ರಾಜ್ಯದ ಬೇಡಿಕೆಗಳಿಗೆ ಭಾಗಶಃ ‘ಪುರಸ್ಕಾರ’

7
ಮಹದಾಯಿ ‘ತಿರುವು ಯೋಜನೆ’ಗೆ ನ್ಯಾಯಮಂಡಳಿ ಸಮ್ಮತಿ

ರಾಜ್ಯದ ಬೇಡಿಕೆಗಳಿಗೆ ಭಾಗಶಃ ‘ಪುರಸ್ಕಾರ’

Published:
Updated:
Deccan Herald

ನವದೆಹಲಿ: ಮಹದಾಯಿ ನೀರಿನ ಮೇಲಿನ ತನ್ನ ಹಕ್ಕನ್ನು ಪ್ರತಿಪಾದಿಸುವ ನಿಟ್ಟಿನಲ್ಲಿ ಕರ್ನಾಟಕ ಮಂಡಿಸಿದ್ದ ಪ್ರಬಲ ಮತ್ತು ಪ್ರಮುಖ ವಾದವನ್ನು ಮಹದಾಯಿ ಜಲವಿವಾದ ನ್ಯಾಯಮಂಡಳಿಯು ಭಾಗಶಃ ಪುರಸ್ಕರಿಸಿದೆ.

ಮುಖ್ಯವಾಗಿ ‘ತಿರುವು ಯೋಜನೆ’ ಮೂಲಕ ಮಹದಾಯಿ ಕಣಿವೆಯಾಚೆಗಿನ ಮಲಪ್ರಭಾ ನದಿಗೆ ಕಳಸಾ, ಬಂಡೂರಿ ನಾಲೆಗಳಿಂದ ನೀರು ಪಡೆಯಬೇಕೆಂಬ ಪ್ರಸ್ತಾವಕ್ಕೆ ನ್ಯಾಯಮಂಡಳಿ ಸಮ್ಮತಿ ಸೂಚಿಸಿರುವುದು ರಾಜ್ಯ ಸರ್ಕಾರ ಹಾಗೂ ಕಾನೂನು ತಂಡದ ಸದಸ್ಯರು ನೆಮ್ಮದಿಯ ನಿಟ್ಟುಸಿರು ಬಿಡುವಂತೆ ಮಾಡಿದೆ.

ಮಹದಾಯಿ ನದಿ ಮೂಲಕ ಒಟ್ಟು 36.55 ಟಿಎಂಸಿ ಅಡಿ ನೀರಿಗೆ ಬೇಡಿಕೆ ಸಲ್ಲಿಸಿದ್ದ ರಾಜ್ಯವು, ಬಳಕೆ ಮಾಡುವ ಉದ್ದೇಶದಿಂದ ಕೇಳಿದ್ದು ಸ್ವಲ್ಪ ಮಾತ್ರ. ಅದು, ಮಲಪ್ರಭಾ ನದಿಗೆ 7.56 ಟಿಎಂಸಿ ಅಡಿ ಹಾಗೂ ಕಣಿವೆ ವ್ಯಾಪ್ತಿಯಲ್ಲಿ 1.50 ಟಿಎಂಸಿ ಅಡಿ ಸೇರಿದಂತೆ ಒಟ್ಟು 9.06 ಟಿಎಂಸಿ ಅಡಿ.

ಇದರ ಹೊರತಾಗಿಯೂ ಕಾಳಿ ಯೋಜನೆ ಆರಂಭಿಸಲು ಸೂಪಾ ಜಲಾಶಯಕ್ಕೆ ಮಹದಾಯಿ ಮೂಲಕ 5.52 ಟಿಎಂಸಿ ಅಡಿ ನೀರು ಹರಿಸಿಕೊಳ್ಳಲು ಸಲ್ಲಿಸಲಾಗಿದ್ದ ಬೇಡಿಕೆಯನ್ನು ನ್ಯಾಯಮೂರ್ತಿ ಜೆ.ಎಂ. ಪಾಂಚಾಲ್‌ ನೇತೃತ್ವದ ನ್ಯಾಯಮಂಡಳಿ ತಿರಸ್ಕರಿಸಿದೆ.

ಇನ್ನು, ಜಲವಿದ್ಯುತ್‌ ಯೋಜನೆಗಾಗಿ ಕೋಟ್ನಿ ನಾಲಾದಿಂದ ಕೇಳಲಾಗಿದ್ದ 14 ಟಿಎಂಸಿ ಅಡಿ ನೀರಿನಲ್ಲಿ ರಾಜ್ಯಕ್ಕೆ ದೊರೆತಿದ್ದು 8.02 ಟಿಎಂಸಿ ಅಡಿ.

ಮತ್ತಷ್ಟು ಹಂಚಿಕೆ ವಿಶ್ವಾಸ: ಕೇಂದ್ರದ ಜಲ ಆಯೋಗ (ಸಿಡಬ್ಲ್ಯೂಸಿ), ಕರ್ನಾಟಕ ಸರ್ಕಾರದ ತಜ್ಞರು ಸೇರಿದಂತೆ ವಿವಿಧ ಸಂಸ್ಥೆಗಳ ಸಮೀಕ್ಷೆಯ ಅನ್ವಯ ಮಹದಾಯಿ ನದಿ ಕಣಿವೆಯಲ್ಲಿ ವಾರ್ಷಿಕ ಲಭ್ಯವಿರುವ ನೀರು ಸಮುದ್ರಕ್ಕೆ ವ್ಯರ್ಥವಾಗಿ ಹರಿದುಹೋಗುತ್ತಿದ್ದು, ಕುಡಿಯುವ ನೀರು ಪೂರೈಕೆ ಹಾಗೂ ಜಲವಿದ್ಯುತ್‌ ಯೋಜನೆಗಳನ್ನು ಗಮನದಲ್ಲಿ ಇರಿಸಿಕೊಂಡು ನೀರನ್ನು ಹಂಚಿಕೆ ಮಾಡಬೇಕು ಎಂದು ಕೋರಿದ್ದ ರಾಜ್ಯಕ್ಕೆ ಸಮಾಧಾನಕರ ಐತೀರ್ಪು ಹೊರಬಿದ್ದಿದೆ.

ಮಹದಾಯಿ ನದಿಯಲ್ಲಿ ವಾರ್ಷಿಕ ನೀರಿನ ಲಭ್ಯತೆಯನ್ನು ತಾಳೆಹಾಕುವಲ್ಲಿ ಭಾರಿ ಕಸರತ್ತನ್ನೇ ನಡೆಸಿರುವ ನ್ಯಾಯಮಂಡಳಿಯು, ಎಲ್ಲ ಸಮೀಕ್ಷೆಗಳನ್ನು ಹೊರತುಪಡಿಸಿದ ಲೆಕ್ಕಾಚಾರದೊಂದಿಗೆ ಕೊನೆಗೆ 188 ಟಿಎಂಸಿ ಅಡಿ ನೀರು ಲಭ್ಯವಿದೆ ಎಂದು ಹೇಳಿರುವುದೇ ರಾಜ್ಯಕ್ಕೆ ವರವಾಗಬಲ್ಲ ಅಂಶವಾಗಿದೆ.

‘ಕರ್ನಾಟಕ, ಕೇಂದ್ರ ಸರ್ಕಾರಗಳು ಹೇಳುವಷ್ಟು ಪ್ರಮಾಣದ ನೀರು ಮಹದಾಯಿಯಲ್ಲಿ ಲಭ್ಯವಿಲ್ಲ’ ಎಂದು ವಿಚಾರಣೆಯ ವೇಳೆ ವಾದ ಮಂಡಿಸಿದ್ದ ಗೋವಾ ಪರ ವಕೀಲರು, ಒಂದು ಹಂತದಲ್ಲಿ ನದಿಯ ವಾರ್ಷಿಕ ನೀರಿನ ಲಭ್ಯತೆ 100ಕ್ಕೂ ಕಡಿಮೆ ಟಿಎಂಸಿ ಅಡಿ ಎಂದು ತಿಳಿಸಿದ್ದರು. ಆದರೆ, ನ್ಯಾಯಮಂಡಳಿಯೇ ಅಂತಿಮವಾಗಿ ನದಿಯಲ್ಲಿ 188 ಟಿಎಂಸಿ ಅಡಿ ನೀರು ಲಭ್ಯ ಎಂದು ಐತೀರ್ಪಿನಲ್ಲಿ ತಿಳಿಸಿರುವುದು ರಾಜ್ಯಕ್ಕೆ ಆಶಾದಾಯಕವಾದ ಅಂಶವೇ ಆಗಿದೆ.

ಈ ಅಂಶದ ಆಧಾರದಲ್ಲಿಯೇ ಹಂಚಿಕೆ ಪ್ರಮಾಣ ಹೆಚ್ಚಿಸುವಂತೆ ಕೋರಿ ನ್ಯಾಯಮಂಡಳಿಗೆ ತೀರ್ಪಿನ ಮರು ಪರಿಶೀಲನೆಗೆ ಅಥವಾ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಅರ್ಜಿಯನ್ನೂ ಸಲ್ಲಿಸಬಹುದಾಗಿದೆ.

‘ನೀರಿನ ಲಭ್ಯತೆಯ ಆಧಾರದಲ್ಲಿ ಕರ್ನಾಟಕಕ್ಕೆ ಬಳಕೆ ಉದ್ದೇಶದ ಬೇಡಿಕೆಯ ಸಂಪೂರ್ಣ ಪ್ರಮಾಣದ ನೀರು ಹಂಚಿಕೆಯಾಗುವ ವಿಶ್ವಾಸವಿದೆ’ ಎಂದು ರಾಜ್ಯದ ಪರ ವಕೀಲ ನಿಶಾಂತ್‌ ಪಾಟೀಲ ‘ಪ್ರಜಾವಾಣಿ’ಗೆ ತಿಳಿಸಿದರು.

‘ನಾಲ್ಕು ವರ್ಷಗಳಿಗೊಮ್ಮೆ ಅಧಿಕ ಮಳೆ ಸುರಿದಿದ್ದನ್ನು ಗಣನೆಗೆ ತೆಗೆದುಕೊಂಡು, ಹೆಚ್ಚುವರಿಯಾಗಿ ಲಭ್ಯವಿರುವ ನೀರಿನಲ್ಲಿ ನೀರಾವರಿ ಬಳಕೆಗೆ 7 ಟಿಎಂಸಿ ಅಡಿ ನೀರನ್ನು ಕಣಿವೆಯಾಚೆ ಹರಿಸಿಕೊಳ್ಳಲು ಅವಕಾಶ ಬೇಕು’ ಎಂಬ ರಾಜ್ಯದ ಮನವಿಯೂ ತಿರಸ್ಕೃತವಾಗಿದೆ. ಆದರೆ, ಐತೀರ್ಪಿನ ಪ್ರಕಾರವೇ ಹೆಚ್ಚುವರಿ ನೀರಿನ ಲಭ್ಯತೆ ಇರುವುದರಿಂದ ಈ ಬೇಡಿಕೆಯೂ ನಂತರದ ದಿನಗಳಲ್ಲಿ ಪುರಸ್ಕೃತಗೊಳ್ಳಲಿದೆ ಎಂದು ಅವರು ಆಶಾಭಾವ ವ್ಯಕ್ತಪಡಿಸಿದರು.

ಶೀಘ್ರ ಅಧಿಸೂಚನೆಗೆ ಸೂಚನೆ: ಐತೀರ್ಪಿನ ಕುರಿತ ಅಧಿಸೂಚನೆಯನ್ನು ಶೀಘ್ರವೇ ಹೊರಡಿಸಿ ಮಹದಾಯಿ ವ್ಯಾಪ್ತಿಯ ರಾಜ್ಯಗಳು ಪ್ರಸ್ತಾವಿತ ಯೋಜನೆ ಆರಂಭಿಸಲು ಅನುಮತಿ ನೀಡಬೇಕು ಎಂದು ನ್ಯಾಯಮಂಡಳಿಯು ಕೇಂದ್ರದ ಜಲಸಂಪನ್ಮೂಲ ಸಚಿವಾಲಯಕ್ಕೆ ತನ್ನ ಐತೀರ್ಪಿನಲ್ಲಿಯೇ ನಿರ್ದೇಶನ ನೀಡಿದೆ.

ಮಹದಾಯಿ ನದಿ ನೀರು ನಿರ್ವಹಣೆ ಪ್ರಾಧಿಕಾರದ ಮೇಲ್ವಿಚಾರಣೆಯಲ್ಲೇ ಆಯಾ ರಾಜ್ಯಗಳು ಯೋಜನೆಗಳನ್ನು ಜಾರಿಗೊಳಿಸಬೇಕಿದೆ. ಅಂತರರಾಜ್ಯ ನದಿ ವಿವಾದ ಕಾಯ್ದೆ–1956ರ ಅನ್ವಯ ಅಧಿಸೂಚನೆ ಹೊರಡಿಸಿದ ನಂತರವೇ ಐತೀರ್ಪು ಜಾರಿಯಾಗಲಿದೆ. ಹಾಗಾಗಿ ಅಧಿಸೂಚನೆ ಹೊರಡಿಸುವುದು ವಿಳಂಬವಾದಲ್ಲಿ ಮೂರೂ ರಾಜ್ಯಗಳಿಗೆ ಅನನುಕೂಲ ಆಗಲಿದೆ ಎಂದು ನ್ಯಾಯಮಂಡಳಿ ಹೇಳಿದೆ.

ಪರಿಸರ ಕಾಳಜಿ ಇರಲಿ: ಕಣಿವೆ ವ್ಯಾಪ್ತಿಯ ರಾಜ್ಯಗಳು ಹಂಚಿಕೆಯಾಗಿದ್ದಕ್ಕಿಂತ ಅಧಿಕ ಪ್ರಮಾಣದ ನೀರನ್ನು ಬಳಸಕೂಡದು. ಜಲಸಂಪನ್ಮೂಲ ಅಭಿವೃದ್ಧಿಗಾಗಿ ಹಮ್ಮಿಕೊಳ್ಳುವ ಕಾಡು ಬೆಳೆಸುವ, ಪರಿಸರ ರಕ್ಷಣೆಯಂತಹ ಚಟುವಟಿಕೆಗಳು ಸ್ಥಗಿತವಾಗಬಾರದು. ಜಲಸಂಪನ್ಮೂಲ ಹಾಳಾಗಿ ಹೋಗಿ ಜನರು ಸಮಸ್ಯೆಗೆ ಸಿಲುಕುವಂತೆ ಆಗಬಾರದು ಎಂದು ನ್ಯಾಯಮಂಡಳಿ ಸ್ಪಷ್ಟಪಡಿಸಿದೆ.

*

***

ಕಣಕುಂಬಿಯಲ್ಲಿ ಬಂದೋಬಸ್ತ್‌
ಬೆಳಗಾವಿ:
ಮಲಪ್ರಭಾ ಹಾಗೂ ಕಳಸಾ ನಾಲಾ ನಡುವೆ ಸಂಪರ್ಕ ಕಲ್ಪಿಸಲು ಜಿಲ್ಲೆಯ ಖಾನಾಪುರ ತಾಲ್ಲೂಕಿನ ಕಣಕುಂಬಿಯಲ್ಲಿ ನಿರ್ಮಿಸಲಾಗಿರುವ ಕಾಲುವೆಯ ಸುತ್ತ ಪೊಲೀಸ್‌ ಬಂದೋಬಸ್ತ್‌ ಏರ್ಪಡಿಸಲಾಗಿದೆ. ನದಿ ನೀರು ಹಂಚಿಕೆ ಕುರಿತು ಮಹದಾಯಿ ನ್ಯಾಯಮಂಡಳಿ ತೀರ್ಪು ನೀಡಿರುವ ಬೆನ್ನಲ್ಲೇ ಮುಂಜಾಗ್ರತಾ ಕ್ರಮವಾಗಿ ಬಂದೋಬಸ್ತ್‌ ಹೆಚ್ಚಿಸಲಾಗಿದೆ.

ರಾಜ್ಯಕ್ಕೆ 13.42 ಟಿಎಂಸಿ ಅಡಿ ನೀರು ಹಂಚಿಕೆ ಮಾಡಿ ನ್ಯಾಯಮಂಡಳಿ ತೀರ್ಪು ನೀಡಿದೆ. ಆದರೆ, ಕೆಲವು ರೈತ ಮುಖಂಡರು ತೀರ್ಪು ಸಮಾಧಾನಕರವಾಗಿಲ್ಲ ಎಂದು ವಿರೋಧ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸರ ಭದ್ರತೆ ಹೆಚ್ಚಿಸಲಾಗಿದೆ.

ಯೋಜನಾ ಸ್ಥಳದ ಮೂಲಕವೇ ಹಾದುಹೋಗುವ ಖಾನಾಪುರ– ಜಾಂಬೋಟಿ ಮಾರ್ಗದಲ್ಲಿ ಜನರ ಓಡಾಟ, ವಾಹನಗಳ ಸಂಚಾರ ಸಹಜವಾಗಿದೆ. ಗೋವಾಕ್ಕೆ ಮಂಗಳವಾರ ಸ್ಥಗಿತಗೊಳಿಸಿದ್ದ ರಾಜ್ಯ ಸರ್ಕಾರಿ ಬಸ್‌ಗಳ ಸಂಚಾರ ಪುನರಾರಂಭಗೊಂಡಿದೆ.

ಆದೇಶಕ್ಕಾಗಿ ಕಾಯುತ್ತಿದ್ದೇವೆ: ‘ಕಳಸಾ ನಾಲಾಗೆ ನಿರ್ಮಿಸಲಾಗಿರುವ ತಡೆಗೋಡೆಯನ್ನು ತೆರವುಗೊಳಿಸುವ ಕುರಿತು ನ್ಯಾಯಮಂಡಳಿ ಏನು ಸೂಚನೆ ನೀಡಿದೆ ಎನ್ನುವುದನ್ನು ಸರ್ಕಾರದ ಮಟ್ಟದಲ್ಲಿ ಪರಿಶೀಲಿಸಲಾಗುತ್ತಿದೆ. ಸರ್ಕಾರದಿಂದ ಯಾವ ರೀತಿಯ ಆದೇಶ ಬರುತ್ತದೆಯೋ ಅದರಂತೆ ಮುಂದಿನ ಕ್ರಮ ಕೈಗೊಳ್ಳುತ್ತೇವೆ’ ಎಂದು ಕರ್ನಾಟಕ ನೀರಾವರಿ ನಿಗಮದ ಎಂಜಿನಿಯರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 1

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !