ಶುಕ್ರವಾರ, ನವೆಂಬರ್ 22, 2019
26 °C
ಚುನಾವಣೆ ಹೊಸ್ತಿಲಿನಲ್ಲಿ ಮೂಲಸೌಕರ್ಯ, ನೀರಾವರಿ ಯೋಜನೆಗೆ ಅಸ್ತು

‘ವಿಜಯ’ನಗರಕ್ಕೆ ಅನುದಾನದ ಹೊಳೆ: ಉಪ ಚುನಾವಣೆಯಲ್ಲಿ ಗೆಲ್ಲುವುದೇ ಗುರಿ

Published:
Updated:

ಹೊಸಪೇಟೆ: ಚುನಾವಣೆ ಹೊಸ್ತಿಲಲ್ಲಿರುವ ವಿಜಯನಗರ ಕ್ಷೇತ್ರದಲ್ಲಿ ಶತಾಯ ಗತಾಯ ಗೆಲ್ಲಲೇಬೇಕೆಂಬ ಇರಾದೆಯಿಂದ ರಾಜ್ಯ ಸರ್ಕಾರವು ಕ್ಷೇತ್ರಕ್ಕೆ ಅನುದಾನದ ಹೊಳೆಯನ್ನೇ ಹರಿಸುತ್ತಿದೆ.

ಈ ತಿಂಗಳ ಮೊದಲ ವಾರದಲ್ಲಿ ಕ್ಷೇತ್ರದ ಗ್ರಾಮೀಣ ಭಾಗದ ರಸ್ತೆ, ಕಿರುಸೇತುವೆಗಳ ನಿರ್ಮಾಣಕ್ಕೆ ಸರ್ಕಾರ ₹40 ಕೋಟಿ ಬಿಡುಗಡೆ ಮಾಡಿ, ಕಾಮಗಾರಿಗೆ ಚಾಲನೆ ಕೊಟ್ಟಿತ್ತು. ಅದಾದ ಒಂದು ವಾರದ ನಂತರ ₹243.35 ಕೋಟಿ ವೆಚ್ಚದ ನೀರಾವರಿ ಯೋಜನೆಗೆ ಆಡಳಿತಾತ್ಮಕ ಒಪ್ಪಿಗೆ ಕೊಟ್ಟಿದೆ. ಮೊದಲ ಹಂತದಲ್ಲಿ ₹75 ಕೋಟಿ ಬಿಡುಗಡೆಗೆ ಮುಂದಾಗಿದೆ.

ತುಂಗಭದ್ರಾ ನದಿಯಿಂದ ನೀರನ್ನೆತ್ತಿ 18 ಕೆರೆ, ನಾಲ್ಕು ಚೆಕ್‌ ಡ್ಯಾಂಗಳನ್ನು ಭರ್ತಿ ಮಾಡಿ, ಕೃಷಿ, ಕುಡಿಯುವ ನೀರಿಗೆ ವ್ಯವಸ್ಥೆ ಕಲ್ಪಿಸುವ ಯೋಜನೆ ಇದಾಗಿದೆ. ಇದರಿಂದ ತಾಲ್ಲೂಕಿನ ಹನ್ನೊಂದು ಮಳೆಯಾಶ್ರಿತ ಗ್ರಾಮಗಳಿಗೆ ಅನುಕೂಲವಾಗಲಿದೆ.

ನೀರಾವರಿ ಯೋಜನೆ ಜಾರಿಗೆ ತರಬೇಕೆಂದು ಹನ್ನೊಂದು ಗ್ರಾಮಗಳ ರೈತರು ದಶಕಗಳಿಂದ ಹೋರಾಟ ನಡೆಸುತ್ತಿದ್ದಾರೆ. ಬೇರೆ ಬೇರೆ ಪಕ್ಷಗಳ ಸರ್ಕಾರಗಳು ಬಂದರೂ ಯೋಜನೆ ಜಾರಿಗೆ ಮುಂದಾಗಿರಲಿಲ್ಲ. ಕ್ಷೇತ್ರದಿಂದ ಸ್ವತಃ ಮೂರು ಸಲ ಶಾಸಕರಾಗಿ ಆಯ್ಕೆಯಾದರೂ (ಎರಡು ಸಲ ಬಿಜೆಪಿ, ಒಂದು ಸಲ ಕಾಂಗ್ರೆಸ್‌ನಿಂದ) ಆನಂದ್‌ ಸಿಂಗ್‌ ಆಸಕ್ತಿ ತೋರಿರಲಿಲ್ಲ ಎಂಬ ಆರೋಪವಿದೆ.

‘ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಆನಂದ್‌ ಸಿಂಗ್‌ ನೀರಾವರಿ ಯೋಜನೆ ಜಾರಿಗೊಳಿಸುವ ಭರವಸೆ ನೀಡಿದ್ದರು. ಆದರೆ, ಒಂದೂವರೆ ವರ್ಷ ಅದರ ಬಗ್ಗೆ ಚಕಾರ ಎತ್ತಿರಲಿಲ್ಲ. ಈ ಕುರಿತು ರೈತರು ಅನೇಕ ಸಲ ಅಸಮಾಧಾನ ಹೊರಹಾಕಿ ಪ್ರತಿಭಟನೆ ಮಾಡಿದ್ದರು. ರೈತರ ಕೋಪ ಶಮನಗೊಳಿಸಿ, ಚುನಾವಣೆಯಲ್ಲಿ ಲಾಭ ಪಡೆಯುವ ಉದ್ದೇಶದಿಂದ ನೀರಾವರಿ ಯೋಜನೆಗೆ ಅನುದಾನ ಮಂಜೂರು ಮಾಡಿಸಿಕೊಂಡು ಬಂದಿದ್ದಾರೆ’ ಎಂಬುದು ರೈತರ ಆರೋಪವಾಗಿದೆ.

‘ರೈತರು ದಶಕಗಳಿಂದ ಹೋರಾಟ ನಡೆಸುತ್ತಿದ್ದರೂ ಆನಂದ್‌ ಸಿಂಗ್‌ ಒಮ್ಮೆಯೂ ಸದನದಲ್ಲಾಗಲಿ, ಅದರ ಹೊರಗಾಗಲಿ ನೀರಾವರಿ ಯೋಜನೆ ಬಗ್ಗೆ ಮಾತಾಡಿರಲಿಲ್ಲ. ಇತ್ತೀಚೆಗೆ ರೈತರು ಬೃಹತ್‌ ಪ್ರತಿಭಟನೆ ಮಾಡಿದ್ದರು. ಅದರ ಕಾವು ತಣ್ಣಗಾಗಿಸಲು ಯೋಜನೆಗೆ ಅನುಮೋದನೆ ಮಾಡಿಸಿಕೊಂಡು ಬಂದಿದ್ದಾರೆ’ ಎಂದು ರೈತ ಬಸವರಾಜ ಹೇಳಿದರು.

ಉಪಚುನಾವಣೆಯಲ್ಲಿ ಲಾಭ ಪಡೆಯುವ ಉದ್ದೇಶದಿಂದ ವಿಜಯನಗರ ಜಿಲ್ಲೆ ಮಾಡಬೇಕೆಂಬ ವಿಷಯವನ್ನು ಮುಂಚೂಣಿಗೆ ತಂದಿದ್ದಾರೆ ಎಂಬ ಆರೋಪವೂ ಸಿಂಗ್‌ ಮೇಲಿದೆ. ಜಿಲ್ಲೆ ಕುರಿತು ಜನಾಭಿಪ್ರಾಯ ರೂಪಿಸಲು ಕ್ಷೇತ್ರದಾದ್ಯಂತ ಪುಸ್ತಕಗಳನ್ನು ಹಂಚುತ್ತಿದ್ದಾರೆ. ಆ ಕುರಿತು ವಿಡಿಯೊ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ.

ವಿಜಯನಗರ ಜಿಲ್ಲೆ ರಚನೆ, ಜಿಂದಾಲ್‌ಗೆ ಭೂ ಪರಭಾರೆ ಮಾಡದಿರಲು ಆಗ್ರಹಿಸಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಆನಂದ್‌ ಸಿಂಗ್‌ ಅವರನ್ನು ಸ್ಪೀಕರ್‌ ಅನರ್ಹಗೊಳಿಸಿದ್ದರು. ನ್ಯಾಯಾಲಯದಲ್ಲಿ ಇನ್ನಷ್ಟೇ ಪ್ರಕರಣ ಇತ್ಯರ್ಥಗೊಳ್ಳಬೇಕಿದೆ. ಆದರೆ, ಬಿಜೆಪಿಯಿಂದ ಚುನಾವಣೆಯಲ್ಲಿ ಸ್ಪರ್ಧಿಸಲು ಅಗತ್ಯ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ.

ಆರ್‌ಎಸ್‌ಎಸ್‌ಗೆ ಕೋಪ
ಪಕ್ಷ ತೊರೆದು ಹೋದವರಿಗೆ ಪುನಃ ಮಣೆ ಹಾಕಿರುವುದಕ್ಕೆ ಸ್ಥಳೀಯ ಆರ್‌.ಎಸ್‌.ಎಸ್‌. ಮುಖಂಡರು ಬೇಸರಗೊಂಡಿದ್ದಾರೆ. 

‘ಆನಂದ್‌ ಸಿಂಗ್‌ ಪಕ್ಷಕ್ಕೆ ದ್ರೋಹ ಮಾಡಿದ್ದಾರೆ. ಅಂಥವರನ್ನು ಪುನಃ ಪಕ್ಷಕ್ಕೆ ಸೇರಿಸಿಕೊಂಡು ಟಿಕೆಟ್‌ ಕೊಡಲು ಮುಂದಾಗಿರುವುದು ಸರಿಯಲ್ಲ. ಕಳೆದ ಚುನಾವಣೆಯಲ್ಲಿ ಯಾರ ವಿರುದ್ಧ ಕಾರ್ಯಕರ್ತರು ಶ್ರಮಿಸಿದ್ದರೋ ಈಗ ಅವರ ಗೆಲುವಿಗೆ ಕೆಲಸ ಮಾಡಬೇಕು ಎಂದರೆ ಯಾರೂ ಒಪ್ಪುವುದಿಲ್ಲ. ಈ ವಿಷಯವನ್ನು ವರಿಷ್ಠರಿಗೆ ಮನವರಿಕೆ ಮಾಡಿಕೊಟ್ಟಿದ್ದೇವೆ’ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಆರ್‌ಎಸ್‌ಎಸ್‌ ಮುಖಂಡರೊಬ್ಬರು ತಿಳಿಸಿದರು.

ಪ್ರತಿಕ್ರಿಯಿಸಿ (+)