ಸರ್ಕಾರ ಉರುಳಿಸಲು ಮಾಫಿಯಾ ಸಂಚು: ಕುಮಾರಸ್ವಾಮಿ

7
‘ಮೀಟರ್‌ ಬಡ್ಡಿ, ರಿಯಲ್ ಎಸ್ಟೇಟ್‌, ಇಸ್ಪೀಟ್ ದಂಧೆ ನಡೆಸುವವರಿಂದ ಹಣ ಸಂಗ್ರಹ’

ಸರ್ಕಾರ ಉರುಳಿಸಲು ಮಾಫಿಯಾ ಸಂಚು: ಕುಮಾರಸ್ವಾಮಿ

Published:
Updated:

ಬೆಂಗಳೂರು: ‘ಮೀಟರ್ ಬಡ್ಡಿ, ರಿಯಲ್ ಎಸ್ಟೇಟ್‌, ಇಸ್ಪೀಟ್‌ ದಂಧೆ ನಡೆಸುವ ಮಾಫಿಯಾ ಮಂದಿ ಸರ್ಕಾರ ಉರುಳಿಸಲು ಹಣ ಸಂಗ್ರಹಿಸುತ್ತಿದ್ದು, ದೊಡ್ಡ ಮಟ್ಟದ ಸಂಚು ನಡೆಸುತ್ತಿದ್ದಾರೆ’ ಎಂದು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಹೊಸ ಬಾಂಬ್ ಸಿಡಿಸಿದ್ದಾರೆ.

ಗೃಹ ಕಚೇರಿ ಕೃಷ್ಣಾದಲ್ಲಿ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಶುಕ್ರವಾರ ಉತ್ತರಿಸಿದ ಅವರು, ‘ಸರ್ಕಾರ ತೆಗೆಯಲು ಯಾರು ಯಾರು ಒಟ್ಟಾಗಿದ್ದಾರೆ ಎಂಬ ಮಾಹಿತಿ ಇದೆ. ಸರ್ಕಾರ ಉಳಿಸಿಕೊಳ್ಳುವುದು ನನ್ನ ಕರ್ತವ್ಯ. ಅದಕ್ಕೆ ಕಾನೂನು ಪ್ರಕಾರವಾಗಿ ಏನು ಬೇಕೋ ಅದನ್ನು ಮಾಡುತ್ತೇನೆ’ ಎಂದು ಹೇಳಿದರು.

‘ಸರ್ಕಾರ ಉರುಳಿಸಲು ಬಿಜೆಪಿಯವರು ಯತ್ನಿಸುತ್ತಿದ್ದಾರೆಯೇ’ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ‘ಅವರ ಕೆಲಸ ಅವರು ಮಾಡಲಿ. ಅದು ನನಗೆ ಸಂಬಂಧ ಇಲ್ಲದೇ ಇರುವುದು. ಶಾಸಕರಿಗೆ ಹಣದ ಆಮಿಷವೊಡ್ಡುತ್ತಿರುವ ಕೆಲಸ ನಡೆಯುತ್ತಿರುವುದು ನನಗೆ ಗೊತ್ತಿಲ್ಲವೇ. ಹಾಗಂತ ನಾನು ಸುಮ್ಮನೆ ಕುಳಿತಿಲ್ಲ’ ಎಂದರು.

‘ಸರ್ಕಾರಕ್ಕೆ ಪತನಕ್ಕೆ ಯಾರು ಎಲ್ಲಿ ಹಣ ಸಂಗ್ರಹ ಮಾಡುತ್ತಿದ್ದಾರೆ. ಯಾವ ಯಾವ ಕಿಂಗ್ ಪಿನ್ ಇದರ ಹಿಂದೆ ಇದ್ದಾರೆ ಎಂಬುದು ಗೊತ್ತಿದೆ. 2009–10ರಲ್ಲಿ ಬಿಬಿಎಂಪಿ ಕಾಮಗಾರಿಗಳಿಗೆ ಸಂಬಂಧಿಸಿದ ಕಡತಗಳಿಗೆ ಬೆಂಕಿ ಇಟ್ಟವರು ಈಗ ಹಣ ಹೊಂದಿಸಲು ಓಡಾಡುತ್ತಿದ್ದಾರೆ. ಇಲ್ಲೆಲ್ಲೋ ರೆಸಾರ್ಟ್ ಮಾಡಲು ಹೊರಟಿದ್ದ ಸಕಲೇಶಪುರದ ಕಾಫಿ ಪ್ಲಾಂಟರ್‌ ಇದರ ಹಿಂದೆ ಇದ್ದಾರೆ. ಆ ಮಹಾಶಯ ಕಟ್ಟಿಕೊಂಡ ಹೆಂಡತಿಗೆ ಗುಂಡಿಟ್ಟುಕೊಂಡು, ಹೆತ್ತ ಎರಡು ಮಕ್ಕಳನ್ನು ಕೊಂದು ಜೈಲಿನಲ್ಲಿದ್ದಾನೆ. ಆತನೂ ಇದರ ಹಿಂದೆ ಇದ್ದಾನೆ’ ಎಂದು ಮುಖ್ಯಮಂತ್ರಿ ಹೇಳಿದರು.

‘ಇಸ್ಪೀಟ್‌ ದಂಧೆಯಲ್ಲಿ ದಿನಾ ಕೋಟ್ಯಂತರ ದುಡಿಯತ್ತಿರುವ ಕೆಲವರು, ಮೀಟರ್ ಬಡ್ಡಿ ನಡೆಸುತ್ತಿರುವವರು ಸರ್ಕಾರ ಬೀಳಿಸಲು ಹಣ ಸಂಗ್ರಹಿಸುತ್ತಿರುವುದು ಗೊತ್ತಿದೆ. ವ್ಯರ್ಥ ಕಸರತ್ತು ಮಾಡುವವರು ಮಾಡಲಿ. ನಾನು ಏಕೆ ಬೇಡ ಎನ್ನಲಿ’ ಎಂದು ಹೇಳಿದ ಕುಮಾರಸ್ವಾಮಿ, ‘ನನಗೆ ರಾಜ್ಯದ ಅಭಿವೃದ್ಧಿ, ಜನರ ಹಿತ ಮುಖ್ಯ. ಅದಕ್ಕಾಗಿ ಸರ್ಕಾರವನ್ನು ಉಳಿಸಿಕೊಳ್ಳಬೇಕಾಗಿದೆ ಅದನ್ನು ಮಾಡುತ್ತೇನೆ’ ಎಂದರು.

‘ಕೆಲವು ರಾಜಕಾರಣಿಗಳ ಮಾತು ಕೇಳಿ ಮಾಧ್ಯಮದವರು ಸರ್ಕಾರ ಪತನಕ್ಕೆ ಗಣೇಶ ಹಬ್ಬದ ಡೆಡ್‌ಲೈನ್ ಕೊಟ್ಟರು. ಅದು ಮುಗಿಯಿತು. ಈಗ ಸೋಮವಾರದ (ಸೆ.17) ಡೆಡ್‌ಲೈನ್ ಕೊಟ್ಟಿದ್ದಾರೆ. ಅದು ಅಕ್ಟೋಬರ್ 2 ಕ್ಕೆ ಮುಂದಕ್ಕೆ ಹೋಗಲಿದೆ. ಪಂಚಾಂಗ ಸರಿಯಿಲ್ಲದಿದ್ದರೆ ಮತ್ತಷ್ಟು ಮುಂದೆ ಹೋಗುವುದು ಖಚಿತ’ ಎಂದು ವ್ಯಂಗ್ಯವಾಡಿದರು.

‘ಮಾಧ್ಯಮಗಳಲ್ಲಿ ಬರುತ್ತಿರುವ ಸುದ್ದಿಗಳನ್ನು ನೋಡಿ, ಸರ್ಕಾರ ಬಿದ್ದೇ ಹೋಯ್ತು, ಇಂದೇ ಹೋಯ್ತು ಎಂದು ಕೆಲವು ಅಧಿಕಾರಿಗಳು ಕೆಲಸದ ಬಗ್ಗೆ ಅಸಡ್ಡೆ ತೋರಿಸುತ್ತಿದ್ದಾರೆ. ಅದನ್ನು ಸರಿಪಡಿಸದೇ ಇದ್ದರೆ ರಾಜ್ಯದ ಅಭಿವೃದ್ಧಿ ಅಸಾಧ್ಯ. ಹೀಗಾಗಿ, ಸೋಮವಾರದಿಂದ ಅಧಿಕಾರಿಗಳ ಸಭೆ ನಡೆಸಿ ಚಾಟಿ ಬೀಸುವ ಕೆಲಸ ಮಾಡುತ್ತೇನೆ. ಸರ್ಕಾರ ಭದ್ರ ಪಡಿಸಿಕೊಳ್ಳುವ ತೀರ್ಮಾನ ಮಾಡುತ್ತೇನೆ’ ಎಂದರು.

‘ಬಿಜೆಪಿಯವರು ರೆಸಾರ್ಟ್ ರೆಡಿ ಮಾಡಿದ್ದಾರಂತಲ್ಲ’ ಎಂಬ ಪ್ರಶ್ನೆಗೆ, ರೆಸಾರ್ಟ್ ಆದರೂ ರೆಡಿ ಮಾಡಲಿ; ಗುಡಿಸಲಾದ್ರೂ ರೆಡಿ ಮಾಡಲಿ. ನಾನು ಎಲ್ಲದಕ್ಕೂ ತಯಾರಾಗಿದ್ದೇನೆ’ ಎಂದರು.

ಇದನ್ನೂ ಓದಿ: ಅಖಾಡಕ್ಕಿಳಿದ ಕೈ–ದಳಪತಿಗಳು

‘ಬಿಜೆಪಿಯವರು ಶಾಸಕರಿಗೆ ಹಣ ಕೊಟ್ಟಿದ್ದಾರಂತೆ ಹೌದೆ’ ಎಂಬ ಪ್ರಶ್ನೆಗೆ, ‘ಕೆಲವರಿಗೆ ಅಡ್ವಾನ್ಸ್‌  ಪೇಮೆಂಟ್ ಮಾಡಿರುವುದು ಹೌದು. ಅವೆಲ್ಲ ಬೆಳಕಿಗೆ ಬರಲಿದೆ. ಸ್ವಲ್ಪ ದಿನ ಕಾಯಿರಿ. ನನ್ನ ಜತೆಗೆ ಬರುವವರ ಪಟ್ಟಿಯೂ ಇದೆ. ಆದರೆ, ಅವರು ಯಾರೂ ಮೈಸೂರು ಕಡೆಯವರಲ್ಲ. ನನ್ನ ಬಳಿ ಇರುವ ಪಟ್ಟಿಯೇ ಬೇರೆ. ಹಿಂದೆ ಅವರ ಜತೆ(ಬಿಜೆಪಿ) ಸೇರಿ ಸರ್ಕಾರ ಮಾಡಿದ್ದೇನಲ್ಲ. ಆಗ ನನ್ನ ಜತೆಗೆ ಇದ್ದವರು’ ಎಂದು ಹೇಳಿದರು.

ಬಿಜೆಪಿ ವಿರುದ್ಧ ದೂರು: ಪರಮೇಶ್ವರ
ಕಾಂಗ್ರೆಸ್ ಶಾಸಕರಿಗೆ ಲಂಚದ ಆಮಿಷ ಒಡ್ಡುತ್ತಿರುವ ಬಿಜೆಪಿ ವಿರುದ್ಧ ಎಸಿಬಿ ಹಾಗೂ ಆದಾಯ ತೆರಿಗೆ ಇಲಾಖೆಗೆ ದೂರು ನೀಡುವುದಾಗಿ ಗೃಹ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಜಿ. ಪರಮೇಶ್ವರ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಪಕ್ಷದಲ್ಲಿ ದೊಡ್ಡ ಸಮಸ್ಯೆ ಇಲ್ಲ. ಸಣ್ಣ ಪುಟ್ಟ ಅಭಿಪ್ರಾಯ ಭೇದಗಳಿವೆ. ಅವುಗಳನ್ನು ಮಾತುಕತೆ ಮೂಲಕ ಬಗೆಹರಿಸಿಕೊಳ್ಳಲಾಗುವುದು’ ಎಂದರು. ಇದಕ್ಕೆ ಮುನ್ನ ಸಚಿವ ಡಿ.ಕೆ. ಶಿವಕುಮಾರ್ ನಿವಾಸಕ್ಕೆ ತೆರಳಿ ರಾಜಕೀಯ ವಿದ್ಯಮಾನಗಳ ಬಗ್ಗೆ ಚರ್ಚಿಸಿದರು.

ಹೊಣೆಗೇಡಿ ಹೇಳಿಕೆ: ಬಿಜೆಪಿ ಟೀಕೆ

‌ಆಪರೇಷನ್ ಕಮಲದ ಮೂಲಕ ಶಾಸಕರನ್ನು ಸೆಳೆಯಲು ಬಿಜೆಪಿ ಯತ್ನಿಸುತ್ತಿದೆ ಎಂಬ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿಕೆ ಹೊಣೆಗೇಡಿತನದ ಪರಮಾವಧಿ ಎಂದು ಬಿಜೆಪಿ ಟೀಕಿಸಿದೆ.

ಮಾಧ್ಯಮಗಳಿಗೆ ಹೇಳಿಕೆ ಬಿಡುಗಡೆ ಮಾಡಿರುವ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್. ರವಿಕುಮಾರ್‌, ಖಚಿತ ಮಾಹಿತಿ ಇದ್ದರೆ ನೇರವಾಗಿ ಕ್ರಮ ಜರುಗಿಸಬಹುದಾದ ಸ್ಥಾನದಲ್ಲಿ ಮುಖ್ಯಮಂತ್ರಿ ಇದ್ದಾರೆ. ಹಾಗಿರುವಾಗ ಸಾಮಾನ್ಯ ವ್ಯಕ್ತಿಯಂತೆ ಬೀದಿಯಲ್ಲಿ ನಿಂತು ಹೇಳಿಕೆ ನೀಡುತ್ತಿರುವುದು ಬೇಜವಾಬ್ದಾರಿ ವರ್ತನೆ. ಸಮ್ಮಿಶ್ರ ಸರ್ಕಾರದೊಳಗಿನ ಸಮಸ್ಯೆ ನಿಭಾಯಿಸುವ ಸಾಮರ್ಥ್ಯವಿಲ್ಲದ ಅವರು ಬಿಜೆಪಿಯ ಮೇಲೆ ಗೂಬೆ ಕೂರಿಸುವ ಯತ್ನ ಮಾಡುತ್ತಿದ್ದಾರೆ ಎಂದು ಅವರು ದೂರಿದ್ದಾರೆ.

ಸಚಿವ ಎಚ್.ಡಿ. ರೇವಣ್ಣ ಪುತ್ರ ಪ್ರಜ್ವಲ್‌ ಅವರು ಜೆಡಿಎಸ್‌ನಲ್ಲಿ ಸೂಟ್ ಕೇಸ್ ರಾಜಕೀಯ ನಡೆಯುತ್ತಿದೆ ಎಂದು ಹೇಳಿದ್ದರು. ಮುಖ್ಯಮಂತ್ರಿ ಇದನ್ನು ಮರೆತಿದ್ದಾರೆ. ಸೂಟ್ ಕೇಸ್ ಪಕ್ಷ ಯಾವುದು ಎನ್ನುವುದು ರಾಜ್ಯದ ಜನರಿಗೆ ಗೊತ್ತಿದೆ. ಸರ್ಕಾರದ ಮೇಲೆ ಹತೋಟಿ ಕಳೆದುಕೊಂಡಿರುವ ಮುಖ್ಯಮಂತ್ರಿ ಜನರನ್ನು ದಾರಿ ತಪ್ಪಿಸುವ ಹೇಳಿಕೆ ನೀಡುತ್ತಾ ರಾಜ್ಯದ ಜನರಿಗೆ ದ್ರೋಹ ಬಗೆಯುತ್ತಿದ್ದಾರೆ ಎಂದೂ ಅವರು ಟೀಕಿಸಿದ್ದಾರೆ.

ಯಡಿಯೂರಪ್ಪ ಕಿಂಗ್‌ಪಿನ್‌: ದಿನೇಶ್ ಗುಂಡೂರಾವ್‌

‘ಕಪ್ಪುಹಣ ಬಳಸಿ ಕಾಂಗ್ರೆಸ್ ಶಾಸಕರನ್ನು ಖರೀದಿಸಲು ಮುಂದಾಗಿರುವ ಬಿಜೆಪಿ ನಾಯಕರು ಸರ್ಕಾರ ಬೀಳಿಸಲು ಯತ್ನಿಸುತ್ತಿದ್ದಾರೆ. ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಅವರೇ ಇದರ ಹಿಂದಿನ ಕಿಂಗ್ ಪಿನ್‌’ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್‌ ಆಪಾದಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಯಡಿಯೂರಪ್ಪ ಜತೆಗೆ ರಾಜ್ಯಸಭಾ ಸದಸ್ಯ ಪ್ರಭಾಕರ ಕೋರೆ, ಸಂಸದೆ ಶೋಭಾ ಕರಂದ್ಲಾಜೆ, ಶಾಸಕರಾದ ಸತೀಶ್ ರೆಡ್ಡಿ, ಎಸ್‌.ಆರ್. ವಿಶ್ವನಾಥ್, ಸಿ.ಎನ್‌. ಅಶ್ವತ್ಥ ನಾರಾಯಣ್ ಹಾಗೂ ಮಾಜಿ ಶಾಸಕ ಸಿ.ಪಿ. ಯೋಗೀಶ್ವರ ಸೇರಿಕೊಂಡಿದ್ದಾರೆ’ ಎಂದು ದೂರಿದರು.

‘ನಮ್ಮ ಪಕ್ಷದ ಶಾಸಕರಾದ ಸಿ.ಎಸ್.ಶಿವಳ್ಳಿ, ಅನಿಲ್ ಚಿಕ್ಕಮಾದು, ಬಿ.ಸಿ. ಪಾಟೀಲ, ವಿ.ಮುನಿಯಪ್ಪ ಸೇರಿದಂತೆ ಹಲವರಿಗೆ ಆಮಿಷ ಒಡ್ಡಿದ್ದಾರೆ. ಕಪ್ಪು ಹಣದಿಂದ ಸರ್ಕಾರ ಕೆಡವಲು ಪ್ಲಾನ್ ಮಾಡಿದ್ದಾರೆ. ₹50 ಕೋಟಿ ₹100 ಕೋಟಿ ಕಡಿಮೆ ಹಣವಲ್ಲ. ಶಾಸಕರು ಆಮಿಷಕ್ಕೆ ಬಲಿಯಾಗಲಿಲ್ಲ ಎಂಬ ಕಾರಣಕ್ಕೆ, ಅವರ ಕುಟುಂಬದವರನ್ನೂ ಸಂಪರ್ಕಿಸುತ್ತಿದ್ದಾರೆ’ ಎಂದರು.

‘ಮುಂದೆ ದೊಡ್ಡ ಪ್ರಮಾಣದ ದುಡ್ಡು ಕೊಡುತ್ತೇವೆ. ಈಗ ಇಷ್ಟು ಅಡ್ವಾನ್ಸ್‌ ತೆಗೆದುಕೊಳ್ಳಿ ಎಂದು ಆಮಿಷ ಒಡ್ಡುತ್ತಿದ್ದಾರೆ. ಹಣಕಾಸು ಸಂಸ್ಥೆ ನಡೆಸುವ ಕೆಲವರೂ ಬಿಜೆಪಿಯವರ ಜತೆ ಕೈಜೋಡಿಸಿದ್ದಾರೆ. ಕೋಟಿಗಟ್ಟಲೇ ಹಣದ ಆಮಿಷ ಒಡ್ಡುತ್ತಿದ್ದಾರೆ. ಈ ಹಣ ಎಲ್ಲಿಂದ ಬರುತ್ತದೆ ಎಂಬ ಬಗ್ಗೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ತನಿಖೆ ನಡೆಸಬೇಕು’ ಎಂದು ಅವರು ಆಗ್ರಹಿಸಿದರು.

ಬರಹ ಇಷ್ಟವಾಯಿತೆ?

 • 9

  Happy
 • 0

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !