‘ಆಪರೇಷನ್‌’ನಲ್ಲೇ ಬಿಜೆಪಿ ನಾಯಕರು ತನ್ಮಯ

ಸೋಮವಾರ, ಮೇ 27, 2019
23 °C
ಚುನಾವಣೆ ಸಿದ್ಧತೆ ಮಾಯ l ಬಿ.ಎಸ್‌. ಯಡಿಯೂರಪ್ಪ ವಿರುದ್ಧ ಸ್ವಪಕ್ಷೀಯರ ಅಸಮಾಧಾನ

‘ಆಪರೇಷನ್‌’ನಲ್ಲೇ ಬಿಜೆಪಿ ನಾಯಕರು ತನ್ಮಯ

Published:
Updated:

ಬೆಂಗಳೂರು: ಜೆಡಿಎಸ್‌–ಕಾಂಗ್ರೆಸ್‌ ಮೈತ್ರಿ ಸರ್ಕಾರವನ್ನು ಉರುಳಿಸಲು ‘ಆಪರೇಷನ್‌ ಕಮಲ’ದ ಗುಂಗಿನಲ್ಲೇ ಕಾಲ ಕಳೆದ ಬಿಜೆಪಿ ರಾಜ್ಯ ಘಟಕವು ಲೋಕಸಭಾ ಚುನಾವಣಾ ಸಿದ್ಧತೆಯಲ್ಲಿ ಒಂದು ಹೆಜ್ಜೆ ಹಿಂದಿದೆ ಎಂಬ ಆಕ್ಷೇಪ ಪಕ್ಷದಲ್ಲೇ ವ್ಯಕ್ತವಾಗಿದೆ.

ಎಲ್ಲ 28 ಕ್ಷೇತ್ರಗಳಿಗೆ ನವೆಂಬರ್‌ ತಿಂಗಳಲ್ಲೇ ಪ್ರಭಾರಿಗಳು ಹಾಗೂ ಸಂಚಾಲಕರನ್ನು ನೇಮಿಸಲಾಗಿತ್ತು. ಸಂಕ್ರಾಂತಿ ಮುಗಿದ ಬಳಿಕ ಸರಣಿ ಕಾರ್ಯಕ್ರಮಗಳನ್ನು ನಡೆಸಲು ಸಂಕಲ್ಪ ಮಾಡಲಾಗಿತ್ತು. ಅದರಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರ ರ‍್ಯಾಲಿಗಳು ಸೇರಿದ್ದವು. ನರೇಂದ್ರ ಮೋದಿ ಹಾಗೂ ಅಮಿತ್‌ ಶಾ ಅವರು ರ‍್ಯಾಲಿಗಳಲ್ಲಿ ಭಾಗವಹಿಸಿ ಪ್ರಚಾರಕ್ಕೆ ಚಾಲನೆ ನೀಡಿದ್ದಾರೆ.

ಚುನಾವಣಾ ಸಿದ್ಧತೆಗೆ ಪಕ್ಷದ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ರಾಮಲಾಲ್‌ ನೇತೃತ್ವದಲ್ಲಿ ಒಂದು ಸುತ್ತಿನ ಸಭೆ ನಡೆದಿದೆ. ‘ಮೇರಾ ಪರಿವಾರ್‌– ಬಿಜೆಪಿ ಪರಿವಾರ್‌’ ಕಾರ್ಯಕ್ರಮಕ್ಕೆ ಈ ವಾರ ಚಾಲನೆ ಸಿಕ್ಕಿದೆ. ಉಳಿದಂತೆ, ಸಿದ್ಧತೆಗಳು ಆಮೆಗತಿ
ಯಲ್ಲಿ ಸಾಗಿವೆ’ ಎಂದು ಪಕ್ಷದ ನಾಯಕರೊಬ್ಬರು ಬೇಸರ ವ್ಯಕ್ತಪಡಿಸಿದರು.

ಪಕ್ಷವು ‘ಆಪರೇಷನ್‌ ಕಮಲ’ಕ್ಕೆ ಐದು ಸಲ ಪ್ರಯತ್ನಪಟ್ಟು ಕೈ ಸುಟ್ಟುಕೊಂಡಿದೆ. ಐದನೇ ಸಲದ ಕಾರ್ಯಾಚರಣೆಗೆ ಪ್ರತಿಯಾಗಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಎಸೆದ ‘ಆಡಿಯೊ ಬಾಂಬ್‌’ನಿಂದ ಕಮಲ ಪಡೆಯ ವರ್ಚಸ್ಸಿಗೆ ದೊಡ್ಡ ಹೊಡೆತ ಬಿದ್ದಿದೆ. ಜತೆಗೆ, ರಾಜ್ಯ ಸರ್ಕಾರದ ಬಜೆಟ್‌ನ ಲೋಪದೋಷಗಳ ಬಗ್ಗೆ ಸದನದಲ್ಲಿ ಪಕ್ಷದ ನಾಯಕರು ಒಂದಕ್ಷರ ಮಾತನಾಡಿಲ್ಲ. ಸ್ವ ಪ್ರತಿಷ್ಠೆಗೆ ಕಟ್ಟುಬಿದ್ದು ಕಾಲಹರಣ ಮಾಡಿದೆ ಎಂಬ ಟೀಕೆಗಳು ಪಕ್ಷದ ಪಡಸಾಲೆಯಲ್ಲಿ ವ್ಯಕ್ತವಾಗಿವೆ.

‘ಜೆಡಿಎಸ್‌ ಹಾಗೂ ಕಾಂಗ್ರೆಸ್‌ಗೆ ಹೋಲಿಸಿದರೆ ಚುನಾವಣಾ ಸಿದ್ಧತೆಯಲ್ಲಿ ಯಾವಾಗಲೂ ನಮ್ಮ ಪಕ್ಷವೇ ಮುಂದು. 2014ರ ಲೋಕಸಭಾ ಚುನಾವಣೆಯಲ್ಲಿ ಸಮರೋಪಾದಿಯಲ್ಲಿ ಸಿದ್ಧತೆ ನಡೆಸಿಅಭೂತಪೂರ್ವ ಯಶಸ್ಸುಗಳಿಸಲಾಗಿತ್ತು. ಈ ಸಲ ಅದರ ಶೇ 10ರಷ್ಟು ಪ್ರಯತ್ನವೂ ಕಾಣುತ್ತಿಲ್ಲ’ ಎಂದು ಮುಖಂಡರೊಬ್ಬರು ಬೇಸರ ವ್ಯಕ್ತಪಡಿಸಿದರು.

‘ಲೋಕಸಭಾ ಚುನಾವಣೆಗೆ ಮುನ್ನ ಮೈತ್ರಿ ಸರ್ಕಾರ ಪತನಗೊಳಿಸಬೇಕು ಹಾಗೂ ಬಿ.ಎಸ್‌.ಯಡಿಯೂರಪ್ಪ ಅವ
ರನ್ನು ಮುಖ್ಯಮಂತ್ರಿಯನ್ನಾಗಿ ಮಾಡಬೇಕು ಎಂಬುದು ಅವರ ಬೆಂಬಲಿಗ ಬಣದ ಮಹದಾಸೆಯಾಗಿತ್ತು. ನಮ್ಮ ಸರ್ಕಾರ ರಚನೆಯಾದರೆ ಸುಲಭದಲ್ಲಿ 20 ಸ್ಥಾನಗಳನ್ನು ಗೆಲ್ಲಬಹುದು. ಒಂದು ವೇಳೆ, ಮೈತ್ರಿ ಸರ್ಕಾರವೇ ಇದ್ದರೆ ಜೆಡಿಎಸ್‌–ಕಾಂಗ್ರೆಸ್‌ ಜತೆಗೂಡಿ ಚುನಾ
ವಣೆಯನ್ನು ಎದುರಿಸಲಿವೆ. ಆಗ, ಬಿಜೆಪಿಯ ಸ್ಥಾನ ಕಡಿಮೆಯಾಗಲಿದೆ ಎಂಬುದು ನಾಯಕರ ಆತಂಕ. ಈ ಕಾರಣದಿಂದಲೂ ಸರ್ಕಾರವನ್ನು ಅಸ್ಥಿರಗೊಳಿಸಲು ಯತ್ನಿಸಿದರು’ ಎಂದು ಅವರು ಹೇಳಿದರು.

‘ರಾಜ್ಯ ಮಟ್ಟದಲ್ಲಿ ಚುನಾವಣಾ ಸಿದ್ಧತೆ ನಿರೀಕ್ಷಿತ ಮಟ್ಟದಲ್ಲಿ ಆಗಿಲ್ಲದೆ ಇರುವುದು ನಿಜ. ಕ್ಷೇತ್ರ ಮಟ್ಟದಲ್ಲಿ ಸಿದ್ಧತೆಗಳು ಆಗುತ್ತಿವೆ. ಕಾರ್ಯಕರ್ತರ ಪಡೆಯೇ ಪಕ್ಷದ ಶಕ್ತಿ. ವಹಿಸಿದ ಹೊಣೆಗಳನ್ನೆಲ್ಲ ಅವರು ನಿರ್ವಹಿಸುತ್ತಿದ್ದಾರೆ. ಕೇಂದ್ರ ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸುವ ಕೆಲಸದಲ್ಲಿ ನಿರತರಾಗಿದ್ದಾರೆ’ ಎಂದು ಪ್ರಮುಖರೊಬ್ಬರು ಸಮರ್ಥಿಸಿಕೊಂಡರು.

ಜಾಲತಾಣದಲ್ಲಿ ಕಮಲ ಪಡೆ

l ಲೋಕಸಭಾ ಕ್ಷೇತ್ರದ ಪೇಜ್‌ಗೆ 50 ಸಾವಿರ ಫಾಲೋವರ್ಸ್‌

l ಪ್ರತಿ ವಿಧಾನಸಭಾ ಕ್ಷೇತ್ರದ ಪೇಜ್‌ಗೆ 50 ಸಾವಿರ ಫಾಲೋವರ್ಸ್

l ಪ್ರತಿ ಮತಗಟ್ಟೆಯಲ್ಲಿ ವಾಟ್ಸ್ ಆ್ಯಪ್‌ ಗ್ರೂಪ್‌ ರಚನೆ

l ವಿಷಯ ಸಂಗ್ರಹ, ವಿನ್ಯಾಸಕ್ಕೆ ಪ್ರತ್ಯೇಕ ತಂಡ ರಚನೆ

l ಕಾರ್ಯಕರ್ತರು, ಹಿತೈಷಿಗಳು ಹಾಗೂ ಸಾರ್ವಜನಿಕರಿಂದ ‘ನಮೋ ಆ್ಯಪ್‌’ ಡೌನ್‌ಲೋಡ್‌

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !