ಗುರುವಾರ , ನವೆಂಬರ್ 21, 2019
20 °C
ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಎರಡನೇ ಅವಧಿಯ ಸರ್ಕಾರ ರಚನೆಯಾದ ನಂತರದ ಮೊದಲ ಚುನಾವಣೆ

ಮೋದಿ ಅಲೆಗೆ ಸವಾಲೊಡ್ಡುವ ಚುನಾವಣೆ

Published:
Updated:
Prajavani

ನವದೆಹಲಿ: ಮಧ್ಯಪ್ರದೇಶ, ರಾಜಸ್ಥಾನ ಮತ್ತು ಛತ್ತೀಸಗಡ ವಿಧಾನಸಭೆಗಳಿಗೆ 2018ರಲ್ಲಿ ನಡೆದ ಚುನಾವಣೆಯು 2019ರ ಲೋಕಸಭಾ ಚುನಾವಣೆಗೆ ಸೆಮಿಫೈನಲ್ ಎಂದು ಪರಿಗಣಿಸಲಾಗಿದ್ದರೆ, ಈಗ ಮಹಾರಾಷ್ಟ್ರ ಮತ್ತು ಹರಿಯಾಣ ವಿಧಾನಸಭೆಗಳಿಗೆ ಘೋಷಣೆಯಾಗಿರುವ ಚುನಾವಣೆಯು ಮೋದಿ ಸರ್ಕಾರಕ್ಕೆ ನೀಡುವ ಅನುಮೋದನೆ ಎಂಬ ರೀತಿಯಲ್ಲಿ ಪರಿಗಣಿಸಲಾಗುತ್ತಿದೆ. 

2018ರ ಚುನಾವಣೆಯಲ್ಲಿ ಮೂರೂ ರಾಜ್ಯಗಳಲ್ಲಿ ಬಿಜೆಪಿ ಅಧಿಕಾರ ಕಳೆದುಕೊಂಡು, ಅಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ರಚನೆಯಾಗಿದ್ದವು. ಆದರೆ ನಂತರ ನಡೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಗೆಲುವು ದಾಖಲಿಸಿತ್ತು.

2014ರಲ್ಲಿ ಲೋಕಸಭಾ ಚುನಾವಣೆಯಲ್ಲಿ ಗೆದ್ದಿದ್ದ ಬಿಜೆಪಿ, ಆ ನಂತರ ಮಹಾರಾಷ್ಟ್ರ, ಹರಿಯಾಣ ಹಾಗೂ ಜಾರ್ಖಂಡ್ ವಿಧಾನಸಭೆಗೆ ನಡೆದ ಚುನಾವಣೆಗಳಲ್ಲೂ ಮೋಡಿ ಮಾಡಿತ್ತು. ಈ ಬಾರಿಯೂ ಲೋಕಸಭೆ ಚುನಾವಣೆ ಮುಗಿದ ಆರು ತಿಂಗಳಲ್ಲಿ ಮಹಾರಾಷ್ಟ್ರ, ಹರಿಯಾಣ ಚುನಾವಣೆ ಎದುರಿಸುತ್ತಿವೆ. ಜಾರ್ಖಂಡ್‌ನಲ್ಲಿ ವರ್ಷಾಂತ್ಯದಲ್ಲಿ ಚುನಾವಣೆ ನಡೆಯಲಿದೆ. ಬಿಜೆಪಿ ಸರ್ಕಾರದ ಎರಡನೇ ಅವಧಿಯಲ್ಲೂ ಮೋದಿ ಅಲೆ ಕೆಲಸ ಮಾಡುತ್ತದೆಯೇ ಎಂಬ ಅಂಶ ಈ ಚುನಾವಣೆಯಿಂದ ಸ್ಪಷ್ಟವಾಗಲಿದೆ. 

ಮಹಾರಾಷ್ಟ್ರದಲ್ಲಿ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಹಾಗೂ ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರ ನಡುವೆ ಈ ಮೊದಲು ನಡೆದಿದ್ದ ವಾಕ್ಸಮರದ ಹೊರತಾಗಿಯೂ ಎರಡೂ ಪಕ್ಷಗಳು ಮೈತ್ರಿ ಮಾಡಿಕೊಂಡಿವೆ. ಅತ್ತ ಹರಿಯಾಣದಲ್ಲಿ ಜಾಟ್ ಸಮುದಾಯೇತರ ಜನರಲ್ಲಿ ಬಿಜೆಪಿ ವಿಶ್ವಾಸ ಮೂಡಿಸಿದೆ. ಇದಲ್ಲದೆ ಸರ್ಕಾರಿ ಹುದ್ದೆಗೆ ನ್ಯಾಯಯುತ ನೇಮಕಾತಿ ನಡೆಸುವ ವಿಚಾರದಲ್ಲಿ ಮುಖ್ಯಮಂತ್ರಿ ಮನೋಹರಲಾಲ್ ಖಟ್ಟರ್‌ ಪ್ರಶಂಸೆ ಪಡೆದಿದ್ದಾರೆ. ಆದರೂ ಬಿಜೆಪಿಯ ಚುನಾವಣಾ ಕೇಂದ್ರಬಿಂದು ಮೋದಿಯೇ ಆಗಿದ್ದಾರೆ. 

ಕೇಂದ್ರದಲ್ಲಿ ಎರಡನೇ ಅವಧಿಗೆ ಬಿಜೆಪಿ ಸರ್ಕಾರ ರಚನೆಯಾದ ಬಳಿಕ ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ) ಪ್ರಕಟವಾಯಿತು. ಬಿಜೆಪಿಯ ಆದ್ಯತೆಯ ವಿಷಯವಾಗಿದ್ದ ಜಮ್ಮು ಕಾಶ್ಮೀರದ ವಿಶೇಷಾಧಿಕಾರ ರದ್ದತಿ ಕಾರ್ಯರೂಪಕ್ಕೆ ಬಂದಿತು. ತ್ರಿವಳಿ ತಲಾಖ್ ಮಸೂದೆಯೂ ಅಂಗೀಕಾರ ಪಡೆಯಿತು.

ಈ ನಡುವೆ ಕುಸಿಯುತ್ತಿರುವ ಆರ್ಥಿಕತೆ ಮತ್ತು ಉದ್ಯೋಗ ನಷ್ಟ ಬಿಜೆಪಿಯ ಉತ್ಸಾಹ ಕೊಂಚ ಹಿನ್ನಡೆ ಉಂಟುಮಾಡಿವೆ. ಪರಿಸ್ಥಿತಿ ಸರಿದೂಗಿಸಲು ಮುಂದಾಗಿರುವ ಕೇಂದ್ರ, ಉತ್ತೇಜನ ಕ್ರಮಗಳನ್ನು ಘೋಷಿಸಿದೆ. ಕಾಶ್ಮೀರದ ವಿಶೇಷಾಧಿಕಾರ ರದ್ದತಿ ಬಳಿಕ ರಾಷ್ಟ್ರೀಯ ಭಾವನೆ ಮುನ್ನಲೆಗೆ ಬಂದಂತೆ, ಈಗಲೂ ಅದು ಎಲ್ಲ ವಿಷಯಗಳನ್ನು ಹಿಂದೆ ಸರಿಸಲಿದೆ ಎಂಬ ವಿಶ್ವಾಸದಲ್ಲಿ ಬಿಜೆಪಿ ಇದೆ. 

ಚುನಾವಣೆ ನಡೆಯುವ ರಾಜ್ಯಗಳಲ್ಲಿ 370ನೇ ವಿಧಿ, ತ್ರಿವಳಿ ತಲಾಖ್ ಹಾಗೂ ಎನ್‌ಆರ್‌ಸಿಗಳೇ ಬಿಜೆಪಿ ನಾಯಕರ ಭಾಷಣಗಳಲ್ಲಿ ಆದ್ಯತೆ ಪಡೆಯಲಿವೆ. ಆದರೆ ಮಹಾರಾಷ್ಟ್ರದಲ್ಲಿ ರಾಜ್‌ ಠಾಕ್ರೆ ಅವರ ಮಹಾರಾಷ್ಟ್ರ ನವನಿರ್ಮಾಣ ಸೇನಾ ಮತ್ತು ಪ್ರಕಾಶ್ ಅಂಬೇಡ್ಕರ್ ಅವರ ವಂಚಿತ ಬಹುಜನ ಅಘಾಡಿ ಪಕ್ಷಗಳ ಭೀತಿ ಇದ್ದೇ ಇದೆ. ಅಘಾಡಿ ಪಕ್ಷವು ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್–ಎನ್‌ಸಿಪಿ ಮೈತ್ರಿಕೂಟಕ್ಕೆ ಹೊಡೆತ ನೀಡಿ, ದಲಿತ ಮತಗಳನ್ನು ವಿಭಜಿಸುವಲ್ಲಿ ಯಶಸ್ವಿಯಾಗಿತ್ತು. ಇದು ಬಿಜೆಪಿಗೆ ಲಾಭದಾಯಕ. 

ಹರಿಯಾಣದಲ್ಲಿ ಜಾಟ್ ನಾಯಕ ಓಂ ಪ್ರಕಾಶ್ ಚೌಟಾಲ ಅವರ ಪಕ್ಷ ಒಡೆದ ಮನೆಯಾಗಿದ್ದು, ಅವರ ಮೊಮ್ಮಗ ಮತ್ತು ಮಾಜಿ ಸಂಸದ ದುಷ್ಯಂತ್ ಚೌಟಾಲ ಅವರು ಜನನಾಯಕ ಜನತಾ ಪಕ್ಷವನ್ನು ಸ್ಥಾಪಿಸಿದ್ದಾರೆ. ಮಾಜಿ ಮುಖ್ಯಮಂತ್ರಿ ಭೂಪಿಂದರ್ ಸಿಂಗ್ ಹೂಡಾ ಅವರ ಮೇಲೆ ಕಾಂಗ್ರೆಸ್ ನಂಬಿಕೆ ಇರಿಸಿಕೊಂಡಿದೆ. 

ದಲಿತ ಸಮುದಾಯಕ್ಕೆ ಸೇರಿದ ಕುಮಾರಿ ಶೆಲ್ಜಾ ಅವರನ್ನು ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಹುದ್ದೆಗೆ ನೇಮಿಸುವ ಮೂಲಕ ಆ ಸಮುದಾಯಗಳನ್ನು ಸೆಳೆಯಲು ಕಾಂಗ್ರೆಸ್ ಮುಂದಾಗಿದೆ. ಜನವರಿಯಲ್ಲಿ ನಡೆದಿದ್ದ ಉಪಚುನಾವಣೆಯಲ್ಲಿ ಜೆಜೆಪಿಯ ದಿಗ್ವಿಜಯ್ ಸಿಂಗ್ ಚೌಟಾಲಾ ಮತ್ತು ಕಾಂಗ್ರೆಸ್‌ ಅಭ್ಯರ್ಥಿ ರಣದೀಪ್ ಸುರ್ಜೇವಾಲ ಅವರ ಸೋಲು ಪ್ರತಿಪಕ್ಷಗಳಿಗೆ ಎಚ್ಚರಿಕೆ ಗಂಟೆಯಾಗಿತ್ತು. 2016ರ ಜಾಟ್ ಪ್ರತಿಭಟನೆ ಬಳಿಕ ಸರ್ಕಾರದ ಆಡಳಿತ ಕುಸಿದಿದೆ ಎಂದು ಬಿಂಬಿಸಲು ಹೊರಟಿದ್ದ ಪ್ರತಿಪಕ್ಷಗಳು ಪೆಟ್ಟು ತಿಂದಿದ್ದವು.

ಪ್ರತಿಕ್ರಿಯಿಸಿ (+)