ಮಂಗಳವಾರ, ಆಗಸ್ಟ್ 3, 2021
26 °C

ಹಣ ಅಕ್ರಮದ ಬಗ್ಗೆ ಇ.ಡಿ ತನಿಖೆ ನಿರಾಧಾರ: ಲೋಕಮಾನ್ಯ ವಿವಿಧೋದ್ದೇಶ ಸಹಕಾರ ಸೊಸೈಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಲೋಕಮಾನ್ಯ ವಿವಿಧೋದ್ದೇಶ ಸಹಕಾರ ಸೊಸೈಟಿಯು ಉತ್ತಮ ಸ್ಥಿತಿಯಲ್ಲಿದ್ದು, ಹಣ ಅಕ್ರಮ ಕುರಿತು ಜಾರಿ ನಿರ್ದೇಶನಾಲಯದ (ಇ.ಡಿ) ತನಿಖೆ ನಡೆಯುತ್ತಿದೆ ಎಂಬುದು ನಿರಾಧಾರ’ ಎಂದು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅಭಿಜಿತ್‌ ಎ. ದೀಕ್ಷಿತ್‌ ಅವರು ಸ್ಪಷ್ಟಪಡಿಸಿದ್ದಾರೆ.

‘ಹಣ ಅಕ್ರಮ: ಇ.ಡಿ ತನಿಖೆ’ ಎಂಬ ಶೀರ್ಷಿಕೆಯಡಿ ‘ಪ್ರಜಾವಾಣಿ’ ಭಾನುವಾರದ ಸಂಚಿಕೆಯಲ್ಲಿ ತಮ್ಮ ಸೊಸೈಟಿ ಕುರಿತು ಪ್ರಕಟವಾದ ಸುದ್ದಿ ಆಧಾರರಹಿತವಾಗಿದ್ದು, ತಮಗೆ ಇ.ಡಿಯಿಂದ ಯಾವುದೇ ನೋಟಿಸ್‌, ಸಮನ್ಸ್‌ ಅಥವಾ ಪತ್ರ ಬಂದಿಲ್ಲ ಎಂದು ಅವರು ಹೇಳಿದ್ದಾರೆ.

‘ಠೇವಣಿದಾರರ ಹಣ ವಾಪಸ್‌ ಮಾಡುತ್ತಿಲ್ಲ ಎಂಬ ಆರೋಪದಲ್ಲೂ ಹುರುಳಿಲ್ಲ. ತಮ್ಮ ಠೇವಣಿ ಹಿಂತಿರುಗಿಸುತ್ತಿಲ್ಲ ಎಂಬ ದೂರುಗಳು ಯಾವುದೇ ಠೇವಣಿದಾರರಿಂದ ಬಂದಿಲ್ಲ. ಮುದ್ದತ್ತು ಮತ್ತಿತರ ಠೇವಣಿಗಳ ಮೇಲಿನ ಬಡ್ಡಿಯನ್ನು ಠೇವಣಿದಾರರಿಗೆ ಸಕಾಲಕ್ಕೆ ಪಾವತಿಸಲಾಗುತ್ತಿದೆ’ ಎಂದೂ ದೀಕ್ಷಿತ್‌ ತಿಳಿಸಿದ್ದಾರೆ.

‘₹ 2000 ಕೋಟಿ ಠೇವಣಿ ಹಣ ದುರ್ಬಳಕೆ ಆಗಿದ್ದು, ಈ ಬಗ್ಗೆ ಜಾರಿ ನಿರ್ದೇಶನಾಲಯ ತನಿಖೆ ನಡೆಸುತ್ತಿದೆ ಎಂಬ ಸುದ್ದಿ ಅಚ್ಚರಿ ಉಂಟುಮಾಡಿದೆ’ ಎಂದೂ ಸಿಇಒ ವಿವರಿಸಿದ್ದಾರೆ.

‘ಮುದ್ದತ್ತು ಠೇವಣಿ ಮತ್ತಿತರ ಠೇವಣಾತಿಗಳ ಮೇಲಿನ ಬಡ್ಡಿಯನ್ನು ನಿಯಮಾನುಸಾರವಾಗಿ ಸೊಸೈಟಿ  ಮರುಪಾವತಿ ಮಾಡುತ್ತಿಲ್ಲವೆಂದು ದೂರಿ ಈ ಕಚೇರಿಗೆ ಯಾವುದೇ ಅರ್ಜಿಗಳು ಬಂದಿಲ್ಲ’ ಎಂದು ಬೆಳಗಾವಿ ಜಿಲ್ಲೆಯ ಸಹಕಾರ ಸಂಘಗಳ ಉ‍ಪ ನಿಬಂಧಕರು ಕೊಟ್ಟಿರುವ ಪತ್ರವನ್ನೂ ದೀಕ್ಷಿತ್‌ ತಮ್ಮ ಸ್ಪಷ್ಟನೆ ಜತೆ ಲಗತ್ತಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು