ಗ್ರಹಣದ ದಿನ ಮಡಿವಾಳ ಗುರುಪೀಠದ ಬಸವ ಮಾಚಿದೇವ ಸ್ವಾಮೀಜಿ ಪಟ್ಟಾಧಿಕಾರ

7

ಗ್ರಹಣದ ದಿನ ಮಡಿವಾಳ ಗುರುಪೀಠದ ಬಸವ ಮಾಚಿದೇವ ಸ್ವಾಮೀಜಿ ಪಟ್ಟಾಧಿಕಾರ

Published:
Updated:
Prajavani

ಚಿತ್ರದುರ್ಗ: ಮಡಿವಾಳ ಗುರುಪೀಠದ ಬಸವ ಮಾಚಿದೇವ ಸ್ವಾಮೀಜಿ ಅವರ ಪಟ್ಟಾಧಿಕಾರ ಮಹೋತ್ಸವ ಸೂರ್ಯಗ್ರಹಣದ ದಿನವಾದ ಭಾನುವಾರ ವಿಜೃಂಭಣೆಯಿಂದ ನಡೆಯಿತು.

ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರ ನೇತೃತ್ವದಲ್ಲಿ ಪಟ್ಟಾಧಿಕಾರದ ಪ್ರಕ್ರಿಯೆ ನಸುಕಿನಿಂದ ಮಧ್ಯಾಹ್ನದವರೆಗೂ ಜರುಗಿತು. ಸ್ವಾಮೀಜಿ ಬೆಳ್ಳಿಯ ಕಿರೀಟ ಧರಿಸಿದ ನಂತರ ವಚನ ಸಾಹಿತ್ಯ ಗ್ರಂಥ ಹಾಗೂ ಮಾಚಿದೇವರ ಭಾವಚಿತ್ರದ ಪಲ್ಲಕ್ಕಿ ಮಹೋತ್ಸವ ನಡೆಯಿತು.

20 ವರ್ಷಗಳ ಹಿಂದೆ ಬಸವ ಮಾಚಿದೇವ ಸ್ವಾಮೀಜಿಗೆ ಶರಣರು ಜಂಗಮ ದೀಕ್ಷೆ ನೀಡಿದ್ದರು. ರಾಜ್ಯದ ವಿವಿಧೆಡೆಯಿಂದ ಬಂದಿದ್ದ 30 ಸಾವಿರಕ್ಕೂ ಅಧಿಕ ಭಕ್ತರು ಪಟ್ಟಾಧಿಕಾರ ಮಹೋತ್ಸವಕ್ಕೆ ಸಾಕ್ಷಿಯಾದರು.

‘ಪಂಚಾಂಗ ನೋಡಿ ಕಾರ್ಯಕ್ರಮ ನಿಗದಿ ಮಾಡಿಲ್ಲ. ಕಾಕತಾಳೀಯವಾಗಿ ಗ್ರಹಣ ಬಂದಿದೆ. ಇತಿಹಾಸದಲ್ಲಿ ಮೊದಲ ಬಾರಿಗೆ ಇಂತಹ ಅವಕಾಶ ಸಿಕ್ಕಿದೆ. ಜನರು ಪಂಚಾಂಗ ಪ್ರಜ್ಞೆಗಿಂತ ಸಮೂಹ ಪ್ರಜ್ಞೆ ಮೂಡಿಸಿಕೊಳ್ಳಬೇಕು’ ಎಂದು ಮುರುಘಾ ಶರಣರು ಹೇಳಿದಾಗ ಭಕ್ತ ಸಮೂಹ ಚಪ್ಪಾಳೆ ತಟ್ಟಿ ಸಹಮತ ವ್ಯಕ್ತಪಡಿಸಿತು.

ನೂತನ ಪೀಠಾಧಿಪತಿ ಬಸವ ಮಾಚೀದೇವ ಸ್ವಾಮೀಜಿ, ‘ಮಡಿವಾಳ ಸಣ್ಣ ಸಮುದಾಯ. ಬಹುತೇಕರು ಬಟ್ಟೆ ಶುಚಿಗೊಳಿಸುವ ಕಾಯಕವನ್ನೇ ನಂಬಿ ಬದುಕುತ್ತಿದ್ದಾರೆ. ಆರ್ಥಿಕ ಹಾಗೂ ಸಾಮಾಜಿಕವಾಗಿ ಹಿಂದುಳಿದಿರುವ ಸಮುದಾಯವನ್ನು ಪರಿಶಿಷ್ಟ ಜಾತಿ ಪಟ್ಟಿಗೆ ಸೇರಿಸುವ ಅಗತ್ಯವಿದೆ’ ಎಂದು ಮನವಿ ಮಾಡಿದರು.

‘ಡಾ.ಅನ್ನಪೂರ್ಣಮ್ಮ ಸಮಿತಿ ಮಡಿವಾಳರನ್ನು ಪರಿಶಿಷ್ಟ ಜಾತಿಗೆ ಸೇರಿಸಲು ಶಿಫಾರಸು ಮಾಡಿದೆ. ಇದರ ಬಗ್ಗೆ ಸರ್ಕಾರ ನಿರ್ಲಕ್ಷ್ಯ ತೋರಿರುವುದು ಬೇಸರ ಮೂಡಿಸಿದೆ. ಇನ್ನಾದರೂ ಸಮುದಾಯದ ಬೇಡಿಕೆಗಳಿಗೆ ಸ್ಪಂದಿಸಿ’ ಎಂದು ಜೆಡಿಎಸ್‌ ವರಿಷ್ಠ ಎಚ್‌.ಡಿ. ದೇವೇಗೌಡ ಹಾಗೂ ಸಮ್ಮಿಶ್ರ ಸರ್ಕಾರದ ಸಮಯನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರನ್ನು ಕೋರಿಕೊಂಡರು.

‘ಮಾಜಿ ಪ್ರಧಾನಿಗೂ ಕಿಮ್ಮತ್ತಿಲ್ಲ’

ಸಂಖ್ಯಾಬಲದ ಆಧಾರದ ಮೇಲೆ ಸಂಸತ್ತಿನಲ್ಲಿ ಮಾತನಾಡಲು ಅವಕಾಶ ನೀಡುವಂತಹ ನೀತಿಯನ್ನು 2004ರಿಂದ ಜಾರಿಗೆ ತರಲಾಗಿದೆ. 58 ವರ್ಷ ರಾಜಕೀಯ ಜೀವನ ಸವೆಸಿದ ನನಗೆ ಮೂರು ನಿಮಿಷ ಮಾತ್ರ ಅವಕಾಶ ಸಿಗುತ್ತಿದೆ. ಹಿರಿತನ, ಮಾಜಿ ಪ್ರಧಾನಿ ಎಂಬ ಕಿಮ್ಮತ್ತೂ ಇಲ್ಲ’ ಎಂದು ಜೆಡಿಎಸ್ ವರಿಷ್ಠ ಎಚ್‌.ಡಿ. ದೇವೇಗೌಡ ಬೇಸರ ವ್ಯಕ್ತಪಡಿಸಿದರು.

‘ರಾಜ್ಯದಲ್ಲಿ ನೂರಾರು ಸಮಸ್ಯೆಗಳಿವೆ. ಅಲ್ಪ ಕಾಲಾವಧಿಯಲ್ಲಿ ಇವನ್ನೆಲ್ಲ ಮಾತನಾಡಲು ಸಾಧ್ಯವಾಗುತ್ತಿಲ್ಲ. 2004ರ ಜುಲೈ 20ರಂದು ಒಂದೂಕಾಲು ಗಂಟೆ ಮಾತನಾಡಿದ್ದೇ ಕೊನೆ. ಎಷ್ಟೋ ಸಂದರ್ಭಗಳಲ್ಲಿ ರಾಜೀನಾಮೆ ಕೊಡುವಷ್ಟು ಬೇಸರ ಆಗಿದೆ’ ಎಂದು ನೋವು ತೋಡಿಕೊಂಡರು.

‘ಪುಟಗೋಸಿ’ ‍ಪದಕ್ಕೆ ವಿಷಾದ

ವಿಧಾನಸೌಧದಲ್ಲಿ ಪತ್ತೆಯಾಗಿ ವಿವಾದಕ್ಕೆ ಕಾರಣವಾಗಿರುವ ₹ 25.76 ಲಕ್ಷ ಹಣಕ್ಕೆ ‘ಪುಟಗೋಸಿ’ ಪದ ಬಳಸಿರುವುದಕ್ಕೆ ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ವಿಷಾದ ವ್ಯಕ್ತಪಡಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘₹ 30 ಸಾವಿರ ಕೋಟಿಯ ರಫೇಲ್‌ ಹಗರಣದ ಬಗ್ಗೆ ಮಾತನಾಡುತ್ತಿದ್ದಾಗ ಆಕಸ್ಮಿಕವಾಗಿ ಈ ಪ್ರಶ್ನೆ ಎದುರಾಯಿತು. ಹಾಗಾಗಿ ಪುಟಗೋಸಿ ಪದ ಬಳಸಿದೆ. ಈ ಪದ ಬಳಕೆ ಮಾಡಬಾರದಿತ್ತು ಎಂಬುದು ಅರಿವಾಗಿದೆ. ನಾನು ಮಾತನಾಡಿದ್ದಕ್ಕೂ, ಮಾಧ್ಯಮಗಳು ಅರ್ಥೈಸಿರುವುದಕ್ಕೂ ವ್ಯತ್ಯಾಸವಿದೆ. ₹ 10 ವಿಚಾರದಲ್ಲಿ ತಪ್ಪು ಮಾಡಿದ್ದರೂ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವಂತೆ ಹೇಳಿದ್ದೇನೆ’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !