ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಹುಬಲಿಗೆ ಫೆ.9ರಿಂದ ಮಹಾಮಸ್ತಕಾಭಿಷೇಕ

ಹಲವು ಜನಮಂಗಲ ಕಾರ್ಯಕ್ರಮ ಪ್ರಕಟಿಸಿದ ಡಾ.ಡಿ.ವೀರೇಂದ್ರ ಹೆಗ್ಗಡೆ
Last Updated 2 ಜನವರಿ 2019, 20:18 IST
ಅಕ್ಷರ ಗಾತ್ರ

ಉಜಿರೆ: ಧರ್ಮಸ್ಥಳದಲ್ಲಿ 2019ರ ಫೆಬ್ರುವರಿ 9 ರಿಂದ 18ರ ವರೆಗೆ ರತ್ನಗಿರಿಯಲ್ಲಿರುವ 39 ಅಡಿ ಎತ್ತರದ ಭಗವಾನ್ ಬಾಹುಬಲಿ ಮೂರ್ತಿಗೆ ನಾಲ್ಕನೇ ಮಹಾಮಸ್ತಕಾಭಿಷೇಕ ನಡೆಯಲಿದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಹಾಗೂ ಬಾಹುಬಲಿ ಮೂರ್ತಿ ಪ್ರತಿಷ್ಠಾಪಕ ಡಿ.ವೀರೇಂದ್ರ ಹೆಗ್ಗಡೆ ಪ್ರಕಟಿಸಿದರು.

ಧರ್ಮಸ್ಥಳದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾಹಿತಿ ನೀಡಿದರು. ಆಚಾರ್ಯ ವರ್ಧಮಾನ ಸಾಗರ ಮುನಿಮಹಾರಾಜರ ನೇತೃತ್ವ ಹಾಗೂ ಆಚಾರ್ಯ ಪುಷ್ಪದಂತ ಸಾಗರ ಮುನಿಮಹಾರಾಜರ ಉಪಸ್ಥಿತಿಯಲ್ಲಿ ಶ್ರವಣಬೆಳಗೊಳದ ಚಾರುಕೀರ್ತಿ ಭಟ್ಟಾರಕರ ಮಾರ್ಗದರ್ಶನದಲ್ಲಿ ಮಹಾಮಸ್ತಕಾಭಿಷೇಕ ನಡೆಯಲಿದೆ ಎಂದರು.

1982, 1995 ಮತ್ತು 2007 ರಲ್ಲಿ ಧರ್ಮಸ್ಥಳದಲ್ಲಿ ಮಹಾಮಸ್ತಕಾಭಿಷೇಕ ನಡೆದಿದ್ದು, ಇದೀಗ ನಾಲ್ಕನೇ ಮಹಾಮಸ್ತಕಾಭಿಷೇಕ ನಡೆಯಲಿದೆ ಎಂದರು.

ಬಾಹುಬಲಿ ಪಂಚ ಮಹಾ ವೈಭವ: ಸಾಂಪ್ರದಾಯಿಕವಾಗಿ ಐದು ದಿನ ತೀರ್ಥಂಕರರ ಪಂಚಕಲ್ಯಾಣ ಕಾರ್ಯಕ್ರಮ ನಡೆಸಿ ಬಾಹುಬಲಿ ಮಹಾಮಸ್ತಕಾಭಿಷೇಕ ನಡೆಸಲಾಗುತ್ತದೆ. ಆದರೆ ಬಾಹುಬಲಿಯೇ ನಾಯಕನಾಗಿರುವುದರಿಂದ ಆತನ ಜೀವನ, ಸಾಧನೆ, ಸಂಯಮ, ತ್ಯಾಗ ಮತ್ತು ಅಹಿಂಸೆಯನ್ನು ಪ್ರತಿಬಿಂಬಿಸುವ ಬಾಹುಬಲಿ ಪಂಚಮಹಾ ವೈಭವವನ್ನು ಸಾದರಪಡಿಸಲಾಗುವುದು ಎಂದು ಹೆಗ್ಗಡೆಯವರು ವಿವರಿಸಿದರು.

ಫೆ. 9ರಂದು ಶನಿವಾರ ಭಗವಾನ್ ಶ್ರೀ ಚಂದ್ರನಾಥ ಸ್ವಾಮಿ ಬಸದಿಯಿಂದ ರತ್ನಗಿರಿಗೆ ಭವ್ಯ ಅಗ್ರೋದಕ ಮೆರವಣಿಗೆ ನಡೆಯಲಿದೆ. ಸಂಜೆ ಸಂತ ಸಮ್ಮೇಳನ ನಡೆಯಲಿದೆ. 16, 17 ಮತ್ತು 18 ರಂದು ಬೆಳಿಗ್ಗೆ 8 ಗಂಟೆಯಿಂದ 1008 ಕಲಶಗಳಿಂದ ಬಾಹುಬಲಿ ಸ್ವಾಮಿಗೆ ಮಹಾಮಸ್ತಕಾಭಿಷೇಕ ನಡೆಯಲಿದೆ ಎಂದರು.

ಜನಮಂಗಲ ಕಾರ್ಯಕ್ರಮ: 1982ರಲ್ಲಿ ನಡೆದ ಪ್ರಥಮ ಮಹಾಮಸ್ತಕಾಭಿಷೇಕದ ಸವಿನೆನಪಿಗಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಪ್ರಾರಂಭಿಸಲಾಗಿದೆ. ಇದೀಗ ಸರ್ಕಾರದ ಸಹಭಾಗಿತ್ವದಲ್ಲಿ ಧರ್ಮಸ್ಥಳದ ನೇತೃತ್ವದಲ್ಲಿ ನೂರು ಕೆರೆಗಳ ಅಭಿವೃದ್ಧಿ ಹಾಗೂ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು ಆಯಾ ಗ್ರಾಮದ ಫಲಾನುಭವಿಗಳ ಸಹಯೋಗದೊಂದಿಗೆ ನೂರು ಕೆರೆಗಳ ಅಭಿವೃದ್ಧಿಗಾಗಿ ಯೋಜನೆ ರೂಪಿಸಲಾಗಿದೆ ಎಂದು ಹೆಗ್ಗಡೆಯವರು ಪ್ರಕಟಿಸಿದರು.

ಕಳೆದ ವರ್ಷ ಗ್ರಾಮಾಭಿವೃದ್ಧಿ ಯೋಜನೆಯಡಿಯಲ್ಲಿ ನೂರು ಕೆರೆಗಳ ಹೂಳೆತ್ತಿ ಜಲ ಮರುಪೂರಣ ಮಾಡಲಾಗಿದೆ. ಜಲಸಂರಕ್ಷಣೆಗೆ ಆದ್ಯತೆ ನೀಡಲಾಗುವುದು. ಮುನ್ನೂರು ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ತಲಾ ₹ 50 ಸಾವಿರದಿಂದ 1.5 ಲಕ್ಷದವರೆಗೆ ಅನುದಾನ ನೀಡಿ ಪ್ರೋತ್ಸಾಹಿಸಲಾಗುವುದು. ಅತಿವೃಷ್ಟಿಯಿಂದ ಹಾನಿಯಾದ ಕೊಡಗಿಗೆ ಇದೇ 10ರಂದು ಸ್ವತಃ ಹೋಗಿ ಪುನರ್ವಸತಿ ಹಾಗೂ ಕೃಷಿಗೆ ಪ್ರೋತ್ಸಾಹ ನೀಡುವ ಯೋಜನೆ ಅನುಷ್ಠಾನಗೊಳಿಸಲಾಗುವುದು ಎಂದರು.

ನಿಂದಾಸ್ತುತಿ

ದೇವರನ್ನು ಎರಡು ರೀತಿಯಿಂದ ಒಲಿಸಿಕೊಳ್ಳಬಹುದು. 1.ಹೊಗಳಿಕೆಯಿಂದ - ಭಕ್ತಿಯ ಭಜನೆ, ಪ್ರಾರ್ಥನೆ, ಧ್ಯಾನದಿಂದ, 2.ನಿಂದಾಸ್ತುತಿಯಿಂದ. ಸಾಹಿತಿ ಭಗವಾನ್ ಅವರು ನಿಂದಾಸ್ತುತಿ ಬಳಸಿ ರಾಮನನ್ನು ಒಲಿಸಲು ಪ್ರಯತ್ನಿಸಿದ್ದಾರೆ ಅಷ್ಟೆ ಎಂದು ವೀರೇಂದ್ರ ಹೆಗ್ಗಡೆ ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT