ಕಾಂಗ್ರೆಸ್‌– ಬಿಜೆಪಿ ನೇರ ಹಣಾಹಣಿ

ಶುಕ್ರವಾರ, ಏಪ್ರಿಲ್ 26, 2019
22 °C
ಬೆಂಗಳೂರು ಗ್ರಾಮಾಂತರ : ಡಿಕೆಎಸ್‌ ವರ್ಚಸ್ಸೋ, ಮೋದಿ ಅಲೆಯೋ?

ಕಾಂಗ್ರೆಸ್‌– ಬಿಜೆಪಿ ನೇರ ಹಣಾಹಣಿ

Published:
Updated:

ರಾಮನಗರ: ನಗರ ಹಾಗೂ ಗ್ರಾಮೀಣ ವಿಧಾನಸಭಾ ಕ್ಷೇತ್ರಗಳ ಸಮ್ಮಿಲನವಾಗಿರುವ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಈವರೆಗೆ ಕಾಂಗ್ರೆಸ್‌ನದ್ದೇ ಪ್ರಾಬಲ್ಯ. ಕೈ ಪಾಳಯದ ಅಭ್ಯರ್ಥಿ ಗೆಲುವಿನ ಓಟಕ್ಕೆ ಈ ಬಾರಿ ಬ್ರೇಕ್‌ ಹಾಕುವ ತವಕ ಬಿಜೆಪಿಯದ್ದು.

ಕಾಂಗ್ರೆಸ್‌–ಜೆಡಿಎಸ್‌ ಮೈತ್ರಿಕೂಟದ ಅಭ್ಯರ್ಥಿಯಾಗಿ ಡಿ.ಕೆ.ಸುರೇಶ್‌ ಸ್ಪರ್ಧಿಸಿದ್ದು, ಹ್ಯಾಟ್ರಿಕ್‌ ಗೆಲುವಿನ ನಿರೀಕ್ಷೆಯಲ್ಲಿ ಇದ್ದಾರೆ. ಬಿಜೆಪಿಯು ಅಶ್ವಥ್‌ ನಾರಾಯಣರನ್ನು ಕಣಕ್ಕೆ ಇಳಿಸಿದೆ. ಇತರ 13 ಅಭ್ಯರ್ಥಿಗಳೂ ಕಣದಲ್ಲಿ ಇದ್ದರೂ ಈ ಎರಡು ಪಕ್ಷಗಳ ನಡುವೆ ನೇರ ಹಣಾಹಣಿ ಇದೆ. ಯಾವುದೇ ಸ್ಟಾರ್‌ ಪ್ರಚಾರಕರ ಅಬ್ಬರವಿಲ್ಲದೆ ಚುನಾವಣೆ ನಡೆಯುತ್ತಿದೆ.

ಈ ಹಿಂದೆ ಕನಕಪುರ ಲೋಕಸಭಾ ಕ್ಷೇತ್ರವಾಗಿದ್ದು, 2008ರ ಪುನರ್‌ ವಿಂಗಡನೆ ಬಳಿಕ ಬೆಂಗಳೂರು ಗ್ರಾಮಾಂತರ ಎಂಬ ಹೆಸರಿನಿಂದ ಗುರುತಿಸಿಕೊಂಡಿರುವ ಈ ಕ್ಷೇತ್ರದಲ್ಲಿ ಹಿಂದಿನಿಂದಲೂ ಕಾಂಗ್ರೆಸ್‌ನದ್ದೇ ಪಾರುಪತ್ಯ. ಒಮ್ಮೆ ಮಾತ್ರ ಇಲ್ಲಿ ಬಿಜೆಪಿ ಗೆದ್ದಿದೆ. ಮೂರು ಬಾರಿ ಜಯ ದಾಖಲಿಸಿರುವ ಜನತಾದಳ/ಜೆಡಿಎಸ್‌ ಈ ಬಾರಿ ಕ್ಷೇತ್ರವನ್ನು ಮೈತ್ರಿ ಪಕ್ಷಕ್ಕೆ ಧಾರೆ ಎರೆದು ನಿರುಮ್ಮಳವಾಗಿದೆ.

ಹಾಲಿ ಸಂಸದ ಡಿ.ಕೆ.ಸುರೇಶ್‌ ಕ್ಷೇತ್ರದ ಜನರಿಗೆ ಪರಿಚಿತ ಮುಖ. 2013ರಲ್ಲಿ ಎಚ್‌.ಡಿ.ಕುಮಾರಸ್ವಾಮಿ ರಾಜೀನಾಮೆಯಿಂದ ಒಲಿದು ಬಂದ ಅವಕಾಶದಿಂದ ಮೊದಲ ಬಾರಿಗೆ ಸಂಸದರಾದ ಅವರು ಕಳೆದ ಚುನಾವಣೆಯಲ್ಲಿ ಭಾರಿ ಅಂತರದಲ್ಲಿ ಗೆದ್ದು ಬೀಗಿದ್ದಾರೆ. ಈಗ ಅದೇ ಫಲಿತಾಂಶ ಪುನರಾವರ್ತಿಸುವ ವಿಶ್ವಾಸದಲ್ಲಿ ಇದ್ದಾರೆ. ಸಹೋದರ ಡಿ.ಕೆ.ಶಿವಕುಮಾರ್‌, ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿಯ ನಾಮಬಲವು ಅವರ ಆತ್ಮವಿಶ್ವಾಸ ಹೆಚ್ಚಿಸಿದೆ.

ಕಳೆದ ಮೂರು ದಶಕಗಳಿಂದ ಇಲ್ಲಿ ಕಾಂಗ್ರೆಸ್‌–ಜೆಡಿಎಸ್ ನಡುವೆ ಇದ್ದ ರಾಜಕೀಯ ವೈಷಮ್ಯ ಈಗ ದೋಸ್ತಿಯಾಗಿ ಬದಲಾಗಿರುವುದು ಕೈ ಪಾಳಯಕ್ಕೆ ಆನೆ ಬಲ ತಂದಿದೆ. ಜೆಡಿಎಸ್‌ ಅಭ್ಯರ್ಥಿಯೇ ಇಲ್ಲದಿರುವ ಕಾರಣ ಚುನಾವಣೆ ಸಲೀಸು ಎಂದು ಪಕ್ಷದ ನಾಯಕರು ನಂಬಿದ್ದು, ಅಬ್ಬರವಿಲ್ಲದೆ ಪ್ರಚಾರ ನಡೆಸುತ್ತಿದ್ದಾರೆ. ಜೆಡಿಎಸ್‌ ಕಾರ್ಯಕರ್ತರೂ ಸಹಕರಿಸುತ್ತಿದ್ದು, ಉಳಿದ ಕ್ಷೇತ್ರಗಳಂತೆ ಇಲ್ಲಿ ಯಾವುದೇ ಬಂಡಾಯ ಇಲ್ಲದ ಕಾರಣ ಕಾಂಗ್ರೆಸ್‌ ನೆಮ್ಮದಿಯ ನಿಟ್ಟುಸಿರು ಬಿಟ್ಟಿದೆ.

ಕ್ಷೇತ್ರದಲ್ಲಿ ಒಕ್ಕಲಿಗರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದು, ಎರಡೂ ಪಕ್ಷಗಳು ಅದೇ ಸಮುದಾಯದ ಅಭ್ಯರ್ಥಿಗಳಿಗೆ ಮಣೆ ಹಾಕಿವೆ. ಅಭಿವೃದ್ಧಿಗಿಂತ ಪರಸ್ಪರ ತೆಗಳಿಕೆಯ ಮೇಲೆಯೇ ಪ್ರಚಾರ ನಡೆಯುತ್ತಿದೆ. ಬೆಂಗಳೂರು–ಮೈಸೂರು ಹೆದ್ದಾರಿಗೆ ಅನುದಾನ ತಂದಿದ್ದು ತಾನೆಂದು ಸುರೇಶ್‌, ಕೊಟ್ಟದ್ದು ಕೇಂದ್ರ ಸರ್ಕಾರ ಎಂದು ಅಶ್ವಥ್‌ ಪರಸ್ಪರ ಕಾಲೆಳೆಯುತ್ತಿದ್ದಾರೆ. ನರೇಗಾ, ನೀರಾವರಿ ಯೋಜನೆಗಳ ಪಾಲಿನಲ್ಲಿಯೂ ಇದೇ ಕಿತ್ತಾಟ ಮುಂದುವರಿದಿದೆ. ಬಿಜೆಪಿಯು ರಾಮನಗರ ಜಿಲ್ಲೆಯಲ್ಲಿನ ಅಕ್ರಮ ಗಣಿಗಾರಿಕೆಯನ್ನು ಅಸ್ತ್ರವನ್ನಾಗಿ ಪ್ರಯೋಗಿಸಿದೆ.

ಮೋದಿ ಅಲೆಯ ವಿಶ್ವಾಸ: ಬಿಜೆಪಿ ಅಭ್ಯರ್ಥಿಯಾಗಿರುವ ಅಶ್ವಥ್‌ ನಾರಾಯಣ ಮೂರ್ನಾಲ್ಕು ದಶಕದಿಂದಲೂ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿದ್ದವರು. ಕಡೆಯ ದಿನದಲ್ಲಿ ಟಿಕೆಟ್‌ ದೊರೆತ ಕಾರಣ ಸಿದ್ಧತೆ ಇಲ್ಲದೆಯೇ ಪ್ರಚಾರಕ್ಕೆ ಇಳಿದಿದ್ದಾರೆ. ನಗರ ಪ್ರದೇಶಕ್ಕೆ ಅವರು ಪರಿಚಿತ ಮುಖವಾಗಿದ್ದು, ಗ್ರಾಮೀಣರಿಗೆ ಈಗಷ್ಟೇ ಪರಿಚಿತರಾಗುತ್ತಿದ್ದಾರೆ.

ಕಮಲ ಪಾಳಯದಲ್ಲಿ ಆರಂಭದಲ್ಲಿದ್ದ ಟಿಕೆಟ್‌ ಹಂಚಿಕೆ ಗೊಂದಲ ಬಗೆಹರಿದಿದ್ದು, ಒಗ್ಗಟ್ಟಾಗಿ ಪ್ರಚಾರ ನಡೆದಿದೆ. ಬಿಜೆಪಿಯು ನಗರ ಮತದಾರರನ್ನೇ ಬಹುವಾಗಿ ನೆಚ್ಚಿಕೊಂಡಿದೆ. ಬೆಂಗಳೂರು ವ್ಯಾಪ್ತಿಯ ಮೂರು ವಿಧಾನಸಭಾ ಕ್ಷೇತ್ರಗಳಲ್ಲಿ 14 ಲಕ್ಷ ಮತದಾರರು ಇದ್ದು, ನಿರ್ಣಾಯಕ ಪಾತ್ರ ವಹಿಸಿದ್ದಾರೆ. ಈ ಪ್ರದೇಶಗಳಲ್ಲಿ ಮೋದಿ ಅಲೆ ಇದ್ದು, ಅದೇ ತನ್ನ ಕೈ ಹಿಡಿಯಲಿದೆ ಎಂದು ಬಿಜೆಪಿ ನಂಬಿದೆ. ರಾಮನಗರ ಜಿಲ್ಲೆಯಲ್ಲಿ ಪಕ್ಷವು ಸಿ.ಪಿ.ಯೋಗೇಶ್ವರ್‌ರನ್ನೇ ಹೆಚ್ಚು ಅವಲಂಬಿಸಿದೆ.

ಗ್ರಾಮೀಣ ಭಾಗದಲ್ಲಿ ತಳಮಟ್ಟದಲ್ಲಿ ಪಕ್ಷ ಸಂಘಟನೆ ಮಾಡದೇ ಇರುವುದು ಬಿಜೆಪಿಗೆ ಹಿನ್ನಡೆಯಾಗಿದೆ. ಅದರಲ್ಲೂ ರಾಮನಗರ ಉಪ ಚುನಾವಣೆಯಲ್ಲಿನ ಮುಖಭಂಗ ಘಾಸಿ ಮಾಡಿದೆ. ಆದರೆ, ಲೋಕಸಭೆ ಚುನಾವಣೆಯೇ ಬೇರೆ ಎಂಬುದು ಪಕ್ಷದ ಮುಖಂಡರ ವಾದ. ಕ್ಷೇತ್ರದಲ್ಲಿ ಡಿ.ಕೆ.ಸಹೋದರರ ವಿರೋಧಿ ಅಲೆಯೂ ಇದ್ದು,
ಅವರಿಂದ ನೊಂದಿರುವ ಜೆಡಿಎಸ್‌ನಲ್ಲಿನ ಅತೃಪ್ತರು ತಮ್ಮ ಬೆಂಬಲಕ್ಕೆ ನಿಲ್ಲಬಹುದು ಎಂದು ಬಿಜೆಪಿ ಆಸೆಗಣ್ಣಿನಿಂದ ನೋಡುತ್ತಿದೆ. ಆದರೆ, ಮೇಲ್ನೋಟಕ್ಕೆ ಅಂತಹ ಪರಿಸ್ಥಿತಿ ಇಲ್ಲ.

*
ಕ್ಷೇತ್ರದಲ್ಲಿ ಬಿಜೆಪಿಗೆ ಅಲೆಯೂ ಇಲ್ಲ, ನೆಲೆಯೂ ಇಲ್ಲ. ಸಂಸದನಾಗಿ ನನ್ನ ಐದು ವರ್ಷದ ಕಾರ್ಯ <br/>ಗುರುತಿಸಿ ಜನ ಮತ್ತೊಮ್ಮೆ ಆಶೀರ್ವದಿಸುತ್ತಾರೆ. -ಡಿ.ಕೆ.ಸುರೇಶ್‌, ಕಾಂಗ್ರೆಸ್ ಅಭ್ಯರ್ಥಿ

*
ಡಿ.ಕೆ.ಸಹೋದರರು ಜನರ ಸೇವೆಗಿಂತ ವೈಯಕ್ತಿಕ ಲಾಭ ಗಳಿಕೆಗಾಗಿಯೇ ರಾಜಕಾರಣ ಮಾಡುತ್ತಿದ್ದಾರೆ. ಕ್ಷೇತ್ರದಲ್ಲಿ ಮೋದಿ ಅಲೆ ಇದ್ದು, ನಮ್ಮ ಕೈ ಹಿಡಿಯುತ್ತದೆ.
-ಅಶ್ವಥ್ ನಾರಾಯಣ, ಬಿಜೆಪಿ ಅಭ್ಯರ್ಥಿ

*
ಸದ್ಯ ಇಡೀ ರೈತ ಸಮುದಾಯ ಅಪಾಯದಲ್ಲಿದೆ. ಆರಿಸಿ ಬರುವ ಅಭ್ಯರ್ಥಿಯು ಕೃಷಿಕರು, ಬಡವರ ಬಗ್ಗೆ ಕಾಳಜಿ ಹೊಂದಿರಬೇಕು. ಸಾಮಾನ್ಯರ ಪರವಾಗಿ ಕೆಲಸ ಮಾಡಬೇಕು
-ಎಸ್‌. ಪೂಜಶ್ರೀ, ವಿದ್ಯಾರ್ಥಿನಿ

*
ಭ್ರಷ್ಟಾಚಾರ ನಡೆಸದ, ದೇಶದ ಉನ್ನತಿಗೆ ಪ್ರಾಮಾಣಿಕ ಪ್ರಯತ್ನ ಮಾಡುವವರಿಗೆ ನಮ್ಮ ಆದ್ಯತೆ. ಡwಸರ್ಕಾರಿ ಯೋಜನೆಗಳನ್ನು ಜನರಿಗೆ ತಲುಪಿಸುವವರನ್ನು ಬೆಂಬಲಿಸುತ್ತೇವೆ.
-ಚಂದನ್, ಖಾಸಗಿ ಉದ್ಯೋಗಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !