‘ಲೋಕಸಭೆ’ಯತ್ತ ಇನ್ನು ಕೈ, ತೆನೆ, ಕಮಲ ಚಿತ್ತ

7
‘ಮೈತ್ರಿ’ ವಿಸ್ತರಿಸಲು ಜೆಡಿಎಸ್‌– ಕಾಂಗ್ರೆಸ್‌ ಉತ್ಸುಕ; ‘ಮಿಷನ್‌–24’ ಬಿಜೆಪಿ ಗುರಿ

‘ಲೋಕಸಭೆ’ಯತ್ತ ಇನ್ನು ಕೈ, ತೆನೆ, ಕಮಲ ಚಿತ್ತ

Published:
Updated:

ಬೆಂಗಳೂರು: ಲೋಕಸಭೆ ಚುನಾವಣೆ ಎದುರಿಸಲು ಮೂರು ಪಕ್ಷಗಳು ಅಣಿಯಾಗುತ್ತಿದ್ದು, ರಾಜ್ಯದ ‘ದೋಸ್ತಿ’ ಸರ್ಕಾರ ನಡೆಸುತ್ತಿರುವ ಜೆಡಿಎಸ್‌–ಕಾಂಗ್ರೆಸ್‌ ಪಕ್ಷಗಳು ಬರುವ ಚುನಾವಣೆಯಲ್ಲೂ ಮೈತ್ರಿಗೆ ಮುಂದುವರಿಸುವ ಬಗ್ಗೆ ಉತ್ಸುಕವಾಗಿವೆ. ಮೈತ್ರಿಗೆ ಸೋಲಿನ ರುಚಿ ತೋರಿಸಲು ಬಿಜೆಪಿ ತನ್ನದೇ ಆದ ತಯಾರಿಯನ್ನೂ ನಡೆಸಿದೆ.

ಪಕ್ಷದ ಸ್ಥಳೀಯಮಟ್ಟದ ನಾಯಕರಿಗೆ ಅಪಥ್ಯವಾದರೂ, ‘ಹೊಂದಾಣಿಕೆ ರಾಜಕೀಯ’ ಬಯಸಿರುವ ಕಾಂಗ್ರೆಸ್‌ ಹೈಕಮಾಂಡ್‌, ಜೆಡಿಎಸ್‌ ಜೊತೆ ಮೈತ್ರಿ ವಿಸ್ತರಿಸುವ ನಿಟ್ಟಿನಲ್ಲಿ ದೆಹಲಿಮಟ್ಟದಲ್ಲಿ ತೀರ್ಮಾನವನ್ನೂ ಕೈಗೊಂಡಿದೆ.

ಜೆಡಿಎಸ್‌ಗೆ 10 ಸ್ಥಾನ ಬಿಟ್ಟುಕೊಟ್ಟು 18 ಕ್ಷೇತ್ರಗಳನ್ನು ತಮ್ಮ ಬಳಿ ಉಳಿಸಿಕೊಳ್ಳಲು ಕಾಂಗ್ರೆಸ್‌ ನಾಯಕರು ಚರ್ಚೆ ನಡೆಸಿದ್ದಾರೆ. ಆದರೆ, ಪಕ್ಷದ ಈ ನಡೆ ಉಭಯ ಪಕ್ಷಗಳ ಕೆಲವು ಸ್ಥಳೀಯ ನಾಯಕರಲ್ಲಿ ಅಸಮಾಧಾನ ಉಂಟು ಮಾಡಿದೆ. 12 ಸ್ಥಾನಗಳಿಗೆ ಜೆಡಿಎಸ್‌ ಪಟ್ಟು ಹಿಡಿಯುವ ಸಾಧ್ಯತೆಯೂ ಇದೆ.

ಲೋಕಸಭಾ ಚುನಾವಣೆಯಲ್ಲಿ ‘ಮಿಷನ್‌–24’ ಗುರಿ ಇಟ್ಟಿರುವ ಬಿಜೆಪಿ, ತಯಾರಿ ವಿಷಯದಲ್ಲಿ ‘ಮೈತ್ರಿ’ ಕೂಟಕ್ಕಿಂತ ಒಂದು ಹೆಜ್ಜೆ ಮುಂದಿದೆ.

ಲಾಭ– ನಷ್ಟ ಲೆಕ್ಕಾಚಾರ: ಬಿಜೆಪಿ, ಜೆಡಿಎಸ್‌ ಪ್ರಾಬಲ್ಯ ಹೊಂದಿರುವ ಜಿಲ್ಲೆಗಳಲ್ಲಿ ಕಾಂಗ್ರೆಸ್ ಹಿನ್ನಡೆ ಅನುಭವಿಸುತ್ತಿದೆ. ಜೆಡಿಎಸ್‌ ಜೊತೆ ಮೈತ್ರಿ ಮಾಡಿಕೊಂಡರೆ ಮತ್ತಷ್ಟು ಜಿಲ್ಲೆಗಳಲ್ಲಿ ಪಕ್ಷ ತನ್ನ ನೆಲೆ ಕಳೆದುಕೊಳ್ಳಬಹುದು ಎನ್ನುವ ಆತಂಕ ಕೆಲವು ಕಾಂಗ್ರೆಸ್‌ ನಾಯಕರದ್ದು. ಅಲ್ಲದೆ, ಜೆಡಿಎಸ್‌ ಬೆಳವಣಿಗೆಗೆ ಕೊಡುಗೆ ನೀಡಿದಂತಾಗುತ್ತದೆ ಎನ್ನುವ ಅಭಿಪ್ರಾಯವನ್ನು ಕೆಲವು ನಾಯಕರು ಕೆಪಿಸಿಸಿ ಮತ್ತು ಪಕ್ಷದ ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ್‌ ಗಮನಕ್ಕೆ ತಂದಿದ್ದಾರೆ.

ಈ ಎಲ್ಲದರ ಮಧ್ಯೆಯೂ ಕೇಂದ್ರದಲ್ಲಿ ಬಿಜೆಪಿಯೇತರ ಸರ್ಕಾರ ರಚನೆ ಪಣ ತೊಟ್ಟಿರುವ ಕಾಂಗ್ರೆಸ್‌ ವರಿಷ್ಠರು, ಕರ್ನಾಟಕದಲ್ಲಿ ಹೆಚ್ಚಿನ ಸ್ಥಾನ ಗೆಲ್ಲುವ ಉದ್ದೇಶದಿಂದ ‘ಬೆಲೆ’ ಕೊಟ್ಟಾದರೂ ಜೆಡಿಎಸ್‌ ಜೊತೆ ಹೊಂದಾಣಿಕೆ ಅಗತ್ಯ ಎಂದು ನಿರ್ಧರಿಸಿದ್ದಾರೆ.

ಯಾವ ಕ್ಷೇತ್ರದಲ್ಲಿ ಯಾರಿಗೆ ಟಿಕೆಟ್ ನೀಡಬೇಕು ಎಂದು ತೀರ್ಮಾನಿಸಲು, ಜಿಲ್ಲಾ ಮಟ್ಟದ ನಾಯಕರಿಂದ ಕೆಪಿಸಿಸಿ ಈಗಾಗಲೇ ಅಭಿಪ್ರಾಯ ಸಂಗ್ರಹಿಸಿದೆ. ಹೈಕಮಾಂಡ್‌ಗೆ ಈ ಮಾಹಿತಿ ಸಲ್ಲಿಸಿ, ಅಂತಿಮ ಪಟ್ಟಿ ಪ್ರಕಟಿಸಲು ಕಾಂಗ್ರೆಸ್‌ ನಾಯಕರು ತೀರ್ಮಾನಿಸಿದ್ದಾರೆ. ಮೈತ್ರಿ ಮಾತುಕತೆಯ ಜವಾಬ್ದಾರಿಯನ್ನು ಸಮನ್ವಯ ಸಮಿತಿ ಅಧ್ಯಕ್ಷರಾದ ಸಿದ್ದರಾಮಯ್ಯ ಅವರಿಗೆ ವರಿಷ್ಠರು ನೀಡಿದ್ದಾರೆ.

ಗಂಭೀರ ಚರ್ಚೆ ಆರಂಭಿಸದ ಜೆಡಿಎಸ್‌: ಚುನಾವಣೆಯಲ್ಲಿ 10ರಿಂದ 12 ಕ್ಷೇತ್ರಗಳಿಗೆ ಬೇಡಿಕೆ ಸಲ್ಲಿಸಲು ಜೆಡಿಎಸ್‌ ಚಿಂತನೆ ನಡೆಸಿದೆ. ಮಂಡ್ಯ, ಹಾಸನ ಬಿಟ್ಟು ಉಳಿದ ಕ್ಷೇತ್ರಗಳ ಮೇಲೆ ಕಣ್ಣಿಟ್ಟಿದ್ದರೂ ಅಂತಹ ಏಳೆಂಟು ಕ್ಷೇತ್ರಗಳನ್ನು ಕಾಂಗ್ರೆಸ್‌ ಅಷ್ಟು ಸುಲಭದಲ್ಲಿ ಬಿಟ್ಟುಕೊಡುವುದಿಲ್ಲ ಎಂಬ ಅಳಕು ಜೆಡಿಎಸ್‌ಗಿದೆ.

ಯಾವ ಕ್ಷೇತ್ರಗಳಿಗೆ ಬೇಡಿಕೆ ಸಲ್ಲಿಸಬೇಕು ಎಂಬ ಬಗ್ಗೆ ಜೆಡಿಎಸ್‌ ಇನ್ನೂ ಗಂಭೀರ ಚರ್ಚೆ ಆರಂಭಿಸಿಲ್ಲ. ಹಳೇ ಮೈಸೂರು ಪ್ರದೇಶದ ಕ್ಷೇತ್ರಗಳನ್ನು ಬಿಟ್ಟು, ಪಕ್ಷ ಅಸ್ತಿತ್ವ ಇಲ್ಲದ ಕ್ಷೇತ್ರಗಳಿಗೆ ಸ್ಪರ್ಧಿಸುವ ಆಸಕ್ತಿ ಹೊಂದಿಲ್ಲ ಎಂದು ಜೆಡಿಎಸ್‌ ಮೂಲಗಳು ತಿಳಿಸಿವೆ.

ಬೆಂಗಳೂರು ನಗರ, ಗ್ರಾಮಾಂತರ ಜಿಲ್ಲೆಗಳ ನಾಲ್ಕು ಕ್ಷೇತ್ರಗಳ ಪೈಕಿ ಎರಡು ಕ್ಷೇತ್ರಗಳಿಗೆ ಬೇಡಿಕೆ ಸಲ್ಲಿಸಬಹುದು. ಅದರಲ್ಲಿ, ಬೆಂಗಳೂರು ಉತ್ತರ ಕ್ಷೇತ್ರ ಸಿಗುವ ಸಾಧ್ಯತೆ ಇದೆ ಎಂಬುದು ನಾಯಕರ ಅಂದಾಜು. ಇದರ ಜತೆಗೆ ಚಿತ್ರದುರ್ಗ, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ಮೈಸೂರು, ಚಾಮರಾಜನಗರ ಕ್ಷೇತ್ರಗಳಿಗೆ ಬೇಡಿಕೆ ಸಲ್ಲಿಸುವ ನಿರೀಕ್ಷೆ ಇದೆ. ಆದರೆ, ಮೈಸೂರು ಬಿಟ್ಟು ಉಳಿದ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಸಂಸದರಿದ್ದಾರೆ.

ಹಳೇ ಮೈಸೂರು ಭಾಗದ ಕೆಲವು ಕ್ಷೇತ್ರಗಳಿಗಾಗಿ ಎಚ್‌.ಡಿ. ದೇವೇಗೌಡ ಮತ್ತು ಕುಮಾರಸ್ವಾಮಿ ಕಾಂಗ್ರೆಸ್‌ ವರಿಷ್ಠರ ಮೇಲೆ ಒತ್ತಡ ತಂತ್ರ ಹೇರುವ ಸಾಧ್ಯತೆ ಇದೆ. ಮೈತ್ರಿಗೆ ಕಟ್ಟುಬಿದ್ದಿರುವ ಕಾಂಗ್ರೆಸ್‌ ಅನಿವಾರ್ಯವಾಗಿ ಕೆಲವು ಸ್ಥಾನಗಳನ್ನು ಬಿಟ್ಟುಕೊಡುತ್ತದೆ ಎಂಬ ನಿರೀಕ್ಷೆ ಜೆಡಿಎಸ್‌ ನಾಯಕರದ್ದು.

ಮಿಷನ್‌ 24– ಕಮಲ ಗುರಿ: 2014ರ ಚುನಾವಣೆಯಲ್ಲಿ ನರೇಂದ್ರ ಮೋದಿ ಅಲೆಯಲ್ಲಿ ಬಿಜೆಪಿ 17 ಕ್ಷೇತ್ರಗಳನ್ನು ಗೆದ್ದಿತ್ತು. ಈ ಬಾರಿಯೂ ಮೋದಿ ನಾಮಬಲವನ್ನೇ ಕಮಲ ಪಕ್ಷ ನೆಚ್ಚಿಕೊಂಡಿದೆ. ಹಾಲಿ ಸಂಸದರಿರುವ 4–5 ಕ್ಷೇತ್ರಗಳಲ್ಲಿ ಗೆಲುವು ಕಷ್ಟ ಎಂದು ಪಕ್ಷದ ಆಂತರಿಕ ಸಮೀಕ್ಷೆ ತಿಳಿಸಿದೆ. ಇಲ್ಲಿ ಅಭ್ಯರ್ಥಿಗಳ ಬದಲಿಸಲು ಚಿಂತನೆಯನ್ನೂ ನಡೆಸಿದೆ.

ಸಂಸದರ ಸಾಧನೆಗಳ ಬಗ್ಗೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ವರದಿ ತರಿಸಿಕೊಂಡಿದ್ದಾರೆ. ಪರಿಸ್ಥಿತಿ ಪರಾಮರ್ಶೆಗಾಗಿ ಈ ಹಿಂದೆ ಪೂರ್ವ ನಿಗದಿಯಾಗಿದ್ದ ಎರಡು ಭೇಟಿಗಳನ್ನು ಅವರು ರದ್ದುಪಡಿಸಿದ್ದಾರೆ.

ಸಂಸದರಾಗಿದ್ದ ಬಿ.ಎಸ್‌. ಯಡಿಯೂರಪ್ಪ ಹಾಗೂ ಬಿ. ಶ್ರೀರಾಮುಲು ರಾಜ್ಯ ರಾಜಕಾರಣಕ್ಕೆ ಮರಳಿದ್ದಾರೆ. ಶಿವಮೊಗ್ಗ ಯಡಿಯೂರಪ್ಪ ಅವರ ಪುತ್ರ ಬಿ.ವೈ. ರಾಘವೇಂದ್ರ ಹಾಗೂ ಬಳ್ಳಾರಿಗೆ ನಿವೃತ್ತ ನ್ಯಾಯಮೂರ್ತಿ ಹನುಮಂತಪ್ಪ ಅವರಿಗೆ ಟಿಕೆಟ್‌ ಸಿಗುವ ಸಾಧ್ಯತೆಯಿದೆ. ಬೆಂಗಳೂರು ದಕ್ಷಿಣದ ಸಂಸದರಾಗಿರುವ ಅನಂತಕುಮಾರ್‌ ಅನಾರೋಗ್ಯಕ್ಕೆ ತುತ್ತಾಗಿದ್ದಾರೆ. ಅವರು ಚುನಾವಣೆಗೆ ಸ್ಪರ್ಧಿಸುವುದು ಅನುಮಾನ ಎಂದು ಹೇಳಲಾಗುತ್ತಿದೆ.

ಬೆಂಗಳೂರು ಉತ್ತರದಲ್ಲಿ ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ಅವರಿಗೆ ಟಿಕೆಟ್‌ ನಿಕ್ಕಿಯಾಗಿದೆ. ಆದರೆ, ಅವರಿಗೆ ಟಿಕೆಟ್‌ ನೀಡುವುದಕ್ಕೆ ಪಕ್ಷದೊಳಗೆ ಕೆಲವರು ವಿರೋಧ ವ್ಯಕ್ತಪಡಿಸಿದ್ದಾರೆ ಎಂದು ಹೇಳಲಾಗುತ್ತಿದೆ.

ಉಡುಪಿ–ಚಿಕ್ಕಮಗಳೂರು ಕ್ಷೇತ್ರದ ಸಂಸದೆ ಶೋಭಾ ಕರಂದ್ಲಾಜೆ ರಾಜ್ಯ ರಾಜಕಾರಣಕ್ಕೆ ಬರಲು ತುದಿಗಾಲಿನಲ್ಲಿ ನಿಂತಿದ್ದಾರೆ. ಒಂದು ವೇಳೆ ಅವರು ಸ್ಪರ್ಧಿಸದಿದ್ದರೆ ಕೆ. ಜಯಪ್ರಕಾಶ್‌ ಹೆಗ್ಡೆ ಅವರಿಗೆ ಅವಕಾಶ ಲಭಿಸಬಹುದು.

**

ಚುನಾವಣೆ ಎದುರಿಸಲು ಕಾರ್ಯಕರ್ತರು ಮತ್ತು ನಾಯಕರನ್ನು ಅಣಿಗೊಳಿಸಲಾಗುತ್ತಿದೆ. ಸೀಟು ಹಂಚಿಕೆ ಕುರಿತು ಇನ್ನೂ ಮಾತುಕತೆ ಆರಂಭವಾಗಿಲ್ಲ
– ಎಚ್‌.ವಿಶ್ವನಾಥ್‌, ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ

**

ಚುನಾವಣೆ ಎದುರಿಸಲು ತಯಾರಿ ನಡೆದಿದ್ದು, 17 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಮುಂದುವರಿದಿದೆ. ಪಕ್ಷದ ಗೆಲುವಿಗಾಗಿ ಶ್ರಮಿಸುತ್ತೇವೆ. 
– ಬಿ.ಎಸ್‌.ಯಡಿಯೂರಪ್ಪ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ 

**

ಜೆಡಿಎಸ್‌ ಜೊತೆ ಹೊಂದಾಣಿಕೆ ಮಾಡಿಕೊಂಡು ಚುನಾವಣಾ ಕಾರ್ಯತಂತ್ರ ರೂಪಿಸುತ್ತೇವೆ. ಆದರೆ, ಉಭಯ ಪಕ್ಷಗಳ ಮಧ್ಯೆ ಸ್ಥಾನ ಹೊಂದಾಣಿಕೆ ಚರ್ಚೆ ಆಗಿಲ್ಲ
– ಈಶ್ವರ ಖಂಡ್ರೆ, ಕೆಪಿಸಿಸಿ ಕಾರ್ಯಾಧ್ಯಕ್ಷ

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !