ಆತಂಕ ಹೆಚ್ಚಿಸಿದ ಸುಮಲತಾ ಸ್ಪರ್ಧೆ ವಿಚಾರ

ಶನಿವಾರ, ಮೇ 25, 2019
28 °C
ಕುಮಾರಸ್ವಾಮಿ ಪುತ್ರ ನಿಖಿಲ್‌ ಪಟ್ಟಾಭಿಷೇಕಕ್ಕೆ ಸರ್ವ ಪ್ರಯತ್ನ* ₹5 ಸಾವಿರ ಕೋಟಿ ಕಾಮಗಾರಿ ಹಿಂದೆ ರಾಜಕಾರಣ?

ಆತಂಕ ಹೆಚ್ಚಿಸಿದ ಸುಮಲತಾ ಸ್ಪರ್ಧೆ ವಿಚಾರ

Published:
Updated:

ಮಂಡ್ಯ: ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಜಿಲ್ಲೆಯ ಅಭಿವೃದ್ಧಿಗೆ ₹5 ಸಾವಿರ ಕೋಟಿ ಕಾಮಗಾರಿ ಘೋಷಿಸಿದ್ದು, ಫೆ.27ರಂದು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.

ಯಾವ ಜಿಲ್ಲೆಗೂ ಇಲ್ಲದ ಹಣದ ಹೊಳೆಯನ್ನು ಮಂಡ್ಯ ಜಿಲ್ಲೆಯಲ್ಲಿ ಮಾತ್ರ ಹರಿಸುತ್ತಿರುವುದು ಏಕೆ ಎಂಬ ಪ್ರಶ್ನೆ ಸಹಜವಾಗಿ ಮೂಡಿದೆ.

ಲೋಕಸಭೆಗೆ ಅಂಬರೀಷ್‌ ಪತ್ನಿ ಸುಮಲತಾ ಸ್ಪರ್ಧಿಸುವ ವಿಚಾರ ಮುನ್ನೆಲೆಗೆ ಬರುತ್ತಿದ್ದಂತೆ ಮುಖ್ಯಮಂತ್ರಿ ಹಾಗೂ ಜೆಡಿಎಸ್‌ ಮುಖಂಡರು ಜಾಗೃತರಾಗಿದ್ದಾರೆ. ಜೆಡಿಎಸ್ ಭದ್ರಕೋಟೆಯಲ್ಲಿ ನಿಖಿಲ್‌ ಕುಮಾರಸ್ವಾಮಿ ಅವರನ್ನು ಅನಾಯಾಸವಾಗಿ ಗೆಲ್ಲಿಸಿಕೊಳ್ಳುವ ವಿಶ್ವಾಸದಲ್ಲಿದ್ದವರಿಗೆ ಆತಂಕ ಎದುರಾಗಿದೆ.

ಉಗ್ರರ ದಾಳಿಯಿಂದ ಹುತಾತ್ಮರಾದ ಯೋಧ ಎಚ್‌.ಗುರು ಕುಟುಂಬಕ್ಕೆ 20 ಗುಂಟೆ ಆಸ್ತಿ ಕೊಡುವುದಾಗಿ ಸುಮಲತಾ ಘೋಷಣೆ ಮಾಡಿದ ನಂತರ ನಿಖಿಲ್‌ ಗೆಲುವು ಸುಲಭ ಸಾಧ್ಯವಲ್ಲ ಎಂಬ ಭಾವನೆ ಜೆಡಿಎಸ್‌ ಪಾಳಯದಲ್ಲಿ ಮೂಡಿದೆ.

ಫೆ.19ರಂದು ತರಾತುರಿಯಲ್ಲಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿದ ಮುಖ್ಯಮಂತ್ರಿ, ₹ 5 ಸಾವಿರ ಕೋಟಿ ವೆಚ್ಚದ ವಿವಿಧ ಕಾಮಗಾರಿ ಆರಂಭಿಸುವುದಾಗಿ ತಿಳಿಸಿದರು.

ವಿಶ್ವೇಶ್ವರಯ್ಯ ನಾಲೆ ಆಧುನೀಕರಣಕ್ಕೆ ₹ 1,650 ಕೋಟಿ, ಪಟ್ಟಣ, ಗ್ರಾಮೀಣ ಪ್ರದೇಶಕ್ಕೆ ನಿತ್ಯ ಶುದ್ಧ ನೀರು ಪೂರೈಸುವ ಯೋಜನೆಗೆ ₹ 1,300 ಕೋಟಿ, ವಿದ್ಯುತ್‌ ಸರಬರಾಜು, ಟಿಸಿ ಅಳವಡಿಕೆಗೆ ₹ 400 ಕೋಟಿ ಸೇರಿದಂತೆ ಕೈಗಾರಿಕೆ, ಕೃಷಿ ಪ್ರತ್ಯಾಕ್ಷಿಕಾ ಕೇಂದ್ರ ಸ್ಥಾಪನೆ, ಕ್ರೀಡಾಂಗಣ, ವಸತಿ ನಿಲಯಗಳಿಗೆ ಹಣದ ಹೊಳೆಯನ್ನೇ ಹರಿಸಿದ್ದಾರೆ. ಹಿಂದೆಂದೂ ಕಂಡರಿಯದ ಅಭಿವೃದ್ಧಿ ಯೋಜನೆಗಳು ಜಿಲ್ಲೆಯ ಪಾಲಿಗೆ ಸಿಕ್ಕಿವೆ. ಚುನಾವಣಾ ನೀತಿ ಸಂಹಿತೆ ಜಾರಿಯಾದರೂ ಕಾಮಗಾರಿ ಮುಂದುವರಿಯುವಂತೆ ಕಾರ್ಯಕ್ರಮ ರೂಪಿಸಲಾಗುವುದು ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ತಿಳಿಸಿದ್ದಾರೆ.

‘ಇದೇ ರೀತಿ ಯೋಜನೆ ಘೋಷಣೆ ಮಾಡಿ ಪತ್ನಿಯನ್ನು ಶಾಸಕರನ್ನಾಗಿ ಮಾಡಿದ್ದಾಯಿತು. ಮತ್ತೆ ಅದೇ ಆಶ್ವಾಸನೆಗಳಿಂದ ಮಗನನ್ನು ಸಂಸದರನ್ನಾಗಿ ಮಾಡಲು ಮುಂದಾಗಿದ್ದಾರೆ. ಇಷ್ಟು ದಿನ ಗದ್ದೆ ನಾಟಿ– ಕೊಯ್ಲು ಕೆಲಸ ಮಾಡುತ್ತಿದ್ದವರು ಒಮ್ಮೆಲೇ ಹಣದ ಹೊಳೆ ಹರಿಸುತ್ತಿರುವುದು ಏಕೆ ಎಂಬ ಪ್ರಶ್ನೆಗೆ ಮುಖ್ಯಮಂತ್ರಿ ಉತ್ತರ ನೀಡಬೇಕು’ ಎಂದು ಕಾಂಗ್ರೆಸ್‌ ಮುಖಂಡರು ಒತ್ತಾಯಿಸಿದ್ದಾರೆ.

ರಣೋತ್ಸಾಹ: ಸುಮಲತಾ ಸ್ಪರ್ಧೆ ವಿಚಾರ ಪ್ರಸ್ತಾಪವಾಗುತ್ತಿದ್ದಂತೆ ರಾಜಕೀಯ ಚಟುವಟಿಕೆ ಗರಿಗೆದರಿವೆ. ನಿಖಿಲ್‌ ಕುಮಾರಸ್ವಾಮಿ ಅಭಿಮಾನಿಗಳ ಸಂಘದಿಂದ ನಿಖಿಲ್‌ ಪರ ಚಟುವಟಿಕೆ ನಡೆಸುತ್ತಿದ್ದರೆ, ಅಂಬರೀಷ್‌ ಅಭಿಮಾನಿಗಳ ಸಂಘದ ಕಾರ್ಯಕರ್ತರು ಸುಮಲತಾ ಪರ ಕಾರ್ಯಕ್ರಮ ಆಯೋಜನೆ ಮಾಡುತ್ತಿದ್ದಾರೆ.

‘ಸುಮಲತಾ ಸ್ಪರ್ಧೆ ಖಚಿತವಾಗಿದೆ. ಕಾಂಗ್ರೆಸ್‌ ಟಿಕೆಟ್‌ ಸಿಗದಿದ್ದರೆ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಾರೆ. ಬಿಜೆಪಿ, ರೈತಸಂಘ ಹಾಗೂ ಜೆಡಿಎಸ್‌ ಜೊತೆಗಿನ ಮೈತ್ರಿ ವಿರೋಧಿಸುವ ಕಾಂಗ್ರೆಸ್‌ ಮುಖಂಡರ ಬೆಂಬಲ ಸಿಗಲಿದೆ. ಅಂಬರೀಷ್‌ ಮೇಲಿನ ಅಭಿಮಾನ, ಅನುಕಂಪದ ಅಲೆ ಜೊತೆಗಿದೆ’ ಎಂದು ಅಂಬರೀಷ್‌ ಅಭಿಮಾನಿಗಳ ಸಂಘ ರಾಜ್ಯ ಘಟಕದ ಅಧ್ಯಕ್ಷ ಬೇಲೂರು ಸೋಮಶೇಖರ್‌ ತಿಳಿಸಿದರು.

**

ಮಳವಳ್ಳಿ ತಾಲ್ಲೂಕು ಒಂದಕ್ಕೇ ₹ 600 ಕೋಟಿ ಕೊಟ್ಟಿದ್ದಾರೆ. ನಾವೆಲ್ಲಾ ಸಂತೋಷ ಪಡಬೇಕು. ವಿರೋಧಿಗಳು ಹೊಟ್ಟೆಕಿಚ್ಚಿಗಾಗಿ ಅಪಪ್ರಚಾರ ಮಾಡುತ್ತಿದ್ದಾರೆ.
– ಕೆ.ಅನ್ನದಾನಿ, ಮಳವಳ್ಳಿ ಶಾಸಕ

ಬರಹ ಇಷ್ಟವಾಯಿತೆ?

 • 5

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !