ಸೋಮವಾರ, ಅಕ್ಟೋಬರ್ 21, 2019
21 °C
ಮಡಿಕೇರಿ ದಸರಾಕ್ಕೆ ಸಂಭ್ರಮದ ತೆರೆ, ಗಮನ ಸೆಳೆದ ಪೌರಾಣಿಕ ಕಥೆ ರೂಪಕ

ಜನಸಾಗರದ ನಡುವೆ ಮನ ಸೆಳೆದ ದೃಶ್ಯ ವೈಭವ

Published:
Updated:
Prajavani

ಮಡಿಕೇರಿ: ಒಂಬತ್ತು ದಿನದಿಂದ ದಸರಾ ಸಂಭ್ರಮದಲ್ಲಿ ಮಡಿಕೇರಿ ಮುಳುಗಿತ್ತು. ಮಂಗಳವಾರ ರಾತ್ರಿಯಿಡೀ ವಿಜೃಂಭಣೆಯ ಶೋಭಾಯಾತ್ರೆಯೊಂದಿಗೆ ಬುಧವಾರ ಬೆಳಿಗ್ಗೆ ಇತಿಹಾಸಿಕ ಮಡಿಕೇರಿ ದಸರಾಕ್ಕೆ ಸಂಭ್ರಮದ ತೆರೆಬಿತ್ತು.

ರಾಜ್ಯದ ನಾನಾ ಕಡೆಯಿಂದ ಶೋಭಾಯಾತ್ರೆಗೆ ಜನಸಾಗರವೇ ಹರಿದು ಬಂದಿತ್ತು. ರಸ್ತೆಗಳಲ್ಲಿ ಜನಜಂಗುಳಿ ನೆರೆದಿತ್ತು. ಮಧ್ಯರಾತ್ರಿ 12ರ ನಂತರ, ಕಾಲಿಡಲೂ ಸ್ಥಳಾವಕಾಶ ಇರಲಿಲ್ಲ. ನಿರೀಕ್ಷೆಗೂ ಮೀರಿ ಸಹಸ್ರಾರು ಸಂಖ್ಯೆಯಲ್ಲಿ ಜನರು ಸೇರಿದ್ದು ಮಡಿಕೇರಿ ದಸರಾಕ್ಕೆ ಸಂಭ್ರಮ ಇಮ್ಮಡಿಗೊಂಡಿತು.

ಹತ್ತೂ ಮಂಟಪಗಳೂ ಆಕರ್ಷಕ ಪ್ರದರ್ಶನ ನೀಡುವ ಮೂಲಕ ಜನರನ್ನು ಮನಸೂರೆಗೊಳಿಸಿದವು. ಕಣ್ಣುಕೋರೈಸುವ ವಿದ್ಯುತ್‌ ದೀಪಗಳಲ್ಲಿ ಮಂಟಪಗಳು ಪ್ರದರ್ಶನ ನೀಡಿದವು.

ಕೆಲವು ಲೋಷದೋಷಗಳ ನಡುವೆಯೂ ನವರಾತ್ರಿ ಸಂಭ್ರಮ ಜನರ ಮನಸ್ಸಿನಲ್ಲಿ ಉಳಿಯುವಂತೆ ಮಾಡಿತು. ಮಂಟಪ ಪ್ರದರ್ಶನವು ನಿಗದಿತ ಸಮಯಕ್ಕೆ ಆರಂಭಗೊಳ್ಳದೇ ಪ್ರೇಕ್ಷಕರನ್ನು ನಿರಾಸೆಗೊಳಿಸಿತು. ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಜನರು ರಸ್ತೆಯ ಇಕ್ಕೆಲಗಳಲ್ಲಿ ನಿಂತಿದ್ದರೂ ಮಂಟಪಗಳು ತೀರ್ಪುಗಾರಿಕೆ ಕಾದಿದ್ದವು. ಹೆಚ್ಚಿನ ಸಂಖ್ಯೆಯಲ್ಲಿ ಯುವಕ– ಯುವತಿಯರೇ ಇದ್ದರು. ಮಂಟಪಗಳಿಂದ ಹೊಮ್ಮುತ್ತಿದ್ದ ಅಬ್ಬರದ ಸಂಗೀತಕ್ಕೆ ಹೆಜ್ಜೆ ಹಾಕಿ ಸಂಭ್ರಮಿಸಿದರು.

10 ಗಂಟೆಯ ವೇಳೆಗೆ ಕಾಲೇಜು ರಸ್ತೆಯ ಪೇಟೆ ಶ್ರೀರಾಮಮಂದಿರ ಮಂಟಪದ ಶೋಭಾಯಾತ್ರೆ ಆರಂಭಗೊಂಡಿತು. ಮಂಟಪವು ಹಳೇ ಖಾಸಗಿ ಬಸ್‌ ನಿಲ್ದಾಣ, ಕಾವೇರಿ ಕಲಾಕ್ಷೇತ್ರ, ಗಾಂಧಿ ಮೈದಾನದ ಮೂಲಕ ಹಾದು ಕುಂದೂರು ಚೌಟಿ ಮಾರಿಯಮ್ಮ ದೇವಸ್ಥಾನ ತಲುಪಿತು. ಅಲ್ಲಿ ಕರಗಕ್ಕೆ ಪೂಜೆ ನೆರವೇರಿಸಲಾಯಿತು. ಬಳಿಕ ಶೋಭಾಯಾತ್ರೆ ವೈಭವಕ್ಕೆ ಮುನ್ನುಡಿ ದೊರೆಯಿತು. ಮಂಟಪದಿಂದ ಹೊಮ್ಮುತ್ತಿದ್ದ ಡಿ.ಜೆಗೆ ನೂರಾರು ಯುವಕರು ಎಲ್ಲೆಡೆಯೂ ಹೆಜ್ಜೆ ಹಾಕಿ ಸಂಭ್ರಮಿಸಿದರು. ಮೈಸೂರು ದಸರಾ ಮುಗಿಸಿ ಒಮ್ಮೆಲೇ ಮಡಿಕೇರಿಯತ್ತ ಪ್ರೇಕ್ಷಕರು ಬರಲಾರಂಭಿಸಿದರು.  

ವಿಜಯದಶಮಿ ಸಭಾ ಕಾರ್ಯಕ್ರಮ: ದಸರಾ ಹಬ್ಬದಲ್ಲಿ ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಸೇರಿದಂತೆ ಎಲ್ಲ ಧರ್ಮದವರೂ  ಪಾಲ್ಗೊಳ್ಳುವುದು ವಿಶೇಷ ಎಂದು ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ಹೇಳಿದರು.

ನಗರದ ಗಾಂಧಿ ಮೈದಾನದ ಕಲಾಸಂಭ್ರಮ ವೇದಿಕೆಯಲ್ಲಿ ಮಂಗಳವಾರ ರಾತ್ರಿ ನಡೆದ ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮಡಿಕೇರಿ ದಸರಾಕ್ಕೆ ತನ್ನದೇ ಇತಿಹಾಸವಿದ್ದು, ದಸರಾದಿಂದ ನಾಡಿನ ಸಂಸ್ಕೃತಿ, ಕಲೆ ಉಳಿಸಿದಂತಾಗುತ್ತದೆ ಎಂದು ಹೇಳಿದರು.

ಈ ಬಾರಿಯ ಮಹಿಳಾ, ಮಕ್ಕಳ, ಯುವ ದಸರಾ, ಜನಪದೋತ್ಸವ ಜನರ ಮನ ಸೆಳೆದವು ಎಂದು ಹೇಳಿದರು.

ದಸರಾ ಸಮಿತಿ ಕಾರ್ಯಾಧ್ಯಕ್ಷ ರಾಬಿನ್ ದೇವಯ್ಯ, ಮಡಿಕೇರಿ ದಸರಾ ವಿವಿಧ ಸಮಿತಿಗಳ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಜಿಲ್ಲಾಡಳಿತ.. ಹೀಗೆ ಎಲ್ಲರ ಸಹಕಾರದಿಂದ ಅಚ್ಚುಕಟ್ಟಾಗಿ ನಡೆದಿದೆ ಎಂದು ಅವರು ಹೇಳಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಡಿ.ಪೆನ್ನೇಕರ್, ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಸ್ನೇಹಾ, ನಗರ ದಸರಾ ಸಮಿತಿ ಪ್ರಧಾನ ಕಾರ್ಯದರ್ಶಿ ಬಿ.ಕೆ.ಜಗದೀಶ್, ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ಆರ್.ಬಿ.ರವಿ, ಸ್ವಾಗತ ಸಮಿತಿ ಅಧ್ಯಕ್ಷ ಕಾನೆಹಿತ್ಲು ಮೊಣ್ಣಪ್ಪ, ವೇದಿಕೆ ಸಮಿತಿ ಅಧ್ಯಕ್ಷ ಎ.ಜಿ.ರಮೇಶ್ ಹಾಜರಿದ್ದರು.

ವಿಜಯ ದಶಮಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಜಿ.ರಾಜೇಂದ್ರ, ಮಕ್ಕಳ, ಮಹಿಳೆಯರ, ಜನಪದೋತ್ಸವ ವಿಶಿಷ್ಟವಾಗಿ ಮೂಡಿ ಬಂದಿತು. ದಶಮಂಟಪಗಳನ್ನು ನೋಡುವುದು ವಿಶೇಷವಾಗಿದೆ ಎಂದು ಹೇಳಿದರು.

ಬಿಜೆ‍ಪಿ ಜಿಲ್ಲಾ ಅಧ್ಯಕ್ಷ ಬಿ.ಬಿ.ಭಾರತೀಶ್, ‘ಪ್ರಕೃತಿ ವಿಕೋಪದ ನಡುವೆ ನಾಲ್ಕು ಶಕ್ತಿ ದೇವತೆಗಳನ್ನು ಪೂಜಿಸಿ ದಸರಾ ಆಚರಿಸುತ್ತಿರುವುದು ವಿಶೇಷ’ ಎಂದರು.

ಕಾಂಗ್ರೆಸ್‌ ಜಿಲ್ಲಾ ಅಧ್ಯಕ್ಷ ಕೆ.ಕೆ.ಮಂಜುನಾಥ್ ಕುಮಾರ್ ಮಾತನಾಡಿ, ಪ್ರಕೃತಿ ವಿಕೋಪದಿಂದ ಕಳೆದ ವರ್ಷ 20 ಮಂದಿ, ಈ ಬಾರಿ 17 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಜೊತೆಗೆ ಬೆಳೆ ನಷ್ಟ ಉಂಟಾಗಿದೆ. ಕಾರ್ಮಿಕರಿಗೆ ಕೆಲಸ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಬಡವರ ಜೀವನ ಸಂಕಷ್ಟಕ್ಕೆ ದೂಡಿದೆ. ಇವುಗಳೆಲ್ಲವನ್ನೂ ಶಕ್ತಿ ದೇವತೆಗಳು ನಿವಾರಿಸುವಂತಾಗಲಿ ಎಂದು ಪ್ರಾರ್ಥಿಸಿದರು.

ವಾರ್ತಾಧಿಕಾರಿ ಚಿನ್ನಸ್ವಾಮಿ, ಮಡಿಕೇರಿ ದಸರಾ ವರ್ಷದಿಂದ ವರ್ಷಕ್ಕೆ ವಿಭಿನ್ನ ಹಾಗೂ ವಿಶಿಷ್ಟವಾಗಿ ಜರುಗುತ್ತಿದೆ. ಈ ಬಾರಿ ಜನಪದೋತ್ಸವವು ಗ್ರಾಮೀಣ ಪ್ರದೇಶದ ಸೊಗಡು, ಕಲೆ, ಸಂಸ್ಕೃತಿಯನ್ನು ಪ್ರತಿಬಿಂಬಿಸುವಲ್ಲಿ ವಿಶಿಷ್ಟವಾಗಿತ್ತು ಎಂದರು.

Post Comments (+)