ಗುರುವಾರ , ಆಗಸ್ಟ್ 5, 2021
21 °C
ಆಗಸ್ಟ್ 8ಕ್ಕೆ ವರದಿ ಸಲ್ಲಿಸಲು ಹೈಕೋರ್ಟ್‌ ಸೂಚನೆ

ಮಡಿಕೇರಿ: ಕೋಟೆ ಅಭಿವೃದ್ಧಿ ಕಾಮಗಾರಿ ಪರಿಶೀಲನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಡಿಕೇರಿ: ಭಾರತೀಯ ಪುರಾತತ್ವ ಇಲಾಖೆಯ ಅಧಿಕಾರಿಗಳ ತಂಡವು ಬುಧವಾರ ನಗರದ ಕೋಟೆಗೆ ಭೇಟಿ ನೀಡಿ ಅಭಿವೃದ್ಧಿ ಕಾಮಗಾರಿ ಪರಿಶೀಲಿಸಿತು.

ತಂಡದಲ್ಲಿ ಚಂದ್ರಕಾಂತ್, ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಎಂಜಿನಿಯರ್‌ ಮದನ್ ಮೋಹನ್, ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಶಿವರಾಮ್, ಮಾಹಿತಿ ಹಕ್ಕು ಆಯೋಗದ ನಿವೃತ್ತ ಆಯುಕ್ತ ವಿರೂಪಾಕ್ಷಯ್ಯ, ಜಿ.ಪಂ ಮಾಜಿ ಅಧ್ಯಕ್ಷ ಎಚ್.ಎಸ್.ಅಶೋಕ್ ಹಾಜರಿದ್ದರು.

ರಾಜ್ಯ ಮಾಹಿತಿ ಆಯೋಗದ ನಿವೃತ್ತ ಆಯುಕ್ತ ವಿರೂಪಾಕ್ಷಯ್ಯ ಮಾತನಾಡಿ, ಪ್ರಥಮ ಹಂತದಲ್ಲಿ ₹ 53 ಲಕ್ಷ ಹಣ ಬಿಡುಗಡೆಯಾಗಿದೆ. ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಎಂಜಿನಿಯರ್ ಅವರೊಂದಿಗೆ ಕಾಮಗಾರಿಯ ಪ್ರಗತಿ ವೀಕ್ಷಣೆ ಮಾಡಿ ಆಗಸ್ಟ್ 8ರಂದು ವರದಿ ನೀಡಲು ಹೈಕೋರ್ಟ್‌ ತಿಳಿಸಿದ್ದು, ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗುವುದು ಎಂದು ಹೇಳಿದರು.

ಕೋಟೆ ಕಾಮಗಾರಿಯನ್ನು ಆದಷ್ಟು ಬೇಗ ಪೂರ್ಣಗೊಳಿಸಬೇಕು. ಕಾಮಗಾರಿಗೆ ಪುರಾತತ್ವ ಇಲಾಖೆಯು ವಿಧಿಸುತ್ತಿರುವ ಶೇ 10ರಷ್ಟು ಸೇವಾ ಶುಲ್ಕವನ್ನು ರದ್ದುಗೊಳಿಸಬೇಕು. ಮೂರು ಜನರ ತಂಡವನ್ನು ಜಿಲ್ಲಾಧಿಕಾರಿ ಅವರ ಅಧ್ಯಕ್ಷತೆಯಲ್ಲಿ ರಚನೆ ಮಾಡಿ ಕಾಮಗಾರಿಯ ಗುಣಮಟ್ಟದ ಮೇಲುಸ್ತುವಾರಿ ನಡೆಸುವಂತೆ ನ್ಯಾಯಾಲಯಕ್ಕೆ ವರದಿ ನೀಡಲಾಗುವುದು ಎಂದು ಅವರು ತಿಳಿಸಿದರು.

ಪ್ರಸ್ತುತ ಕೋಟೆ ಕಾವಲಿಗೆ ನ್ಯಾಯಾಲಯದ ನಿರ್ದೇಶನದಂತೆ 24 ಗಂಟೆಗಳ ಕಾವಲುಗಾರರ ವ್ಯವಸ್ಥೆಯಿದ್ದು, ಮೇಲ್ಛಾವಣಿಯ ತುರ್ತು ಕಾಮಗಾರಿಯನ್ನು ತ್ವರಿತವಾಗಿ ಮುಗಿಸಬೇಕು ಎಂದು ಪುರಾತತ್ವ ಸಂರಕ್ಷಣಾ ಇಲಾಖೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ಗೆ ಸಲಹೆ ಮಾಡಿದರು.

ಕೋಟೆ ಪುನಃಶ್ಚೇತನಕ್ಕೆ ಮತ್ತು ಅಭಿವೃದ್ಧಿಗೆ ರಾಜ್ಯ ಸರ್ಕಾರವು ₹ 8.5 ಕೋಟಿ ಬಿಡುಗಡೆ ಮಾಡುವ ಭರವಸೆ ನೀಡಿದೆ. ಈ ಅನುದಾನ ಬಳಸಿ ಕೋಟೆಯ ಮೂಲ ವಾಸ್ತುಶಿಲ್ಪದೊಂದಿಗೆ ನವೀಕರಣಗೊಳಿಸಿ ಪ್ರಮುಖ ಪ್ರೇಕ್ಷಣೀಯ ಸ್ಥಳವನ್ನಾಗಿ ರೂಪುಗೊಳಿಸಲು ಭಾರತೀಯ ಪುರಾತತ್ವ ಇಲಾಖೆಯು ಮುಂದಾಗಬೇಕು ಎಂದು ತಿಳಿಸಿದರು.

1920ರಲ್ಲಿದ್ದ ಬ್ರಿಟಿಷ್ ಭಾರತ ಸರ್ಕಾರವು ಕೋಟೆಯನ್ನು ಸ್ಮಾರಕ ಎಂದು ಅಧಿಸೂಚನೆ ಹೊರಡಿಸಿತ್ತು. ಇದರ ಅನ್ವಯ ಭಾರತೀಯ ಪುರಾತತ್ವ ಇಲಾಖೆಗೆ ಕೋಟೆಯನ್ನು ಸಂಪೂರ್ಣವಾಗಿ ಸ್ವಾಧೀನ ಪಡಿಸಿಕೊಂಡು ಸಂರಕ್ಷಿಸಬೇಕು ಎಂದು ತಿಳಿಸಿದರು.

ಭಾರತೀಯ ಪುರಾತತ್ವ ಇಲಾಖೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಚಂದ್ರಕಾಂತ್ ಅವರು ಪ್ರಸ್ತುತ ಕೋಟೆಯ ಮೇಲ್ಛಾವಣಿ ತಾತ್ಕಾಲಿಕ ದುರಸ್ತಿ ಕಾರ್ಯದ ಪ್ರಗತಿ ಕುರಿತು ಮಾಹಿತಿ ನೀಡಿ, ಶೀಘ್ರದಲ್ಲಿಯೇ ಮೊದಲನೇ ಹಂತದಲ್ಲಿ ಬಿಡುಗಡೆಯಾಗಿರುವ ₹ 53 ಲಕ್ಷ ಮೊತ್ತದ ಮೇಲ್ಛಾವಣಿ ದುರಸ್ತಿ ಕಾರ್ಯವನ್ನು ಪೂರ್ಣಗೊಳಿಸಲಾಗುವುದು ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು