ಮಂಗಳವಾರ, ಮೇ 18, 2021
24 °C

‘ಮಿತ್ರ’ರ ಅಸಹಕಾರ ರಾಹುಲ್‌ಗೆ ಮೊರೆ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಲೋಕಸಭೆ ಚುನಾವಣೆಯಲ್ಲಿ ಮೈತ್ರಿ ಕೂಟಕ್ಕೆ ಅನುಕೂಲಕಾರಿ ವಾತಾವರಣ ಇದ್ದರೂ ‘ಮಿತ್ರ’ರ ಅಸಹಕಾರವೇ ಗೆಲುವಿಗೆ ಅಡ್ಡಿಯಾಗುವ ಅಪಾಯ ಇದೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಮನವರಿಕೆ ಮಾಡಿಕೊಡಲು ಜೆಡಿಎಸ್‌ ನಾಯಕರು ಮುಂದಾಗಿದ್ದಾರೆ.

ಭಾನುವಾರ ಬೆಂಗಳೂರಿಗೆ ಬರಲಿರುವ ರಾಹುಲ್ ಗಾಂಧಿ ಮುಂದೆ ತಮ್ಮ ದುಮ್ಮಾನ–ಆಕ್ಷೇಪಗಳನ್ನು ವ್ಯಕ್ತಪಡಿಸಲು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಹಾಗೂ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ತಯಾರಿ ನಡೆಸಿದ್ದಾರೆ ಎಂದು ಗೊತ್ತಾಗಿದೆ.

‘ಮೈತ್ರಿ ಧರ್ಮ ಪಾಲಿಸಬೇಕು ಎಂಬ ಕಾರಣಕ್ಕೆ ಜೆಡಿಎಸ್‌ಗೆ ಸಾಕಷ್ಟು ಬೆಂಬಲ ಇರುವ ಮೈಸೂರು, ಕೋಲಾರ, ಚಿಕ್ಕಬಳ್ಳಾಪುರವನ್ನು ಕಾಂಗ್ರೆಸ್‌ಗೆ ಬಿಟ್ಟುಕೊಟ್ಟೆವು. ಬಿಜೆಪಿ ಪ್ರಾಬಲ್ಯ ಇರುವ ವಿಜಯಪುರ, ಚಿಕ್ಕಮಗಳೂರು, ಉತ್ತರ ಕನ್ನಡ, ಬೆಂಗಳೂರು ಉತ್ತರ ಕ್ಷೇತ್ರಗಳನ್ನೇ ತಮಗೆ ನೀಡಿ ಎಂದು ಕೇಳಿಕೊಂಡೆವು. ಮೈಸೂರಿನಲ್ಲಿ ನಮ್ಮ ಪಕ್ಷದ ಶಾಸಕರೇ ಹೆಚ್ಚಿನ ಸಂಖ್ಯೆಯಲ್ಲಿದ್ದರೂ ಅದನ್ನೂ ಧಾರೆ ಎರೆದವು. ತುಮಕೂರಿನಲ್ಲಿ ಸಂಸದರು ಬಂಡಾಯ ಎದ್ದರು. ಇದರಿಂದಾಗಿ ‘ಮೈತ್ರಿ’ಯಲ್ಲಿ ಎಲ್ಲವೂ ಸರಿಯಿಲ್ಲ ಎಂಬ ಭಾವನೆ ಬರುವಂತಾಯಿತು. ಗೊಂದಲ ಪರಿಹರಿಸಲು ರಾಜ್ಯದ ಹಿರಿಯ ನಾಯಕರು ಕೊನೆಗಳಿಗೆಯವರೆಗೂ ಮಧ್ಯ ಪ್ರವೇಶ ಮಾಡಲಿಲ್ಲ. ಇದರಿಂದ ಕೆಲವು ಕ್ಷೇತ್ರಗಳಲ್ಲಿ ಹಿನ್ನೆಡೆಯಾಗುವ ಸಂಭವ ಇದೆ’ ಎಂದು ರಾಹುಲ್ ಗಾಂಧಿ ಅವರಿಗೆ ಉಭಯ ನಾಯಕರು ವಿವರಿಸಲಿದ್ದಾರೆ. 

ಮೈತ್ರಿ ಮುಂದುವರಿಯುವುದು, ರಾಜ್ಯದ ‘ಕೆಲವು’ ನಾಯಕರಿಗೆ ಬೇಕಿದ್ದಂತೆ ಕಾಣಿಸುತ್ತಿಲ್ಲ. ಹಾಸ ಮತ್ತು ಮಂಡ್ಯದಲ್ಲಿ ಸ್ಥಳೀಯ ಕಾಂಗ್ರೆಸ್ ನಾಯಕರು ಜೆಡಿಎಸ್ ಅಭ್ಯರ್ಥಿ ಪರ ಕೆಲಸ ಮಾಡದೇ, ಬಿಜೆಪಿ ಹಾಗೂ ಪಕ್ಷೇತರ ಅಭ್ಯರ್ಥಿ ಪರ ಕೆಲಸ ಮಾಡುತ್ತಿದ್ದಾರೆ. ಸದ್ಯದ ವಾತಾವರಣದಲ್ಲಿ ಎಲ್ಲರೂ ಒಗ್ಗೂಡಿ, ಭೇದ ತೋರದಂತೆ ಕೆಲಸ ಮಾಡಿದರೆ 20ರಿಂದ 22 ಕ್ಷೇತ್ರಗಳಲ್ಲಿ ಗೆಲುವು ಸಾಧ್ಯ. ಮೈತ್ರಿ ಮುಂದುವರಿಯಬೇಕು ಎಂಬ ಅಪೇಕ್ಷೆ ಇದ್ದರೆ ಎಲ್ಲರಿಗೂ ಸೂಕ್ತ ನಿರ್ದೇಶನ ನೀಡಿ ಎಂದು ರಾಹುಲ್ ಅವರಿಗೆ ಕೋರಲು ಇಬ್ಬರೂ ನಿರ್ಧರಿಸಿದ್ದಾರೆ ಎನ್ನಲಾಗಿದೆ.

‘ಲೋಕಸಭೆ ಚುನಾವಣೆಯಲ್ಲಿ ಒಟ್ಟಿಗೆ ಹೋಗುತ್ತಿದ್ದೇವೆ, ಮೈತ್ರಿ ಕೂಟದ ಅಭ್ಯರ್ಥಿಗಳನ್ನು ಗೆಲ್ಲಿಸಿ’ ಎಂಬ ಸಂದೇಶ ರವಾನಿಸಲು ಜೆಡಿಎಸ್–ಕಾಂಗ್ರೆಸ್‌ ಜಂಟಿಯಾಗಿ ಭಾನುವಾರ ಬೆಂಗಳೂರಿನಲ್ಲಿ ಬೃಹತ್ ಸಮಾವೇಶ ಹಮ್ಮಿಕೊಂಡಿವೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು