61 ಎಪಿಪಿಗಳ ನೆತ್ತಿ ಮೇಲೆ ತೂಗುಗತ್ತಿ?

7
ಶಿಸ್ತು ಕ್ರಮ ಕೈಗೊಳ್ಳುವಂತೆ ಉಪ ಲೋಕಾಯುಕ್ತರ ಶಿಫಾರಸು

61 ಎಪಿಪಿಗಳ ನೆತ್ತಿ ಮೇಲೆ ತೂಗುಗತ್ತಿ?

Published:
Updated:

ಬೆಂಗಳೂರು: ಅಕ್ರಮ ಅಂಕಗಳನ್ನು ಪಡೆದು ನ್ಯಾಯಾಂಗ ಇಲಾಖೆಗೆ ನೇಮಕಗೊಂಡಿದ್ದಾರೆ ಎನ್ನಲಾದ  61 ಸಹಾಯಕ ಪಬ್ಲಿಕ್‌ ಪ್ರಾಸಿಕ್ಯೂಟರ್‌ಗಳ (ಎಪಿಪಿ) ವಿರುದ್ಧ ರಾಜ್ಯ ಸರ್ಕಾರ ಶಿಸ್ತು ಕ್ರಮ ಕೈಗೊಳ್ಳುವ ಸಾಧ್ಯತೆಯಿದೆ.

ಎಪಿಪಿಗಳ ವಿರುದ್ಧ ಕರ್ನಾಟಕ ಲೋಕಾಯುಕ್ತ ಕಾಯ್ದೆ ಸೆಕ್ಷನ್‌ 12 (3) ಅನ್ವಯ ಕ್ರಮ ಕೈಗೊಳ್ಳುವಂತೆ ಶಿಫಾರಸು ಮಾಡಿ ಉಪ ಲೋಕಾಯುಕ್ತರು ಗೃಹ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್‌ ಅವರಿಗೆ ಪತ್ರ ಬರೆದಿದ್ದರು.

‘ಉಪ ಲೋಕಾಯುಕ್ತರ ಪತ್ರ ಇಂದಷ್ಟೇ (ಸೋಮವಾರ) ಬಂದಿದೆ. ಅದನ್ನು ಪರಿಶೀಲಿಸಿ ಸೂಕ್ತ ನಿರ್ಧಾರ ಕೈಗೊಳ್ಳುತ್ತೇವೆ’  ಎಂದು ರಜನೀಶ್‌ ಗೋಯಲ್‌ ‘ಪ್ರಜಾವಾಣಿ’ಗೆ ತಿಳಿಸಿದರು.

2013– 14ನೇ ಸಾಲಿನ ಎಪಿಪಿಗಳ ನೇಮಕಾತಿ ಪರೀಕ್ಷೆಯ ಅಕ್ರಮ ಕುರಿತು ತನಿಖೆ ನಡೆಸುತ್ತಿರುವ ಲೋಕಾಯುಕ್ತ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ. ‘ಉತ್ತರ ಪತ್ರಿಕೆಗಳ ಮೌಲ್ಯಮಾಪನದ ಬಳಿಕ ಅಂಕಗಳನ್ನು ತಿದ್ದಲಾಗಿದೆ’ ಎಂದು ಖಚಿತಪಡಿಸಿ ವಿಧಿವಿಜ್ಞಾನ ಪ್ರಯೋಗಾಲಯ (ಎಫ್‌ಎಸ್‌ಎಲ್‌) ವರದಿ ಕೊಟ್ಟಿದೆ.

ಈ ಅಂಶಗಳನ್ನು ಉಲ್ಲೇಖಿಸಿ ಲೋಕಾಯುಕ್ತ ಎಡಿಜಿಪಿ ಸಂಜಯ್‌ ಸಹಾಯ್‌ ಮಾರ್ಚ್‌ 27ರಿಂದ ಒಂದರ ಹಿಂದೆ ಮತ್ತೊಂದರಂತೆ ನಾಲ್ಕು ಪತ್ರಗಳನ್ನು ಗೃಹ ಇಲಾಖೆಗೆ ಬರೆದಿದ್ದರು. ಜೂನ್‌ ತಿಂಗಳಲ್ಲೇ ಎರಡು ಪತ್ರಗಳು ರವಾನೆಯಾಗಿದ್ದವು. ’ಈ ಪತ್ರಗಳನ್ನು ಗಂಭೀರವಾಗಿ ಪರಿಗಣಿಸದಿದ್ದರಿಂದ ಸೆಕ್ಷನ್‌ 12 (3) ಅಡಿ ಶಿಸ್ತು ಕ್ರಮಕ್ಕೆ ಶಿಫಾರಸು ಮಾಡಲಾಗಿದೆ’ ಎಂದು ಮೂಲಗಳು ಹೇಳಿವೆ.

‘ಉಪ ಲೋಕಾಯುಕ್ತರ ವರದಿ ಮೇಲೆ ಸರ್ಕಾರ ಕ್ರಮ ಕೈಗೊಳ್ಳಬೇಕಾಗುತ್ತದೆ. ಅಲ್ಲದೆ, ಮೂರು ತಿಂಗಳ ಒಳಗೆ ಕೈಗೊಂಡ ಕ್ರಮ ಕುರಿತು ತಿಳಿಸಬೇಕಾಗುತ್ತದೆ. ಕೆಲವೊಂದು ವಿಶೇಷ ಸಂದರ್ಭದಲ್ಲಿ ಮಾತ್ರ ನುಣುಚಿಕೊಳ್ಳಲು ಸರ್ಕಾರಕ್ಕೆ ಅವಕಾಶವಿದೆ. ಈ ಕಾರಣಕ್ಕೆ ಜೆ.ಪಿ.ಪ್ರಕಾಶ್‌ ಮತ್ತು ರಾಜ್ಯದ ನಡುವಿನ ಪ್ರಕರಣದಲ್ಲಿ ನ್ಯಾಯಮೂರ್ತಿ ಜಯಂತ್‌ ಪಟೇಲ್‌ ಅವರಿದ್ದ ಹೈಕೋರ್ಟ್‌ ಪೀಠ ನೀಡಿರುವ ತೀರ್ಪನ್ನು ಉಲ್ಲೇಖಿಸಲಾಗಿದೆ.

ಈ ಹಿಂದೆ ಲೋಕಾಯುಕ್ತ ಎಡಿಜಿಪಿ ಬರೆದಿದ್ದ ಪತ್ರದಲ್ಲಿ, ‘ಪರೀಕ್ಷೆಗಳಲ್ಲಿ ಅಕ್ರಮ ಎಸಗಿ ನೇಮಕವಾದವರ ವಿರುದ್ಧ ಶಿಸ್ತು ಕ್ರಮ ಕೈಗೊಂಡು, ಕ್ರಿಮಿನಲ್‌ ಮೊಕದ್ದಮೆ ಹೂಡಲು ನಾಗರಿಕ ಸೇವಾ ನಿಯಮ 20ರಲ್ಲಿ ಅವಕಾಶವಿದೆ’ ಎಂದು ಹೇಳಲಾಗಿತ್ತು.

ಆದರೆ, ‘ವಿವಿಧ ನ್ಯಾಯಾಲಯಗಳಲ್ಲಿ ಕೆಲಸ ಮಾಡುತ್ತಿರುವ ಎಪಿಪಿಗಳನ್ನು ಸಸ್ಪೆಂಡ್‌ ಮಾಡಿದರೆ ಸಾರ್ವಜನಿಕರಿಗೆ ತೊಂದರೆ ಆಗಲಿದೆ. ಅಲ್ಲದೆ, ಕರ್ನಾಟಕ ನಾಗರಿಕ ಸೇವಾ ನಿಯಮ 10ರ ಅಡಿ ಅಮಾನತು ಮಾಡಲು ಅವಕಾಶವಿಲ್ಲ’ ಎಂದು ಸರ್ಕಾರ ಸಬೂಬು ಹೇಳಿ ನುಣುಚಿಕೊಂಡಿತ್ತು.

197 ಎಪಿಪಿಗಳ ನೇಮಕಾತಿಗೆ 2012ರಲ್ಲಿ ಅರ್ಜಿಗಳನ್ನು ಕರೆಯಲಾಗಿತ್ತು. ಇದರಲ್ಲಿ ಅಕ್ರಮ ನಡೆದಿವೆ ಎಂದು ದೂರಿ ತೀರ್ಥಹಳ್ಳಿ ವಕೀಲ ಎಚ್‌.ಟಿ.ರವಿ ಎಂಬುವರು ಲೋಕಾಯುಕ್ತ ವಿಶೇಷ ನ್ಯಾಯಾಲಯಕ್ಕೆ  ಖಾಸಗಿ ದೂರು ದಾಖಲಿಸಿದ್ದರು. ತನಿಖೆ ನಡೆಸಲು ಲೋಕಾಯುಕ್ತಕ್ಕೆ ನ್ಯಾಯಾಲಯ ಸೂಚಿಸಿತ್ತು.

‘ರಾಷ್ಟ್ರಪತಿ ಹೇಗೆ ಆಯ್ಕೆಯಾಗುತ್ತಾರೆ’ ಎಂದು ಗೊತ್ತಿಲ್ಲದವರು; ಅಭಿವ್ಯಕ್ತಿ ಸ್ವಾತಂತ್ರ್ಯದ ಅರಿವಿಲ್ಲದವರು; ದಾವೆ ಸಿದ್ಧಪಡಿಸಲು ಬರದವರು ಎಪಿಪಿಗಳಾಗಿ ನೇಮಕಗೊಂಡಿದ್ದಾರೆ. ಈ ಅಭ್ಯರ್ಥಿಗಳು ಬರೆದಿದ್ದ ಉತ್ತರಗಳಿಗೆ ನೀಡಿದ್ದ ಅಂಕಗಳನ್ನು ತಿದ್ದಲಾಗಿದೆ’ ಎಂದು ಲೋಕಾಯುಕ್ತ ಪೊಲೀಸರು ದೋಷಾರೋಪ ಪಟ್ಟಿಯಲ್ಲಿ ಹೇಳಿದ್ದಾರೆ.

ಉತ್ತರ ಪತ್ರಿಕೆಗಳ ಕೆಲವು ನಕಲು ಪ್ರತಿಗಳು ಮಾಧ್ಯಮಗಳಿಗೂ ಲಭ್ಯವಾಗಿವೆ.

 

 

ಬರಹ ಇಷ್ಟವಾಯಿತೆ?

 • 0

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !