ಬಂಡಾಯ ನಾಡಿನ ರೈತರ ಯಶಸ್ವಿ ಹೋರಾಟ

7
ನರಗುಂದದಲ್ಲಿ 2015ರ ಜುಲೈನಿಂದ ನಿರಂತರವಾಗಿ ನಡೆದ ಸತ್ಯಾಗ್ರಹಕ್ಕೆ ಜಯದ ಮಾಲೆ

ಬಂಡಾಯ ನಾಡಿನ ರೈತರ ಯಶಸ್ವಿ ಹೋರಾಟ

Published:
Updated:
Deccan Herald

ಹುಬ್ಬಳ್ಳಿ: 1982ರಲ್ಲಿ ನರಗುಂದ ಬಂಡಾಯದ ಮೂಲಕ ಅಂದಿನ ಆರ್‌.ಗುಂಡೂರಾವ್‌ ಸರ್ಕಾರವನ್ನು ಕೆಡವಿದ್ದ ನರಗುಂದ–ನವಲಗುಂದ ಭಾಗದ ಛಲದಂಕಮಲ್ಲ ರೈತರು, ಇದೀಗ ಮತ್ತೊಂದು ಇತಿಹಾಸ ಸೃಷ್ಟಿಸಿದ್ದಾರೆ. ಮೂರು ವರ್ಷಗಳ ನಿರಂತರ ಹೋರಾಟದ ಬಳಿಕ ಮಹದಾಯಿ ನೀರನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ನರಗುಂದ– ನವಲಗುಂದ ಬಂಡಾಯದಲ್ಲಿ ಪೊಲೀಸರ ಗುಂಡೇಟಿಗೆ ಬಲಿಯಾದ ರೈತರನ್ನು ಪ್ರತಿ ವರ್ಷ ಜುಲೈ 21ರಂದು ಸ್ಮರಿಸಿಕೊಳ್ಳುವ ಸಂಪ್ರದಾಯ ನಡೆದುಕೊಂಡು ಬಂದಿದೆ.

ಅದು 2015ರ ರೈತ ಬಂಡಾಯ ದಿನಾಚರಣೆಗೆ ಒಂದು ವಾರ ಮೊದಲು ಅಷ್ಟೆ. ಅಂದರೆ ಜುಲೈ 16ರಂದು ನರಗುಂದದಲ್ಲಿ ಮತ್ತೊಂದು ಹೋರಾಟಕ್ಕೆ ವೇದಿಕೆ ಸಿದ್ಧವಾಯಿತು. ಮಹದಾಯಿ ನದಿ ನೀರನ್ನು ತಂದೇ ತೀರುವ ಸಂಕಲ್ಪದೊಂದಿಗೆ ರೈತ ಸೇನಾ ಸಂಘಟನೆಯ ನೇತೃತ್ವದಲ್ಲಿ ಚಳವಳಿ ಆರಂಭವಾಯಿತು. ಹುಬ್ಬಳ್ಳಿ– ಸೊಲ್ಲಾಪುರ ರಾಷ್ಟ್ರೀಯ ಹೆದ್ದಾರಿ ಪಕ್ಕದ ವೇದಿಕೆಯಲ್ಲಿ ಆರಂಭವಾದ ಹೋರಾಟವು, ಮಹದಾಯಿ ನ್ಯಾಯಮಂಡಳಿಯಿಂದ ಮಂಗಳವಾರದ ತೀರ್ಪು ಪಡೆಯುವ ತನಕ ತಲುಪಿದೆ.

ಗದಗ ಜಿಲ್ಲೆಯ ನರಗುಂದ ಚಳವಳಿಯಿಂದ ಸ್ಫೂರ್ತಿ ಪಡೆದ ಧಾರವಾಡ, ಬೆಳಗಾವಿ ಹಾಗೂ ಬಾಗಲಕೋಟೆ ಜಿಲ್ಲೆಯ ರೈತರು, ನವಲಗುಂದ, ಅಣ್ಣಿಗೇರಿ, ಹುಬ್ಬಳ್ಳಿ– ಧಾರವಾಡ, ರಾಮದುರ್ಗ, ಬೈಲಹೊಂಗಲ, ಬಾದಾಮಿ, ಗುಳೇದಗುಡ್ಡ ಸೇರಿದಂತೆ ಮಲಪ್ರಭಾ ಅಚ್ಚುಕಟ್ಟು ವ್ಯಾಪ್ತಿಯ ನಗರ, ಪಟ್ಟಣಗಳಲ್ಲಿ ಹೋರಾಟ ಆರಂಭಿಸಿದರು.

ಹೋರಾಟಗಾರರನ್ನು ಬೆದರಿಸಲು ಪೊಲೀಸ್‌ ಬಲವನ್ನು ಬಳಸಲಾಯಿತು. ನವಲಗುಂದ ತಾಲ್ಲೂಕಿನ ಯಮನೂರ, ಅಳಗವಾಡಿ ಗ್ರಾಮಗಳಲ್ಲಿ ಅಸಹಾಯಕ ವೃದ್ಧರು, ಮಹಿಳೆಯರು ಹಾಗೂ ರೈತರ ಮೇಲೆ ಪೊಲೀಸರ ಬೂಟಿನೇಟು, ಲಾಠಿ ಏಟುಗಳು ಮಾಯದ ಗಾಯವನ್ನು ಮಾಡಿದವು. ಮಣ್ಣಿನ ಮಕ್ಕಳ ಮೇಲೆ ನಡೆದ ಈ ದೌರ್ಜನ್ಯವನ್ನು ಹೈಕೋರ್ಟ್ ಕಟು ಶಬ್ದಗಳಲ್ಲಿ ಟೀಕಿಸಿತು. ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಘಟನೆಗೆ ವಿಷಾದ ವ್ಯಕ್ತಪಡಿಸಿ ತಪ್ಪಿತಸ್ಥ ಪೊಲೀಸ್‌ ಅಧಿಕಾರಿಗಳನ್ನು ಅಮಾನತುಗೊಳಿಸಿದರು.

ಅಂದಿನಿಂದ, ಹೋರಾಟದ ಕಿಚ್ಚು ಮತ್ತಷ್ಟು ಹೆಚ್ಚಿತು. ಉತ್ತರ ಕರ್ನಾಟಕದ ನಾಲ್ಕು ಜಿಲ್ಲೆಗಳ ರೈತರ ಭಾವನೆಗಳನ್ನು ಅರಿತುಕೊಂಡ ಅಂದಿನ ಮುಖ್ಯಮಂತ್ರಿ, ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿ ಮಧ್ಯಸ್ಥಿಕೆಗೆ ಒತ್ತಾಯಿಸಿದರು. ಮಧ್ಯಸ್ಥಿಕೆಗೆ ಮನಸ್ಸು ಮಾಡದ ಪ್ರಧಾನಿಯವರ ನಡೆ ಕುರಿತು ವ್ಯಾಪಕ ಆಕ್ರೋಶವೂ ವ್ಯಕ್ತವಾಯಿತು.

ಈ ಭಾಗದ ಬಿಜೆಪಿ ಸಂಸದರು, ಶಾಸಕರ ಮನೆಗಳ ಎದುರು ರೈತ ಹೋರಾಟಗಾರರು ಪ್ರತಿಭಟನೆ ನಡೆಸಿದರು. ಅಂದಿನ ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ ಹೋರಾಟಗಾರರೊಂದಿಗೆ ಹಲವು ಸುತ್ತಿನ ಮಾತುಕತೆಯನ್ನೂ ನಡೆಸಿದರು. ಇದಕ್ಕೂ ಮುನ್ನ ನಡೆದ ರೈತರ ರಸ್ತೆ ತಡೆ, ಮೌನ ಮೆರವಣಿಗೆ, ಹುಬ್ಬಳ್ಳಿಯಲ್ಲಿ ಏಳು ತಾಸು ರೈಲು ತಡೆ ಹಾಗೂ ಮಹದಾಯಿ ವಿವಾದ ಬಗೆಹರಿಸಲು ಒತ್ತಾಯಿಸಿ ನಡೆದ ಚಿತ್ರ ತಾರೆಯರ ಸಮಾವೇಶಗಳು ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ‘ಬಿಸಿ ಮುಟ್ಟಿಸುವ’ ನಿಟ್ಟಿನಲ್ಲಿ ಕೆಲಸ ಮಾಡಿದವು.

ಮಹದಾಯಿ ಚಳವಳಿಗಾಗಿಯೇ ರೈತ ಮುಖಂಡ, ರೈತ ಸೇನಾ ರಾಜ್ಯ ಘಟಕದ ಅಧ್ಯಕ್ಷ ವೀರೇಶ ಸೊಬರದಮಠ ಸನ್ಯಾಸ ದೀಕ್ಷೆ ಸ್ವೀಕರಿಸಿದರು. 2018ರ ಮೇ ತಿಂಗಳಲ್ಲಿ ಮಹದಾಯಿ ಹೋರಾಟಗಾರರು ದಯಾಮರಣ ಕೋರಿ ರಾಷ್ಟ್ರಪತಿಗೆ ಅರ್ಜಿ ಸಲ್ಲಿಸಿದರು. ಈ ಅರ್ಜಿಗೆ ಸ್ಪಂದನೆ ಲಭಿಸದ ಕಾರಣ, ಜುಲೈ 16ರಿಂದ ಮತ್ತೆ ಧರಣಿ ವೇದಿಕೆಯಲ್ಲಿ ದಯಾಮರಣ ಪತ್ರ ಚಳವಳಿ ಪ್ರಾರಂಭಿಸಿದ್ದರು. ಇತ್ತೀಚೆಗೆ ‘ನೀರು ಇಲ್ಲವೇ ಸಾವು’ ಚಳವಳಿಗೆ ಚಾಲನೆ ನೀಡಿದ್ದರು.

ಮಹದಾಯಿ ನ್ಯಾಯಮಂಡಳಿಯು ಮಂಗಳವಾರ ನೀಡಿದ ತೀರ್ಪಿನಿಂದಾಗಿ, 1,126 ದಿನಗಳಿಂದ ನಡೆಸುತ್ತಿದ್ದ ನಿರಂತರ ಹೋರಾಟವು ಒಂದು ಹಂತಕ್ಕೆ ತಲುಪಿದಂತಾಗಿದೆ. ಹೋರಾಟದ ಕಿಚ್ಚಿನಲ್ಲಿದ್ದ ರೈತರು ಮತ್ತು ಹೋರಾಟಗಾರರಲ್ಲಿ ತುಸು ಸಮಾಧಾನ ತಂದಿದೆ.

‘ಅವಕಾಶ ಕೈಚೆಲ್ಲಿದ ಬಿಜೆಪಿ’

ಪರಸ್ಪರ ಮಾತುಕತೆ ಮೂಲಕ ವಿವಾದ ಇತ್ಯರ್ಥಪಡಿಸಿಕೊಳ್ಳುವ ಅವಕಾಶವನ್ನು ಮೂರು ರಾಜ್ಯಗಳಿಗೆ ಮಹದಾಯಿ ನ್ಯಾಯಮಂಡಳಿಯು ಕಲ್ಪಿಸಿತ್ತು. ಇದಕ್ಕೆ ರಾಜ್ಯದ ಆಗಿನ ಕಾಂಗ್ರೆಸ್‌ ಸರ್ಕಾರ ಆಸಕ್ತಿ ತೋರಿತ್ತು. ಆದರೆ, ಗೋವಾ, ಮಹಾರಾಷ್ಟ್ರ ಹಾಗೂ ಕೇಂದ್ರ ಸರ್ಕಾರದಲ್ಲಿ ತನ್ನದೇ ಪಕ್ಷದ ಸರ್ಕಾರ ಇದ್ದರೂ ಬಿಜೆಪಿ ಅದನ್ನು ಬಳಸಿಕೊಳ್ಳದೇ ಕೈಚೆಲ್ಲಿತು.

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ, ಹುಬ್ಬಳ್ಳಿಯಲ್ಲಿ ನಡೆದ ಚುನಾವಣಾ ರ‍್ಯಾಲಿಯಲ್ಲಿ ‘ಮಾತುಕತೆ ಮೂಲಕ ಮಹದಾಯಿ ವಿವಾದ ಬಗೆಹರಿಸಿಕೊಳ್ಳಲು ಸಿದ್ಧವಿದ್ದೇವೆ’ ಎಂಬ ಒಕ್ಕಣೆಯುಳ್ಳ ಗೋವಾ ಮುಖ್ಯಮಂತ್ರಿ ಮನೋಹರ ಪರ‍್ರೀಕರ್‌ ಅವರ ಪತ್ರವನ್ನು ಓದಿ ರೈತರನ್ನು ಸಮಾಧಾನಪಡಿಸುವ ಯತ್ನ ಮಾಡಿದರು. ಆದರೆ, ಪರ‍್ರೀಕರ್‌ ಮಾತ್ರ ಆ ಉತ್ಸಾಹ ತೋರಿಸಲಿಲ್ಲ.

ಪ್ರಧಾನಿ ನರೇಂದ್ರ ಮೋದಿ, ಮೂರೂ ರಾಜ್ಯಗಳ ಮುಖ್ಯಮಂತ್ರಿಗಳನ್ನು ಕರೆದು ಮಾತುಕತೆ ನಡೆಸಬಹುದಿತ್ತು. ಇಲ್ಲವೇ, ರಾಜ್ಯದ ಬಿಜೆಪಿ ಸಂಸದರು ಪ್ರಧಾನಿ ಮೇಲೆ ಒತ್ತಡ ಹೇರಬಹುದಿತ್ತು. ಇದು ಸಾಧ್ಯವಾಗಿದ್ದರೆ ಮಹದಾಯಿ ವಿವಾದವನ್ನು ಇತ್ಯರ್ಥಗೊಳಿಸಿದ ಕೀರ್ತಿ ಬಿಜೆಪಿಗೆ ಸಲ್ಲುತ್ತಿತ್ತು.

‘ಗೆಲುವಿನ ಶ್ರೇಯಸ್ಸು ಮಹದಾಯಿ ಹೋರಾಟಗಾರರಿಗೆ ಹೋಗಲಿದೆ’ ಎಂದು ಯಡಿಯೂರಪ್ಪ ನೀಡಿದ ಪ್ರತಿಕ್ರಿಯೆಯಲ್ಲಿಯೇ ಎಲ್ಲವೂ ಅಡಗಿದೆ. ಯಾವ ರಾಜಕೀಯ ಪಕ್ಷಗಳ ಮುಲಾಜಿಲ್ಲದೆ ಕಾನೂನು ಹೋರಾಟದಿಂದಲೇ ನಮಗೆ ನ್ಯಾಯ ಸಿಕ್ಕಿದ್ದು ಸಮಾಧಾನ, ತೃಪ್ತಿ ತಂದಿದೆ‍‍‍’ ಎನ್ನುತ್ತಾರೆ ಹೋರಾಟಗಾರ ಶಿವಾನಂದ.

ಬರಹ ಇಷ್ಟವಾಯಿತೆ?

 • 8

  Happy
 • 1

  Amused
 • 0

  Sad
 • 1

  Frustrated
 • 0

  Angry

Comments:

0 comments

Write the first review for this !