ಬಿಜೆಪಿಗೆ ಭೀಮಬಲ: ಮೈತ್ರಿಗೆ ‘2’ ನಾಮ

ಮಂಗಳವಾರ, ಜೂನ್ 18, 2019
29 °C
‘ಧರ್ಮ’ ರಾಜಕಾರಣದ ಹೊಡೆತ: ದೇವೇಗೌಡ, ಸಿದ್ದರಾಮಯ್ಯಗೆ ಆಘಾತ

ಬಿಜೆಪಿಗೆ ಭೀಮಬಲ: ಮೈತ್ರಿಗೆ ‘2’ ನಾಮ

Published:
Updated:
Prajavani

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಜನಪ್ರಿಯತೆಯ ಅಲೆಯಿಂದಾಗಿ ರಾಜ್ಯದಲ್ಲಿ ಬಿಜೆಪಿಗೆ ಭೀಮಬಲ ಬಂದಿದ್ದು, ವರ್ಷದಿಂದ ಕಚ್ಚಾಡುತ್ತಲೇ ಸರ್ಕಾರ ನಡೆಸಿದ ಜೆಡಿಎಸ್‌–ಕಾಂಗ್ರೆಸ್ ‘2’ ನಾಮವಷ್ಟೇ ಗತಿಯಾಗಿದೆ.

104 ಸ್ಥಾನ ಗಳಿಸಿದರೂ ಅಧಿಕಾರಕ್ಕೆ ಏರಲು ಬಿಡಲಿಲ್ಲ ಎಂಬ ಕಾರಣಕ್ಕೆ ‘ಅಪವಿತ್ರ ಮೈತ್ರಿ ಸರ್ಕಾರ’ ಎಂದು ಜರೆಯುತ್ತಿದ್ದ ಬಿಜೆಪಿ ನಾಯಕರ ವಾದವನ್ನು ಬೆಂಬಲಿಸುವ ರೀತಿಯಲ್ಲಿ ತೀರ್ಪು ನೀಡಿದ ಜನರು ‘ದೋಸ್ತಿ ಕೂಟ’ವನ್ನು ಸಂಪೂರ್ಣವಾಗಿ ತಿರಸ್ಕರಿಸಿದ್ದಾರೆ.

‘ಸೋಲಿಲ್ಲದ ಸರದಾರರು’ ಎಂದು ಬೀಗುತ್ತಿದ್ದ, ಕುಟುಂಬ ರಾಜಕಾರಣವನ್ನೇ ಅವಕಾಶದ ಏಣಿಯಾಗಿ ಮಾಡಿಕೊಂಡಿದ್ದ ಘಟಾನುಘಟಿ ನಾಯಕರನ್ನು ಮತದಾರರು ಮನೆಗೆ ಕಳುಹಿಸಿದ್ದಾರೆ. ಅದೇ ಹೊತ್ತಿನಲ್ಲಿ ಬಿಜೆಪಿಯ ಕುಟುಂಬ ರಾಜಕಾರಣವನ್ನು ಬೆನ್ನು ತಟ್ಟಿದ್ದಾರೆ.

ಎಚ್‌ಡಿಕೆ–ಸಿದ್ದರಾಮಯ್ಯಗೆ ಮುಖಭಂಗ: ಈ ಚುನಾವಣೆಯು ಎಚ್‌.ಡಿ. ದೇವೇಗೌಡ, ಸಿದ್ದರಾಮಯ್ಯ, ಎಚ್.ಡಿ. ಕುಮಾರಸ್ವಾಮಿ ಅವರಿಗೆ ಪ್ರತಿಷ್ಠೆಯಾಗಿತ್ತು. ಅಧಿಕಾರಕ್ಕಾಗಿ ಕೂಡಿಕೆ ಮಾಡಿಕೊಂಡರೂ ನಿತ್ಯವೂ ಜಗಳ ಆಡುವುದನ್ನು ಸಹಿಸುವುದಿಲ್ಲ ಎಂಬ ಸಂದೇಶವನ್ನು ಜನರು ರವಾನಿಸಿದ್ದಾರೆ.

ದೇವೇಗೌಡರು ತಮ್ಮ ಜತೆಗೆ ಇಬ್ಬರು ಮೊಮ್ಮಕ್ಕಳಾದ ನಿಖಿಲ್ ಹಾಗೂ ಪ್ರಜ್ವಲ್ ಅವರನ್ನು ಸಂಸತ್‌ಗೆ ಕರೆದೊಯ್ಯುವ ಇರಾದೆಯಲ್ಲಿದ್ದರು. ಅದಕ್ಕಾಗಿಯೇ ಹಾಸನವನ್ನು ಪ್ರಜ್ವಲ್‌ಗೆ ಬಿಟ್ಟುಕೊಟ್ಟು, ತುಮಕೂರನ್ನು ಆಯ್ದುಕೊಂಡಿದ್ದರು. ಅಲ್ಲಿನ ಕಾಂಗ್ರೆಸ್ ಸಂಸದ ಎಸ್.ಪಿ. ಮುದ್ದಹನುಮೇಗೌಡರಿಗೆ ಟಿಕೆಟ್ ತಪ್ಪಿಸಿದ್ದು, ತುಮಕೂರಿನಲ್ಲಿ ಮಾತ್ರವಲ್ಲ ಜೆಡಿಎಸ್‌ ಸ್ಪರ್ಧಿಸಿದ್ದ ಇತರ ಕ್ಷೇತ್ರಗಳಲ್ಲೂ ದುಷ್ಪರಿಣಾಮ ಬೀರಿತು. ರಾಜಕೀಯದಲ್ಲಿ ಎಲ್ಲ ಅಧಿಕಾರವೂ ಗೌಡರ ಕುಟುಂಬವರಿಗೇ ಬೇಕಾ? ಉಳಿದವರು ಜೀವನಪರ್ಯತ ಕಾರ್ಯಕರ್ತರಾಗಿ ದುಡಿಯಬೇಕಾ ಎಂಬ ಪ್ರಶ್ನೆಗಳು ದೊಡ್ಡ ಸದ್ದು ಮಾಡಿದ್ದವು. ಗೌಡರಿಗೆ, ಅವರ ಮಕ್ಕಳಿಗೆ ಸೇವೆ ಮಾಡಿದ್ದಾಯಿತು; ಇನ್ನು ಮೊಮ್ಮಕ್ಕಳ ಸೇವೆಯನ್ನೂ ಮಾಡಬೇಕೇ ಎಂಬ ನಿಷ್ಠುರ ಪ್ರಶ್ನೆಗಳು ನಿಖಿಲ್ ಹಾಗೂ ಗೌಡರ ಸೋಲಿಗೆ ಕಾರಣವಾದ ಪ್ರಮುಖ ಅಂಶಗಳು ಎಂಬುದು ಸ್ಪಷ್ಟ.

‘ಕಾರ್ಯಕರ್ತರ ಒತ್ತಡಕ್ಕೆ ಮಣಿದು ನಿಖಿಲ್ ಕಣಕ್ಕೆ ಇಳಿಸಿದೆ. ಅಲ್ಲಿ ನಾನೇ ಅಭ್ಯರ್ಥಿ’ ಎಂಬಷ್ಟರ ಮಟ್ಟಿಗೆ ಕುಮಾರಸ್ವಾಮಿ ಹೇಳಿಕೊಂಡಿದ್ದರು. ಮಂಡ್ಯ ಕ್ಷೇತ್ರ ಇಡೀ ರಾಜ್ಯದ ಕುತೂಹಲ ಕೆರಳಿಸಿತ್ತು. ಅದಕ್ಕಾಗಿ ದೇವಸ್ಥಾನಗಳ ಸುತ್ತಾಟ ನಡೆಸಿದರು ಹಾಗೂ ಬಜೆಟ್‌ನ ಅನುದಾನದ ಪಣವನ್ನೂ ಮುಖ್ಯಮಂತ್ರಿ ಒಡ್ಡಿದ್ದರು. ಆದರೆ, ಮತದಾರ ಕೈ ಹಿಡಿಯಲಿಲ್ಲ. ರಾಜಕೀಯ ಲೆಕ್ಕಾಚಾರವೇನೇ ಇರಬಹುದು, ಕಾಂಗ್ರೆಸ್ ನಾಯಕರು ಕೈ ಕೊಟ್ಟಿರಬಹುದು. ಆದರೆ, ಮಂಡ್ಯ ಜನ ನಿಖಿಲ್‌ ಆಯ್ಕೆಗೆ ಠಸ್ಸೆ ಒತ್ತಲೇ ಇಲ್ಲ. ಇದು ಮುಖ್ಯಮಂತ್ರಿ ಹಾಗೂ ಜೆಡಿಎಸ್‌ಗೆ ಮುಖಭಂಗವನ್ನು ಉಂಟು ಮಾಡಿತು.

ಈ ಚುನಾವಣೆ ಸಿದ್ದರಾಮಯ್ಯಗೂ ಸವಾಲಾಗಿತ್ತು. ಮೈಸೂರು, ಚಾಮರಾಜನಗರ ಹಾಗೂ ತಮ್ಮ ಮತ ಕ್ಷೇತ್ರ ಬಾದಾಮಿಯನ್ನು ಒಳಗೊಂಡಿರುವ ಬಾಗಲಕೋಟೆಯನ್ನು ಗೆಲ್ಲಿಸಿಕೊಂಡು ಬರುವ ಅಗ್ನಿಪರೀಕ್ಷೆ ಎದುರಾಗಿತ್ತು. ಮೈಸೂರು ಬಿಟ್ಟುಕೊಡಿ ಎಂದು ದೇವೇಗೌಡರು ಹಿಡಿದಿದ್ದ ಪಟ್ಟನ್ನು ಮಣಿಸಿದ್ದ ಸಿದ್ದರಾಮಯ್ಯ, ತುಮಕೂರನ್ನು ಬಿಟ್ಟುಕೊಟ್ಟು ತಮ್ಮ ಪ್ರತಿಷ್ಠೆಯನ್ನು ಉಳಿಸಿಕೊಂಡಿದ್ದರು. ಗೌಡರು ಕೇಳಿದ್ದನ್ನು ಕೊಟ್ಟಿದ್ದರೆ ಎರಡೂ ಕ್ಷೇತ್ರಗಳು ಮಿತ್ರಕೂಟಕ್ಕೆ ದಕ್ಕುವ ಅವಕಾಶವಿತ್ತು. ಪ್ರತಿಷ್ಠೆಯನ್ನೇ ಅಡ ಇಟ್ಟರೂ ಮೂರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಸಿಕ್ಕಿದ್ದು ಸೋಲಿನ ಪ್ರಮಾಣಪತ್ರ ಮಾತ್ರ. ಕಳೆದ ಚುನಾವಣೆಯಲ್ಲಿ ಮೋದಿ ಅಲೆಯ ಮಧ್ಯೆಯೂ 9 ಸ್ಥಾನಗಳನ್ನು ಗೆಲ್ಲಿಸಿಕೊಂಡು ಬರುವಲ್ಲಿ ಸಿದ್ದರಾಮಯ್ಯ ಶಕ್ತರಾಗಿದ್ದರು. ಕಾಂಗ್ರೆಸ್ ಪ್ರಚಾರದ ನೇತೃತ್ವ ವಹಿಸಿದ್ದ ಅವರಿಗೆ ಮಿತ್ರಕೂಟಕ್ಕೆ ಕನಿಷ್ಠ 5 ಸ್ಥಾನಗಳಲ್ಲಿ ಗೆಲುವು ತಂದುಕೊಡಲು ಸಾಧ್ಯವಾಗದೇ ಇರುವುದು ಸೋಲಿನ ಪರಾಕಾಷ್ಠೆಯಲ್ಲದೇ ಬೇರೇನಲ್ಲ.ಮತ್ತೆ ಸಿದ್ದರಾಮಯ್ಯ ಮುಖ್ಯಮಂತ್ರಿ ಎಂದು ಪದೇ ಪದೇ ಹೇಳಿದ್ದು, ಸ್ಥಳೀಯ ಮಟ್ಟದಲ್ಲಿ ಕಾಂಗ್ರೆಸ್–ಜೆಡಿಎಸ್ ನಾಯಕರ ಮಧ್ಯೆ ಹೊಂದಾಣಿಕೆಯಾಗದೇ ಇದ್ದುದು ಮೈತ್ರಿ ಕೂಟದ ಅಭ್ಯರ್ಥಿಗಳು ಹೀನಾಯ ಸೋಲು ಅನುಭವಿಸಲು ಮತ್ತೊಂದು ಕಾರಣ.

ಗೆದ್ದ ಬಿಜೆಪಿ–ಆರ್‌ಎಸ್ಎಸ್: ಇತ್ತ ಮೈತ್ರಿ ನಾಯಕರು ಕಚ್ಚಾಡಿ, ಕಾಲೆಳೆದುಕೊಂಡು ಬೀದಿಯಲ್ಲಿ ನಿಂತಿದ್ದರೆ, ಅತ್ತ ಲೋಕಸಭೆಯಲ್ಲಿ ಮಿಷನ್‌ 22 ಗೆಲ್ಲುವ ಗುರಿಯೊಂದಿಗೆ ಅಣಿಯಾಗಿದ್ದ ಬಿಜೆಪಿ ಮತ್ತು ಆರ್‌ಎಸ್‌ಎಸ್‌ ನಾಯಕರು ಜನರ ಮಧ್ಯೆ ನಿಂತಿದ್ದರು.ಬಿಜೆಪಿಯು 2004ರಲ್ಲಿ 18, 2009ರಲ್ಲಿ 19 ಹಾಗೂ 2014ರಲ್ಲಿ 17 ಸ್ಥಾನ ಗಳಿಸಿತ್ತು. ಈ ಸಲ 25 ಸ್ಥಾನಗಳಲ್ಲಿ ಜಯಭೇರಿ ಬಾರಿಸಿ ದಾಖಲೆ ಬರೆದಿದೆ. 2014ರಲ್ಲಿ ಬಿಜೆಪಿಯು ಶೇ 43 ಹಾಗೂ ಕಾಂಗ್ರೆಸ್‌ ಶೇ 41  ಮತ ಪಡೆದಿದ್ದವು. ಆದರೀಗ ಬಿಜೆಪಿ ಪ್ರಮಾಣ ಶೇ 51 ಕ್ಕೆ ನೆಗೆದಿದೆ. ಕಾಂಗ್ರೆಸ್‌ ಶೇ 31ಕ್ಕೆ ಕುಸಿದಿದೆ.

ವಿಜೃಂಭಿಸಿದ ಕುಟುಂಬ ರಾಜಕಾರಣ

ಬೆಂಗಳೂರು: ರಾಜ್ಯದ 28 ಲೋಕಸಭೆ ಕ್ಷೇತ್ರಗಳಲ್ಲಿ ಆಯ್ಕೆಯಾದವರಲ್ಲಿ ರಾಜಕೀಯ ಕುಟುಂಬದ ಹಿನ್ನೆಲೆಯಿಂದ ಬಂದವರು ಸಾಕಷ್ಟು ಸಂಖ್ಯೆಯಲ್ಲಿ ಇದ್ದಾರೆ.

ಶಿವಮೊಗ್ಗ ಕ್ಷೇತ್ರದಲ್ಲಿ ಶಾಸಕ ಬಿ.ಎಸ್.ಯಡಿಯೂರಪ್ಪ ಪುತ್ರ ಬಿ.ವೈ.ರಾಘವೇಂದ್ರ, ಹಾಸನದಲ್ಲಿ ಸಚಿವ ಎಚ್.ಡಿ.ರೇವಣ್ಣ ಪುತ್ರ ಪ್ರಜ್ವಲ್ ರೇವಣ್ಣ, ಬೆಂಗಳೂರು ಗ್ರಾಮಾಂತರದಲ್ಲಿ ಸಚಿವ ಡಿ.ಕೆ.ಶಿವಕುಮಾರ್ ಸಹೋದರ ಡಿ.ಕೆ.ಸುರೇಶ್, ತುಮಕೂರಿನಲ್ಲಿ ಶಾಸಕ ಜ್ಯೋತಿ ಗಣೇಶ್ ತಂದೆ ಜಿ.ಎಸ್.ಬಸವರಾಜು, ಚಿಕ್ಕೋಡಿಯಲ್ಲಿ ನಿಪ್ಪಾಣಿ ಶಾಸಕಿ ಶಶಿಕಲಾ ಜೊಲ್ಲೆ ಪತಿ ಅಣ್ಣಾಸಾಹೇಬ್ ಶಂಕರ್ ಜೊಲ್ಲೆ ಆಯ್ಕೆ ಆಗಿದ್ದಾರೆ.

ಹಾವೇರಿಯಲ್ಲಿ ಶಾಸಕ ಸಿ.ಎಂ.ಉದಾಸಿ ಪುತ್ರ ಎಸ್.ಸಿ.ಉದಾಸಿ, ಬೆಂಗಳೂರು ದಕ್ಷಿಣದಲ್ಲಿ ಶಾಸಕ ರವಿಸುಬ್ರಹ್ಮಣ್ಯ ಅಣ್ಣನ ಮಗ ತೇಜಸ್ವಿ ಸೂರ್ಯ, ನಂಜನಗೂಡು ಶಾಸಕ ಹರ್ಷವರ್ಧನ್ ಮಾವ ವಿ.ಶ್ರೀನಿವಾಸ ಪ್ರಸಾದ್ ಚಾಮರಾಜನಗರದಲ್ಲಿ ಜಯಗಳಿಸಿದ್ದಾರೆ.

ಗುಲ್ಬರ್ಗಾದಲ್ಲಿ ಸಂಸದರಾಗಿ ಉಮೇಶ್ ಜಾದವ್ ಆಯ್ಕೆಯಾಗಿದ್ದರೆ, ಅವರ ಪುತ್ರ ಅವಿನಾಶ್ ಉಮೇಶ್ ಜಾಧವ್ ಚುಂಚೋಳಿ ಕ್ಷೇತ್ರದ ಉಪ ಚುನಾವಣೆಯಲ್ಲಿ ಜಯಗಳಿಸಿ, ವಿಧಾನಸಭೆ ಪ್ರವೇಶಿಸಿದ್ದಾರೆ.

ಹೆಗಡೆಗೆ ದಾಖಲೆ ಮತ; ಪ್ರಸಾದ್‌ಗೆ ಪ್ರಯಾಸದ ಗೆಲುವು

ವಿವಾದಾತ್ಮಕ ಹೇಳಿಕೆಯಿಂದ ಗಮನ ಸೆಳೆದಿದ್ದ ಕೇಂದ್ರ ಸಚಿವ, ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅನಂತಕುಮಾರ ಹೆಗಡೆ 4.79 ಲಕ್ಷ ಮತಗಳ ಅಂತರದಿಂದ ಜಯಗಳಿಸಿದ್ದಾರೆ.

ರಾಜ್ಯದಲ್ಲಿ ಆಯ್ಕೆಯಾದ ಇತರ ಸಂಸದರಿಗಿಂತ ಹೆಚ್ಚು ಮತಗಳನ್ನು ಪಡೆದು ಆಯ್ಕೆ ಆಗಿರುವುದು ವಿಶೇಷ.

ಚಾಮರಾಜನಗರ ಕ್ಷೇತ್ರದಿಂದ ವಿ.ಶ್ರೀನಿವಾಸ ಪ್ರಸಾದ್ 19..... ಮತಗಳಿಂದ ಗೆಲುವು ಸಾಧಿಸಿದ್ದು, ಅತಿ ಕಡಿಮೆ ಅಂತರದಿಂದ ಜಯಗಳಿಸಿದ್ದಾರೆ.

ಹಾವೇರಿ ಮೊದಲು: ದೇಶದ 542 ಕ್ಷೇತ್ರಗಳಲ್ಲಿ ಹಾವೇರಿ ಕ್ಷೇತ್ರದ ಫಲಿತಾಂಶ ಮೊದಲಿಗೆ ಪ್ರಕಟವಾಗುವ ಮೂಲಕ ಗಮನ ಸೆಳೆದಿದೆ.

ಯುವಕರ ಪ್ರವೇಶ; ಮಹಿಳೆಯರ ಗೆಲುವು

ರಾಜ್ಯದಲ್ಲಿ ಇಬ್ಬರು ಚಿಕ್ಕ ವಯಸ್ಸಿನಲ್ಲೇ ಲೋಕಸಭೆಗೆ ಆಯ್ಕೆ ಆಗಿದ್ದಾರೆ. 28 ವರ್ಷದ ತೇಜಸ್ವಿ ಸೂರ್ಯ (ಬೆಂಗಳೂರು ದಕ್ಷಿಣ), 29 ವರ್ಷದ ಪ್ರಜ್ವಲ್ ರೇವಣ್ಣ (ಹಾಸನ) ಜಯಗಳಿಸಿದ ಯುವಕರು.

ಇಬ್ಬರು ಮಹಿಳೆಯರು: ಈ ಸಲ ಇಬ್ಬರು ಮಹಿಳೆಯರು ಆಯ್ಕೆಯಾಗಿದ್ದಾರೆ. ಶೋಭಾ ಕರಂದ್ಲಾಜೆ (ಚಿಕ್ಕಮಗಳೂರು), ಸುಮಲತಾ (ಮಂಡ್ಯ) ಜಯಗಳಿಸಿದವರು. 2014ರಲ್ಲಿ ಶೋಭಾ ಅವರೊಬ್ಬರೇ ಮಹಿಳಾ ಪ್ರತಿನಿಧಿಯಾಗಿದ್ದರು.

ಕಾಂಗ್ರೆಸ್‌ನ ವೀಣಾ ಕಾಶಪ್ಪನವರ್ (ಬಾಗಲಕೋಟೆ), ಜೆಡಿಎಸ್‌ನ ಸುನಿತಾ ಚವ್ಹಾಣ (ಬಿಜಾಪುರ) ಈ ಬಾರಿ ಸೋತ ಪ್ರಮುಖ ಮಹಿಳೆಯರು.

ಮೊದಲ ಬಾರಿಗೆ 9 ಮಂದಿ ಪ್ರವೇಶ: ರಾಜ್ಯದ 9 ಮಂದಿ ಇದೇ ಮೊದಲ ಬಾರಿಗೆ ಲೋಕಸಭೆ ಪ್ರವೇಶಿಸಿದ್ದಾರೆ. ಸುಮಲತಾ (ಮಂಡ್ಯ), ಪ್ರಜ್ವಲ್ ರೇವಣ್ಣ (ಹಾಸನ), ತೇಜಸ್ವಿ ಸೂರ್ಯ (ಬೆಂಗಳೂರು ದಕ್ಷಿಣ), ಬಚ್ಚೇಗೌಡ (ಚಿಕ್ಕಬಳ್ಳಾಪುರ), ಎಸ್.ಮುನಿಸ್ವಾಮಿ (ಕೋಲಾರ), ಎ.ನಾರಾಯಣಸ್ವಾಮಿ (ಚಿತ್ರದುರ್ಗ), ವೈ.ದೇವೇಂದ್ರಪ್ಪ (ಬಳ್ಳಾರಿ), ಅಣ್ಣಾಸಾಹೇಬ್ ಜೊಲ್ಲೆ (ಚಿಕ್ಕೋಡಿ), ಉಮೇಶ್ ಜಾಧವ್ (ಗುಲ್ಬರ್ಗಾ).

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 15

  Happy
 • 1

  Amused
 • 3

  Sad
 • 0

  Frustrated
 • 0

  Angry

Comments:

0 comments

Write the first review for this !