ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈತ್ರಿ ನಂಬಿ ಕೆಟ್ಟ ಘಟಾನುಘಟಿಗಳು

Last Updated 24 ಮೇ 2019, 19:57 IST
ಅಕ್ಷರ ಗಾತ್ರ

ಬೆಂಗಳೂರು: ಮೈತ್ರಿ ಮಾಡಿಕೊಂಡು ಲೋಕಸಭೆ ಚುನಾವಣೆ ಎದುರಿಸಿದ್ದೇ ಕಾಂಗ್ರೆಸ್ ಮತ್ತು ಜೆಡಿಎಸ್‌ ಪಕ್ಷಗಳಿಗೆ ಮುಳುವಾಗಿರುವುದು, ತಲಾ ಒಂದು ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾದ ದುಸ್ಥಿತಿಗೆ ತಲುಪಿರುವುದು ಎಂಬ ಲೆಕ್ಕಾಚಾರ ಬಯಲಾಗಿದೆ.

ಹಳೆ ಮೈಸೂರು ಭಾಗದ ಅನೇಕ ಕ್ಷೇತ್ರಗಳಲ್ಲಿ ಜೆಡಿಎಸ್‌ ಪೈಪೋಟಿ ನೀಡುತ್ತಿದ್ದರಿಂದಾಗಿ ಮತ ಪ್ರಮಾಣ ಹಂಚಿಕೆಯಾಗಿ ಕೆಲವು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಹಾಗೂ ಮತ್ತೆ ಕೆಲವು ಕಡೆ ಜೆಡಿಎಸ್‌ ಗೆಲ್ಲುತ್ತಿತ್ತು. ಆದರೆ, ಈ ಬಾರಿ ಈ ಎರಡೂ ಪಕ್ಷಗಳು ಒಟ್ಟಾಗಿ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿದವು. ಜೆಡಿಎಸ್ ಅಭ್ಯರ್ಥಿ ಇಲ್ಲದ ಕಡೆಗಳಲ್ಲಿ ಆ ಪಕ್ಷದ ಸಾಂಪ್ರದಾಯಿಕ ಮತದಾರರು ಬಿಜೆಪಿ ಅಭ್ಯರ್ಥಿಯನ್ನು ಬೆಂಬಲಿಸಿದ್ದರಿಂದಾಗಿ ಮೈತ್ರಿ ಅಭ್ಯರ್ಥಿ ಬೀದಿಪಾಲಾಗುವ ಸ್ಥಿತಿ ಬಂದೊದಗಿತು ಎಂಬ ಚರ್ಚೆ ರಾಜಕೀಯ ವಲಯದಲ್ಲಿ ನಡೆದಿದೆ.

ಇದೇ 23ರಂದು ಹೊರಬಿದ್ದ ಫಲಿತಾಂಶವನ್ನೇ ಗಮನಿಸಿದರೆ ನರೇಂದ್ರ ಮೋದಿ ನೇತೃತ್ವದ ಬಿಜೆಪಿಯು ರಾಜ್ಯದಲ್ಲಿ ಚಲಾವಣೆಯಾದ ಒಟ್ಟು ಮತಗಳ ಪೈಕಿ ಶೇ 51ರಷ್ಟನ್ನು ಬಾಚಿಕೊಂಡಿದೆ. 2014ರಲ್ಲಿ ನಡೆದ ಲೋಕಸಭೆ ಚುನಾವಣೆಯಲ್ಲಿ ಶೇ 43.37ರಷ್ಟು ಮತಗಳಿಸಿತ್ತು.ಈ ಬಾರಿ ಬಿಜೆಪಿ ಹಿಂದೆಂದಿಗಿಂತಲೂ ಅತ್ಯಧಿಕ ಮತ ಪ್ರಮಾಣವಾಗಿರುವುದು ವಿಶೇಷ.

2009ರಿಂದ ಮತ ಪ್ರಮಾಣದಲ್ಲಿ ಏರುಗತಿಯನ್ನು ಕಾಣುತ್ತಿದ್ದ ಕಾಂಗ್ರೆಸ್‌ ಈ ಬಾರಿ ಮುಗ್ಗರಿಸಿದೆ. ಆ ಚುನಾವಣೆಯಲ್ಲಿ ಶೇ 37.65ರಷ್ಟು ಮತ ಪಡೆದಿದ್ದ ಕಾಂಗ್ರೆಸ್‌, 2014ರಲ್ಲಿ ಶೇ 41.15ಕ್ಕೆ ಏರಿತ್ತು. ಆದರೆ ಮೈತ್ರಿ ಮಾಡಿಕೊಂಡ ಚುನಾವಣೆ ಎದುರಿಸಿದಾಗ ಪ್ರಮಾಣ ಶೇ 31.9ಕ್ಕೆ ಕುಸಿದಿದ್ದು, ಶೇ 10ರಷ್ಟು ಇಳಿಕೆಯಾದಂತಾಗಿದೆ.

ಇದೇ ಹೊತ್ತಿನಲ್ಲಿ ಜೆಡಿಎಸ್‌ ಮತ ಪ್ರಮಾಣದ ಗಳಿಕೆ ಕುಸಿತದತ್ತ ಸಾಗಿರುವುದನ್ನು ಚುನಾವಣೆ ಆಯೋಗದ ಅಂಕಿ ಅಂಶಗಳು ಸ್ಪಷ್ಟಪಡಿಸುತ್ತವೆ. 2009ರಲ್ಲಿ ಶೇ 13.57, 2014ರಲ್ಲಿ ಶೇ 11ರಷ್ಟು ಮತ ಗಳಿಸಿದ್ದ ಜೆಡಿಎಸ್ ಈ ಬಾರಿ ಶೇ 9.71ಕ್ಕೆ ಕುಸಿತ ಕಂಡಿದೆ.

ಎರಡು ಪಕ್ಷಗಳು ಒಟ್ಟಾಗಿ ಚುನಾವಣೆ ಎದುರಿಸಿದರೂ ಮತಗಳನ್ನು ಕ್ರೋಡೀಕರಿಸಿಕೊಂಡು ಮೈತ್ರಿ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳುವಲ್ಲಿ ಹಾಗೂ ತಮ್ಮ ಮತಗಳನ್ನು ಪರಸ್ಪರರಿಗೆ ವರ್ಗಾಯಿಸುವಲ್ಲಿ ಸೋತಿರುವುದಕ್ಕೆ ಇದು ನಿದರ್ಶನವಾಗಿ ಕಾಣಿಸುತ್ತದೆ.

ಸ್ಥಳೀಯ ಮಟ್ಟದಲ್ಲಿ ಹೊಂದಾಣಿಕೆ ಇಲ್ಲದೇ ಇರುವುದು ಇದಕ್ಕೆ ಪ್ರಮುಖ ಕಾರಣವಾದ ಅಂಶ. ಅದರ ಜತೆಗೇ, ಕಾಂಗ್ರೆಸ್ ಅಭ್ಯರ್ಥಿ ಇದ್ದ ಕಡೆ ಜೆಡಿಎಸ್‌ನವರು, ಜೆಡಿಎಸ್‌ ಅಭ್ಯರ್ಥಿ ಇದ್ದ ಕಡೆ ಕಾಂಗ್ರೆಸ್‌ ನಾಯಕರು ಅಭ್ಯರ್ಥಿಗಳ ಪರ ಕೆಲಸ ಮಾಡದೇ ಇದ್ದುದು ಈ ಸೋಲಿಗೆ ಪ್ರಮುಖ ಕಾರಣ ಎಂಬ ವಿಶ್ಲೇಷಣೆ ರಾಜಕೀಯ ಪಕ್ಷಗಳ ಪಡಸಾಲೆಯಲ್ಲಿ ನಡೆದಿದೆ.

ಕೂಡಿಕೆ ಅಲ್ಲ ಕಳೆದಿದ್ದು: 2014ರಲ್ಲಿ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಪ್ರತ್ಯೇಕವಾಗಿ ಪಡೆದಿದ್ದ ಮತಗಳನ್ನು ಕೂಡಿದರೆ ಒಟ್ಟು ಮತ ಪ್ರಮಾಣ ಶೇ 52.22ರಷ್ಟಿತ್ತು. ಈ ಲೆಕ್ಕಾಚಾರದಂತೆ ಮೈತ್ರಿ ಅಭ್ಯರ್ಥಿಗಳು ಮತ ಗಳಿಸಿದ್ದರೆ ಬಿಜೆಪಿ ಅಭ್ಯರ್ಥಿಗಳು ಸೋಲಲೇಬೇಕಾಗಿತ್ತು. ಮೈತ್ರಿ ಕೂಟದ ನಾಯಕರು ಕಚ್ಚಾಡಿಕೊಂಡಿದ್ದು, ಪರಸ್ಪರ ಅಪನಂಬಿಕೆ, ಒಳಗೊಳಗೆ ಕತ್ತಿ ಮಸೆದಿದ್ದರ ಪರಿಣಾಮವಾಗಿ ಈ ಬಾರಿ ಎರಡೂ ಪಕ್ಷಗಳು ಪ‍ಡೆದ ಮತ ಲೆಕ್ಕ ಹಾಕಿದರೆ ಇದು ಶೇ 41.57ಕ್ಕೆ ಕುಸಿದಿರುವುದು ಕಾಣಿಸುತ್ತದೆ.

ಮಂಡ್ಯ ಲೋಕಸಭಾ ಕ್ಷೇತ್ರವನ್ನೇ ತೆಗೆದುಕೊಂಡರೆ 2014ರಲ್ಲಿ ಜೆಡಿಎಸ್‌–ಕಾಂಗ್ರೆಸ್ ಅಭ್ಯರ್ಥಿಗಳು ಪಡೆದಿದ್ದ ಮತ ಪ್ರಮಾಣ ಒಟ್ಟಾರೆ ಶೇ 87.44ರಷ್ಟಿತ್ತು. ಆದರೆ ಈ ಬಾರಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್‌ ಅವರು ಶೇ 51ರಷ್ಟು ಮತ ಪಡೆದಿದ್ದು. ನಿಖಿಲ್ ಕುಮಾರಸ್ವಾಮಿ ಶೇ 41.89ರಷ್ಟು ಮತ ಪಡೆಯುವಲ್ಲಿ ಸೀಮಿತರಾಗಿದ್ದಾರೆ. ಕಾಂಗ್ರೆಸ್ ಮತಗಳು ಪೂರ್ಣ ಪ್ರಮಾಣದಲ್ಲಿ ಹಾಗೂ ಜೆಡಿಎಸ್‌ನ ಅಲ್ಪ ಮತಗಳು ವರ್ಗಾವಣೆಯಾಗದೇ ಇರುವುದು ಇಲ್ಲಿ ಮೇಲ್ನೋಟಕ್ಕೆ ಕಾಣಿಸುತ್ತದೆ.

ತುಮಕೂರಿನ ಲೆಕ್ಕಾಚಾರವನ್ನು ನೋಡುವುದಾದರೆ 2014ರಲ್ಲಿ ಈ ಕ್ಷೇತ್ರದಲ್ಲಿ ಜೆಡಿಎಸ್–ಕಾಂಗ್ರೆಸ್‌ ಅಭ್ಯರ್ಥಿಗಳು ಪ್ರತ್ಯೇಕವಾಗಿ ಸ್ಪರ್ಧಿಸಿದ್ದಾಗ ಎರಡೂ ಪಕ್ಷಗಳ ಅಭ್ಯರ್ಥಿಗಳು ಒಟ್ಟಾಗಿ ಗಳಿಸಿದ ಮತ ಶೇ 62ರಷ್ಟಿತ್ತು. ಆದರೆ ಈ ಬಾರಿ ಜೆಡಿಎಸ್ ಅಭ್ಯರ್ಥಿ ಎಚ್.ಡಿ. ದೇವೇಗೌಡರು ಪಡೆದ ಮತ ಪ್ರಮಾಣ ಶೇ 46.82ಕ್ಕೆ ಕುಸಿದಿದೆ.

ಕೋಲಾರದಲ್ಲಿ ಕಾಂಗ್ರೆಸ್‌– ಜೆಡಿಎಸ್‌ ಅಭ್ಯರ್ಥಿಗಳು 2014ರಲ್ಲಿ ಶೇ 70ರಷ್ಟು ಮತ ಪಡೆದಿದ್ದು. ಈ ಬಾರಿ ಕೆ.ಎಚ್. ಮುನಿಯಪ್ಪ ಗಳಿಸಿದ ಮತ ಶೇ 39.66ರಷ್ಟು ಮಾತ್ರ. ಈ ಕ್ಷೇತ್ರದಲ್ಲಿ ಜೆಡಿಎಸ್, ಕಾಂಗ್ರೆಸ್ ಶಾಸಕರೇ ಹೆಚ್ಚಿನ ಸಂಖ್ಯೆಯಲ್ಲಿದ್ದು ಎಲ್ಲರೂ ಕೂಡ ಮತ ಹಾಕಿಸಿದ್ದರೆ ಪರಿಚಯವೇ ಇಲ್ಲದ ಹೊಸ ಮುಖವಾದ ಮುನಿಸ್ವಾಮಿ ಎದುರು ಮುನಿಯಪ್ಪ ಸೋಲಲು ಸಾಧ್ಯವೇ ಇರಲಿಲ್ಲ. ಕಾಂಗ್ರೆಸ್, ಜೆಡಿಎಸ್ ಶಾಸಕರು ಪೂರ್ಣ ಪ್ರಮಾಣದಲ್ಲಿ ಮತವನ್ನು ಬಿಜೆಪಿ ಕಡೆಗೆ ವರ್ಗಾಯಿಸಿದ್ದರಿಂದಾಗಿ ಮೈತ್ರಿ ಅಭ್ಯರ್ಥಿ ಸೋಲು ಕಾಣಬೇಕಾಯಿತು ಎಂಬ ಲೆಕ್ಕಾಚಾರ ಕಾಂಗ್ರೆಸ್‌ ವಲಯದಲ್ಲಿ ನಡೆದಿದೆ.

ಇದು ಬೆಂಗಳೂರು ಉತ್ತರ ಹಾಗೂ ಚಿಕ್ಕಬಳ್ಳಾಪುರಕ್ಕೂ ಅನ್ವಯಿಸುತ್ತದೆ.

ಮೀಸಲು ಕ್ಷೇತ್ರಗಳಲ್ಲಿ ‘ಕೈ’ಗೆ ಸೋಲು

2014ರ ಲೋಕಸಭೆ ಚುನಾವಣೆಯಲ್ಲಿ ನರೇಂದ್ರ ಮೋದಿ ಎಬ್ಬಿಸಿದ ಅಲೆಯ ಮಧ್ಯೆಯೂ ಕಾಂಗ್ರೆಸ್‌ನವರ ಮರ್ಯಾದೆ ಉಳಿಸಿದ್ದು ಪ್ರಮುಖವಾಗಿ ಮೀಸಲು ಕ್ಷೇತ್ರಗಳೇ ಆಗಿದ್ದವು.

ಆ ಪೈಕಿ ಬೆಂಗಳೂರು ಗ್ರಾಮಾಂತರ, ಚಿಕ್ಕೋಡಿ, ಚಿಕ್ಕಬಳ್ಳಾಪುರ, ತುಮಕೂರು ಮೀಸಲು ಕ್ಷೇತ್ರಗಳು ಆಗಿರಲಿಲ್ಲ.

ರಾಯಚೂರು, ಗುಲ್ಬರ್ಗಾ, ಕೋಲಾರ, ಚಿತ್ರದುರ್ಗ, ಚಾಮರಾಜನಗರ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಗೆದ್ದಿತ್ತು. 2018ರಲ್ಲಿ ನಡೆದ ಉಪಚುನಾವಣೆಯಲ್ಲಿ ಮತ್ತೊಂದು ಮೀಸಲು(ಎಸ್‌ಟಿ) ಕ್ಷೇತ್ರ ಬಳ್ಳಾರಿಯಲ್ಲೂ ಗೆಲ್ಲಲು ಸಾಧ್ಯವಾಗಿತ್ತು. ಆದರೆ ಈ ಬಾರಿ ಗ್ರಾಮಾಂತರ ಮಾತ್ರ ಕೈ ಮಾನವನ್ನು ಕಾಪಾಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT