ಸರ್ವಪಕ್ಷಗಳೊಂದಿಗೆ ಚರ್ಚಿಸಿ ನಿರ್ಧಾರ: ಡಿ.ಕೆ.ಶಿವಕುಮಾರ್‌

7
‘ಮಹಾದಾಯಿ ನ್ಯಾಯಮಂಡಳಿ ತೀರ್ಪಿನಿಂದ ರಾಜ್ಯಕ್ಕೆ ಅನ್ಯಾಯ’

ಸರ್ವಪಕ್ಷಗಳೊಂದಿಗೆ ಚರ್ಚಿಸಿ ನಿರ್ಧಾರ: ಡಿ.ಕೆ.ಶಿವಕುಮಾರ್‌

Published:
Updated:

ಬಳ್ಳಾರಿ: ‘ಮಹದಾಯಿ ನ್ಯಾಯಮಂಡಳಿ ತೀರ್ಪಿನಿಂದ ರಾಜ್ಯಕ್ಕೆ ಅನ್ಯಾಯವಾಗಿದ್ದು, ಸರ್ವಪಕ್ಷಗಳೊಂದಿಗೆ ಚರ್ಚಿಸಿ ಮುಂದಿನ ನಡೆಯನ್ನು ನಿರ್ಧರಿಸಲಾಗುವುದು’ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್‌ ತಿಳಿಸಿದರು.

ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಬುಧವಾರ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಪಾಲ್ಗೊಂಡ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನ್ಯಾಯಮಂಡಳಿಯು ತೀರ್ಪನ್ನು ತೆರೆದ ನ್ಯಾಯಾಲಯದಲ್ಲಿ ಘೋಷಿಸದೇ ಕೇಂದ್ರಕ್ಕೆ ವರದಿ ಸಲ್ಲಿಸಿರುವುದು ಅಚ್ಚರಿ ತಂದಿದೆ. ಯಾವ ಚರ್ಚೆಗಳನ್ನು ಆಧರಿಸಿ ತೀರ್ಪನ್ನು ಪ್ರಕಟಿಸಲಾಗಿದೆ ಎಂಬುದು ಜನರಿಗೆ ಹೇಗೆ ಗೊತ್ತಾಗಬೇಕು’ ಎಂದು ಪ್ರಶ್ನಿಸಿದರು.

ತೀರ್ಪು ಸ್ವಲ್ಪಮಟ್ಟಿಗೆ ಸಮಾಧಾನ ತಂದಿದೆ ಎಂಬ ಹಿಂದಿನ ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವ, ‘ಅವರಿಗೆ ತೀರ್ಪು ಸಮಾಧಾನ ತಂದಿರಬಹುದು. ಅವರ ಬಳಿ ತೀರ್ಪಿನ ಬಗ್ಗೆ ಸಂಪೂರ್ಣ ಮಾಹಿತಿ ಇದ್ದಂತಿಲ್ಲ. ನಾನು ಸಂಪೂರ್ಣ ಮಾಹಿತಿ ಪಡೆದೇ ಪ್ರತಿಕ್ರಿಯಿಸುತ್ತಿರುವೆ. ನಮ್ಮ ರಾಜ್ಯಕ್ಕೆ ಅನ್ಯಾಯವಾಗಿರುವುದು ಸ್ಪಷ್ಟ’ ಎಂದು ಪ್ರತಿಪಾದಿಸಿದರು.

‘ವಿಧಾನ ಸಭೆ ಪ್ರತಿಪಕ್ಷ ನಾಯಕ ಬಿ.ಎಸ್‌ಯಡಿಯೂರಪ್ಪ ಅವರು ತೀರ್ಪು ಪ್ರಕಟವಾಗುವ ಮುಂಚೆಯೇ ಅಭಿನಂದನೆ ಸಲ್ಲಿಸಿದ್ದಾರೆ. ಅವರಿಗೆ ಅದು ಅಭಿನಂದನೀಯ ಎಂದು ಹೇಗೆ ಗೊತ್ತಾಯಿತು’ ಎಂದು ಪ್ರಶ್ನಿಸಿದರು.

ಗಲ್ಲಿಗೇರಿಸಲಿ: ‘ಬಳ್ಳಾರಿ ಜಿಲ್ಲೆಯ ಉಸ್ತುವಾರಿಯನ್ನು ಡಿ.ಕೆ.ಶಿವಕುಮಾರ್‌ ಅವರಿಗೆ ವಹಿಸಿರುವುದು ತೋಳನ ಕೈಗೆ ಕುರಿ ಕೊಟ್ಟಂತಾಗಿದೆ ಎಂಬ ಜನಸಂಗ್ರಾಮ ಪರಿಷತ್‌ ಮುಖಂಡ ಎಸ್‌.ಆರ್‌.ಹಿರೇಮಠ್‌ ಅವರ ಹೇಳಿಕೆ ಕುರಿತು ವ್ಯಂಗ್ಯವಾಡಿದ ಸಚಿವರು, ‘ಅಕ್ರಮ ಗಣಿಗಾರಿಕೆ ನಡೆಸಿದವರೆಲ್ಲರನ್ನೂ ಅವರು ಗಲ್ಲಿಗೇರಿಸಲಿ. ಚುನಾವಣೆಗೆ ನಿಂತು ಸ್ಪರ್ಧಿಸಿ ಗೆದ್ದು ಬಂದು ಆರೋಪಿಸಲಿ, ನೋಡೋಣ’ ಎಂದು ಸವಾಲು ಹಾಕಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !