ಶುಕ್ರವಾರ, ನವೆಂಬರ್ 22, 2019
22 °C
ಸೌಲಭ್ಯ ಕೊಡಿ, ಇಲ್ಲ ಪ್ರತ್ಯೇಕ ಪಾಲಿಕೆ ಮಾಡಿ – ಸ್ಥಳೀಯರ ಆಗ್ರಹ l ಬೆಳ್ಳಂದೂರಿಗೆ ಮೆಟ್ರೊ ಸಂಪರ್ಕ ಇನ್ನೂ ಕನಸಿನ ಕೂಸು

ತೆರಿಗೆಯಲ್ಲಿ ಮುಂದು – ಸೌಕರ್ಯದಲ್ಲಿ ಹಿಂದು

Published:
Updated:

ಬೆಂಗಳೂರು: ತೆರಿಗೆ ಸಂಗ್ರಹ ವಿಚಾರದಲ್ಲಿ ಮಹದೇವಪುರ ವಲಯ ಯಾವತ್ತೂ ಮುಂದು. ಆದರೆ, ಅದಕ್ಕೆ ತಕ್ಕಂತೆ ಸೌಕರ್ಯಗಳ ವಿಚಾರದಲ್ಲಿ ಈ ವಲಯ ಸದಾ ಹಿಂದುಳಿದಿದೆ.

ಈ ವರ್ಷವೂ ಸೇರಿದಂತೆ ಒಟ್ಟು ಐದು ವರ್ಷಗಳಲ್ಲಿ ಬಿಬಿಎಂಪಿ ಸಂಗ್ರಹಿಸಿದ ವಲಯವಾರು ತೆರಿಗೆ ಪ್ರಮಾಣವನ್ನು ಗಮನಿಸಿದಾಗ ಪ್ರತಿ ವರ್ಷವೂ ಮಹದೇವಪುರ ವಲಯದಲ್ಲೇ ಹೆಚ್ಚು ತೆರಿಗೆ ಸಂಗ್ರಹವಾಗಿದೆ. ಆದರೆ, ಈ ವಲಯದ ವಾರ್ಡ್‌ಗಳ ದುಸ್ಥಿತಿಗಳನ್ನು ಗಮನಿಸಿದರೆ ನಿಜಕ್ಕೂ ಇದು ಬಿಬಿಎಂಪಿ ವ್ಯಾಪ್ತಿಯಲ್ಲಿದೆಯೇ ಎಂಬ ಸಂದೇಹ ಕಾಡುವಂತಿದೆ.

‘ನಮ್ಮಿಂದ ತೆರಿಗೆಯನ್ನು ಮಾತ್ರ ಸಂಗ್ರಹಿಸಲಾಗುತ್ತದೆ. ಆದರೆ, ಮೂಲಸೌಕರ್ಯ ಕಲ್ಪಿಸುತ್ತಿಲ್ಲ. ಮಹದೇವಪುರ ವಲಯದಲ್ಲಿ ನಾಲ್ಕು ವರ್ಷಗಳಲ್ಲಿ ₹ 2,166 ಕೋಟಿಯನ್ನು ಬಿಬಿಎಂಪಿ ಆಸ್ತಿ ತೆರಿಗೆ ರೂಪದಲ್ಲಿ ಸಂಗ್ರಹಿಸಿದೆ. ಇದರಲ್ಲಿ ಈ ವಲಯದ ಮೂಲಸೌಕರ್ಯ →ಅಭಿವೃದ್ಧಿಗೆ ಬಿಡಿಗಾಸೂ ಮರಳಿ ಸಿಗುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸುತ್ತಾರೆ ಬೆಳ್ಳಂದೂರು ನಿವಾಸಿ ವಿಷ್ಣುಪ್ರಸಾದ್‌.

2015ರ ಪರಿಷ್ಕೃತ ನಗರ ಮಹಾ ಯೋಜನೆಯಲ್ಲಿ (ಆರ್‌ಎಂಪಿ) ಪ್ರಕಾರ ಈ ವಲಯದಲ್ಲಿ ಭಾರಿ ಪ್ರಮಾಣದ ವಸತಿ ಯೋಜನೆಗಳು ಕಚೇರಿಗಳಿಗೆ ಅವಕಾಶ ಕಲ್ಪಿಸಲಾಗಿದೆ. ಇಲ್ಲಿ ಜನವಸತಿ ಹಾಗೂ ಕಚೇರಿಗಳ ಸಂಖ್ಯೆ ಹೆಚ್ಚುತ್ತಲೇ ಇವೆ. ಅದಕ್ಕೆ ಅನುಗುಣವಾಗಿ ಮಹದೇವಪುರ ವಲಯದ ಬೆಳ್ಳಂದೂರು ವಾರ್ಡ್‌ ಒಂದರಲ್ಲೇ ಆರ್‌ಎಂಪಿ ಪ್ರಕಾರ 35 ಕಿ.ಮೀ.ಗೂ ಹೆಚ್ಚು ಉದ್ದದ ರಸ್ತೆಗಳ ನಿರ್ಮಾಣ ಆಗಬೇಕಿತ್ತು. ಈ ಆರ್‌ಎಂಪಿಯ ಅವಧಿ ಮುಗಿದು ನಾಲ್ಕು ವರ್ಷ ಕಳೆದರೂ ಇವುಗಳನ್ನು ನಿರ್ಮಿಸಿಲ್ಲ.

‘ಕಸವನಹಳ್ಳಿ ರಸ್ತೆಯನ್ನು 60 ಅಡಿಗೆ ವಿಸ್ತರಣೆ ಮಾಡುವ ಪ್ರಸ್ತಾವ ಇತ್ತು. ಭೂಸ್ವಾಧೀನಕ್ಕೆ ಅನುದಾನದ ಸಾಲದು ಎಂಬ ಕಾರಣಕ್ಕೆ ವಿಸ್ತರಣೆ ಕೈಬಿಟ್ಟು ಇದ್ದ ರಸ್ತೆಯನ್ನಷ್ಟೇ ₹ 9 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಮಾಡಿದ್ದಾರೆ. ನಮ್ಮ ವಲಯದಲ್ಲಿ ಅಷ್ಟೊಂದು ಪ್ರಮಾಣದಲ್ಲಿ ತೆರಿಗೆ ಸಂಗ್ರಹವಾಗುತ್ತಿದ್ದರೂ ರಸ್ತೆ ಅಭಿವೃದ್ಧಿಗೆ ಹಣವಿಲ್ಲವೆಂದರೆ ಹೇಗೆ’ ಎಂದು ಪ್ರಶ್ನಿಸುತ್ತಾರೆ ವಿಷ್ಣು.

‘ಇಲ್ಲಿನ ಹೊರವರ್ತುಲ ರಸ್ತೆಯಲ್ಲಿ (ಒಆರ್‌ಆರ್‌) ದಿನದಲ್ಲಿ ಗರಿಷ್ಠ 1 ಲಕ್ಷ ವಾಹನ ಸಂಚರಿಸಬಹುದು. ಅಧಿಕೃತ ಅಂಕಿ ಅಂಶಗಳ ಪ್ರಕಾರ ಇಲ್ಲಿ 7ಲಕ್ಷಕ್ಕೂ ಹೆಚ್ಚು ವಾಹನಗಳು ಸಂಚರಿಸುತ್ತವೆ. ವಾಸ್ತವದಲ್ಲಿ ಈ ಪ್ರಮಾಣ 10 ಲಕ್ಷಕ್ಕೂ ಹೆಚ್ಚು. ಸಮಸ್ಯೆ ಇಷ್ಟೊಂದು ಗಂಭೀರವಾಗಿದ್ದರೂ ಇಲ್ಲಿ ಸಂಚಾರ ಸಮಸ್ಯೆ ಬಗೆಹರಿಸಲು ಸರ್ಕಾರ ಅಸಡ್ಡೆ ವಹಿಸುತ್ತದೆ ಎಂದರೆ ಏನರ್ಥ’ ಎಂದು ‍ಪ್ರಶ್ನಿಸುತ್ತಾರೆ ಅವರು.

ಇಲ್ಲಿ ಈಗಾಗಲೇ 5 ವಿಶೇಷ ಆರ್ಥಿಕ ವಲಯಗಳು ಕಾರ್ಯನಿರ್ವಹಿಸುತ್ತಿವೆ. ಇನ್ನೆರಡು ಎಸ್‌ಇಜೆಡ್‌ಗಳಿಗೆ ಅನುಮತಿ ನೀಡಲಾಗಿದೆ. ಸರ್ಜಾಪುರ ರಸ್ತೆ ಆಸುಪಾಸಿನಲ್ಲಿ 80 ಸಾವಿರಕ್ಕೂ ಅಧಿಕ ಉದ್ಯೋಗಿಗಳಿಗೆ ಆಶ್ರಯ ಕಲ್ಪಿಸುವ ಕಚೇರಿಗಳಿಗೆ ಹಾಗೂ ಹೊರ ವರ್ತುಲ ರಸ್ತೆ ಆಸುಪಾಸಿನಲ್ಲಿ 1 ಲಕ್ಷಕ್ಕೂ ಹೆಚ್ಚು ಉದ್ಯೋಗಿಗಳನ್ನು ಹೊಂದಿರುವ ಕಚೇರಿಗಳ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಈಗಾಗಲೇ ಅನುಮತಿ ನೀಡಿದೆ. ಅವು ಶೀಘ್ರವೇ ಇಲ್ಲಿ ಆರಂಭವಾಗಲಿವೆ.

ಈ ಕಚೇರಿಗಳ ಜೊತೆಗೆ ಜನವಸತಿಯೂ ಹೆಚ್ಚಲಿದೆ. ಅದಕ್ಕೆ ಪೂರಕವಾಗಿ ಇಲ್ಲಿ ಸಂಚಾರ ಸೌಕರ್ಯವನ್ನು ಮೇಲ್ದರ್ಜೆಗೇರಿಸಬೇಕಿದೆ. ದುರದೃಷ್ಟವೆಂದರೆ ಬೆಳ್ಳಂದೂರಿಗೆ ಮೆಟ್ರೊ ಸಂಪರ್ಕ ಇನ್ನೂ ಕನಸಿನ ಕೂಸಾಗಿಯೇ ಉಳಿದಿದೆ. ಇನ್ನೊಂದೆಡೆ, ಉಪನಗರ ರೈಲು ಯೋಜನೆಯೂ ಕಾರ್ಯರೂಪಕ್ಕೆ ಬಂದಿಲ್ಲ.

ಬಿಟಿಎಂ ಲೇಔಟ್‌ನಿಂದ ಬೆಳ್ಳಂದೂರು ಮೂಲಕ ಕೆ.ಆರ್‌.ಪುರಕ್ಕೆ ನೇರ ಮೆಟ್ರೊ ಸಂಪರ್ಕ ಕಲ್ಪಿಸಬೇಕು. ಮಾನ್ಯತಾ ಟೆಕ್‌‍ಪಾರ್ಕ್‌– ಬೈಯಪ್ಪನಹಳ್ಳಿ–ಬೆಳ್ಳಂದೂರು– ಹೀಲಳಿಗೆಗೆ ಹೆಚ್ಚು ರೈಲು ಓಡಿಸಬೇಕು ಎಂದು ಬೆಳ್ಳಂದೂರು ಅಭಿವೃದ್ಧಿ ವೇದಿಕೆ ಒತ್ತಾಯಿಸಿದೆ.

ಹೆಚ್ಚುತ್ತಲೇ ಇದೆ ಜನದಟ್ಟಣೆ
ನಗರದ ಅನೇಕ ವಿಧಾನಸಭಾ ಕ್ಷೇತ್ರಗಳಲ್ಲಿ ಜನಸಂಖ್ಯೆ ಕಡಿಮೆ ಆಗುತ್ತಿದ್ದರೆ, ಮಹದೇವಪುರದಲ್ಲಿ ಮಾತ್ರ ತೀವ್ರಗತಿಯಲ್ಲಿ ಹೆಚ್ಚಳ ಕಂಡಿದೆ. 2001ರ ಗಣತಿ ಪ್ರಕಾರ ಮಹದೇವಪುರ ವಾರ್ಡ್‌ಗಳ ಸರಾಸರಿ ಜನಸಂಖ್ಯೆ 48,220 ಇತ್ತು. 2011ರ ವೇಳೆಗೆ ಈ ಪ್ರಮಾಣವು 2.48 ಲಕ್ಷಕ್ಕೆ ಹೆಚ್ಚಿದೆ.

‘2013ರ ವಿಧಾನಸಭಾ ಚುನಾವಣೆ ವೇಳೆ ವಾರ್ಡ್‌ನ ಸರಾಸರಿ ಜನಸಂಖ್ಯೆ 3.68 ಲಕ್ಷಕ್ಕೆ ಹಾಗೂ 2019ರ ಲೋಕಸಭಾ ಚುನಾವಣೆ ವೇಳೆಗೆ 5.25 ಲಕ್ಷಕ್ಕೆ ಹೆಚ್ಚಳ ಕಂಡಿದೆ ಎಂದು ಚುನಾವಣಾ ಆಯೋಗದ ಮೂಲಗಳು ತಿಳಿಸಿವೆ. ಅದಕ್ಕೆ ಅನುಗುಣವಾಗಿ ಮೂಲಸೌಕರ್ಯಗಳು ಹೆಚ್ಚಳ ಕಂಡಿಲ್ಲ’ ಎಂದು ವಿಷ್ಣುಪ್ರಸಾದ್‌ ತಿಳಿಸಿದರು.

**

ಅಭಿವೃದ್ಧಿಗೆ ನೀಡಿದ ಅನುದಾನ ಅರೆಕಾಸಿನ ಮಜ್ಜಿಗೆಯಂತಾಗಿದೆ. ತರಕಾರಿ ತರಲು ಮುಕ್ಕಾಲು ಗಂಟೆ ವ್ಯಯಿಸಬೇಕಾದ ಸ್ಥಿತಿ ಇದೆ.
-ವಿಷ್ಣುಪ್ರಸಾದ್‌, ಬೆಳ್ಳಂದೂರು ನಿವಾಸಿ
**

ಬಿಬಿಎಂಪಿ, ಬೆಸ್ಕಾಂ, ಜಲಮಂಡಳಿ ನಡುವೆ ಸಮನ್ವಯ ಇಲ್ಲ. ಆರ್‌ಎಂಪಿಯಲ್ಲಿರುವ ಕಾಮಗಾರಿಗಳು ಆದ್ಯತೆ ಮೇರೆಗೆ ಜಾರಿಯಾಗಬೇಕು.
- ಸುದರ್ಶನ, ಕಸವನಹಳ್ಳಿ ನಿವಾಸಿ

ಪ್ರತಿಕ್ರಿಯಿಸಿ (+)