಿನಂಗಡಿಯ ದೇವಾನಂದ್‍.

ಯಕ್ಷಗಾನದ ಮಾತುಗಾರಿಕೆಯ ಶೈಲಿಯಲ್ಲಿ ರಂಜಿಸುತ್ತಲೇ ಮೋದಿ ಅಭಿಮಾನವನ್ನು ಬಿಚ್ಚಿಡುವ ಮುನ್ನ ಅವರು ತಮ್ಮ ಅತೃಪ್ತಿಯನ್ನೂ ತೋಡಿಕೊಂಡರು. ಈ ಅಸಮಾಧಾನದ ಹೆಚ್ಚಿನ ಪಾಲು ಇದ್ದದ್ದು ಹಾಲಿ ಸಂಸದ ಬಿಜೆಪಿಯ ನಳಿನ್‍ ಕುಮಾರ್ ಕಟೀಲ್ ‍ಮೇಲೆ. ಕೆಲಸಗಳು ಆಗಿಲ್ಲ, ಮೋದಿಯವರು ಕೆಲಸ ಮಾಡುವ ವೇಗಕ್ಕೆ ನಳಿನ್‍ ಸರಿಸಾಟಿಯಲ್ಲ ಎಂಬುದು ದೇವಾನಂದ್‍ ದೂರು. ಹಾಗಿದ್ದರೂ ಮೋದಿಗಾಗಿ ಈ ಬಾರಿಯೂ ನಳಿನ್‍ ಅವರಿಗೇ ಮತ ಎಂಬುದು ಅವರ ಖಚಿತ ಮಾತು.

ಕಟೀಲ್‌ ಸಂದರ್ಶನ: ಮೈತ್ರಿಯಿಂದ ತೊಂದರೆಯೇ ಇಲ್ಲ

ಉದ್ಯಮಿಯೂ ಆಗಿರುವ ಅವರಿಗೆ ನೋಟು ರದ್ದತಿಯಾಗಲಿ, ಜಿಎಸ್‍ಟಿ ಆಗಲಿ ಸಮಸ್ಯೆ ಎಂದು ಅನಿಸಿದ್ದೇ ಇಲ್ಲ. ಯಾಕೆಂದರೆ, ಅವರ ಹಣ ನೋಟು ರದ್ದತಿಗೆ ಮೊದಲು ಕೂಡ ಬ್ಯಾಂಕ್‍ನಲ್ಲಿಯೇ ಇತ್ತು. ಜಿಎಸ್‍ಟಿ ಎಂಬುದು ವ್ಯಾಪಾರಿಗಳಿಗೆ ತೊಂದರೆ ಕೊಟ್ಟಿಲ್ಲವೇ ಎಂದರೆ ‘ನನಗೇನು ತೊಂದರೆ, ಜಿಎಸ್‍ಟಿ ಕಟ್ಟುವವನು ಗ್ರಾಹಕ ತಾನೇ’ ಎಂಬ ಪ್ರತಿಕ್ರಿಯೆ ಕೊಟ್ಟರು.

ಕರಾವಳಿಯಲ್ಲೀಗ ಮೈ ಸುಡುವಷ್ಟು ಬಿಸಿಲಿದೆ, ನೆತ್ತಿಯಿಂದ ದಳದಳನೆ ಹರಿಯುವ ಸುರಿಯುವ ಬೆವರು ನೆಲ ಸೇರುವ ಮೊದಲೇ ಇಂಗಿ ಬಿಡುತ್ತದೆಯೇನೋ ಅನಿಸುವಷ್ಟು ಧಗೆಯಿದೆ. ಈ ಕಾರಣಕ್ಕೋ ಏನೋ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಚುನಾವಣಾ ಪ‍್ರಚಾರಕ್ಕೆ ಅಬ್ಬರವಿಲ್ಲ. ಮತದಾರ ಮಾತ್ರ ಆಗಲೇ ಖಚಿತ ನಿಲುವು ತಳೆದಾಗಿದೆ.

ದೇವಾನಂದ್‍ ಅವರ ಮಾತನ್ನು ಮರುಮಾತಿಲ್ಲದೆ ಆಲಿಸಿದ ರೈತ ಮತ್ತು ಉದ್ಯಮಿ ರಾಜೇಶ್‍ ರೈ, ಕ್ಷೇತ್ರದ ಅಲ್ಲಲ್ಲಿ ಕೇಳಿಸಿದ ‘ಬದಲಾವಣೆ ಬೇಕು’ ಎಂಬುದಕ್ಕೆ ಸ್ಪಷ್ಟರೂಪ ಕೊಟ್ಟು ವಿವರಿಸಿದರು. ಅವರ ಮಾತಿನಲ್ಲಿ ಅಸಮಾಧಾನಕ್ಕಿಂತ ಆಕ್ರೋಶಕ್ಕೇ ಒಂದು ತೂಕ ಹೆಚ್ಚು. 

ಮಿಥುನ್‌ ರೈ ಸಂದರ್ಶನಕರಾವಳಿ ಅಲೆ ಎದುರು ಮೋದಿ ಅಲೆ ಗೌಣ

‘ನಮ್ಮ ತೋಟದ ಕೆಲಸಕ್ಕೆ ಇತ್ತೀಚಿನವರೆಗೆ ಐವರಿದ್ದರು, ಈಗ ಇರುವುದು ಒಬ್ಬನೇ. ಅಡಿಕೆ, ಕಾಳುಮೆಣಸು ಬೆಳೆದರೆ ಅಸಲು ಸಿಗದು… ಉತ್ಪನ್ನಕ್ಕೆ ತಕ್ಕ ಬೆಲೆ ಸಿಕ್ಕರೆ ರೈತರಿಗೇಕೆ ಸಾಲ ಮನ್ನಾ? ಸರ್ಕಾರಕ್ಕೆ ನಾವೇ ಹಣ ಕೊಡುತ್ತೇವೆ. ತೆರಿಗೆ ಕಟ್ಟುತ್ತೇವೆ. ಆದರೆ, ಅದಕ್ಕೆ ಮೊದಲು ಕೃಷಿ ಕ್ಷೇತ್ರದ ಸಮಸ್ಯೆಗಳನ್ನು ಪರಿಹರಿಸಿ’–  ಸರ್ಕಾರಕ್ಕೆ ಸವಾಲೆಸೆಯುವ ರೀತಿಯಲ್ಲಿದೆ ರಾಜೇಶ್‍ ಅವರ ಮಾತು.

ವಾಯುದಾಳಿ, ನಿರ್ದಿಷ್ಟ ದಾಳಿಯ ವಿಚಾರಗಳೂ ರಾಜೇಶ್‍ ಮಾತಿನಲ್ಲಿ ಕಾಣಿಸಿಕೊಂಡವು. ಇವು ಕೂಡ ಕ್ಷೇತ್ರದ ಹಲವು ಮಂದಿ ಪ್ರಸ್ತಾಪಿಸಿದ ವಿಷಯಗಳೇ. ವಾಯುದಾಳಿ ಬೇಕಿತ್ತೇ ಎಂಬುದನ್ನು ರಾಜೇಶ್‍ ವಿಶ್ಲೇಷಿಸಲಿಲ್ಲ. ‘ಸೈನಿಕರು ನಮ್ಮನ್ನು ಕಾಯುತ್ತಾರೆ. ಅದನ್ನು ಯಾರು ರಾಜಕೀಯಕ್ಕೆ ಬಳಸಿಕೊಂಡರೂ ತಪ್ಪು’ ಎಂಬುದು ಅವರ ಸ್ಪಷ್ಟ ಅಭಿಪ್ರಾಯ.

ಕರಾವಳಿಯ ಪ್ರಭಾವಿ ಬಂಟ ಸಮುದಾಯಕ್ಕೆ ಸೇರಿದವರು ರಾಜೇಶ್‍. ಈಗ ಕಣದಲ್ಲಿರುವ ಬಿಜೆಪಿಯ ನಳಿನ್‍ ಮತ್ತು ಕಾಂಗ್ರೆಸ್‍ ಪಕ್ಷದ ಮಿಥುನ್‍ ರೈ ಇಬ್ಬರೂ ಇದೇ ಸಮುದಾಯದವರು. ಸಂಸದ ಬದಲಾಗಬೇಕು ಮತ್ತು ಬಂಟ ಸಮುದಾಯಕ್ಕೆ ಯುವ ನಾಯಕ ದೊರೆಯಬೇಕು ಎಂಬುದು ಅವರ ಇಚ್ಛೆ. ವೋಟಿಗಾಗಿ ಮತ ಸಾಮರಸ್ಯ ಕೆಡಿಸುವ ಕೆಲಸದ ಬಗ್ಗೆಯೂ ಅವರಲ್ಲಿ ಅತೃಪ್ತಿ ಇದೆ. ಕಳೆದ ಸಾರಿ ನಳಿನ್‍ಗೆ ಮತ ಹಾಕಿದ್ದೇನೆ, ಈ ಬಾರಿ ಮಿಥುನ್‍ಗೇ ಕೊಡುತ್ತೇನೆ ಎಂಬ ನಿರ್ಧಾರವನ್ನೂ ಅವರು ಮಾಡಿದ್ದಾರೆ. ಯುವಕ ಎಂಬುದರ ಲಾಭ ಸ್ವಲ್ಪ ಮಟ್ಟಿಗಾದರೂ ಅವರಿಗೆ ದೊರೆಯಬಹುದು ಎಂಬುದನ್ನು ರಾಜೇಶ್‌ ಅವರ ಮಾತು ಧ್ವನಿಸಿತು.

ಉಪ್ಪಿನಂಗಡಿಯಿಂದ ಕಾಡು ದಾರಿಯಲ್ಲಿ ಏಳೆಂಟು ಕಿಲೋಮೀಟರ್ ಸಾಗಿದರೆ ರಾವ್‌ ದಂಪತಿಯ ಸುಂದರ ಅಡಿಕೆ ತೋಟ ಎದುರಾಗುತ್ತದೆ. ಅಲ್ಲಿ ತಲುಪಿದಾಗ ಆಗಲೇ ರಾತ್ರಿ ಒಂಬತ್ತು ಗಂಟೆ. ಮನೆಯಿಂದ ಅರ್ಧ ಕಿಲೋಮೀಟರ್‌ನಷ್ಟು ದೂರದಲ್ಲಿಯೇ ಮನೆಯ ಗೇಟು ಇದೆ. ಕೆಲಸದಾಳು ಅದಕ್ಕೆ ಬೀಗ ಹಾಕಿ ಹೋಗಿದ್ದರು. ರಾವ್‌ಗೆ ಕರೆ ಮಾಡಿದ ಬಳಿಕ ಅವರ ಮಗ ಓಡೋಡಿ ಬಂದು ಗೇಟು ತೆರೆದರು. ರಾವ್‌, ಅವರ ಪತ್ನಿ ಇಬ್ಬರೂ ಸ್ನಾತಕೋತ್ತರ ಪದವೀಧರರು.

ಕ್ಷೇತ್ರ ಚಿತ್ರಣ:  ಮೋದಿ ಅಲೆಯಲ್ಲಿ ಬಿಲ್ಲವರು ಯಾರತ್ತ?

ಕೃಷಿಯನ್ನು ಸಂಪೂರ್ಣ ನಿರ್ಲಕ್ಷ್ಯ ಮಾಡಲಾಗಿದೆ ಎಂಬುದು ಸರ್ಕಾರದ ಬಗ್ಗೆ ಅವರ ದೂರು. ಈಗಿನ ಸಂಸದ ಕೆಲಸವನ್ನೇ ಮಾಡಿಲ್ಲ ಎಂಬ ವ್ಯಾಪಕವಾಗಿ ಹರಡಿಹೋಗಿರುವ ಅಭಿಪ್ರಾಯಕ್ಕೆ ಇವರೂ ದನಿಗೂಡಿಸಿದರು. ಜತೆಗೆ, ಸಂಸತ್ತಿನಲ್ಲಿ ಸಮರ್ಥವಾಗಿ ಹಿಂದಿ ಅಥವಾ ಇಂಗ್ಲಿಷ್‍ನಲ್ಲಿ ಮಾತನಾಡಿ ಕ್ಷೇತ್ರಕ್ಕೆ ಬೇಕಾದುದನ್ನು ಮಾಡಿಸಿಕೊಳ್ಳುವ ತಾಕತ್ತು ಅವರಿಗೆ ಇದೆಯೇ ಎಂದು ಅನುಮಾನಪಟ್ಟರು.

ವಿದೇಶಗಳಲ್ಲಿ ತಾವು ದೊಡ್ಡವರು ಎನ್ನಿಸಿಕೊಳ್ಳುವುದಕ್ಕಾಗಿ ಮೋದಿ ಅವರು ಸಾರ್ಕ್‌ ದೇಶಗಳ ಜತೆಗೆ ಒಪ್ಪಂದ ಮಾಡಿಕೊಂಡಿದ್ದಾರೆ. ಅದರ ಪರಿಣಾಮವಾಗಿ ನೇಪಾಳದ ಮೂಲಕ ಕೃಷಿ ಉತ್ಪನ್ನಗಳು ಭಾರತಕ್ಕೆ ಬಂದು ಬೀಳುತ್ತವೆ. ಹಾಗಾಗಿಯೇ ಇಲ್ಲಿ ಬೆಳೆದ ಅಡಿಕೆ, ರಬ್ಬರ್, ಕಾಳುಮೆಣಸನ್ನು ಕೇಳುವವರಿಲ್ಲದಂತಾಗಿದೆ ಎಂಬುದು ರಾವ್‌ ವಿಶ್ಲೇಷಣೆ. ಈ ಪ್ರದೇಶದಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 48ರ ವಿಸ್ತರಣೆ ಕಾಮಗಾರಿ ನನೆಗುದಿಗೆ ಬಿದ್ದಿರುವುದು, ತೊಕ್ಕೊಟ್ಟು, ಮಂಗಳೂರಿನಲ್ಲಿ ಬಹಳ ಅಗತ್ಯವಾಗಿ ಬೇಕಾಗಿರುವ ಮೇಲ್ಸೇತುವೆಗಳ ಕಾಮಗಾರಿ ವರ್ಷಗಳಿಂದ ಸ್ಥಗಿತವಾಗಿರುವುದು ನಮ್ಮ ಸಂಸದರ ಕೆಲಸಕ್ಕೆ ಸಿಕ್ಕ ಟ್ರೋಫಿ ಎಂದೂ ರಾವ್‌ ವ್ಯಂಗ್ಯ
ವಾಡಿದರು.

ಇದನ್ನು ಹೋಟೆಲ್‍ ಉದ್ಯಮಿ ನಾರಾಯಣ ಒಪ್ಪುವುದಿಲ್ಲ. ಕೆಲಸಗಳು ನಿಂತು ಹೋಗಲು ಕೆಲವು ಅನುಮತಿಗಳು ಸಿಗದಿರುವುದು ಕಾರಣ. ಆ ಕೆಲಸಗಳು ಆಗುತ್ತವೆ ಎಂದು ಅವರು ಹೇಳುತ್ತಾರೆ. ‘ಮೋದಿ ಅಧಿಕಾರಕ್ಕೆ ಬರುವವರೆಗೆ ವಿದೇಶದಲ್ಲಿ ಭಾರತಕ್ಕೆ ಬೆಲೆ ಇರಲಿಲ್ಲ. ಈಗ ನಮ್ಮನ್ನು ನೋಡುವ ರೀತಿಯೇ ಬದಲಾಗಿದೆ’ ಎಂದು ವಿದೇಶದಲ್ಲಿರುವ ತಮ್ಮ ಸಂಬಂಧಿಕರು ಹೇಳುತ್ತಾರೆ ಎಂಬುದರತ್ತ ನಾರಾಯಣ ಗಮನ ಸೆಳೆದರು.

ಉಳ್ಳಾಲದ ರಿಕ್ಷಾ ಚಾಲಕ ಹಸನ್‍ ಮತ್ತು ನೆಲ್ಯಾಡಿಯ ಕಾರು ಚಾಲಕ ದಿವಾಕರ ಎರಡು ದಿಕ್ಕಿನಲ್ಲಿರುವವರು. ಹಿರಿಯರು, ದುಡಿದು ದಣಿದವರು. ‘ಜನರಿಗೆ ಅರ್ಥವಾಗುತ್ತಿಲ್ಲ, ಪರಸ್ಪರರಿಗೆ ನೆರವಾಗಬೇಕು, ಈ ಸಾರಿಯೂ ಚೆನ್ನಾಗಿದೆ, ಬರಬೇಕು, ಬರುತ್ತಾರೆ’ ಎಂದು ಒಗಟು ಬಿಡಿಸುವ ಸವಾಲು ಕೊಟ್ಟವರು ದಿವಾಕರ್. ‘ಇಲ್ಲ, ಗೊತ್ತಾಗಿಲ್ಲ’ ಎಂದರೆ, ‘ಯಾರೆಂದರೆ ಯಾರು, ಮೋದಿ ಅವರು’ ಎಂದು ಸ್ವಲ್ಪ ಸಿಡುಕಿನಲ್ಲಿಯೇ ಉತ್ತರಿಸಿದರು.

ಇದನ್ನೂ ಓದಿ:  ಮಿಥುನ್‌ ಸೋತರೆ ಕುದ್ರೋಳಿಗೆ ಕಾಲಿಡುವುದಿಲ್ಲ: ಜನಾರ್ದನ ಪೂಜಾರಿ ಶಪಥ

ಹಸನ್‍ಗೆ ಫಲಿತಾಂಶದ ಬಗ್ಗೆ ಕಾತರವೇನೂ ಇಲ್ಲ. ‘ಬಿಜೆಪಿ ಗೆಲ್ಲುವ ಅವಕಾಶ ಹೆಚ್ಚು. ಈ ಬಾರಿ ಬದಲಾವಣೆ ಬೇಕು ಎಂಬ ವಾತಾವರಣ ಇದೆ. ಮಿಥುನ್‍ ರೈ ಪರ ಗುಪ್ತಗಾಮಿನಿಯಾಗಿ ಮತ ಹರಿದರೆ ಗೆಲುವು ಸಾಧ್ಯ’ ಎಂದು ಕಾವ್ಯಾತ್ಮಕವಾದರು.

ಮೂಡುಬಿದಿರೆಯಿಂದ ಐದು ಕಿಲೋಮೀಟರ್ ದೂರದ ಹಳ್ಳಿಯಲ್ಲಿ ಟೈಲರ್ ಆಗಿರುವ ಯುವತಿ ಪ್ರೀತಿ, ಪರಿಶಿಷ್ಟ ಜಾತಿಗೆ ಸೇರಿದವರು. ‘ಯಾರಿಗೆ ಮತ ಹಾಕುತ್ತೇನೆ ಎಂಬುದನ್ನು ನಿಮಗೇಕೆ ಹೇಳಬೇಕು’ ಎಂದು ಮರುಪ್ರಶ್ನೆ ಹಾಕಿದರು. ಜನಧನ ಖಾತೆ, ನೋಟು ರದ್ದತಿಯಂತಹ ಕೇಂದ್ರ ಸರ್ಕಾರದ ಯೋಜನೆಗಳನ್ನು ಹೆಸರಿಸಿದರು. ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಕೆಲಸಗಳನ್ನು ಹೊಗಳಿದರು. ‘ಅಮ್ಮ ಕಾಂಗ್ರೆಸ್‍ಗೆ ವೋಟು ಹಾಕುತ್ತಿದ್ದವರು, ಈಗ ಅವರ ನಿಲುವು ಬದಲಾಗಿದೆಯೇ ಗೊತ್ತಿಲ್ಲ, ನನ್ನ ತಲೆಮಾರಿನ ಯಾರೂ ಕಾಂಗ್ರೆಸ್‍ ಜತೆಗಿಲ್ಲ’ ಎಂದರು. ಅದೇ ಊರಲ್ಲಿ ಸಿಕ್ಕ ಬಾಲರಾಜ್‍ಗೆ ಕಿರಾಣಿ ಅಂಗಡಿಯಲ್ಲಿ ಕೆಲಸ. ‘ಮೋದಿ ಮತ್ತೆ ಬರಲಿ’ ಎಂಬುದು ಅವರದ್ದೂ ಆಶಯ. ಆದರೆ, ನಳಿನ್‍ ಮತ್ತೆ ಸಂಸದರಾಗುವುದು ಬೇಡ ಎಂಬುದು ಸ್ಪಷ್ಟ ನಿಲುವು.

ಮೆಲ್ಕಾರ್‌ನ ತುಳಸಿ ಮತ್ತು ನಳಿನಿ ಹೋಟೆಲ್‍ನಲ್ಲಿ ಕೆಲಸ ಮಾಡುವವರು. ಸ್ವೀಡನ್‍ನಲ್ಲಿ ಸಾಫ್ಟ್‌ವೇರ್‌ ಎಂಜಿನಿಯರ್ ಆಗಿರುವವರು ದುಷ್ಯಂತ್‍. ರಜೆಯಲ್ಲಿ ಊರಿಗೆ ಬಂದವರು ಮತ ಹಾಕಿಯೇ ವಾಪಸ್‌ ಹೋಗುತ್ತಾರೆ. ಅವರ ಗೆಳೆಯ ಶಶಾಂಕ್‍ ಮಂಗಳೂರಿನಲ್ಲಿ ಸಾಫ್ಟ್‌ವೇರ್ ಕಂಪನಿಯೊಂದನ್ನು ನೋಡಿಕೊಳ್ಳುತ್ತಿದ್ದಾರೆ. ಇವರೆಲ್ಲರಿಗೂ ‘ಮೋದಿ ಮತ್ತೆ ಬರಬೇಕು’.

‘ಅಧಿಕಾರಕ್ಕೆ ಬಂದರೆ ತಿಂಗಳಿಗೆ ₹6 ಸಾವಿರ ಕೊಡುತ್ತೇವೆ ಎಂದು ಒಂದು ಪಕ್ಷದವರು ಹೇಳಿದ್ದಾರೆ. ಅವರನ್ನು ನಂಬಲಾದೀತೇ’ ಎಂಬ ಶಂಕೆ ನಳಿನಿ ಅವರಿಗಿದೆ.

ನಳಿನ್‍ ಕೆಲಸ ಮಾಡಿಲ್ಲ ಎಂಬುದನ್ನು ಖಡಾಖಂಡಿತವಾಗಿ ತಳ್ಳಿ ಹಾಕಿದವರು ಆರ್‌ಎಸ್‍ಎಸ್‍ ಕಾರ್ಯಕರ್ತ ಜಗನ್ನಾಥ. ನಳಿನ್‍ಗೆ ಕೇರಳ ಬಿಜೆಪಿಯ ಉಸ್ತುವಾರಿ ಇತ್ತು. ಸಂಸತ್‍ ಅಧಿವೇ‍ಶನಕ್ಕೆ ಅವರು ತಪ್ಪದೇ ಹೋಗಿದ್ದಾರೆ. ಹಾಗಾಗಿ ಕ್ಷೇತ್ರದ ಜನರ ಸಂಪರ್ಕಕ್ಕೆ ಅವರು ಸಿಕ್ಕಿಲ್ಲ ಎಂಬುದು ನಿಜ. ಆದರೆ, ಯಾವುದೇ ಕಾರ್ಯಕ್ರಮಕ್ಕೆ ಕರೆದಾಗ ಬಂದಿದ್ದಾರೆ, ಕ್ಷೇತ್ರದ ಕೆಲಸವನ್ನು ನಿರ್ಲಕ್ಷಿಸಿಲ್ಲ ಎಂಬುದು ಅವರ ಸಮಜಾಯಿಷಿ. 

ಬೆಳ್ಳಂಬೆಳಗ್ಗೆ ಐದೂ ಮುಕ್ಕಾಲಕ್ಕೆ ವಿಟ್ಲದ ಭಟ್ಟರ ‘ಶಿವಪ್ರಸಾದ’ ಹೋಟೆಲ್‍ನಲ್ಲಿ ಕಾಫಿ ಕುಡಿಯುವಾಗ ಅಲ್ಲಿಗೆ ಬಿಂದಿಗೆ ಹಿಡಿದು ನೀರು ಒಯ್ಯಲು ಬಂದ ವ್ಯಕ್ತಿ ‘ಈ ಬಾರಿ ಮಿಥುನ್‍ ರೈ, ಜನರಿಗೆ ಒಳ್ಳೆಯದಾಗಬೇಕು’ ಎಂದರು. ಮೂರು ಬಾರಿ ಅದನ್ನೇ ಪುನರಾವರ್ತಿಸಿದರು. ವಿಟ್ಲ ಪೇಟೆಯ ಕೆಲವು ಅಂಗಡಿಗಳ ಮುಂದಿನ ಕಸ ಗುಡಿಸಿ, ನೀರು ಚಿಮುಕಿಸುವುದು, ಸಣ್ಣಪುಟ್ಟ ಕೆಲಸ ಮಾಡಿಕೊಡುವುದು ಅವರ ಜೀವನೋಪಾಯ. ಹೋಟೆಲ್‍ನಲ್ಲಿ ಆಗಲೇ ಐದಾರು ಮಂದಿ ಇದ್ದರು. ಯಾರೂ ಯಾವ ಪ್ರತಿಕ್ರಿಯೆಯನ್ನೂ ಕೊಡಲಿಲ್ಲ. ಅವರು ನುಡಿದ ಭವಿಷ್ಯ ಒರೆಗೆ ಹಚ್ಚಲು ಮೇ 23ರವರೆಗೆ ಕಾಯಬೇಕು.

ಪ್ರಜಾಪ್ರಭುತ್ವ ಇಲ್ಲದಂಥ ಭಾವ

‘ಅಯ್ಯೋ, ನನಗೆ ರಾಜಕೀಯ ಗೊತ್ತೇ ಇಲ್ಲ’ ಎಂದು ಹಿಂಜರಿದವರು ಭರತನಾಟ್ಯ ನೃತ್ಯಗಾತಿ ಮಂಜುಳಾ ಸುಬ್ರಹ್ಮಣ್ಯ. ಯಾರಿಗೆ ವೋಟ್‌ ಹಾಕಬೇಕೆಂದು ನಿರ್ಧರಿಸಿಲ್ಲ, ಆದರೆ ಬಿಜೆಪಿಗೆ ಮಾತ್ರ ಹಾಕುವುದೇ ಇಲ್ಲ ಎಂದರು. ‘ಯಾಕೆ’ ಎಂಬ ಪ್ರಶ್ನೆಗೆ, ‘ನಮ್ಮ ವ್ಯವಸ್ಥೆಯ ಮೂಲ ಪ್ರಜಾಪ್ರಭುತ್ವ ಅಲ್ಲವೇ? ಪ್ರಜಾಪ್ರಭುತ್ವ ಇದೆ ಎಂದು ಭಾಸವಾಗುವುದೇ ಇಲ್ಲ’ ಎಂದರು.

ಮನೆ ಮನೆ ಪ್ರಚಾರಕ್ಕೆ ಬರುವ ಬಿಜೆಪಿ ಕಾರ್ಯಕರ್ತರ ವರ್ತನೆ ಬಗ್ಗೆಯೂ ಅವರಿಗೆ ಅಸಹನೆ ಇದೆ. ಎಲ್ಲರೂ ಬಿಜೆಪಿಗೇ ಮತ ಹಾಕುತ್ತಾರೆ ಎಂದು ಅವರು ಭಾವಿಸಿದಂತಿದೆ. ಮನೆಯವರನ್ನು ಕೇಳದೆಯೇ ಗೋಡೆಗೆ ಯಾವುದೋ ಸ್ಟಿಕ್ಕರ್‌ ಅಂಟಿಸಿಬಿಡುತ್ತಾರೆ. ಇದು ಸರಿಯೇ ಎಂದು ಪ್ರಶ್ನಿಸಿದರು.

ಒಂದು ಮತವೂ ತಪ್ಪಬಾರದು

ದಕ್ಷಿಣ ಕನ್ನಡದಲ್ಲಿ ಬಿಜೆಪಿಯ ಚುನಾವಣಾ ಪ್ರಚಾರ ಬಹಳ ವ್ಯವಸ್ಥಿತ ಮತ್ತು ಚುರುಕು. ತಮ್ಮ ಪಕ್ಷಕ್ಕೆ ಬರುವ ಒಂದು ಮತವೂ ತಪ್ಪಬಾರದು, ಅದಕ್ಕೆ ಬೇಕಾದಂತೆ ಅವರು ಕೆಲಸ ಮಾಡುತ್ತಾರೆ ಎಂದವರು ಉಪ್ಪಿನಂಗಡಿಯ ನಾರಾಯಣ. ಅದಕ್ಕೆ ಅವರು ಒಂದು ನಿದರ್ಶನವನ್ನೂ ಕೊಟ್ಟರು. ‘ನನ್ನ ಮಗ ನಿಟ್ಟೆ ಎಂಜಿನಿಯರಿಂಗ್ ಕಾಲೇಜಿನಲ್ಲಿ ಓದುತ್ತಾನೆ ಎಂಬುದನ್ನು ಕಾರ್ಯಕರ್ತರೇ ನೆನಪಿಸಿಕೊಂಡರು. ಮತದಾನದ ದಿನ ಒಂದು ದಿನದ ಮಟ್ಟಿಗೆ ಅವರನ್ನು ಕರೆಸಿಕೊಳ್ಳಿ ಎಂದರು. ನನಗೂ ಈ ವಿಚಾರ ಹೊಳೆದಿರಲೇ ಇಲ್ಲ’ ಎಂದರು.

ಅಭ್ಯರ್ಥಿಗಳ ಸಂದರ್ಶನಗಳು

ಮೈತ್ರಿಯಿಂದ ತೊಂದರೆಯೇ ಇಲ್ಲ

ಕರಾವಳಿ ಅಲೆ ಎದುರು ಮೋದಿ ಅಲೆ ಗೌಣ

 

ಕ್ಷೇತ್ರದಲ್ಲಿ ನಡೆದ ಪ್ರಮುಖ ಬೆಳವಣಿಗೆಗಳು 

ದಕ್ಷಿಣ ಕನ್ನಡ: ಕಾಂಗ್ರೆಸ್‌ ಅಭ್ಯರ್ಥಿ ಮಿಥುನ್‌ ರೈ ಬಳಿ ₹ 2.86 ಕೋಟಿ ಆಸ್ತಿ

ಮೋದಿಗಾಗಿ ಸಿಡ್ನಿ ಕೆಲಸ ತ್ಯಜಿಸಿದ ಅಭಿಮಾನಿ

ಅಖಾಡಕ್ಕೆ ಇಳಿದ ಆರ್‌ಎಸ್‌ಎಸ್‌

‘ಇಳಿಯಿರಿ,ಇಳಿಯಿರಿ..ನಾ ಮತ್ತೊಮ್ಮೆ ಬರುವೆ’ ಮರ ಏರಿದ್ದ ಅಭಿಮಾನಿಗಳಿಗೆ ಮೋದಿ ಮನವಿ

ಮೋದಿ ಪ್ರಚಾರದ ಬಳಿಕ ಹಲ್ಲೆ –ನಾಲ್ವರಿಗೆ ಗಾಯ

ವಂಶೋದಯ-ಕ್ಕೆ ‘ಇತಿಶ್ರೀ’ ಹಾಡಿ: ಮಂಗಳೂರಿನಲ್ಲಿ ಪ್ರಧಾನಿ ಮೋದಿ ಕರೆ

 

ಪ್ರಜಾವಾಣಿ ವಿಶೇಷ ಸಂದರ್ಶನಗಳು...

ನಾನೆಂದೂ ಕುಟುಂಬ ರಾಜಕಾರಣ ಮಾಡಿಲ್ಲ: ದೇವೇಗೌಡ

ಕುಟುಂಬ ರಾಜಕಾರಣದಿಂದಲೇ ಉಳಿದಿವೆ ಪ್ರಾದೇಶಿಕ ಪಕ್ಷಗಳು: ಕುಮಾರಸ್ವಾಮಿ

ನಾನು ಈ ಜನ್ಮದಲ್ಲಿ ಯಾವ ರಾಜ್ಯದ ರಾಜ್ಯಪಾಲನೂ ಆಗಲ್ಲ: ಯಡಿಯೂರಪ್ಪ

ಮೈತ್ರಿ ಸರ್ಕಾರಕ್ಕೆ ನಾನು ಮೂಗುದಾರ ಹಾಕಿಲ್ಲ: ಸಿದ್ದರಾಮಯ್ಯ

ನಾಯಕರ ಮೌನದಿಂದ ಅವಮಾನವಾಗಿದೆ: ತೇಜಸ್ವಿನಿ ಅನಂತಕುಮಾರ್‌

ಬಡವರದ್ದಲ್ಲ, ಕಾಂಗ್ರೆಸ್‌ನವರ ಗರೀಬಿ ಹಠಾವ್ ಆಯಿತು: ಸದಾನಂದಗೌಡ

ದಲಿತರನ್ನು ಒಡೆಯಬೇಡಿ, ಎಡಗೈ–ಬಲಗೈ ಅಂತ ಎತ್ತಿಕಟ್ಟಿದರೆ ಯಾರಿಗೂ ಲಾಭವಿಲ್ಲ: ಮಲ್ಲಿಕಾರ್ಜುನ ಖರ್ಗೆ

ಬರಹ ಇಷ್ಟವಾಯಿತೆ?

 • 5

  Happy
 • 0

  Amused
 • 1

  Sad
 • 0

  Frustrated
 • 1

  Angry

Comments:

0 comments

Write the first review for this !