ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷ್ಣಾ ನದಿಗೆ ಅಡ್ಡಲಾಗಿ ಮಹಾರಾಷ್ಟ್ರ ಗ್ರಾಮಸ್ಥರಿಂದ ತಡೆಗೋಡೆ ನಿರ್ಮಾಣ!

ಅಕ್ಷರ ಗಾತ್ರ

ಚಿಕ್ಕೋಡಿ: ರಾಜಾಪುರ ಬ್ಯಾರೇಜ್‌ನಿಂದ ಕೃಷ್ಣಾ ನದಿಗೆ ಹರಿಸಿರುವ ನೀರನ್ನು ಮಹಾರಾಷ್ಟ್ರದ ಸೈನಿಕ–ಟಾಕಳಿ ಗ್ರಾಮಸ್ಥರು ಚಂದೂರ ಟೇಕ್‌ ಬಳಿ ಕಲ್ಲು ಮಣ್ಣುಗಳಿಂದ ಸುಮಾರು 4 ಅಡಿ ಎತ್ತರದ ತಾತ್ಕಾಲಿಕ ಗೋಡೆ ನಿರ್ಮಿಸಿ ತಡೆ ಹಿಡಿದಿದ್ದಾರೆ.

ಕಳೆದ ಒಂದೂವರೆ ತಿಂಗಳ ಹಿಂದೆಯೇ ಕೃಷ್ಣಾ ಬತ್ತಿ ಹೋಗಿದ್ದು, ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯಗಳ ನದಿ ತೀರದ ಗ್ರಾಮಗಳಲ್ಲಿ ಕುಡಿಯುವ ನೀರಿಗಾಗಿ ಹಾಹಾಕಾರ ಎದ್ದಿದೆ. ತಮ್ಮ ಕ್ಷೇತ್ರದ ಜನರಿಗೆ ನೀರು ಸಿಗಲಿ ಎಂದು ಮಹಾರಾಷ್ಟ್ರದ ಶಿರೋಳ ಶಾಸಕ ಉಲ್ಲಾಸ ಪಾಟೀಲ ಕಳೆದ ವಾರ ರಾಜಾಪುರ ಬ್ಯಾರೇಜ್‌ನಿಂದ ಕೃಷ್ಣಾ ನದಿಗೆ ನೀರು ಬಿಡುಗಡೆ ಮಾಡಿಸಿಕೊಂಡಿದ್ದರು. ಆ ನೀರು ಖಿದ್ರಾಪುರ, ಸೈನಿಕ– ಟಾಕಳಿ ಹಾಗೂ ಸುತ್ತಮುತ್ತಲಿನ ಹಳ್ಳಿಗಳತ್ತ ಹರಿದಿತ್ತು.

ಚಂದೂರ ಟೇಕ್‌ ಬಳಿ ಗ್ರಾಮಸ್ಥರು ತಾತ್ಕಾಲಿಕ ತಡೆಗೋಡೆ ನಿರ್ಮಿಸಿ, ನೀರು ತಡೆಹಿಡಿದಿದ್ದಾರೆ. ತಡೆಗೋಡೆ ಇಲ್ಲದಿದ್ದಿದ್ದರೆ ಅಥಣಿ ತಾಲ್ಲೂಕಿನ ಮಂಗಾವತಿ, ಜೂಗೂಳ, ಚಿಕ್ಕೋಡಿಯ ಚಂದೂರ ಹಾಗೂ ಕಲ್ಲೋಳದತ್ತ ಹರಿಯುತ್ತಿತ್ತು.

ನೀರು ರಾಜ್ಯದ ಕಡೆ ಹರಿದು ಬರುತ್ತಿಲ್ಲ.

‘ಗಡಿಭಾಗದಲ್ಲಿರುವ ಮಹಾರಾಷ್ಟ್ರದ ಹಳ್ಳಿಗಳಿಗಾಗಿ ಈ ನೀರು ಬಿಡಲಾಗಿದೆ. ಈ ನೀರು ನಮಗೇ ಸಾಕಾಗುತ್ತಿಲ್ಲ. ಅದಕ್ಕಾಗಿ ತಡೆಗೋಡೆ ಕಟ್ಟಿಕೊಂಡು, ನೀರನ್ನು ಸಂಗ್ರಹಿಸಿಟ್ಟುಕೊಂಡಿದ್ದೇವೆ. ಕರ್ನಾಟಕಕ್ಕೆ ನೀರು ಬಿಡಬಾರದು ಎಂಬ ದುರುದ್ದೇಶ ನಮಗಿಲ್ಲ. ಅಂದಹಾಗೆ, ಕರ್ನಾಟಕ ಸರ್ಕಾರ ಕೇಳಿರುವ ನೀರಿಗೂ ಈ ನೀರಿಗೂ ಸಂಬಂಧವಿಲ್ಲ’ ಎಂದು ಗ್ರಾಮಸ್ಥರೊಬ್ಬರು ಹೇಳಿದರು.

‘ಕೃಷ್ಣಾ ನದಿ ಬತ್ತಿ ಹೋಗಿದೆ. ಕುಡಿಯುವ ನೀರಿಗಾಗಿ ಹಾಹಾಕಾರ ಎದ್ದಿದೆ. ಇಂತಹ ಪರಿಸ್ಥಿತಿಯಲ್ಲಿ ಸೈನಿಕ–ಟಾಕಳಿ ಗ್ರಾಮಸ್ಥರು ತಡೆಗೋಡೆ ನಿರ್ಮಿಸಿರುವುದು ಖಂಡನೀಯ. ಇದರ ಬಗ್ಗೆ ತಾಲ್ಲೂಕು ಆಡಳಿತದ ಗಮನಕ್ಕೆ ತಂದಿದ್ದರೂ ಏನೂ ಪ್ರಯೋಜನವಾಗಿಲ್ಲ. ತಡೆಗೋಡೆ ನಿರ್ಮಾಣ ಆಗದೇ ಇದ್ದಿದ್ದರೆ ಅಥಣಿ, ಚಿಕ್ಕೋಡಿ, ರಾಯಬಾಗ ತಾಲ್ಲೂಕಿನ ಕುಡಚಿವರೆಗೆ ನೀರು ಹರಿಯುತ್ತಿತ್ತು’ ಎಂದು ತಾಲ್ಲೂಕು ಪಂಚಾಯ್ತಿ ಸದಸ್ಯ ರವೀಂದ್ರ ಮಿರ್ಜೆ ಎಂದರು.

‘ಚಂದೂರ ಟೇಕ್‌ಗೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದೇನೆ. ಅಲ್ಲಿನ ಜನರಿಗಾಗಿ ರಾಜಾಪುರ ಬ್ಯಾರೇಜ್‌ನಿಂದ ಸ್ವಲ್ಪ ಪ್ರಮಾಣದಲ್ಲಿ ನೀರು ಬಿಡಲಾಗಿತ್ತು. ಅದು ಕೂಡ ಈಗ ಕ್ಷೀಣಿಸಿದೆ. ಅಲ್ಲಿಯೇ ಸಂಗ್ರಹವಾಗಿದೆ. ರಾಜ್ಯದ ಕಡೆ ಹರಿದುಬರುವಷ್ಟು ನೀರು ಅಲ್ಲಿಲ್ಲ. ಅಲ್ಲದೇ, ತಡೆಗೋಡೆ ನಿರ್ಮಿಸಿದ್ದು ಈಗಲ್ಲ. 3–4 ವರ್ಷಗಳ ಹಿಂದೆಯೇ ನಿರ್ಮಾಣವಾಗಿದೆ’ ಎಂದು ತಹಶೀಲ್ದಾರ್ ಡಾ.ಸಂತೋಷ ಬಿರಾದಾರ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT