ಭಾನುವಾರ, ನವೆಂಬರ್ 29, 2020
21 °C
‘ಕರಗೋತ್ಸವ’ದ ಮೂಲಕ ನವರಾತ್ರಿ ಸಂಭ್ರಮ ಆರಂಭ, ಪ್ರವಾಸಿಗರ ಕಲರವ

ಮಡಿಕೇರಿ ದಸರಾಕ್ಕೆ ವಿಧ್ಯುಕ್ತ ಚಾಲನೆ: ಇಂದು ಕರಗಗಳ ನಗರ ಪ್ರದಕ್ಷಿಣೆ

ಆದಿತ್ಯ ಕೆ.ಎ. Updated:

ಅಕ್ಷರ ಗಾತ್ರ : | |

Prajavani

ಮಡಿಕೇರಿ: ಅತ್ತ ‘ಸಾಂಸ್ಕೃತಿಕ ನಗರಿ’ ಮೈಸೂರಿನಲ್ಲಿ ದಸರಾಕ್ಕೆ ಭಾನುವಾರ ಬೆಳಿಗ್ಗೆ ಚಾಲನೆ ಲಭಿಸಿದರೆ, ಇತ್ತ ಸಂಜೆಯ ವೇಳೆಗೆ ‘ಮಂಜಿನ ನಗರಿ’ ಮಡಿಕೇರಿಯಲ್ಲೂ ನವರಾತ್ರಿ ವೈಭ

ವಕ್ಕೆ ವಿಧ್ಯುಕ್ತ ಚಾಲನೆ ದೊರೆಯಿತು.

ದಸರಾಕ್ಕೆ ಚಾಲನೆ ಸಿಗುವುದರೊಂದಿಗೆ ಮಡಿಕೇರಿಯಲ್ಲಿ ನಾಡಿನ ಸಾಂಸ್ಕೃತಿಕ ಸಿರಿಯೂ ತೆರೆದುಕೊಂಡಿತು. ಮಹಿಳಾ ದಸರಾ, ಮಕ್ಕಳ ದಸರಾ, ಯುವ ದಸರಾ, ಕವಿಗೋಷ್ಠಿ, ಆಹಾರ ಮೇಳ ಹಾಗೂ ನೃತ್ಯ ವೈಭವ, ದಶಮಂಟಪಗಳ ಶೋಭಾಯಾತ್ರೆಗೆ ಮಡಿಕೇರಿ ನಗರವು ಸಾಕ್ಷಿಯಾಗಲಿದೆ. ಮಡಿಕೇರಿ ದಸರಾವು ಭಕ್ತಿಭಾವದ ಸಂಗಮವೂ ಹೌದು. ಕಳೆಗುಂದಿದ್ದ ಪ್ರವಾಸೋದ್ಯಮವೂ ಚೇತರಿಕೆಯತ್ತ ದಾಪುಗಾಲು ಇಡುತ್ತಿದ್ದು, ದಸರಾದಲ್ಲಿ ಇನ್ನೂ ಹೆಚ್ಚಿನ ಪ್ರವಾಸಿಗರು ಮಡಿಕೇರಿಯತ್ತ ಬರುವ ನಿರೀಕ್ಷೆಯಿದೆ.

ಇಲ್ಲಿನ ಪಂಪಿನಕೆರೆಯ ಬಳಿಗೆ ಭಾನುವಾರ ಸಂಜೆ 4ಕ್ಕೂ ಮೊದಲು ತಲುಪಿದ ನಾಲ್ಕು ಶಕ್ತಿ ದೇವತೆಗಳ ಕರಗಕ್ಕೆ ವಿಶೇಷ ಪೂಜೆ ಸಲ್ಲಿಸಲಾಯಿತು. ಕಂಚಿ ಕಾಮಾಕ್ಷಿಯಮ್ಮ, ಕೋಟೆ ಮಾರಿಯಮ್ಮ, ದಂಡಿನ ಮಾರಿಯಮ್ಮ, ಕುಂದೂರು ಚೌಟಿ ಮಾರಿಯಮ್ಮ ಕರಗಳಿಗೆ ವಿಶೇಷವಾಗಿ ಹೂವಿನ ಅಲಂಕಾರ ಮಾಡಲಾಗಿತ್ತು. ಅತ್ತ ಸೂರ್ಯ ನಿತ್ಯದ ಕಾಯಕಕ್ಕೆ ವಿರಾಮ ಹಾಕಿ, ಪಶ್ಚಿಮದಲ್ಲಿ ವಿರಮಿಸುತ್ತಿದ್ದಂತೆಯೇ ಮಡಿಕೇರಿಯಲ್ಲಿ ಭಕ್ತಿಭಾವದ ಲೋಕ ಅನಾವರಣಗೊಂಡಿತು. ಈ ಸನ್ನಿವೇಶಕ್ಕೆ ಸ್ಥಳೀಯ ಶಾಸಕರು, ಅಧಿಕಾರಿಗಳು ಹಾಗೂ ದಸರಾ ಸಮಿತಿ ಪದಾಧಿಕಾರಿಗಳು ಸಾಕ್ಷಿಯಾದರು.

ಪೂಜೆಯ ನಂತರ 6ಕ್ಕೆ ಕರಗೋತ್ಸವದ ಮೆರವಣಿಗೆ ಆರಂಭಗೊಂಡಿತು. ರಸ್ತೆಯ ಇಕ್ಕೆಲಗಳಲ್ಲಿ ಭಕ್ತರು ಕರಗಕ್ಕೆ ನಮಿಸಿದರು. ರಸ್ತೆಯುದ್ದಕ್ಕೂ ಅಲಂಕೃತ ದೀಪಗಳ ನಡುವೆ ಕರಗೋತ್ಸವ ಸಾಗಿ ಬಂದಿದ್ದು ವಿಶೇಷ. ರಾತ್ರಿ 8ರ ಸುಮಾರಿಗೆ ಚೌಡೇಶ್ವರಿ ದೇಗುಲ ತಲುಪಿತು. ಅಲ್ಲಿಯೂ ಭಕ್ತರು ಭಕ್ತಿಯಿಂದ ಕರಗಕ್ಕೆ ನಮಿಸಿದರು. ನಂತರ, ರಾತ್ರಿಯ ವೇಳೆಗೆ ಪೇಟೆ ರಾಮಮಂದಿರಕ್ಕೆ ಕರಗ ಬಂದು ತಲುಪಿದವು.

ಇಂದಿನಿಂದ ನಗರ ಪ್ರದಕ್ಷಿಣೆ: ಸೋಮವಾರ ಬೆಳಿಗ್ಗೆಯಿಂದ ನಾಲ್ಕೂ ಕರಗಗಳು ಮನೆ ಮನೆ ಪ್ರದಕ್ಷಿಣೆ ಮಾಡಲಿವೆ. ಅಲ್ಲಿಯೂ ಭಕ್ತರು ವಿಶೇಷ ಪೂಜೆ ಸಲ್ಲಿಸಲಿದ್ದಾರೆ. ಇದು ಹಿಂದಿನಿಂದ ನಡೆದು ಬಂದಿರುವ ಸಂಪ್ರದಾಯ. ಮೊದಲ ದಿನ ಕಂಚಿ ಕಾಮಾಕ್ಷಿಯಮ್ಮ ಕರಗವು, ಗೌಳಿಬೀದಿ ಮುನೀಶ್ವರ ರಸ್ತೆ, ಕುಂದೂರುಮೊಟ್ಟೆ ಚೌಟಿ ಮಾರಿಯಮ್ಮ ದೇವಾಲಯ, ಮೈಸೂರು ರಸ್ತೆ, ಮಂಗಳಾದೇವಿ ನಗರ, ಶಾಂತಿನಿಕೇತನ, ಜಯನಗರ, ಸುದರ್ಶನ ವೃತ್ತದ ಕೆಳಗಿನ ಬಡಾವಣೆ, ಜಲಾಶ್ರಯ ಬಡಾವಣೆ, ಗುಂಡೂರಾವ್ ಕಾಂಪೌಂಡ್, ಬ್ರಾಹ್ಮಣರ ಬೀದಿ, ಅಶ್ವತ್ ಕಟ್ಟೆ, ದೇಚೂರು ಹಾಗೂ ಪುಟಾಣಿ ನಗರ. ಅದೇ ರೀತಿ ಕೋಟೆ ಮಾರಿಯಮ್ಮ ಕರಗವು ಸೋಮವಾರ ಮೈಸೂರು ರಸ್ತೆ, ಶಾಂತಿನಿಕೇತನ, ಜಯನಗರ, ಸುದರ್ಶನ ಬಡಾವಣೆ, ಜಲಾಶ್ರಯ ಬಡಾವಣೆ, ಗುಂಡೂರಾವ್ ಕಾಂಪೌಂಡ್, ಬ್ರಾಹ್ಮಣರ ಬೀದಿ, ಅಶ್ವತ್ ಕಟ್ಟೆ, ದೇಚೂರು ಹಾಗೂ ಪುಟಾಣಿ ನಗರದ ಪ್ರದಕ್ಷಿಣೆ ಹಾಕಲಿದೆ.

ದಂಡಿನ ಮಾರಿಯಮ್ಮ ಕರಗವು ಗೌಳಿಬೀದಿ ಮುನೀಶ್ವರ ದೇವಾಲಯ, ಮೈಸೂರು ರಸ್ತೆ, ಶಾಂತಿನಿಕೇತನ, ಸುದರ್ಶನ ಕೆಳಗಿನ ಬಡಾವಣೆ, ಗುಂಡೂರಾವ್ ಕಾಂಪೌಂಡ್, ಬ್ರಾಹ್ಮಣರ ಬೀದಿ, ದೇಚೂರು ಮತ್ತು ಪುಟಾಣಿ ನಗರ ಹಾಗೂ ಕುಂದೂರುಮೊಟ್ಟೆ ಚೌಟಿ ಮಾರಿಯಮ್ಮ ಕರಗೋತ್ಸವವು ಮೈಸೂರು ರಸ್ತೆಗಾಗಿ ಶಾಂತಿನಿಕೇತನ, ಜಯನಗರ, ಸುದರ್ಶನ ಕೆಳಗಿನ ಬಡಾವಣೆ, ಜಲಾಶ್ರಯ ಬಡಾವಣೆ, ಗುಂಡೂರಾವ್ ಕಾಂಪೌಂಡ್, ಬ್ರಾಹ್ಮಣರ ಬೀದಿ, ಅಶ್ವತ್ ಕಟ್ಟೆ, ದೇಚೂರು ಹಾಗೂ ಪುಟಾಣಿನಗರದಲ್ಲಿ ಪ್ರದಕ್ಷಿಣೆ ಹಾಕಲಿದೆ ಎಂದು ಪದಾಧಿಕಾರಿಗಳು ಮಾಹಿತಿ ನೀಡಿದರು. ರಾಜರ ಕಾಲದಲ್ಲಿ ಆರಂಭವಾದ ದಸರಾ ಇಂದಿಗೂ ವೈಭವಯುತವಾಗಿ ಆಚರಣೆಯಲ್ಲಿದೆ. ಹಿಂದೆ ದೇವರ ಉತ್ಸವವಾಗಿದ್ದ ದಸರೆಯು ಈಗ ಜನೋತ್ಸವವಾಗಿ ಬದಲಾಗಿದೆ.

ಮಂಟಪಕ್ಕೆ ಸಿದ್ಧತೆ: ಅತ್ತ ವಿಜಯದಶಮಿಯಂದು ನಡೆಯುವ ಶೋಭಾಯಾತ್ರೆಗೆ ದೇವಸ್ಥಾನ ಸಮಿತಿಗಳು ಸಿದ್ಧತೆ ಆರಂಭಿಸಿವೆ. ಗೋದಾಮು ಸೇರಿದ್ದ ಕಲಾಕೃತಿಗಳು, ಬೃಹತ್‌ ವಿದ್ಯುತ್‌ ಬಲ್ಬ್‌ಗಳು, ಕಬ್ಬಿಣದ ಪರಿಕರಗಳು ಹೊರಬಂದಿವೆ. ಕಬ್ಬಿಣಕ್ಕೆ ಬಣ್ಣ ಬಳಿಯಲಾಗಿದೆ. ಇನ್ನು ಮಂಟಪ ಜೋಡಣೆ ಕಾರ್ಯವು ಮಂಗಳವಾರದಿಂದ ಆರಂಭಗೊಳ್ಳಲಿದೆ ಎಂದು ದೇವಸ್ಥಾನ ಸಮಿತಿ ಪದಾಧಿಕಾರಿಗಳು ತಿಳಿಸಿದ್ದಾರೆ.

ಗಣ್ಯರಿಂದ ಪೂಜೆ:  ಶಾಸಕರಾದ ಎಂ.ಪಿ.ಅಪ್ಪಚ್ಚು ರಂಜನ್‌, ಕೆ.ಜಿ.ಬೋಪಯ್ಯ, ವಿಧಾನ ಪರಿಷತ್‌ ಸದಸ್ಯ ಸುನಿಲ್‌ ಸುಬ್ರಮಣಿ, ಕಾರ್ಯಾಧ್ಯಕ್ಷ ರಾಬಿನ್‌ ದೇವಯ್ಯ ಶಕ್ತಿ ದೇವತೆಗೆ ಪೂಜೆ ಸಲ್ಲಿಸಿ ಶುಭ ಹಾರೈಸಿದರು. ಶಕ್ತಿ ದೇವತೆಗಳ ಮೆರವಣಿಗೆಯನ್ನು ವಿಧಾನ ಪರಿಷತ್‌ ಸದಸ್ಯೆ ವೀಣಾ ಅಚ್ಚಯ್ಯ, ಜಿಲ್ಲಾಧಿಕಾರಿ ಅನೀಸ್‌ ಕಣ್ಮಣಿ ಜಾಯ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸುಮನ್‌ ಡಿ. ಪೆನ್ನೇಕರ್‌ ಕಣ್ತುಂಬಿಕೊಂಡರು.  

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು