ದಯಾ ಮರಣಕ್ಕೆ ಆಗ್ರಹಿಸಿ ಮಹದಾಯಿ ಹೋರಾಟಗಾರರ ಧರಣಿ

7

ದಯಾ ಮರಣಕ್ಕೆ ಆಗ್ರಹಿಸಿ ಮಹದಾಯಿ ಹೋರಾಟಗಾರರ ಧರಣಿ

Published:
Updated:

ಹುಬ್ಬಳ್ಳಿ: ಕಳಸಾ– ಬಂಡೂರಿ ಮತ್ತು ಮಹಾದಾಯಿ ಯೋಜನೆಗೆ ಆಗ್ರಹಿಸಿ ‘ನೀರು ಕೊಡಿ, ಇಲ್ಲವೆ ದಯಾಮರಣ ಕೊಡಿ’ ಅಂತಿಮ ಹೋರಾಟವನ್ನು ಆರಂಭಿಸಲಾಗುವುದು ಎಂದು ರೈತ ಸೇನಾ ಕರ್ನಾಟಕದ ಕೇಂದ್ರ ಸಮನ್ವಯ ಸಮಿತಿ ಅಧ್ಯಕ್ಷ ಗುರು ರಾಯನಗೌಡ್ರ ಹೇಳಿದರು.

ನಾಲ್ಕು ಜಿಲ್ಲೆಯ 9 ತಾಲ್ಲೂಕಿನ ರೈತರೊಂದಿಗೆ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಇದೇ 11ರಿಂದ ಧರಣಿ ಆರಂಭಿಸಲಾಗುವುದು.  ಮಹದಾಯಿ ನ್ಯಾಯಮಂಡಳಿ ತೀರ್ಪು ರಾಜ್ಯದ ರೈತರ ಪರವಾಗಿ ಬಂದರೆ ಸಂಭ್ರಮಾಚರಣೆ ಮಾಡಲಾಗುವುದು. ವ್ಯತಿರಿಕ್ತ ತೀರ್ಪು ಬಂದರೆ ರಾಷ್ಟ್ರಪತಿಗಳು ದಯಾಮರಣಕ್ಕೆ ಅನುಮತಿ ನೀಡುವ ವರೆಗೂ ಹೋರಾಟ ಮುಂದುವರೆಸಲಾಗುವುದು ಎಂದು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಯೋಜನೆ ಜಾರಿಗೆ ಆಗ್ರಹಿಸಿ ನಾಲ್ಕು ವರ್ಷಗಳಿಂದ ನಿರಂತರವಾಗಿ ಹೋರಾಟ ನಡೆಸುತ್ತಿದ್ದರೂ ಯಾವುದೇ ಪ್ರಯೋಜನ ಆಗಿಲ್ಲ. ದೆಹಲಿಯಲ್ಲಿ ಸಹ ಪ್ರತಿಭಟನೆ ನಡೆಸಿ ಕೇಂದ್ರ ಸರ್ಕಾರದ ಗಮನ ಸೆಳೆಯಲಾಯಿತು. ಕೊನೆಗೆ ಬೇಸತ್ತು ದಯಾ ಮರಣ ನೀಡುವಂತೆ ರಾಷ್ಟ್ರಪತಿಗೆ ಮನವಿ ಸಲ್ಲಿಸಲಾಗಿದೆ. ಅವರಿಂದಲೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ನಮ್ಮ ಮುಂದೆ ಈಗ ನೀರು ಅಥವಾ ಸಾವು ಎರಡೇ ಆಯ್ಕೆಗಳಿವೆ ಎಂದರು.

ಬೆಂಗಳೂರಿನಲ್ಲಿ ನಡೆಸುತ್ತಿರುವ ಧರಣಿಗೆ ವಿವಿಧ ಕನ್ನಡ ಪರ ಸಂಘಟನೆಗಳು, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಬೆಂಬಲ ನೀಡಿವೆ ಎಂದು ಅವರು ಮಾಹಿತಿ ನೀಡಿದರು.

ಸಿಗರೇಟು ಕಂಪೆನಿ ಮಾಲೀಕ, ಮದ್ಯ ತಯಾರಿಕಾ ಕಂಪೆನಿ ಮಾಲೀಕ ಐಷಾರಾಮಿ ಜೀವನ ನಡೆಸುತ್ತಿದ್ದಾರೆ. ಆದರೆ ದೇಶದ ಜನರಿಗೆ ಅನ್ನ ನೀಡುವ ಅನ್ನದಾತ ಮಾತ್ರ ಸಮಸ್ಯೆಯ ಸುಳಿಗೆ ಸಿಲುಕಿದ್ದಾನೆ. ರೈತರ ಬೇಡಿಕೆಗಳನ್ನು ಈಡೇರಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು. ಮಹದಾಯಿ ಯೋಜನೆ ಜಾರಿಗೊಳಿಸುವ ಮೂಲಕ ಈ ಭಾಗದ ರೈತರ ಬಹುದಿನದ ಬೇಡಿಕೆಗೆ ಸ್ಪಂದಿಸಬೇಕು ಎಂದು ಸಂಘಟನೆಯ ಕುಂದಗೋಳ ತಾಲ್ಲೂಕು ಘಟಕದ ಅಧ್ಯಕ್ಷ ಗಂಗಾಧರ ಶಿ ಧರೆಣ್ಣವರೆ ಹೇಳಿದರು. ಮುಖಂಡರಾದ ಬಸವರಾಜ ಗುಡಿ, ಮಹೇಶ ನಾವಳ್ಳಿ ಇದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !