‘ಮುಖಂಡರ ವಿರುದ್ಧ ಕ್ರಮ ಕೈಗೊಂಡರೆ ಪಕ್ಷದ ಅವನತಿ’

ಶುಕ್ರವಾರ, ಏಪ್ರಿಲ್ 26, 2019
35 °C
ಹೈಕಮಾಂಡ್‌ಗೆ ಕಾಂಗ್ರೆಸ್‌ ನಾಯಕರ ಸಂದೇಶ

‘ಮುಖಂಡರ ವಿರುದ್ಧ ಕ್ರಮ ಕೈಗೊಂಡರೆ ಪಕ್ಷದ ಅವನತಿ’

Published:
Updated:

ನವದೆಹಲಿ: ಮಂಡ್ಯ, ತುಮಕೂರು ಮತ್ತು ಹಾಸನ ಕ್ಷೇತ್ರಗಳಲ್ಲಿ ಮಿತ್ರ ಪಕ್ಷವಾದ ಜೆಡಿಎಸ್‌ ಪರ ಪ್ರಚಾರದಲ್ಲಿ ಭಾಗವಹಿಸದ ಮುಖಂಡರ ವಿರುದ್ಧ ಕಠಿಣ ಕ್ರಮ ಕೈಗೊಂಡರೆ ಪಕ್ಷದ ಅವನತಿಗೆ ನಾಂದಿ ಹಾಡಿದಂತಾಗುತ್ತದೆ ಎಂದು ಕಾಂಗ್ರೆಸ್‌ ರಾಜ್ಯ ನಾಯಕರು ಪಕ್ಷದ ಹೈಕಮಾಂಡ್‌ಗೆ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.

ಉಭಯ ಪಕ್ಷಗಳ ಮುಖಂಡರ ನಿರ್ಧಾರದಂತೆಯೇ ಕ್ಷೇತ್ರಗಳನ್ನು ಹಂಚಿಕೊಳ್ಳಲಾಗಿದೆ. ಆದರೂ ಕೆಲವರು ಜೆಡಿಎಸ್‌ ಪರ ಪ್ರಚಾರಕ್ಕೆ ಬರುತ್ತಿಲ್ಲ. ಅಂಥವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ ಅವರು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಹಾಗೂ ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ್‌ ಅವರಿಗೆ ದೂರು ಸಲ್ಲಿಸಿರುವ ಹಿನ್ನೆಲೆಯಲ್ಲಿ ಈ ಸಂದೇಶ ನೀಡಲಾಗಿದೆ.

‘ಕೆಲವು ಮುಖಂಡರು ಈ ಮೂರೂ ಕ್ಷೇತ್ರಗಳಲ್ಲಿ ಜೆಡಿಎಸ್‌ ವಿರುದ್ಧ ಕೆಲಸ ಮಾಡುತ್ತಿದ್ದಾರೆ. ಕೂಡಲೇ ಗಮನಹರಿಸುವ ಮೂಲಕ ಪ್ರಚಾರದಲ್ಲಿ ಪಾಲ್ಗೊಳ್ಳುವಂತೆ ನೋಡಿಕೊಳ್ಳಿ’ ಎಂದು ದೇವೇಗೌಡ ಮನವಿ ಮಾಡಿದ್ದಾರೆ. ಆದರೆ, ರಾಜ್ಯ ಮುಖಂಡರ ಸಲಹೆಯ ಮೇರೆಗೆ ಕ್ರಮ ಕೈಗೊಳ್ಳದಿರಲು ಹೈಕಮಾಂಡ್‌ ನಿರ್ಧರಿಸಿದೆ ಎಂದು ಕಾಂಗ್ರೆಸ್‌ನ ಹಿರಿಯ ಮುಖಂಡರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಜೆಡಿಎಸ್‌ ಪರ ಪ್ರಚಾರ ಮಾಡುವಂತೆ ಶಾಸಕರು, ಮಾಜಿ ಶಾಸಕರಿಗೆ ನಿರ್ದೇಶನ ನೀಡಬಹುದು. ಆದರೆ, ಜಿಲ್ಲಾ ಮಟ್ಟದ ಮುಖಂಡರು, ಕಾರ್ಯಕರ್ತರಿಗೆ ಯಾವುದೇ ರೀತಿಯ ಸೂಚನೆ ನೀಡಿದರೆ ಕಾಂಗ್ರೆಸ್‌ ಸ್ಥಿತಿ ಹದಗೆಡಲಿದೆ ಎಂಬ ಅಭಿಪ್ರಾಯಗಳು ವ್ಯಕ್ತವಾಗಿವೆ. ಹಾಗಾಗಿ ಯಾವುದೇ ಕ್ರಮ ಕೈಗೊಳ್ಳುವುದು ಅಸಾಧ್ಯ ಎಂಬ ಸಂದೇಶವನ್ನು ಜೆಡಿಎಸ್‌ ಮುಖಂಡರಿಗೆ ರವಾನಿಸಲಾಗಿದೆ ಎಂದು ಅವರು ಹೇಳಿದ್ದಾರೆ.

‘ಹಳೆ ಮೈಸೂರು ಭಾಗವು ಜೆಡಿಎಸ್‌ನಂತೆಯೇ ಕಾಂಗ್ರೆಸ್‌ನ ನೆಲೆಯೂ ಆಗಿದೆ. ಮೊದಲಿನಿಂದ ಎರಡೂ ಪಕ್ಷಗಳ ಬೆಂಬಲಿಗರ ನಡುವೆ ವೈರತ್ವ ಇದೆ. ಒಂದೊಮ್ಮೆ ನಮ್ಮದೇ ಮುಖಂಡರ ವಿರುದ್ಧ ಕ್ರಮಕ್ಕೆ ಮುಂದಾದರೆ ಅವರು ಬಿಜೆಪಿಗೆ ಸೇರ್ಪಡೆಯಾಗುವ ಅಪಾಯ ಇದೆ. ಇದರಿಂದ ಬಿಜೆಪಿಗೇ ನೆರವಾಗಲಿದೆ ಎಂಬ ಅಂಶವನ್ನು ರಾಜ್ಯ ಮುಖಂಡರು ಸ್ಪಷ್ಟಪಡಿಸಿದ್ದಾರೆ ಎಂದು ಅವರು ವಿವರಿಸಿದ್ದಾರೆ.

ಮೈಸೂರು, ಚಿಕ್ಕಬಳ್ಳಾಪುರ, ಕೋಲಾರ ಮತ್ತಿತರ ಕ್ಷೇತ್ರಗಳಲ್ಲಿ ಜೆಡಿಎಸ್‌ ಮುಖಂಡರು, ಕಾರ್ಯಕರ್ತರು ಕಾಂಗ್ರೆಸ್‌ ಅಭ್ಯರ್ಥಿಗಳ ಜಯಕ್ಕೆ ಸಹಕರಿಸುತ್ತಿಲ್ಲ ಎಂಬ ಕುರಿತೂ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ವರಿಷ್ಠರಿಗೆ ಮನವರಿಕೆ ಮಾಡಿದ್ದಾರೆ ಎಂದು ಅವರು ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !