ತಡೆಗೋಡೆ ತೆರವಿಗೊಂದು ‘ತಡೆಗೋಡೆ’!

7
ಮಹದಾಯಿ: ಕಳಸಾದಿಂದ 1.72 ಟಿಎಂಸಿ ಅಡಿ, ಬಂಡೂರಿಯಿಂದ 2.18 ಟಿಎಂಸಿ ಅಡಿ ನೀರು ಲಭ್ಯ

ತಡೆಗೋಡೆ ತೆರವಿಗೊಂದು ‘ತಡೆಗೋಡೆ’!

Published:
Updated:
ಮಹದಾಯಿ ನ್ಯಾಯಮಂಡಳಿ ತೀರ್ಪನ್ನು ಸ್ವಾಗತಿಸಿದ ವಿವಿಧ ಸಂಘಟನೆಗಳ ಸದಸ್ಯರು ಹುಬ್ಬಳ್ಳಿಯ ಚನ್ನಮ್ಮ ವೃತ್ತದಲ್ಲಿ ಬುಧವಾರ ಕುಣಿದು ಸಂಭ್ರಮಾಚರಣೆ ಮಾಡಿದರು.– ಪ್ರಜಾವಾಣಿ ಚಿತ್ರ: ತಾಜುದ್ದೀನ್ ಆಜಾದ

ಬೆಂಗಳೂರು: ಮಹದಾಯಿ ನ್ಯಾಯಮಂಡಳಿ ತೀರ್ಪಿನಲ್ಲಿ ರಾಜ್ಯದ ನೀರಿನ ಬೇಡಿಕೆಗೆ ಮನ್ನಣೆ ಸಿಕ್ಕಿದ್ದರೂ ಕಳಸಾ ನಾಲೆಗೆ ನದಿಯ ಸಂಪರ್ಕ ಕಲ್ಪಿಸುವ ತಾಣದಲ್ಲಿ ನಿರ್ಮಿಸಿರುವ ತಡೆಗೋಡೆಯನ್ನು ಒಡೆಯಲು ‘ನೀರು ನಿರ್ವಹಣಾ ಪ್ರಾಧಿಕಾರದ ಅನುಮತಿ ಅಗತ್ಯ’ ಎಂಬ ಮತ್ತೊಂದು ‘ತಡೆಗೋಡೆ’ ಅಡ್ಡಿಯಾಗಿದೆ.

ಕಳಸಾ ನಾಲೆಯ ತಡೆಗೋಡೆಯನ್ನು ಒಡೆಯುವ ಜತೆಗೆ ಪುಟ್ಟ ಅಣೆಕಟ್ಟು ನಿರ್ಮಾಣ ಹಾಗೂ ಸಣ್ಣ–ಪುಟ್ಟ ಸಿವಿಲ್‌ ಕಾಮಗಾರಿ ನಡೆಸಿದ್ದರೆ ತಕ್ಷಣವೇ 1.72 ಟಿಎಂಸಿ ಅಡಿ ನೀರನ್ನು ಬಳಸಿಕೊಳ್ಳಲು ಸಾಧ್ಯವಿತ್ತು. ಆದರೆ, ನ್ಯಾಯಮಂಡಳಿ ಷರತ್ತಿನಿಂದ ಲಭ್ಯವಾಗಿರುವ ನೀರಿನ ಬಳಕೆ ಸದ್ಯಕ್ಕೆ ಸಾಧ್ಯವಾಗದೆ ಕನ್ನಡಿಯೊಳಗಿನ ಗಂಟಾಗಿದೆ.

ಬಂಡೂರಿ ನಾಲೆಯಿಂದ 2.18 ಟಿಎಂಸಿ ಅಡಿಯಷ್ಟು ನೀರು ರಾಜ್ಯದ ಬಳಕೆಗೆ ಲಭ್ಯವಾಗಲಿದೆ. ಆದರೆ, ಈ ನಾಲೆಗೆ ಅರಣ್ಯದ ಒಳಗಿಂದಲೇ ನೀರನ್ನು ತಿರುಗಿಸಿ ತರಬೇಕು. ಅಲ್ಲದೆ, ಹಲ್ಸರಾ ಮತ್ತು ಬಂಡೂರಿ ಬಳಿ ಅಣೆಕಟ್ಟುಗಳನ್ನೂ ನಿರ್ಮಿಸಬೇಕು. ಕೇಂದ್ರ ಅರಣ್ಯ ಮತ್ತು ಪರಿಸರ ಇಲಾಖೆಗೆ ಹೊಸದಾಗಿ ಪ್ರಸ್ತಾವ ಸಲ್ಲಿಸಿ ಅನುಮತಿ ಪಡೆಯಬೇಕಿದೆ. ಹೀಗಾಗಿ ಬಂಡೂರಿ ನಾಲೆಯಿಂದ ನೀರು ಪಡೆಯಲು ವರ್ಷಗಳೇ ಹಿಡಿಯಬಹುದು ಎಂದು ಜಲಸಂಪನ್ಮೂಲ ಇಲಾಖೆಯ ಮೂಲಗಳು ತಿಳಿಸಿವೆ.

**

ರಾಜ್ಯಕ್ಕೆ 13.42 ಟಿಎಂಸಿ ಅಡಿ ನೀರು

ನವದೆಹಲಿ: ಮಹದಾಯಿ ನದಿ ನೀರು ಹಂಚಿಕೆ ಬಿಕ್ಕಟ್ಟು ಬಗೆಹರಿಸುವ ನಿಟ್ಟಿನಲ್ಲಿ ವಿಚಾರಣೆ ನಡೆಸಿದ್ದ ಜಲವಿವಾದ ನ್ಯಾಯಮಂಡಳಿಯು, ರಾಜ್ಯಕ್ಕೆ ಒಟ್ಟು 13.42 ಟಿಎಂಸಿ ಅಡಿ ನೀರನ್ನು ಹಂಚಿಕೆ ಮಾಡಿದೆ.

ಮುಖ್ಯವಾಗಿ, ‘ಮಹದಾಯಿ ನದಿ ಕಣಿವೆಯಾಚೆಗಿನ ಮಲಪ್ರಭಾ ನದಿಗೆ ‘ತಿರುವು ಯೋಜನೆ’ ಮೂಲಕ ನೀರೆತ್ತಿಕೊಳ್ಳಲು ಅವಕಾಶ ಕೊಡಲೇಬಾರದು’ ಎಂಬ ಗೋವಾದ ಪ್ರಬಲ ವಾದವನ್ನು ನ್ಯಾಯಮಂಡಳಿ ಸಾರಾಸಗಟಾಗಿ ತಿರಸ್ಕರಿಸಿದೆ.

ಮಂಗಳವಾರ ಪ್ರಕಟಿಸಲಾದ 12 ಸಂಪುಟಗಳ ಐತೀರ್ಪಿನಲ್ಲಿ, ಕೃಷ್ಣಾ ಕಣಿವೆ ವ್ಯಾಪ್ತಿಯ ಮಲಪ್ರಭಾ ನದಿಗೆ ನೀರು ಹರಿಸಿಕೊಳ್ಳುವ ಮಹತ್ವದ ಕಳಸಾ, ಬಂಡೂರಿ ನಾಲಾ ‘ತಿರುವು ಯೋಜನೆ’ಗೆ ‘ಅಸ್ತು’ ಎಂದಿರುವ ನ್ಯಾಯಮೂರ್ತಿ ಜೆ.ಎಂ. ಪಾಂಚಾಲ್‌ ನೇತೃತ್ವದ ನ್ಯಾಯಮಂಡಳಿ, ಈ ಎರಡೂ ನಾಲೆಗಳಿಂದ ತಲಾ 1.72 ಟಿಎಂಸಿ ಅಡಿ ಹಾಗೂ 2.18 ಟಿಎಂಸಿ ಅಡಿ ಸೇರಿದಂತೆ ಒಟ್ಟು 3.90 ಟಿಎಂಸಿ ಅಡಿ ನೀರು ಪಡೆಯಲು ಅನುಮತಿ ನೀಡಿದೆ.

ಮುಂಬೈ ಕರ್ನಾಟಕ ಭಾಗದ ಹುಬ್ಬಳ್ಳಿ– ಧಾರವಾಡ ಅವಳಿ ನಗರ, ಕುಂದಗೋಳ ಪಟ್ಟಣ ಹಾಗೂ ಇತರ 18 ಗ್ರಾಮಗಳ ಜನರ ಕುಡಿಯುವ ನೀರಿನ ಅಗತ್ಯ ಪೂರೈಸಲು ಈ ನೀರಿನ ಬಳಕೆಗೆ ಅವಕಾಶ ಕಲ್ಪಿಸುವ ಮೂಲಕ ಕಳೆದ ಮೂರು ವರ್ಷಗಳಿಂದ ಪ್ರತಿಭಟನೆ ನಡೆಸುತ್ತಿದ್ದ ಈ ಭಾಗದ ರೈತರು ಮತ್ತು ಸಾರ್ವಜನಿಕರಲ್ಲಿ ‘ನಿರಾಳ ಭಾವ’ ಉಂಟಾಗುವಂತೆ ಮಾಡಿದೆ.

**‌

‘ಸುಪ್ರೀಂ’ಗೆ ಮೇಲ್ಮನವಿ
ಕುಡಿಯುವ ನೀರಿನ ಯೋಜನೆಗೆ ಅನುಮತಿ ದೊರೆತಿರುವುದರಿಂದ ಕರ್ನಾಟಕ ನಿರೀಕ್ಷಿಸಿದಂತೆಯೇ ಸಮಾಧಾನಕರವಾದ ತೀರ್ಪು ಹೊರಬಿದ್ದಿದೆ. ಮಹದಾಯಿ ನದಿಯಲ್ಲಿನ ಪೂರ್ಣ ಪಾಲನ್ನು ಕೋರಿ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸುವ ಮೂಲಕ ಕಾನೂನು ಹೋರಾಟ ಮುಂದುವರಿಸಲಾಗುವುದು.

–ಮೋಹನ್‌ ಕಾತರಕಿ, ರಾಜ್ಯದ ಪರ ವಾದ ಮಂಡಿಸಿದ್ದ ವಕೀಲ

**

ತೀರ್ಪಿನ ಪ್ರತಿ ಓದಿದ ಬಳಿಕ ಸದ್ಯವೇ ಕಾನೂನು ಪರಿಣಿತರು ಮತ್ತು ರಾಜಕೀಯ ಸಭೆ ನಡೆಯುತ್ತದೆ. ಮುಂದೇನು ಮಾಡಬೇಕು ಎಂಬುದನ್ನು ಆ ಬಳಿಕವೇ ತೀರ್ಮಾನಿಸಲಾಗುತ್ತದೆ.
–ರಾಕೇಶ್‌ಸಿಂಗ್‌, ಪ್ರಧಾನಕಾರ್ಯದರ್ಶಿ, ಜಲಸಂಪನ್ಮೂಲ ಇಲಾಖೆ

**

ನ್ಯಾಯಮಂಡಳಿಯಿಂದ ಅಲ್ಪ ನ್ಯಾಯ ಸಿಕ್ಕಿದ್ದು, ಪೂರ್ಣ ನ್ಯಾಯಕ್ಕಾಗಿ ಹೋರಾಟ ನಡೆಸುತ್ತೇವೆ
–ಬಸವರಾಜ ಬೊಮ್ಮಾಯಿ, ಶಾಸಕ

**

ತೀರ್ಪನ್ನು ಕೂಲಂಕಷವಾಗಿ ಅಧ್ಯಯನ ನಡೆಸಿ ಎಲ್ಲರೊಂದಿಗೆ ಸಮಾಲೋಚಿಸಿ ಸೂಕ್ತ ತೀರ್ಮಾನ ಕೈಗೊಳ್ಳುತ್ತೇನೆ.
–ಎಚ್‌.ಡಿ.ಕುಮಾರಸ್ವಾಮಿ, ಮುಖ್ಯಮಂತ್ರಿ

**

ತೀರ್ಪಿನ ಕುರಿತು ಚರ್ಚೆ ನಡೆಸಿ ಮರು ಅರ್ಜಿ ಸಲ್ಲಿಸಲು ಚಿಂತನೆ ನಡೆಸುತ್ತೇವೆ.
–ಜಿ.ಪರಮೇಶ್ವರ, ಉಪಮುಖ್ಯಮಂತ್ರಿ

ಬರಹ ಇಷ್ಟವಾಯಿತೆ?

 • 14

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !