ಶನಿವಾರ, ಮೇ 15, 2021
26 °C
ವಿಧಾನ ಪರಿಷತ್‌ ಸದಸ್ಯ ಬಸವರಾಜ ಹೊರಟ್ಟಿ ನೇತೃತ್ವದಲ್ಲಿ ಹೋರಾಟಗಾರರ ಸಭೆ

ಮಹದಾಯಿ: ನಿರ್ಣಾಯಕ ಹೋರಾಟಕ್ಕೆ ತೀರ್ಮಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ಮಹದಾಯಿ, ಕಳಸಾ-ಬಂಡೂರಿ ಯೋಜನೆ ಅನುಷ್ಠಾನಕ್ಕೆ ಆಗ್ರಹಿಸಿ ನಿರ್ಣಾಯಕ ಹೋರಾಟ ನಡೆಸಲು ರೈತ ಮುಖಂಡರು, ಹೋರಾಟಗಾರರು ತೀರ್ಮಾನಿಸಿದರು.

ಇಲ್ಲಿನ ಪ್ರವಾಸಿ ಮಂದಿರದಲ್ಲಿ ಸೋಮವಾರ ನಡೆದ ಮಹದಾಯಿ, ಕಳಸಾ ಬಂಡೂರಿ ಹೋರಾಟಗಾರರ ಸಭೆಯ ಬಳಿಕ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ, ಮಹದಾಯಿ ನದಿ ನೀರು ಹಂಚಿಕೆ ಮಾಡಿ ನ್ಯಾಯಮಂಡಳಿ ನೀಡಿರುವ ತೀರ್ಪಿನ ಜಾರಿ ಸಂಬಂಧ ಕೇಂದ್ರ ಸರ್ಕಾರ ತಕ್ಷಣ ಅಧಿಸೂಚನೆ ಹೊರಡಿಸಬೇಕು ಹಾಗೂ ರಾಜ್ಯ ಸರ್ಕಾರ ಕಾಮಗಾರಿ ಆರಂಭಿಸಬೇಕು ಎಂದು ಒತ್ತಾಯಿಸಿದರು.

ಮಹದಾಯಿ ನ್ಯಾಯಮಂಡಳಿಯ ತೀರ್ಪಿಗೆ ಅನುಗುಣವಾಗಿ ಕಳಸಾ–ಬಂಡೂರಿಯಿಂದ 13.40 ಟಿಎಂಸಿ ಅಡಿ ನೀರಿನ ಬಳಕೆಗೆ ಕರ್ನಾಟಕಕ್ಕೆ ಈ ಹಿಂದೆ ಅನುಮತಿ ನೀಡಿದ್ದ ಕೇಂದ್ರ ಪರಿಸರ ಮತ್ತು ಅರಣ್ಯ ಇಲಾಖೆಯು ಇದೀಗ ಗೋವಾದ ಒತ್ತಡಕ್ಕೆ ಮಣಿದು, ತನ್ನ ಆದೇಶಕ್ಕೆ ತಡೆ ನೀಡಿ ಹೊರಡಿಸಿರುವ ಆದೇಶವನ್ನು ತಕ್ಷಣ ಹಿಂಪಡೆಯಬೇಕು ಎಂದು ಆಗ್ರಹಿಸಿದರು.

ಈ ಸಂಬಂಧ ಮಲಪ್ರಭಾ ಅಚ್ಚುಕಟ್ಟು ವ್ಯಾಪ್ತಿಯ ನಾಲ್ಕು ಜಿಲ್ಲೆಗಳ ಎಲ್ಲ ಸಂಸದರು, ಶಾಸಕರೊಂದಿಗೆ ಜನವರಿ 5ರಂದು ಸಭೆ ನಡೆಸಿ, ಕಳಸಾ ಬಂಡೂರಿ ಯೋಜನೆ ಜಾರಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ಮೇಲೆ ಪಕ್ಷಾತೀತವಾಗಿ ಒತ್ತಡ ಹೇರುವಂತೆ ಮನವಿ ಮಾಡಲಾಗುವುದು ಎಂದು ಹೇಳಿದರು.

ಮಹದಾಯಿ ಯೋಜನೆ ಅನುಷ್ಠಾನಕ್ಕೆ ಆಗ್ರಹಿಸಿ ನಾಲ್ಕು ಜಿಲ್ಲೆಗಳ ವ್ಯಾಪ್ತಿಯಲ್ಲಿ ಪ್ರತ್ಯೇಕವಾಗಿ ಹೋರಾಟ ನಡೆಸುತ್ತಿರುವ ಹತ್ತಾರು ಸಂಘಟನೆಗಳನ್ನು ಒಂದೇ ವೇದಿಕೆಯಡಿ ಒಗ್ಗೂಡಿಸಿ, ಸಂಘಟನೆಯನ್ನು ಪುನರ್ ರಚಿಸಲಾಗುವುದು ಎಂದರು.

ಯೋಜನೆ ವ್ಯಾಪ್ತಿಯ 13 ತಾಲ್ಲೂಕಿನಲ್ಲಿ ರೈತರ ಜಾಗೃತಿ ಸಭೆ ನಡೆಸಿ, ಜನವರಿ 20ರಿಂದ ಆರಂಭವಾಗುವ ಅಧಿವೇಶನಕ್ಕೂ ಮೊದಲು ಬೃಹತ್ ರೈತ ಹೋರಾಟ ರೂಪಿಸಲಾಗುವುದು ಎಂದು ತಿಳಿಸಿದರು.

‘ಮಹದಾಯಿ ವಿಷಯವಾಗಿ ಅಧಿವೇಶನದ ಆರಂಭದಲ್ಲೇ ಸರ್ಕಾರದ ಗಮನ ಸೆಳೆಯುತ್ತೇನೆ. ಸರ್ವಪಕ್ಷಗಳ ಮುಖಂಡರು, ರೈತ ಮುಖಂಡರ ಸಭೆ ನಡೆಸುವಂತೆ ಮುಖ್ಯಮಂತ್ರಿ ಮೇಲೆ ಒತ್ತಡ ಹೇರುತ್ತೇನೆ’ ಎಂದು ಹೊರಟ್ಟಿ ತಿಳಿಸಿದರು.

ಮಾಜಿ ಶಾಸಕ ಎನ್.ಎಚ್.ಕೋನರಡ್ಡಿ, ರೈತ ಮುಖಂಡರಾದ ವಿಕಾಸ ಸೊಪ್ಪಿನ, ಮಹೇಶ ಪತ್ತಾರ, ಮುಖಂಡರಾದ ಅಮೃತ ಇಜಾರಿ, ಅಣ್ಣಪ್ಪ ಹುಬ್ಬಳ್ಳಿ, ರಾಜಣ್ಣ ಕೊರವಿ, ಸಿದ್ದು ತೇಜಿ, ರಾಜಶೇಖರ ಮೆಣಸಿನಕಾಯಿ, ಬಾಬಾ ಜಾನ ಮುಧೋಳ, ದೇವಾಣಂದ ಜಗಾಪುರ, ಶೋಭಾ ಕಮತರ ಸೇರಿದಂತೆ ವಿವಿಧ ಜಿಲ್ಲೆಗಳ ರೈತ ಮುಖಂಡರು ಪಾಲ್ಗೊಂಡಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು