ಮೇಲ್ವರ್ಗದವರ ಓಲೈಕೆಗೆ ತಂತ್ರ!

ಭಾನುವಾರ, ಏಪ್ರಿಲ್ 21, 2019
32 °C
ಕಾಂಗ್ರೆಸ್‌ನಿಂದ ವೀರಶೈವ–ಲಿಂಗಾಯತ ಸಮುದಾಯಗಳ ಸಮಾವೇಶ

ಮೇಲ್ವರ್ಗದವರ ಓಲೈಕೆಗೆ ತಂತ್ರ!

Published:
Updated:
Prajavani

ಕಲಬುರ್ಗಿ: ಮೀಸಲು ಕ್ಷೇತ್ರದಲ್ಲಿ ಮೇಲ್ವರ್ಗದ ಮತದಾರರೇ ನಿರ್ಣಾಯಕ ಎಂಬ ಮಾತಿದೆ. ಕಾಂಗ್ರೆಸ್‌ ಪಕ್ಷವು ವೀರಶೈವ–ಲಿಂಗಾಯತ ಸಮುದಾಯದ ಸಮಾವೇಶ–ಸಭೆ ನಡೆಸುವ ಮೂಲಕ ಈ ಸಮುದಾಯದ ಮತ ಸೆಳೆಯುವ ತಂತ್ರಗಾರಿಕೆಯಲ್ಲಿ ತೊಡಗಿದೆ.

‘ಸಂಸದ ಮಲ್ಲಿಕಾರ್ಜುನ ಖರ್ಗೆ ಅವರ ಪರವಾಗಿ ಇದೇ ಮೊದಲ ಬಾರಿಗೆ ವೀರಶೈವ–ಲಿಂಗಾಯತ ಸಮುದಾಯದ ಸಭೆಗಳನ್ನು ನಡೆಸಲಾಗುತ್ತಿದೆ. ಅಷ್ಟರ ಮಟ್ಟಿಗೆ ಕಾಂಗ್ರೆಸ್ಸಿಗರಿಗೆ ಬಿಸಿ ಮುಟ್ಟಿದೆ’ ಎಂದು ವಿರೋಧ ಪಕ್ಷದವರು ಲೇವಡಿ ಮಾಡುತ್ತಿದ್ದಾರೆ. ‘ವೀರಶೈವ ಲಿಂಗಾಯತರು ಕೇವಲ ಬಿಜೆಪಿಯಲ್ಲಷ್ಟೇ ಇಲ್ಲ. ಕಾಂಗ್ರೆಸ್‌ ಪಕ್ಷದಲ್ಲಿಯೂ ಇದ್ದಾರೆ’ ಎಂದು ಮಾಜಿ ಸಚಿವ ಡಾ.ಶರಣಪ್ರಕಾಶ ಪಾಟೀಲ ಹೇಳುತ್ತಿದ್ದಾರೆ.

‘ಮಲ್ಲಿಕಾರ್ಜುನ ಖರ್ಗೆ ಅವರು ದಲಿತ, ಹಿಂದುಳಿದ ಮತ್ತು ಶೋಷಿತರ ದನಿಯಾಗಿ ಕೆಲಸ ಮಾಡುತ್ತಿದ್ದಾರೆ. ರಾಜಕೀಯ ಲಾಭ–ನಷ್ಟದ ಲೆಕ್ಕ ಹಾಕದೆ ಈ ವರ್ಗಗಳ ಪರವಾಗಿ ಬಂಡೆಯಂತೆ ನಿಂತಿದ್ದಾರೆ. ಹೀಗಾಗಿ ಅವರನ್ನು ದಲಿತ–ಹಿಂದುಳಿದ ವರ್ಗಗಳ ನಾಯಕ ಎಂದೇ ಕರೆಯಲಾಗುತ್ತಿದೆ. ಆದರೆ, ಬಿಜೆಪಿಯವರು ಖರ್ಗೆ ಮೇಲ್ವರ್ಗದ ವಿರೋಧಿ ಎಂಬಂತೆ ಬಿಂಬಿಸುವ ಕೆಲಸವನ್ನು ವ್ಯವಸ್ಥಿತವಾಗಿಯೇ ಮಾಡುತ್ತಿದೆ. ಈ ಕಾರಣಕ್ಕಾಗಿಯೇ ಅವರು ರಾಜಕೀಯವಾಗಿ ಕಳೆದುಕೊಂಡಿದ್ದೂ (ಮುಖ್ಯಮಂತ್ರಿ ಆಗಲಿಲ್ಲ) ಉಂಟು’ ಎನ್ನುತ್ತಾರೆ ಅವರ ಆಪ್ತರೊಬ್ಬರು.

‘ರಾಮೃಕೃಷ್ಣ ಹೆಗಡೆ ಅವರ ನಂತರ ಲಿಂಗಾಯತರ ನಾಯಕರಾಗಿ ಹೊರಹೊಮ್ಮಿರುವ ಬಿ.ಎಸ್‌.ಯಡಿಯೂರಪ್ಪ, ಕಲಬುರ್ಗಿ ಜಿಲ್ಲೆಯ ಲಿಂಗಾಯತರಿಗೂ ನಾಯಕತ್ವ ಕೊಟ್ಟಿದ್ದಾರೆ. ಈ ಕಾರಣಕ್ಕಾಗಿಯೇ ಅವರು ಈ ಭಾಗದಲ್ಲಿ ಪ್ರಭಾವ ಹೊಂದಿದ್ದು, ಕೆಜೆಪಿ ಸ್ಥಾಪಿಸಿದ್ದಾಗ ಕಲಬುರ್ಗಿ ಮತ್ತು ಯಾದಗಿರಿಯಲ್ಲಿ ತಲಾ ಒಂದು ಸ್ಥಾನ ಗೆದ್ದಿದ್ದರು’ ಎನ್ನುತ್ತಾರೆ ಆ ಪಕ್ಷದ ಲಿಂಗಾಯತ ನಾಯಕರೊಬ್ಬರು.

12ರಂದು ಸಮಾವೇಶ: ‘ಗುಲಬರ್ಗಾ’ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮಲ್ಲಿಕಾರ್ಜುನ ಖರ್ಗೆ ಗೆಲ್ಲಿಸಲು ಕಾಂಗ್ರೆಸ್‌ ಪಕ್ಷವು ವೀರಶೈವ ಲಿಂಗಾಯತ ಸಮುದಾಯದ ಸಮಾವೇಶವನ್ನು ಏ.12ರಂದು ನಗರದಲ್ಲಿ ಆಯೋಜಿಸಿದೆ.

ಪ್ರತ್ಯೇಕ ಲಿಂಗಾಯತ ಧರ್ಮಕ್ಕೆ ಆಗ್ರಹಿಸಿ ನಡೆದ ಹೋರಾಟದ ನೇತೃತ್ವ ವಹಿಸಿದ್ದ ಈಗಿನ ಗೃಹ ಸಚಿವ ಎಂ.ಬಿ. ಪಾಟೀಲ, ‘ವೀರಶೈವ–ಲಿಂಗಾಯತವೇ ಇರಲಿ. ಪ್ರತ್ಯೇಕ ಧರ್ಮ ಬೇಡ’ ಎಂದು ಪ್ರತಿಪಾದಿಸಿದ ಅಖಿಲ ಭಾರತ ಲಿಂಗಾಯತ ವೀರಶೈವ ಮಹಾಸಭಾದ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ, ಭೀಮಣ್ಣ ಖಂಡ್ರೆ, ಈಶ್ವರ ಖಂಡ್ರೆ, ಅಲ್ಲಂ ವೀರಭದ್ರಪ್ಪ ಅವರನ್ನು ಈ ಸಮಾವೇಶಕ್ಕೆ ಆಹ್ವಾನಿಸಲಾಗಿದೆ. ಇದಕ್ಕೆ ಪೂರ್ವಭಾವಿಯಾಗಿ ಸಭೆಗಳನ್ನೂ ನಡೆಸಲಾಗುತ್ತಿದೆ. 

‘ಲಿಂಗಾಯತ ಪ್ರತ್ಯೇಕ ಧರ್ಮಕ್ಕೆ ಆಗ್ರಹಿಸಿ ಹೋರಾಟ ನಡೆದ ಸಮಯದಲ್ಲಿ ಮಲ್ಲಿಕಾರ್ಜುನ ಖರ್ಗೆ ತಟಸ್ಥರಾಗಿದ್ದರು. ತಮ್ಮ ಶಿಷ್ಯ, ಅಂದಿನ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ ಈ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದರೂ ಸಹ ಈ ವಿಷಯದಲ್ಲಿ ಅವರು ಅಂತರ ಕಾಯ್ದುಕೊಂಡಿದ್ದರು. ಖರ್ಗೆ ಅವರ ಜಾತ್ಯತೀತ ನಿಲುವನ್ನು ಸಮುದಾಯಗಳಿಗೆ ಮನವರಿಕೆ ಮಾಡಿಕೊಟ್ಟು, ಅವರನ್ನು ಮತ್ತೆ ಗೆಲ್ಲಿಸಲು ಎಲ್ಲರೂ ಕೈಜೋಡಿಸುವಂತೆ ಮಾಡುವುದು ಈ ಸಮಾವೇಶದ ಉದ್ದೇಶ’ ಎನ್ನುತ್ತಾರೆ ಸಂಘಟಕರು.

‘ಖರ್ಗೆ ಇದನ್ನು ಮಾಡಿಸುತ್ತಿಲ್ಲ. ಕಾಂಗ್ರೆಸ್‌ನಲ್ಲಿರುವ ವೀರಶೈವ–ಲಿಂಗಾಯತ ಮುಖಂಡರು ಸೇರಿ ಮಾಡುತ್ತಿದ್ದೇವೆ. ಅಪಪ್ರಚಾರದ ವಿರುದ್ಧ ಸಮುದಾಯದಲ್ಲಿ ಜಾಗೃತಿ ಮೂಡಿಸಿ, ಅಭಿವೃದ್ಧಿಗಾಗಿ ಖರ್ಗೆ ಮತ್ತೆ ಗೆಲ್ಲಿಸುವುದು ಉದ್ದೇಶ’ ಎನ್ನುತ್ತಾರೆ ಸಭೆಯ  ಸಂಘಟಕರಲ್ಲೊಬ್ಬರಾದ ಮಾಜಿ ಶಾಸಕ ಬಿ.ಆರ್‌. ಪಾಟೀಲ.

*
ಖರ್ಗೆ ಜೊತೆ ಕೇವಲ ದಲಿತರು ಇದ್ದು, ಲಿಂಗಾಯತ ಸಮುದಾಯ ಇಲ್ಲ ಎಂದು ಆರ್‌ಎಸ್‌ಎಸ್‌ನವರು ಅಪಪ್ರಚಾರ ಮಾಡುತ್ತಿದ್ದಾರೆ. ಹೀಗಾಗಿ ಈ ಸಭೆ
-ಬಿ.ಆರ್‌.ಪಾಟೀಲ, ಮಾಜಿ ಶಾಸಕ

ಬರಹ ಇಷ್ಟವಾಯಿತೆ?

 • 6

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !