ಕೋಲಾರ: ‘ಕೈ’ ಕೋಟೆಯಲ್ಲಿ ಗೆಲುವಿಗೆ ‘ಕಮಲ’ ತುಡಿತ

ಮಂಗಳವಾರ, ಏಪ್ರಿಲ್ 23, 2019
31 °C
ಜೀವಜಲದ ಸುತ್ತವೇ ರಾಜಕೀಯ ಗಿರಕಿ‌

ಕೋಲಾರ: ‘ಕೈ’ ಕೋಟೆಯಲ್ಲಿ ಗೆಲುವಿಗೆ ‘ಕಮಲ’ ತುಡಿತ

Published:
Updated:

ಕೋಲಾರ: ಬರವನ್ನೇ ಹೊದ್ದು ಮಲಗಿರುವ ಜಿಲ್ಲೆಯಲ್ಲಿ ಜನ ಜೀವಜಲದ ಕನವರಿಕೆಯಲ್ಲೇ ಮತ್ತೊಂದು ಲೋಕಸಭಾ ಚುನಾವಣೆಗೆ ಮುಖಾಮುಖಿಯಾಗಿದ್ದಾರೆ. ಜೀವಜಲದ ಸುತ್ತ ರಾಜಕೀಯ ಗಿರಕಿ ಹೊಡೆಯುತ್ತಿದ್ದು, ನೀರಿನ ವಿಚಾರವಾಗಿ ಪಕ್ಷಗಳ ನಡುವೆ ಕೆಸರೆರಚಾಟ ಜೋರಾಗಿದೆ.

ಕ್ಷೇತ್ರದಲ್ಲಿ ಪಕ್ಷಗಳು ಸವಕಲು ನೀರಾವರಿ ಯೋಜನೆಗಳನ್ನು ಪ್ರಸ್ತಾಪಿಸುತ್ತಾ ಮತ ಬೇಟೆ ಆರಂಭಿಸಿವೆ. ಕ್ಷೇತ್ರದಲ್ಲಿ ದಲಿತ, ಮುಸ್ಲಿಂ ಮತ್ತು ಒಕ್ಕಲಿಗ ಸಮುದಾಯದ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.

ಮಾವಿನ ತೋಪುಗಳಲ್ಲಿ, ಹೋಟೆಲ್‌ಗಳಲ್ಲಿ, ರಸ್ತೆ ಬದಿಯ ಚಹಾ ಅಂಗಡಿಗಳಲ್ಲಿ ಈಗ ಚುನಾವಣೆಯದೇ ಚರ್ಚೆ. ಮತದಾನಕ್ಕೆ ದಿನಗಣನೆ ಆರಂಭವಾಗಿದ್ದು, ಮತದಾರರ ಮನದಲ್ಲಿ ರಾಜಕೀಯ ಲೆಕ್ಕಾಚಾರಗಳು ರಿಂಗಣಿಸುತಿವೆ.

ಕಾಂಗ್ರೆಸ್‌ನ ಭದ್ರಕೋಟೆಯಾಗಿರುವ ಕ್ಷೇತ್ರದಲ್ಲಿ ಈವರೆಗೆ ನಡೆದಿರುವ 16 ಚುನಾವಣೆಗಳಲ್ಲಿ 15 ಬಾರಿ ‘ಕೈ’ ಪಾಳಯ ಮೇಲುಗೈ ಸಾಧಿಸಿದೆ. ಒಂದು ಬಾರಿ ಜನತಾ ಪಕ್ಷ (ಜೆಎನ್‌ಪಿ) ಗೆಲುವಿನ ನಗೆ ಬೀರಿದೆ. ಕೇಸರಿ ಪಡೆ ಈವರೆಗೆ ಗೆಲುವಿನ ಖಾತೆ ತೆರೆದಿಲ್ಲ. ಪಕ್ಷೇತರ ಅಭ್ಯರ್ಥಿಗಳಿಗೂ ವಿಜಯಲಕ್ಷ್ಮಿ ಒಲಿದಿಲ್ಲ.

ಮುನಿಯಪ್ಪ ಪಾರುಪತ್ಯ: 1991ರಿಂದ 2014ರವರೆಗೆ ನಡೆದ ಚುನಾವಣೆಗಳಲ್ಲಿ ಕೈ ಪಾಳಯದ ಕೆ.ಎಚ್‌.ಮುನಿಯಪ್ಪ ಅವರದೇ ಪಾರುಪತ್ಯ. 8ನೇ ಜಯದ ನಿರೀಕ್ಷೆಯಲ್ಲಿರುವ ಅವರಿಗೆ ಹಿತಶತ್ರುಗಳ ಕಾಟ ಹೆಚ್ಚಿದೆ. ಸ್ವಪಕ್ಷೀಯರೇ ಅವರ ವಿರುದ್ಧ ತೊಡೆ ತಟ್ಟಿದ್ದಾರೆ. ಅವರಿಗೆ ಟಿಕೆಟ್‌ ತಪ್ಪಿಸುವ ಪ್ರಯತ್ನದಲ್ಲಿ ವಿಫಲವಾಗಿರುವ ಪಕ್ಷದೊಳಗಿನ ಎದುರಾಳಿ ಬಣ ಒಳಗೊಳಗೆ ಬಿಜೆಪಿ ಅಭ್ಯರ್ಥಿಯ ಕೈ ಕುಲುಕಿದೆ.

ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರವಿರುವ ಕಾರಣಕ್ಕೆ ಮೈತ್ರಿ ಧರ್ಮ ಪಾಲನೆಯ ಅನಿವಾರ್ಯತೆಗೆ ಕಟ್ಟುಬಿದ್ದಿರುವ ಜೆಡಿಎಸ್‌ ವರಿಷ್ಠರು ಪಕ್ಷದ ಅಭ್ಯರ್ಥಿಯನ್ನು ಕಣಕ್ಕಿಳಿಸದೆ ಕಾಂಗ್ರೆಸ್‌ಗೆ ಬೆಂಬಲ ಘೋಷಿಸಿದ್ದಾರೆ. ಜೆಡಿಎಸ್‌ನಲ್ಲಿ ಬಣಗಳು ಸೃಷ್ಟಿಯಾಗಿದ್ದು, ಒಂದು ಬಣ ಮೈತ್ರಿ ಧರ್ಮದ ಪರ, ಮತ್ತೊಂದು ಬಣ ಕೋಲಾರದ ಜೆಡಿಎಸ್ ಶಾಸಕ ಕೆ.ಶ್ರೀನಿವಾಸಗೌಡರ ನೇತೃತ್ವದಲ್ಲಿ ಬಂಡಾಯದ ಕಹಳೆ ಮೊಳಗಿಸಿದೆ.

ಒಗ್ಗೂಡಿದ ವಿರೋಧಿಗಳು: ಕಾಂಗ್ರೆಸ್‌, ಬಿಜೆಪಿ ಹಾಗೂ ಜೆಡಿಎಸ್‌ನಲ್ಲಿರುವ ಮುನಿಯಪ್ಪರ ವಿರೋಧಿಗಳೆಲ್ಲಾ ಪಕ್ಷಭೇದ ಮರೆತು ಒಗ್ಗೂಡಿದ್ದಾರೆ. ರಾಜಕೀಯ ಕಾರಣಕ್ಕೆ ಮುನಿಯಪ್ಪ ವಿರುದ್ಧ ಮುನಿದಿರುವ ಜೆಡಿಎಸ್‌ ಹಾಗೂ ಕೈ ಪಾಳಯದ ಹಾಲಿ– ಮಾಜಿ ಶಾಸಕರೇ ಬಿಜೆಪಿ ಅಭ್ಯರ್ಥಿ ಪರ ಬಹಿರಂಗ ಪ್ರಚಾರ ನಡೆಸುತ್ತಿದ್ದಾರೆ. ಸ್ವಪಕ್ಷೀಯ ಶಾಸಕರ ಕ್ಷೇತ್ರಗಳಲ್ಲೇ ಮುನಿಯಪ್ಪಗೆ ವಿರೋಧದ ಬಿಸಿ ತಟ್ಟಿದೆ.

ಕಾಂಗ್ರೆಸ್‌ ಹಾಗೂ ಜೆಡಿಎಸ್‌ ನಾಯಕರು ಕವಲು ದಾರಿಯಲ್ಲಿ ಸಾಗಿದ್ದು, ಪ್ರಚಾರ ಹಳಿ ತಪ್ಪಿದೆ. ಮುಖಂಡರ ಮುಸುಕಿನ ಗುದ್ದಾಟದಿಂದ ಉಭಯ ಪಕ್ಷಗಳ ವರಿಷ್ಠರು ಹೈರಾಣಾಗಿದ್ದು, ಆಂತರಿಕ ಬೇಗುದಿ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಕಣದಲ್ಲಿ ಜೆಡಿಎಸ್‌ ಅಭ್ಯರ್ಥಿ ಇಲ್ಲದಿರುವುದು ಕಾಂಗ್ರೆಸ್‌ ಸ್ಪಲ್ಪ ಮಟ್ಟಿಗೆ ನಿರಾಳವಾಗಿದೆ. ಮತ ವಿಭಜನೆ ಸಾಧ್ಯತೆ ಕಡಿಮೆ ಎಂದು ಅಂದಾಜಿಸಿರುವ ಕೈ ನಾಯಕರು ಪಕ್ಷದ ಅಭ್ಯರ್ಥಿಯ ಗೆಲುವಿನ ಹಾದಿ ಸುಗಮವೆಂಬ ಉಮೇದಿನಲ್ಲಿದ್ದಾರೆ.

ಕಮಲಕ್ಕೂ ಬಿಸಿ: ಕಾಂಗ್ರೆಸ್‌ ಮತ್ತು ಬಿಜೆಪಿ ನಡುವೆ ನೇರ ಹಣಾಹಣಿ ಇದ್ದು, ಕಮಲ ಪಾಳಯವು ಕಾಂಗ್ರೆಸ್‌ನ ಒಳ ಜಗಳದ ಲಾಭ ಪಡೆದು ಮುನಿಯಪ್ಪರ ಗೆಲುವಿನ ಓಟಕ್ಕೆ ಕಡಿವಾಣ ಹಾಕಲು ರಣತಂತ್ರ ರೂಪಿಸಿದೆ. ಕೇಸರಿ ಪಡೆ ಅಭ್ಯರ್ಥಿ ಎಸ್‌.ಮುನಿಸ್ವಾಮಿ ಮುಖಂಡರೊಂದಿಗೆ ಕ್ಷೇತ್ರದಲ್ಲಿ ಮಿಂಚಿನ ಸಂಚಾರ ನಡೆಸುತ್ತಿದ್ದಾರೆ.

ಬಿಜೆಪಿಯ ಟಿಕೆಟ್‌ ಕೈತಪ್ಪಿದ ಕಾರಣಕ್ಕೆ ಅಸಮಾಧಾನಗೊಂಡಿರುವ ಡಿ.ಎಸ್‌.ವೀರಯ್ಯ, ಚಲವಾದಿ ನಾರಾಯಣಸ್ವಾಮಿ, ಚಿ.ನಾ.ರಾಮು ಪ್ರಚಾರದಿಂದ ಅಂತರ ಕಾಯ್ದುಕೊಂಡಿದ್ದಾರೆ. ವರಿಷ್ಠರು ಬಂಡಾಯ ಶಮನಕ್ಕೆ ತೆರೆಮರೆಯ ಕಸರತ್ತು ನಡೆಸಿದ್ದು, ಕೇಸರಿ ಪಡೆಯು ಕ್ಷೇತ್ರದಲ್ಲಿ ಜಯದ ಖಾತೆ ತೆರೆಯುವ ಕನಸು ಕಾಣುತ್ತಿದೆ.

**

ಚುನಾವಣೆ ವೇಳೆ ಭಿನ್ನಾಭಿಪ್ರಾಯ ಸಹಜ. ಸ್ವಪಕ್ಷೀಯ ಮುಖಂಡರು ಮುನಿದಿದ್ದಾರೆ. ಸದ್ಯದಲ್ಲೇ ಗೊಂದಲ ನಿವಾರಣೆಯಾಗಿ ಮುಖಂಡರೆಲ್ಲಾ ನನ್ನ ಗೆಲುವಿಗೆ ಶ್ರಮಿಸುತ್ತಾರೆ
- ಕೆ.ಎಚ್‌.ಮುನಿಯಪ್ಪ, ಕಾಂಗ್ರೆಸ್‌ ಅಭ್ಯರ್ಥಿ

**

ಮುನಿಯಪ್ಪ ಕ್ಷೇತ್ರ ಅಭಿವೃದ್ಧಿಪಡಿಸುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ. ಅವರ ವೈಫಲ್ಯವೇ ನನಗೆ ಚುನಾವಣಾ ಅಸ್ತ್ರ. ಈ ಅಸ್ತ್ರದಿಂದಲೇ ಗೆಲುವು ಸಾಧಿಸುತ್ತೇನೆ 
- ಎಸ್‌.ಮುನಿಸ್ವಾಮಿ, ಬಿಜೆಪಿ ಅಭ್ಯರ್ಥಿ

ಬರಹ ಇಷ್ಟವಾಯಿತೆ?

 • 5

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !