ಉಪಚುನಾವಣೆ: ಮೂರು ಪಕ್ಷಗಳಿಗೂ ಅಗ್ನಿಪರೀಕ್ಷೆ

7
ಕ್ಷೇತ್ರಗಳು 5, ಆಕಾಂಕ್ಷಿಗಳು 50, ಪಕ್ಷಗಳಲ್ಲಿ ತಳಮಳ

ಉಪಚುನಾವಣೆ: ಮೂರು ಪಕ್ಷಗಳಿಗೂ ಅಗ್ನಿಪರೀಕ್ಷೆ

Published:
Updated:

ಬೆಂಗಳೂರು: ಮೂರು ಲೋಕಸಭಾ ಹಾಗೂ ಎರಡು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಮೂರೂ ರಾಜಕೀಯ ಪಕ್ಷಗಳಿಗೆ ಅಗ್ನಿಪರೀಕ್ಷೆಯಾಗಿದೆ.

ಲೋಕಸಭಾ ಚುನಾವಣೆಗೆ ಕೆಲವೇ ತಿಂಗಳುಗಳು ಇರುವಾಗ ಬಂದಿರುವ ಉಪಚುನಾವಣೆ ಎಲ್ಲ ಪಕ್ಷಗಳಿಗೂ ಪ್ರತಿಷ್ಠೆಯೇ ಆಗಿದೆ. ಮೈತ್ರಿ ಸರ್ಕಾರದ ಪಾಲುದಾರ ಪಕ್ಷಗಳಾದ ಜೆಡಿಎಸ್‌ ಹಾಗೂ ಕಾಂಗ್ರೆಸ್‌ ಉಪಚುನಾವಣೆಯಲ್ಲೂ ‘ದೋಸ್ತಿ’ ಮಾಡಿಕೊಳ್ಳುವ ಇಂಗಿತ ವ್ಯಕ್ತ‍ಪಡಿಸಿವೆ.

ಶಿವಮೊಗ್ಗ, ಬಳ್ಳಾರಿ ಲೋಕಸಭಾ ಕ್ಷೇತ್ರಗಳಲ್ಲಿ, ಜಮಖಂಡಿ ವಿಧಾನಸಭಾ ಕ್ಷೇತ್ರಗಳಲ್ಲಿ ‘ಕೈ’ ಹಾಗೂ ಮಂಡ್ಯ ಲೋಕಸಭಾ ಮತ್ತು ರಾಮನಗರ ವಿಧಾನಸಭಾ ಕ್ಷೇತ್ರಗಳಲ್ಲಿ ಜೆಡಿಎಸ್‌ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸುವ ಬಗ್ಗೆ ಚರ್ಚೆಗಳು ನಡೆದಿವೆ. ಶಿವಮೊಗ್ಗ ಲೋಕಸಭಾ ಕ್ಷೇತ್ರವನ್ನು ಬಿಟ್ಟುಕೊಡುವಂತೆ ಜೆಡಿಎಸ್‌ ಚೌಕಾಸಿ ನಡೆಸುವ ಸಾಧ್ಯತೆ ಇದೆ. ಈ ಬಗ್ಗೆ ಜೆಡಿಎಸ್‌ ವರಿಷ್ಠ ಎಚ್‌.ಡಿ. ದೇವೇಗೌಡ ಸುಳಿವು ನೀಡಿದ್ದಾರೆ.

ಬಿಜೆಪಿಯಿಂದ ಶಿವಮೊಗ್ಗದಲ್ಲಿ ಬಿ.ಎಸ್‌.ಯಡಿಯೂರಪ್ಪ ಅವರ ಪುತ್ರ ಬಿ.ವೈ.ರಾಘವೇಂದ್ರ ಕಣಕ್ಕೆ ಇಳಿಯುವುದು ಬಹುತೇಕ ನಿಶ್ಚಿತ. ಕಾಂಗ್ರೆಸ್‌ನಿಂದ ಮಾಜಿ ಸಚಿವರಾದ ಕಿಮ್ಮನೆ ರತ್ನಾಕರ, ಕಾಗೋಡು ತಿಮ್ಮಪ್ಪ ಹಾಗೂ ಕಳೆದ ಲೋಕಸಭಾ ಚುನಾವಣೆಯಲ್ಲಿ ಸೋತಿದ್ದ ಮಂಜುನಾಥ ಭಂಡಾರಿ ಹೆಸರುಗಳು ಚಾಲ್ತಿಯಲ್ಲಿವೆ. ಒಂದು ವೇಳೆ ಜೆಡಿಎಸ್‌ಗೆ ಬಿಟ್ಟುಕೊಟ್ಟರೆ ಮಧು ಬಂಗಾರಪ್ಪ ಅವರಿಗೆ ಅವಕಾಶ ಒಲಿಯಬಹುದು.

ಮಂಡ್ಯದಲ್ಲಿ ಐಆರ್‌ಎಸ್‌ ಮಾಜಿ ಅಧಿಕಾರಿ ಡಾ. ಲಕ್ಷ್ಮಿ ಅಶ್ವಿನ್‌ಗೌಡ ಉಪ ಚುನಾವಣೆಯಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಲು ಸಿದ್ಧತೆ ನಡೆಸಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ನಾಗಮಂಗಲ ಕ್ಷೇತ್ರದಿಂದ ಟಿಕೆಟ್‌ ಆಕಾಂಕ್ಷಿಯಾಗಿದ್ದ ಅವರಿಗೆ ಲೋಕಸಭಾ ಉಪಚುನಾವಣೆಗೆ ಟಿಕೆಟ್‌ ನೀಡುವ ಭರವಸೆ ಸಿಕ್ಕಿತ್ತು ಎನ್ನಲಾಗಿದೆ. ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಪುತ್ರ, ನಟ ನಿಖಿಲ್‌ ಹೆಸರು ಸಹ ಕೇಳಿ ಬರುತ್ತಿದೆ. ಈಚೆಗೆ ನಗರಕ್ಕೆ ಭೇಟಿ ನೀಡಿದ್ದ ನಿಖಿಲ್‌, ರಾಜಕೀಯಕ್ಕೆ ಬರುವ ಇಂಗಿತ ವ್ಯಕ್ತಪಡಿಸಿದ್ದರು. ಜತೆಗೆ ಜೆಡಿಎಸ್‌ನಲ್ಲಿ ಡಾ.ಎಚ್‌. ಕೃಷ್ಣ , ಜಿ.ಬಿ. ಶಿವಕುಮಾರ್‌, ಎಲ್‌.ಆರ್‌. ಶಿವರಾಮೇಗೌಡ ಸಹ ಟಿಕೆಟ್‌ ಆಕಾಂಕ್ಷಿಗಳಾಗಿದ್ದಾರೆ.

ವಿಧಾನಸಭಾ ಚುನಾವಣೆಯಲ್ಲಿ ಬೆಂಗಳೂರಿನಲ್ಲಿ ಪಕ್ಷದ ಹಿನ್ನಡೆಗೆ ಶಾಸಕ ಆರ್‌. ಅಶೋಕ ಕಾರಣ ಎಂದು ಬಿ.ಎಸ್‌.ಯಡಿಯೂರಪ್ಪ ಬಣ ಅಸಮಾಧಾನ ವ್ಯಕ್ತಪಡಿಸಿತ್ತು. ಹೊಂದಾಣಿಕೆ ರಾಜಕಾರಣ ಮಾಡಿಕೊಳ್ಳುತ್ತಿರುವ ಅವರನ್ನು ಬೆಂಗಳೂರಿನ ಹೊರಗಿನ ಕ್ಷೇತ್ರಗಳಲ್ಲಿ ಕಣಕ್ಕೆ ಇಳಿಸಬೇಕು ಎಂದು ಆ ಬಣ ಒತ್ತಾಯಿಸಿತ್ತು. ಮಂಡ್ಯ ಕ್ಷೇತ್ರದಲ್ಲಿ ಅಶೋಕ ಅವರನ್ನು ಕಣಕ್ಕೆ ಇಳಿಸಲು ಸಹ ಚಿಂತನೆ ನಡೆಸಿತ್ತು. ರೈತ ಹೋರಾಟಗಾರ ಕೆ.ಎಸ್‌.ನಂಜುಂಡೇಗೌಡ, ರಾಜ್ಯ ಮುಕ್ತ ವಿಶ್ವವಿದ್ಯಾಲಯದ ದಾವಣಗೆರೆ ಪ್ರಾದೇಶಿಕ ಕೇಂದ್ರದ ನಿರ್ದೇಶಕ ಡಾ. ಸುಧಾಕರ್‌ ಹೊಸಳ್ಳಿ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ. ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಯ ಮಾಜಿ ಅಧ್ಯಕ್ಷ ಪ್ರೊ. ಬಿ.ಶಿವಲಿಂಗಯ್ಯ ಅವರೂ ಟಿಕೆಟ್‌ ಆಕಾಂಕ್ಷಿ.

ಬೆಳಗಾವಿ ಹಾಗೂ ಬಳ್ಳಾರಿ ರಾಜಕಾರಣದಲ್ಲಿ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ಜಾರಕಿಹೊಳಿ ಸಹೋದರರು ಹಾಗೂ ಬಳ್ಳಾರಿ ಶಾಸಕರ ಅಸಮಾಧಾನಕ್ಕೆ ಕಾರಣವಾಗಿತ್ತು. ಸಂಪುಟ ಸೇರ್ಪಡೆ ವಿಷಯದಲ್ಲಿ ‘ಕೈ’ಪಾಳಯದ ಆರು ಶಾಸಕರು ಎರಡು ಗುಂಪುಗಳಾಗಿದ್ದಾರೆ. ಇಲ್ಲಿ ಕಣಕ್ಕೆ ಇಳಿಯಲು ಮುಖಂಡರು ಆಸಕ್ತಿ ತೋರುತ್ತಿಲ್ಲ. 2008ರ ವಿಧಾನಸಭಾ ಚುನಾವಣೆಯಲ್ಲಿ ಸೋತ ಬಿ. ರಾಮಪ್ರಸಾದ್‌ ಅಥವಾ ಬಳ್ಳಾರಿ ಗ್ರಾಮಾಂತರ ಶಾಸಕ ಬಿ. ನಾಗೇಂದ್ರ ಅವರನ್ನು ಕಣಕ್ಕೆ ಇಳಿಸಲು ಪಕ್ಷ ಯೋಜಿಸಿದೆ.

ಕಮಲ ಪಾಳಯದಿಂದ ಮಾಜಿ ಸಂಸದರಾದ ಜೆ. ಶಾಂತಾ, ಸಣ್ಣ ಫಕೀರಪ್ಪ ಅವರು ಟಿಕೆಟ್‌ ನಿರೀಕ್ಷೆಯಲ್ಲಿದ್ದಾರೆ. ಶಾಂತಾ ಅವರು ಬಿ.ಶ್ರೀರಾಮುಲು ಸಹೋದರಿ ಹಾಗೂ ಸಣ್ಣ ಫಕೀರಪ್ಪ ಸಂಬಂಧಿ. ವಿಧಾನಸಭಾ ಚುನಾವಣೆಯ ವೇಳೆಗೆ ಎನ್‌.ವೈ.ಗೋಪಾಲಕೃಷ್ಣ ಅವರು ಪಕ್ಷಕ್ಕೆ ಸೇರ್ಪಡೆಯಾಗಿದ್ದರು. ಬಿ.ಶ್ರೀರಾಮುಲು ಶ್ರಮದಿಂದ ಅವರು ಪಕ್ಷಕ್ಕೆ ಸೇರಿದ್ದರು. ಲೋಕಸಭಾ ಚುನಾವಣೆಯಲ್ಲಿ ಎನ್‌.ವೈ.ಹನುಮಂತಪ್ಪ ಅವರಿಗೆ ಟಿಕೆಟ್‌ ನೀಡುವ ಭರವಸೆ ನೀಡಲಾಗಿತ್ತು.

ರಾಮನಗರ ವಿಧಾನಸಭಾ ಕ್ಷೇತ್ರದಲ್ಲಿ ಎಚ್‌.ಡಿ. ಕುಮಾರಸ್ವಾಮಿ ಪತ್ನಿ ಅನಿತಾ ಕುಮಾರಸ್ವಾಮಿ ಮೈತ್ರಿಕೂಟದ ಅಭ್ಯರ್ಥಿಯಾಗುವುದು ನಿಶ್ಚಿತ. ಬಿಜೆಪಿಯಿಂದ ಮಾಜಿ ಸಚಿವ ಸಿ.‍‍ಪಿ.ಯೋಗೀಶ್ವರ, ಜಿಲ್ಲಾ ಘಟಕದ ಅಧ್ಯಕ್ಷ ರುದ್ರೇಶ್‌ ಅವರ ಹೆಸರುಗಳು ಮುಂಚೂಣಿಯಲ್ಲಿವೆ. ಚುನಾವಣೆಗೆ ಸ್ಪರ್ಧಿಸಲು ಸಿದ್ಧರಾಗಿರಿ ಎಂದು ಯಡಿಯೂರಪ್ಪ ಅವರು ರುದ್ರೇಶ್ ಅವರಿಗೆ ಸೂಚನೆ ನೀಡಿದ್ದರು. ಉದ್ಯಮಿ ಎನ್. ವೇಣುಗೋಪಾಲ್‌ ಹಾಗೂ ಮಂಡಲ ಘಟಕದ ಅಧ್ಯಕ್ಷ ಪ್ರವೀಣ್‌ ಗೌಡ ಅವರೂ ಆಕಾಂಕ್ಷಿಗಳು.

ಜಮಖಂಡಿಯಲ್ಲಿ ಸಿದ್ದು ನ್ಯಾಮಗೌಡ ಸಾವಿನ ಅನುಕಂಪದ ಅಲೆಯ ಲಾಭ ಪಡೆಯುವ ಲೆಕ್ಕಾಚಾರದಲ್ಲಿ ‘ಕೈ’ಪಾಳಯ ಇದೆ. ಅವರ ಪುತ್ರ ಆನಂದ ನ್ಯಾಮಗೌಡ ಅವರನ್ನು ಕಣಕ್ಕೆ ಇಳಿಸಲು ಪಕ್ಷ ನಿರ್ಧರಿಸಿದೆ. ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ ಇಲ್ಲವೇ ಶಾಸಕ ಮುರುಗೇಶ ನಿರಾಣಿ ಸಹೋದರ ಸಂಗಮೇಶ ನಿರಾಣಿ ಪೈಕಿ ಒಬ್ಬರನ್ನು ಒಮ್ಮತದ ಅಭ್ಯರ್ಥಿಯನ್ನಾಗಿಸಲು ಬಿಜೆಪಿ ನಿರ್ಧರಿಸಿದೆ. 

ಲೋಕಸಭಾ ಚುನಾವಣೆಗೆ ಕಾಂಗ್ರೆಸ್‌ ಅಚ್ಚರಿ!

‘ಮೂರೂ ಲೋಕಸಭಾ ಕ್ಷೇತ್ರಗಳಿಗೂ ಉಪಚುನಾವಣೆ ಘೋಷಿಸಿರುವುದು ಆಶ್ಚರ್ಯ ತಂದಿದೆ. ಆದರೂ, ಚುನಾವಣೆ ಎದುರಿಸಲು ಕಾಂಗ್ರೆಸ್ ಪಕ್ಷ ಸಿದ್ಧವಿದೆ’ ಎಂದು ಉಪ ಮುಖ್ಯಮಂತ್ರಿ ಜಿ. ಪರಮೇಶ್ವರ ಹೇಳಿದರು.

‘ರಾಮನಗರ, ಜಮಖಂಡಿ ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ಅಗತ್ಯ. ಏಕೆಂದರೆ ಇನ್ನೂ ನಾಲ್ಕೂವರೆ ವರ್ಷ ಅವಧಿ ಇದೆ. ಆದರೆ, ಲೋಕಸಭಾ ಕ್ಷೇತ್ರಗಳಿಗೆ ಚುನಾವಣೆ ಅಗತ್ಯ ಇರಲಿಲ್ಲ’ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದರು.

* ಉಪಚುನಾವಣೆಯಲ್ಲಿ ಮೈತ್ರಿ ಮುಂದುವರಿಯಲಿದೆ. ಇದು ಲೋಕಸಭಾ ಚುನಾವಣೆಗೆ ದಿಕ್ಸೂಚಿ ಅಲ್ಲ. ಪ್ರಚಾರಕ್ಕೆ ಹೋಗುವ ಬಗ್ಗೆ ನಿರ್ಧರಿಸಿಲ್ಲ

-ಎಚ್‌.ಡಿ.ದೇವೇಗೌಡ, ಜೆಡಿಎಸ್‌ ವರಿಷ್ಠ

* ಜೆಡಿಎಸ್ ಜೊತೆ ಮೈತ್ರಿ ಇನ್ನೂ ಚರ್ಚೆಯಾಗಿಲ್ಲ. ಎಲ್ಲ ಮುಖಂಡರ ಜೊತೆ ಚರ್ಚಿಸಿದ ನಂತರ ತೀರ್ಮಾನ ತೆಗೆದುಕೊಳ್ಳುತ್ತೇವೆ. ಬಿಜೆಪಿಯನ್ನು ಸೋಲಿಸಲು ರಣನೀತಿ ರೂಪಿಸುತ್ತೇವೆ

-ದಿನೇಶ್‌ ಗುಂಡೂರಾವ್‌, ಕೆಪಿಸಿಸಿ ಅಧ್ಯಕ್ಷ

* ಜೆಡಿಎಸ್- ಕಾಂಗ್ರೆಸ್ ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸಲಿವೆ, ಕ್ಷೇತ್ರಗಳ ಹಂಚಿಕೆ, ಅಭ್ಯರ್ಥಿ ಬಗ್ಗೆ ಇನ್ನೂ ತೀರ್ಮಾನ ಆಗಿಲ್ಲ. ಈ ಕುರಿತು ಆದಷ್ಟು ಬೇಗ ನಿರ್ಧರಿಸುತ್ತೇವೆ

-ಜಿ.‍ಪರಮೇಶ್ವರ, ಉಪಮುಖ್ಯಮಂತ್ರಿ

ಬರಹ ಇಷ್ಟವಾಯಿತೆ?

 • 2

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !