ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಧುಕರ ಶೆಟ್ಟಿ ಪಂಚಭೂತಗಳಲ್ಲಿ ಲೀನ

ದಕ್ಷ ಅಧಿಕಾರಿಯ ಸಾವಿಗೆ ಕಂಬನಿ ಮಿಡಿದ ನಾಗರಿಕರು, ಅಧಿಕಾರಿ ವೃಂದ
Last Updated 30 ಡಿಸೆಂಬರ್ 2018, 20:09 IST
ಅಕ್ಷರ ಗಾತ್ರ

ಉಡುಪಿ: ಐಪಿಎಸ್‌ ಅಧಿಕಾರಿ ಡಾ.ಮಧುಕರ ಶೆಟ್ಟಿ ಅಂತ್ಯಕ್ರಿಯೆ ಭಾನುವಾರ ಮಧ್ಯಾಹ್ನ ಕುಂದಾಪುರ ತಾಲ್ಲೂಕಿನ ಯಡಾಡಿ–ಮತ್ಯಾಡಿ ಗ್ರಾಮದ ರೈ ಫಾರ್ಮ್‌ ಹೌಸ್‌ನಲ್ಲಿ ನೆರವೇರಿತು.

ತಂದೆ ವಡ್ಡರ್ಸೆ ರಘುರಾಮ ಶೆಟ್ಟಿ, ತಾಯಿ ಪ್ರಫುಲ್ಲಾ ಶೆಟ್ಟಿ ಅವರ ಸಮಾಧಿಯ ಪಕ್ಕದಲ್ಲೇ ಮಧುಕರ ಶೆಟ್ಟಿ ಅವರ ಅಂತ್ಯ ಸಂಸ್ಕಾರ ನಡೆಯಿತು. ದಕ್ಷ ಅಧಿಕಾರಿಯ ಸಾವಿಗೆ ಸಾವಿರಾರು ಜನರು ಕಂಬನಿ ಮಿಡಿದರು. ಅಂತ್ಯಕ್ರಿಯೆಗೂ ಮುನ್ನ ಪಾರ್ಥಿವ ಶರೀರವನ್ನು ಸಾರ್ವಜನಿಕರ ದರ್ಶನಕ್ಕೆ ಇಡಲಾಗಿತ್ತು. ಅಂತಿಮ ದರ್ಶನಕ್ಕೆ ಶಿವಮೊಗ್ಗ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಬೆಂಗಳೂರು ಸೇರಿದಂತೆ ಹಲವೆಡೆಗಳಿಂದ ಜನರು ಬಂದಿದ್ದರು.

ಶರೀರದ ಮೇಲೆ ಗೌರವ ಸೂಚಕವಾಗಿ ತ್ರಿವರ್ಣ ಧ್ವಜ ಹೊದಿಸಲಾಗಿತ್ತು. ಹೈದರಾಬಾದ್‌ ಪೊಲೀಸ್ ತರಬೇತಿ ಅಕಾಡೆಮಿಯಿಂದ ಐಪಿಎಸ್‌ ದರ್ಜೆಯ ಅಧಿಕಾರಿಗಳು ಅಂತಿಮ ನಮನ ಸಲ್ಲಿಸಿ ಭಾವುಕರಾದರು.

ರಾಜ್ಯದ ಹಿರಿಯ ಪೊಲೀಸ್‌ ಅಧಿಕಾರಿಗಳು, ಸಚಿವ ಯು.ಟಿ.ಖಾದರ್‌, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ಹಾಲಾಡಿ ಶ್ರೀನಿವಾಸ ಶೆಟ್ಟಿ, ಸುಕುಮಾರ ಶೆಟ್ಟಿ, ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್‌, ಎಸ್‌.ಪಿ ಲಕ್ಷ್ಮಣ ನಿಂಬರಗಿ ಸೇರಿದಂತೆ ಹಲವರು ಅಂತಿಮ ದರ್ಶನ ಪಡೆದರು.

ಬಳಿಕ ಮೂರು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿ ಸಕಲ ಸರ್ಕಾರಿ ಗೌರವ ಸಲ್ಲಿಸಲಾಯಿತು. ನಂತರ ತೋಟದಲ್ಲಿ ತಂದೆಯ ಚಿತೆಗೆ ಪುತ್ರಿ ಸಮ್ಯಾ ಹಾಗೂ ಅಣ್ಣನ ಮಗ ಸಾರಂಗ್ ಅಗ್ನಿಸ್ಪರ್ಶ ಮಾಡಿದರು. ಕರಾವಳಿಯ ಬಂಟ ಸಂಪ್ರದಾಯದ ಪ್ರಕಾರ ವಿಧಿವಿಧಾನಗಳು ನೆರವೇರಿದವು. ಮಧುಕರ ಶೆಟ್ಟಿ ಪತ್ನಿ ಸುವರ್ಣಾ, ಸಹೋದರರಾದ ಮುರಳೀಧರ ಶೆಟ್ಟಿ, ಸುಧಾಕರ ಶೆಟ್ಟಿ ಸೇರಿದಂತೆ ಬಂಧುಬಳಗ ಶೋಕಸಾಗರದಲ್ಲಿ ಮುಳುಗಿತು.

ಸೂರು ಕೊಡಿಸಿದ ಅಧಿಕಾರಿಗೆ ಕೃತಜ್ಞತೆ

ಮಧುಕರ ಶೆಟ್ಟಿ ಚಿಕ್ಕಮಗಳೂರು ಜಿಲ್ಲೆಯ ಎಸ್‌ಪಿ ಆಗಿದ್ದಾಗ ಯಲಗುಡಿಗೆ ಗ್ರಾಮದ ಬಳಿ ಭೂಮಾಲೀಕನೊಬ್ಬನ ಒತ್ತುವರಿ ತೆರವುಗೊಳಿಸಿ ಮೂಲ ನಿವಾಸಿಗಳಿಗೆ ಜಮೀನು ಬಿಡಿಸಿಕೊಟ್ಟಿದ್ದರು. ಆಗ ಜಿಲ್ಲಾಧಿಕಾರಿಯಾಗಿದ್ದವರು ಹರ್ಷ ಗುಪ್ತ. ಈ ಇಬ್ಬರು ಅಧಿಕಾರಿಗಳ ಮೇಲಿನ ಪ್ರೀತಿಗೆ ಜನ ಊರಿನ ಹೆಸರನ್ನು ‘ಗುಪ್ತಶೆಟ್ಟಿಹಳ್ಳಿ’ ಎಂದು ನಾಮಕರಣ ಮಾಡಿದ್ದರು. ಮಧುಕರ ಶೆಟ್ಟಿ ಅವರ ಸಾವಿನ ವಿಚಾರ ತಿಳಿದು ಕೃತಜ್ಞತೆ ಸಲ್ಲಿಸಲು ಗುಪ್ತಶೆಟ್ಟಿಹಳ್ಳಿಯಿಂದ ಗ್ರಾಮಸ್ಥರು ಬಂದಿದ್ದರು. ದಕ್ಷ ಅಧಿಕಾರಿಯ ನೆನೆದು ಕಣ್ಣೀರು ಸುರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT