ಶುಕ್ರವಾರ, ನವೆಂಬರ್ 15, 2019
22 °C
ಕದ್ರಿ ಗೋಪಾಲನಾಥ್‌ ಅಂತಿಮ ದರ್ಶನ ಪಡೆದು, ಗೌರವ ಸಲ್ಲಿಸಿದ ಜನರು

ನಾದ ಮಾಂತ್ರಿಕಗೆ ಭಾವುಕ ವಿದಾಯ

Published:
Updated:
Prajavani

ಮಂಗಳೂರು: ಪದ್ಮಶ್ರೀ,ಕಲೈ ಮಾಮಣಿ ಸೇರಿದಂತೆ ಹಲವು ಅತ್ಯುನ್ನತ ಗೌರವಗಳಿಗೆ ಪಾತ್ರರಾಗಿದ್ದ ಸ್ಯಾಕ್ಸೋಫೋನ್‌ ಮಾಂತ್ರಿಕ ಕದ್ರಿ ಗೋಪಾಲನಾಥ್‌ ಅವರಿಗೆ ಅವರ ಬಹುಕಾಲದ ಒಡನಾಡಿಗಳು, ಶಿಷ್ಯರು, ಸಾಂಸ್ಕೃತಿಕ ಲೋಕದ ದಿಗ್ಗಜರು, ಸ್ಥಳೀಯ ಜನ ಪ್ರತಿನಿಧಿಗಳು, ಅಭಿಮಾನಿಗಳು ಸೋಮ ವಾರ ಭಾವುಕ ವಿದಾಯ ಹೇಳಿದರು.

ಶುಕ್ರವಾರ ನಿಧನರಾಗಿದ್ದ ಗೋಪಾಲನಾಥ್‌ ಅವರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ನಗರದ ಪುರಭವನದ ಮಿನಿ ಸಭಾಂಗಣದಲ್ಲಿ ಸೋಮವಾರ ವ್ಯವಸ್ಥೆ ಮಾಡಲಾಗಿತ್ತು. ಪದವಿನಂಗಡಿಯ ಗೋಪಾಲನಾಥ್‌ ಅವರ ಮನೆಯಿಂದ ಕುಟುಂಬದ ಸದಸ್ಯರು, ಬಂಧುಗಳು ಮತ್ತು ಅಭಿಮಾನಿಗಳೊಂದಿಗೆ ಬೆಳಿಗ್ಗೆ ಪಾರ್ಥಿವ ಶರೀರವನ್ನು ಮೆರವಣಿಗೆಯಲ್ಲಿ ಪುರಭವನದ ಆವರಣಕ್ಕೆ ತರಲಾಯಿತು. ಅಲ್ಲಿ ಬೆಳಿಗ್ಗೆ 10.15ರಿಂದ ಮಧ್ಯಾಹ್ನ 2ರವರೆಗೆ ನೂರಾರು ಮಂದಿ ಗೋಪಾಲನಾಥ್‌ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದು, ಗೌರವ ಸಲ್ಲಿಸಿದರು.

ಗೋಪಾಲನಾಥ್‌ ಅವರ ಕಛೇರಿಗಳಲ್ಲಿ ಭಾಗವಹಿಸುತ್ತಿದ್ದ ಹೆಸರಾಂತ ಸಂಗೀತ ಕಲಾವಿದರು ಪುರಭವನಕ್ಕೆ ಬಂದು ಅಗಲಿದ ಹಿರಿಯ ಕಲಾವಿದನಿಗೆ ಗೌರವ ಸಲ್ಲಿಸಿದರು. ಗೋಪಾಲನಾಥ್‌ ಅವರ ಕಾರ್ಯಕ್ರಮಗಳಿಗೆ ದಶಕಗಳ ಕಾಲದಿಂದ ಸಾಥ್‌ ನೀಡುತ್ತಿದ್ದ ಪ್ರಸಿದ್ಧ ಕ್ಲಾರಿಯೋನೆಟ್‌ ವಾದಕ ಪಂಡಿತ್‌ ನರಸಿಂಹಲು ವಡವಾಟಿ, ತಬಲಾ ವಾದಕ ರಾಜೇಂದ್ರ ನಾಕೋಡ್‌, ಮೋರ್ಸಿಂಗ್‌ ವಾದಕ ಬೆಂಗಳೂರು ರಾಜಶೇಖರ್‌, ತವಿಲ್‌ ವಾದಕರಾದ ಕೆ.ಸೇಖರ್‌, ಲಕ್ಷ್ಮಣ್‌ ಸೇರಿದಂತೆ ಹಲವು ಕಲಾವಿದರು ಕೊನೆಯವರೆಗೂ ಹಾಜರಿದ್ದರು.

ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಸಂಸದ ನಳಿನ್‌ಕುಮಾರ್ ಕಟೀಲ್, ಶಾಸಕ ಯು.ಟಿ.ಖಾದರ್‌, ವಿಧಾನ ಪರಿಷತ್‌ ಸದಸ್ಯ ಐವನ್‌ ಡಿಸೋಜ, ಮಾಜಿ ಮೇಯರ್‌ ಭಾಸ್ಕರ್‌ ಕೆ., ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್‌, ಪೊಲೀಸ್‌ ಕಮಿಷನರ್‌ ಡಾ.ಪಿ.ಎಸ್‌.ಹರ್ಷ, ಮಂಗಳೂರು ಮಹಾನಗರ ಪಾಲಿಕೆ ಆಯುಕ್ತ ಅಜಿತ್‌ ಕುಮಾರ್‌ ಹೆಗ್ಡೆ ಶಾನಾಡಿ, ವಿಧಾನ ಪರಿಷತ್‌ನ ಮಾಜಿ ಸದಸ್ಯ ಗಣೇಶ್ ಕಾರ್ಣಿಕ್‌, ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಸೇರಿದಂತೆ ಹಲವು ಗಣ್ಯರು ಗೋಪಾಲನಾಥ್‌ ಅವರ ಪಾರ್ಥಿವ ಶರೀರಕ್ಕೆ ಹೂಗುಚ್ಛವಿರಿಸಿ ಅಂತಿಮ ನಮನ ಸಲ್ಲಿಸಿದರು. ಗೋಪಾಲ ನಾಥ್‌ ಅವರ ಪತ್ನಿ ಸರೋಜಿನಿ, ಮಕ್ಕಳಾದ ಗುರುಪ್ರಸಾದ್, ಮಣಿಕಾಂತ್‌ ಕದ್ರಿ, ಅಂಬಿಕಾ ಮತ್ತು ಕುಟುಂಬದವರು ಸಭಾಂಗಣದಲ್ಲಿದ್ದರು. ಅಂತಿಮ ದರ್ಶನ ಪಡೆದ ಬಹುತೇಕರು ಕುಟುಂಬದವರನ್ನು ಭೇಟಿ ಮಾಡಿ ಸಾಂತ್ವನ ಹೇಳಿದರು.

ಸಂಗೀತ ನಮನ: ಪುರಭವನದ ಮಿನಿ ಸಭಾಂಗಣದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಿದ್ದ ಸ್ಥಳದ ಪಕ್ಕದಲ್ಲಿ ಸಂಗೀತ ನಮನವೂ ನಡೆಯಿತು. ಗೋಪಾಲನಾಥ್‌ ಅವರ ಶಿಷ್ಯರಲ್ಲಿ ಪ್ರಮುಖರಾದ ಸುಬ್ಬಲಕ್ಷ್ಮಿ ಸೇರಿದಂತೆ ಹಲವರು ಸ್ಯಾಕ್ಸೋಫೋನ್‌ನಲ್ಲಿ ಕದ್ರಿಯವರ ಪ್ರಿಯ ಗೀತೆಗಳನ್ನು ನುಡಿಸಿ, ಗೌರವ ಸಲ್ಲಿಸಿದರು. ಗೋಪಾಲನಾಥ್‌ ಅವರ ಒಡನಾಡಿಗಳು, ಶಿಷ್ಯರು ಸಂಗೀತ ನಮನ ಸಲ್ಲಿಸುವಾಗ ಅಗಲಿದ ಮೇರು ಕಲಾವಿದನನ್ನು ನೆನೆದು ಬಿಕ್ಕಿ ಬಿಕ್ಕಿ ಅತ್ತರು. ಪುರಭವನದಿಂದ ಪಾರ್ಥಿವ ಶರೀರವನ್ನು ಬೀಳ್ಕೊಡುವಾಗ ಪುರಭವನದ ಆವರಣ ಸಂಪೂರ್ಣ ಮೌನಕ್ಕೆ ಶರಣಾಗಿತ್ತು.

*
‘ಗೋಪಾಲನಾಥ್‌ ನನಗಿಂತ ಹತ್ತು ವರ್ಷ ಕಿರಿಯರು. ಅವರೊಂದಿಗೆ ದೀರ್ಘ ಕಾಲದಿಂದ ಸಂಗೀತ ಕಛೇರಿ ನಡೆಸುತ್ತಿದ್ದೆ. ಅವರ ಒಡನಾಟವೇ ಒಂದು ಅದ್ಭುತ ಲೋಕವನ್ನು ಸೃಷ್ಟಿಸುತ್ತಿತ್ತು’
-ನರಸಿಂಹಲು ವಡವಾಟಿ, ಕ್ಲಾರಿಯೋನೆಟ್‌ ವಾದಕ

*
ಹೊರಗಿದ್ದಾಗ ಜೋಕ್‌ಗಳನ್ನು ಹೇಳಿ ಎಲ್ಲರನ್ನೂ ನಗಿಸಿ, ನಗುತ್ತಿದ್ದ ಸ್ವಭಾವ ಕದ್ರಿ ಗೋಪಾಲನಾಥ್ ಅವರಲ್ಲಿತ್ತು. ಸಂಗೀತ ಕಛೇರಿಯ ವೇದಿಕೆ ಏರಿದ ತಕ್ಷಣದಿಂದ ಶೇಕಡ 100ರಷ್ಟು ಸಂಗೀತದಲ್ಲೇ ತಲ್ಲೀನರಾಗುತ್ತಿದ್ದರು. ಕೇಳುಗರ ಮನ ತಣಿಸುವುದಕ್ಕಾಗಿಯೇ ಗಂಟೆಗಟ್ಟಲೆ ಪ್ರದರ್ಶನ ನೀಡುತ್ತಿದ್ದರು.
-ರಾಜೇಂದ್ರ ನಾಕೋಡ್‌, ಕಲಾವಿದ

*
ನನ್ನ ತಂದೆ (ಎಂ.ಆರ್‌.ಸಾಯಿನಾಥ್‌) ಗೋಪಾಲನಾಥ್‌ ಅವರಿಗೆ ಮೃದಂಗ ನುಡಿಸುತ್ತಿದ್ದರು. 13 ವರ್ಷದವಳಿದ್ದಾಗ ಅವರ ಬಳಿ ಸ್ಯಾಕ್ಸೋಫೋನ್‌ ಕಲಿಯಲು ಹೋದೆ. 23 ವರ್ಷಗಳಿಂದ ಕಲಿಯುತ್ತಲೇ ಇದ್ದೆ. ಅವರು ನಮ್ಮ ನಡುವೆ ಇಲ್ಲ ಎಂಬುದನ್ನು ನಂಬಲು ನನ್ನಿಂದ ಸಾಧ್ಯವಾಗುತ್ತಿಲ್ಲ.
-ಎಂ.ಎಸ್‌.ಸುಬ್ಬಲಕ್ಷ್ಮಿ, ಸ್ಯಾಕ್ಸೋಫೋನ್‌ ಕಲಾವಿದೆ

***
ಶಾಶ್ವತ ನೆನಪಿಗೆ ಯೋಜನೆ
‘ಕದ್ರಿ ಗೋಪಾಲನಾಥ್‌ ಅವರ ಹೆಸರನ್ನು ಶಾಶ್ವತವಾಗಿ ನೆನಪಿನಲ್ಲಿ ಇರಿಸಲು ಯೋಜನೆಯೊಂದನ್ನು ರೂಪಿಸಲಾಗುವುದು. ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರೊಂದಿಗೆ ಚರ್ಚಿಸಿದ ಬಳಿಕ ಈ ಬಗ್ಗೆ ಅಂತಿಮ ತೀರ್ಮಾನಕ್ಕೆ ಬರುತ್ತೇವೆ’ ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.

ಸಂಸದ ನಳಿನ್‌ಕುಮಾರ್‌ ಕಟೀಲ್‌ ಮಾತನಾಡಿ, ‘ಗೋಪಾಲನಾಥ್‌ ಅವರ ಸ್ಮರಣೆಗಾಗಿ ಸಾರ್ವಜನಿಕ ಕಾರ್ಯಕ್ರಮವೊಂದನ್ನು ಆಯೋಜಿಸಲು ಯೋಚಿಸಿದ್ದೇನೆ. ಅವರ ಕುಟುಂಬದವರ ಜೊತೆ ಚರ್ಚಿಸಿದ ಬಳಿಕ ಕಾರ್ಯಕ್ರಮ ನಡೆಸಲಾಗುವುದು’ ಎಂದರು.

ಪ್ರತಿಕ್ರಿಯಿಸಿ (+)