ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದಲ್ಲೂ ಮಹಾರಾಷ್ಟ್ರ ಬೆಳವಣಿಗೆ: ಮಲ್ಲಿಕಾರ್ಜುನ ಖರ್ಗೆ

ಕಾಂಗ್ರೆಸ್‌ ಹೆಚ್ಚು ಸ್ಥಾನ ಗೆಲ್ಲುವ ಬಗ್ಗೆ ಹಿರಿಯ ಮುಖಂಡ ವಿಶ್ವಾಸ
Last Updated 1 ಡಿಸೆಂಬರ್ 2019, 18:30 IST
ಅಕ್ಷರ ಗಾತ್ರ

ಬೆಂಗಳೂರು: ‘ಉಪಚುನಾವಣೆಯಲ್ಲಿ ಕಾಂಗ್ರೆಸ್ ಹೆಚ್ಚು ಸ್ಥಾನಗಳನ್ನು ಗೆಲ್ಲಲಿದ್ದು, ಬಿಜೆಪಿ ಸರ್ಕಾರದ ಆಡಳಿತ ಕೊನೆಗೊಳ್ಳಲಿದೆ. ಮಹಾರಾಷ್ಟ್ರದಲ್ಲಿ ನಡೆದ ಬೆಳವಣಿಗೆ ರಾಜ್ಯದಲ್ಲೂ ಮರುಕಳಿಸಲಿದೆ’ ಎಂದು ಕಾಂಗ್ರೆಸ್ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ ಇಲ್ಲಿ ಭಾನುವಾರ ವಿಶ್ವಾಸ ವ್ಯಕ್ತಪಡಿಸಿದರು.

ಮಾಧ್ಯಮಗೋಷ್ಠಿಯಲ್ಲಿ ಮಾತ ನಾಡಿದ ಅವರು, ಸ್ವಾಯತ್ತ ಸಂಸ್ಥೆಗಳನ್ನು ದುರುಪಯೋಗ ಪಡಿಸಿಕೊಂಡು, ಹಣದ ಹೊಳೆ ಹರಿಸಿ ಚುನಾವಣೆಯಲ್ಲಿ ಗೆಲ್ಲುವ ಪ್ರಯತ್ನದಲ್ಲಿ ಬಿಜೆಪಿ ಮುಖಂಡರು ತೊಡಗಿದ್ದಾರೆ. ವಿರೋಧ ಪಕ್ಷಗಳ ನಾಯಕರನ್ನು ಬೆದರಿಸಿ ಪಕ್ಷಕ್ಕೆ ಸೇರಿಸಿಕೊಳ್ಳುವುದು, ಇಲ್ಲವೆ ಸುಮ್ಮನಾಗಿಸುವ ತಂತ್ರವನ್ನು ಮುಂದುವರಿಸಿದ್ದಾರೆ ಎಂದರು.

ಹಣಬಲದ ಮೇಲೆ ಚುನಾವಣೆ ಗೆಲ್ಲುವ ಪ್ರಯತ್ನ ಬಳ್ಳಾರಿಯಿಂದ ಆರಂಭಿ ಸಿದ್ದು, ಈಗಲೂ ನಿಲ್ಲಿಸಿಲ್ಲ. ಹಣದ ಜತೆಗೆ ಧರ್ಮ, ಜಾತಿಗಳನ್ನು ಬಳಸಿಕೊಳ್ಳುತ್ತಿದ್ದಾರೆ. ಪ್ರತಿ ಸಮುದಾಯದಲ್ಲೂ ಒಡಕು ತಂದಿಟ್ಟು ಅಧಿಕಾರ ಹಿಡಿಯುವ ಪ್ರಯತ್ನವನ್ನು ಬಿಜೆಪಿ ನಾಯಕರು ನಡೆಸಿದ್ದಾರೆ’ ಎಂದು ಆರೋಪಿಸಿದರು.

‘ಅಭಿವೃದ್ಧಿಗೆ ಹಣ ಕೊಡಲಿಲ್ಲ. ಅದಕ್ಕಾಗಿ ಪಕ್ಷ ಬಿಟ್ಟಿದ್ದೇವೆ ಎಂದು ಅನರ್ಹಗೊಂಡಿರುವ ಶಾಸಕರು ಹೇಳುತ್ತಿದ್ದಾರೆ. ಹಿಂದೆ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾಗ ತಮ್ಮ ಕ್ಷೇತ್ರಗಳಿಗೆ ಕೋಟಿಗಟ್ಟಲೆ ಅನುದಾನ ಪಡೆದುಕೊಂಡಿದ್ದರು. ಕುಮಾರಸ್ವಾಮಿ ಅವಧಿಯಲ್ಲೂ ನೆರವು ಸಿಕ್ಕಿದೆ. ಆದರೂ ಸಲ್ಲದ ನೆಪ ಹೇಳಿಕೊಂಡು ಪಕ್ಷ ಬಿಟ್ಟಿದ್ದಾರೆ. ಈಚೆಗೆ ನಡೆದ ಮಹಾರಾಷ್ಟ್ರ ಚುನಾವಣೆಯಲ್ಲಿ ಪಕ್ಷಾಂತರಿಗಳು ಸೋತಿದ್ದು, ಅದೇ ರೀತಿಯ ಫಲಿತಾಂಶ ರಾಜ್ಯದಲ್ಲೂ ಬರಲಿದೆ. ಈ ಫಲಿತಾಂಶದ ಪರಿಣಾಮ ಇತರ ರಾಜ್ಯಗಳ ಮೇಲೂ ಆಗಲಿದೆ’ ಎಂದರು.

ಈರುಳ್ಳಿ ದುಬಾರಿಯಾಗಿರುವ ಹಿನ್ನೆಲೆಯಲ್ಲಿ ಕೆಲ ರಾಜ್ಯಗಳಲ್ಲಿ ಸರ್ಕಾ ರವೇ ಖರೀದಿಸಿ, ಕಡಿಮೆ ಬೆಲೆಗೆ ಮಾರಾಟ ಮಾಡಲಾಗುತ್ತಿದೆ. ರಾಜ್ಯದಲ್ಲೂ ಜನರಿಗೆ ಕಡಿಮೆ ಬೆಲೆಗೆ ಈರುಳ್ಳಿ ಸಿಗುವಂತೆ ಮಾಡಬೇಕು ಎಂದು ಆಗ್ರಹಿಸಿದರು.

‘ರಾಜ್ಯದ ಮೇಲೆ ಮೋದಿಗೆ ಸಿಟ್ಟು’

ಪ್ರಧಾನಿ ನರೇಂದ್ರ ಮೋದಿ ಅವರಿಗೆ ರಾಜ್ಯದ ಮೇಲೆ ಅಪಾರ ಸಿಟ್ಟಿದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮೇಲಿನ ಸಿಟ್ಟನ್ನು ರಾಜ್ಯದ ಜನರ ಮೇಲೆ ತೀರಿಸಿಕೊಳ್ಳುತ್ತಿದ್ದಾರೆ ಎಂದು ಖರ್ಗೆ ಟೀಕಿಸಿದರು.

ರಾಜ್ಯದ ಅಭಿವೃದ್ಧಿ ಯೋಜನೆಗಳಿಗೆ ವರ್ಷಾನುಟ್ಟಲೆ ಅನುಮತಿ ನೀಡದೆ ಸತಾಯಿಸಲಾಗುತ್ತಿದೆ. ಕಲಬುರ್ಗಿ ವಿಮಾನ ನಿಲ್ದಾಣದಿಂದ ವಿಮಾನ ಸಂಚಾರಕ್ಕೆ ಅನುಮತಿ ನೀಡಲು ತಡಮಾಡಿದರು. ಯಡಿಯೂರಪ್ಪ ಮುಖ ನೋಡಬೇಕಾಗುತ್ತದೆ ಎಂದು ವಿಮಾನ ನಿಲ್ದಾಣ ಉದ್ಘಾಟನೆಗೂ ಮೋದಿ ಬರಲಿಲ್ಲ ಎಂದರು.

ಮತದಾರರು ಕಿಂಗ್‌ ಮೇಕರ್ ಆಗಲಿದ್ದಾರೆ: ಎಚ್‌.ಡಿ.ಕುಮಾರಸ್ವಾಮಿ

ಗೋಕಾಕ: ‘ಉಪ ಚುನಾವಣೆ ನಡೆಯುತ್ತಿರುವ 15 ವಿಧಾನಸಭಾ ಕ್ಷೇತ್ರಗಳ ಮತದಾರರು ಕಿಂಗ್‌ ಮೇಕರ್‌ಗಳಾಗಲಿದ್ದಾರೆ. ನಾನು ಅಥವಾ ಜೆಡಿಎಸ್‌ ಅಲ್ಲ’ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ ಹೇಳಿದರು.

ತಾಲ್ಲೂಕಿನ ಹಿರೇನಂದಿ ಗ್ರಾಮದಲ್ಲಿ ಭಾನುವಾರ ಪಕ್ಷದ ಅಭ್ಯರ್ಥಿ ಪರ ಮತಯಾಚಿಸುವ ವೇಳೆ ಪತ್ರಕರ್ತರೊಂದಿಗೆ ಅವರು ಮಾತನಾಡಿದರು.

‘ಗೋಕಾಕ ಜೆಡಿಎಸ್‌ ಅಭ್ಯರ್ಥಿ ಅಶೋಕ ಪೂಜಾರಿ ಕೇವಲ ಶಾಸಕ ರಾಗಲು ಅಷ್ಟೇ ಚುನಾವಣೆಗೆ ನಿಂತಿಲ್ಲ. ಅವರು ಮುಂದಿನ ದಿನಗಳಲ್ಲಿ ಮಂತ್ರಿಯಾಗುವುದರಲ್ಲಿ ಸಂಶಯವಿಲ್ಲ. ಇದರಲ್ಲಿ ಅತಿಶಯೋಕ್ತಿ ಏನಿಲ್ಲ’ ಎಂದರು.

‘ಹನಿಟ್ರ್ಯಾಪ್‌ನ ಆಧಾರದ ಮೇಲೆ ಚುನಾವಣೆ ನಡೆಯುತ್ತಿಲ್ಲ. ನಾನು ಮಾಡಿದ ಜನಪರ ಕಾರ್ಯಕ್ರಮಗಳ ಆಧಾರದ ಮೇಲೆ ಮತ ಕೇಳುತ್ತಿದ್ದೇನೆ. ನನ್ನ ಶಾಸಕರಾರಾದರೂ ಹನಿಟ್ರ್ಯಾಪ್ ಪ್ರಕರಣದಲ್ಲಿ ಇದ್ದರೆ, ಆಡಳಿತದಲ್ಲಿರುವ ಬಿಜೆಪಿಯವರು ಬಹಿರಂಗಪಡಿಸಲಿ’ ಎಂದು ಸವಾಲು ಹಾಕಿದರು.

‘ ನಮ್ಮ ಅಭ್ಯರ್ಥಿ ದೊಡ್ಡ ಸಕ್ಕರೆ ಕಾರ್ಖಾನೆ ಕಟ್ಟಿಲ್ಲ, ರೈತರ ಕಬ್ಬಿನ ಬಿಲ್ ಬಾಕಿ ಉಳಿಸಿಕೊಂಡು ಸಾಹುಕಾರ್‌ಗಿರಿ ಮಾಡುತ್ತಿಲ್ಲ’ ಎಂದು ಬಿಜೆಪಿ ಅಭ್ಯರ್ಥಿ ರಮೇಶ ಜಾರಕಿಹೊಳಿ ವಿರುದ್ಧ ಹರಿಹಾಯ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT