‘ನಮ್ಮ ನೆಲದಲ್ಲಿ ಬೇರೂರಿದ ಮಹಿಳಾವಾದ ಬೇಕು’

ಸೋಮವಾರ, ಮಾರ್ಚ್ 25, 2019
31 °C

‘ನಮ್ಮ ನೆಲದಲ್ಲಿ ಬೇರೂರಿದ ಮಹಿಳಾವಾದ ಬೇಕು’

Published:
Updated:

‘ಹೆಂಗಸರ ಮುಟ್ಟಿನ ದಿನಗಳನ್ನು ಕಂಡುಹಿಡಿಯುವ ಯಂತ್ರವೊಂದನ್ನು ಆವಿಷ್ಕರಿಸಿದರೆ ದೇವಸ್ಥಾನಗಳಲ್ಲಿ ಇಡಲು ಅನುಕೂಲವಾಗುತ್ತದೆ’ ಎಂದು ಅಧಿಕಾರಿಯೊಬ್ಬರು ಹೇಳಿಕೆ ಕೊಟ್ಟಿದ್ದರು. ಮತ್ತೊಬ್ಬ ಹೆಣ್ಣುಮಗಳನ್ನು ಅತ್ಯಾಚಾರ ಮಾಡಿ ಕೊಲ್ಲಲಾಯಿತು, ಈ ಸಲ ಅವಳ ಹೆಸರು ದಾನಮ್ಮ ಎಂದಿತ್ತು. ‘ಈ ಅತ್ಯಾಚಾರ ಮತ್ತು ಕಾಶ್ಮೀರದಲ್ಲಿ ಮಹಿಳೆಯ ಮೇಲೆ ನಡೆಯುವ ಅತ್ಯಾಚಾರವನ್ನು ಹೇಗೆ ಒಂದೇ ನೆಲೆಯಲ್ಲಿ ಪರಿಗಣಿಸುತ್ತೀರಿ’ ಎಂದು ಸ್ನೇಹಿತನೊಬ್ಬ ಕೇಳಿದ್ದ. ಭಾರತದ ಪ್ರಭಾವಶಾಲಿ ಮಹಿಳೆ ಎನ್ನಿಸಿಕೊಂಡ ಇಂದಿರಾನೂಯಿ ಮನೆಗೆ ಬರುವುದು ತಡವಾದರೆ, ‘ಪಾಪ, ಆಕೆಯ ಗಂಡನೇ ಕಾಫಿ ಮಾಡಿಕೋತಾರೆ, ದೇವರಂತಹ ಮನುಷ್ಯ’ ಎಂದು ಆಕೆಯ ತಾಯಿ ಒಂದು ಸಂದರ್ಶನದಲ್ಲಿ ಹೇಳಿದ್ದರು. ಮಂಡ್ಯದ ಹತ್ತಿರದ ಹಳ್ಳಿಯ ಅನುಸೂಯಮ್ಮ ಎನ್ನುವ ರೈತ ಮಹಿಳೆಗೆ ಜೈಲಿನಲ್ಲಿರುವ ಕೈದಿಗೆ ದೊರೆಯುವ ಪ್ರಮಾಣದಷ್ಟೂ ಆಹಾರ ದೊರಕುತ್ತಿಲ್ಲ ಎಂದು ಪಿ. ಸಾಯಿನಾಥ್ ಬರೆದಿದ್ದರು. ‘ಮಹಿಳಾದಿನದ ಪ್ರಯುಕ್ತ ಹೆಣ್ಣುಮಕ್ಕಳಿಗೆ ಅನಿಯಮಿತ ಕಾಕ್ ಟೈಲ್ ಆಫರ್ ಇದೆ, ಹ್ಯಾಪ್ಪಿ ವುಮನ್ಸ್ ಡೆ’ ಎನ್ನುವ ಮೆಸೇಜ್ ಮೊಬೈಲ್‌ನಲ್ಲಿ ಮಿನುಗುತ್ತಿತ್ತು. ಈ ಎಲ್ಲದರ ನಡುವೆ ಮತ್ತೊಂದು ಮಹಿಳಾ ದಿನಾಚರಣೆ ಬಂದಿದೆ.

ಮಹಿಳಾವಾದ ಬೇಕೆ ಎಂದರೆ ಹೌದು ಅನ್ನುವ ಮೊದಲು ಅವರ ಮಹಿಳಾವಾದದ ವ್ಯಾಖ್ಯಾನ ಏನು ಎಂದು ಕಣ್ಣುಜ್ಜಿಕೊಂಡು ನೋಡುವಂತಹ ವಾತಾವರಣವನ್ನು ಮಾರುಕಟ್ಟೆ ಮತ್ತು ಜಾಹೀರಾತುಗಳು ನಿರ್ಮಾಣ ಮಾಡಿವೆ. ಇಡೀ ಸಂವೇದನೆ ಕಾರ್ಪೊರೇಟಿಕರಣಗೊಂಡು, ಮಾಧ್ಯಮಗಳು ಒಂದು ‘ಸೂಪರ್ ವುಮನ್’ ಅನ್ನು ಸೃಷ್ಟಿಸಿವೆ ಮತ್ತು ಆಕೆ ನಮ್ಮ ನೆಲದವಳಾಗಿಲ್ಲ. ‘ಐ ವಾಂಟ್ ರೆವಲ್ಯೂಶನ್’ ಎನ್ನುವ ಮಾತು ಒಂದು ಮಿಕ್ಸಿ ಜಾಹೀರಾತಾಯಿತು. ಸ್ತ್ರೀ ಸ್ವಾತಂತ್ರ್ಯ ಎಂದರೆ ಕೇವಲ ಲೈಂಗಿಕ ಸ್ವಾತಂತ್ರ್ಯ ಎಂದು ಮಾಧ್ಯಮಗಳು ಪ್ರತಿಪಾದಿಸುವ ಮಟ್ಟಿಗೆ ಆ ಸಂವೇದನೆ ಹೈಜಾಕ್ ಆಯಿತು. ಸೂಕ್ಷ್ಮತೆ ಕಳೆದುಕೊಂಡ ದೀಪಿಕಾಳ ‘ಮೈ ಚಾಯ್ಸ್’ ಘೋಷಣೆ ಎಷ್ಟು ರೋಚಕವಾಗಿ ಬಿಂಬಿತವಾಯಿತು ಎಂದರೆ ಅದು ಪ್ರತಿಪಾದಿಸುವ ಸಬಲೀಕರಣವೊಂದೇ ಅಂತಿಮ ಸತ್ಯ ಅನ್ನಿಸಿತು.

ಮಹಿಳಾವಾದವನ್ನು ಪುರುಷತ್ವದ ನೆಲೆಯಲ್ಲಿ ನಿರ್ಧರಿಸಿದ್ದು ಪಶ್ಚಿಮದ ಮಹಿಳಾವಾದದ ಒಂದು ಮುಖ್ಯ ಕೊರತೆ. ಯಾವಾಗ ನಾವು ಅದನ್ನು ಆತ್ಯಂತಿಕ ಯಶಸ್ಸು ಎಂದು ಒಪ್ಪಿಕೊಂಡೆವೋ ಆಗ ಅದುವರೆಗೂ ಹೆಣ್ಣು ನಿರ್ವಹಿಸುತ್ತಿದ್ದ ಎಲ್ಲಾ ಜವಾಬ್ದಾರಿಗಳೂ ದ್ವಿತೀಯ ದರ್ಜೆಗಿಳಿದುಬಿಟ್ಟವು. ಗಂಡಿನ ಪಾಲಿನ ಕೆಲಸವನ್ನು ಅತ್ಯುತ್ಸಾಹದಿಂದ ಹೆಗಲಿಗೆಳೆದುಕೊಂಡ ಮಹಿಳೆಗೆ ಆಕೆಯ ಮನೆಯ ಜವಾಬ್ದಾರಿಯನ್ನು ಹೆಗಲಿನಿಂದ ತುಸುಮಟ್ಟಿಗಾದರೂ ವರ್ಗಾಯಿಸುವುದು ಸಾಧ್ಯವಾಗಲಿಲ್ಲ. ಇಂದಿನ ಜಾಹೀರಾತುಗಳು ಆಫೀಸ್‌ಗೆ ಹೋಗುತ್ತಾ ಒಂದಿನಿತೂ ದೂಳಿಲ್ಲದ ಹಾಗೆ ಮನೆ ಇಟ್ಟುಕೊಳ್ಳುವುದು, ಮಕ್ಕಳಿಗೆ ಪಾಠ ಹೇಳಿಕೊಡುವುದು, ಮನೆಯ ಸಕಲ ಜವಾಬ್ದಾರಿಗಳನ್ನೂ ನಿಭಾಯಿಸುವುದು, ಮನೆಯವರು ಕೇಳಿದ ಅಡುಗೆ ಮಾಡುವುದು ಮತ್ತು ಗಂಡನಿಗೆ ಸರ್ವ ವಿಧದಲ್ಲೂ ಸಂಗಾತಿಯಾಗಿರುವುದನ್ನೇ ಯಶಸ್ವೀ ಹೆಣ್ಣುಮಗಳು ಎಂದು ಮುದ್ರೆ ಒತ್ತುತ್ತಿವೆ. ಹೆಣ್ಣು ಆ ಪರ್ಫೆಕ್ಟ್ ಚೌಕಟ್ಟಿಗೆ ತನ್ನನ್ನು ಹೊಂದಿಸಿಕೊಳ್ಳಲಾಗದೆ ನರಳುತ್ತಿದ್ದಾಳೆ. ಒಂಟಿ ತಾಯಂದಿರ ಸ್ಥಿತಿಯನ್ನಂತೂ ಕೇಳುವುದೇ ಬೇಡ. ಲೈಂಗಿಕ ಸ್ವಾತಂತ್ರ್ಯದ ಫಲಾನುಭವಿಗಳು ಇಬ್ಬರೂ ಆದರೂ ಹೊಣೆ ಅವಳಿಗೆ ಮಾತ್ರ ಎನ್ನುವಾಗ, ಮಹಿಳಾವಾದ ಹೆಣ್ಣಿಗೆ ಬೇಕಾದ ಸಪೋರ್ಟ್ ಸಿಸ್ಟಂ ಕೊಡುವಲ್ಲಿ ಎಲ್ಲೋ ಸೋತಿದೆ ಅನ್ನಿಸುತ್ತಿದೆ.

ಇನ್ನೊಂದು ಅಪಾಯ ಎಂದರೆ ಮಹಿಳಾವಾದ ಕೇವಲ ನಗರಕೇಂದ್ರಿತ ಮತ್ತು ನಗರಕ್ಕೆ ಸೀಮಿತ ಆಗುವುದು. ಗ್ರಾಮೀಣ ಮಹಿಳೆಯ ಸಂಕಷ್ಟಗಳನ್ನು ಅರಿಯುವ, ಹಗಲೂ ರಾತ್ರಿ ದುಡಿಯುವ ಅವರ ಶ್ರಮಕ್ಕೆ ಗೌರವ ಒದಗಿಸುವ ದಿಸೆಯಲ್ಲಿ ಮಹಿಳಾವಾದ ಹೆಚ್ಚೇನೂ ಮಾಡಿಲ್ಲ ಎನ್ನುವಲ್ಲಿ ನನಗೆ ಮಹಿಳಾವಾದದ ಸೋಲು ಕಾಣಿಸುತ್ತದೆ.

ಇನ್ನೊಂದು ಪ್ರಶ್ನೆ – ಪುರುಷವಾದವೂ ಬೇಕೆ? ಮಹಿಳಾವಾದ ತನ್ನನ್ನು ತಾನು ಪುರುಷನಿಗೆ ಸಮ ಎಂದು ತಿಳಿದುಕೊಳ್ಳುತ್ತದೆಯೇ ಹೊರತು, ಅವನಿಗಿಂತ ಮಿಗಿಲು ಎಂದಲ್ಲ. ಆಕೆ ಆತನಿಗೆ ಸಮವಾದರೆ, ಆತನೂ ಆಕೆಗೆ ಸಮವೇ.

ಮಹಿಳಾವಾದದ ಬೀಜ ಪಶ್ಚಿಮದಿಂದ ಬಂದಿದ್ದರೂ ಅದನ್ನು ಇಲ್ಲಿನ ನೆಲದಲ್ಲಿ ಬಿತ್ತಿ, ಇಲ್ಲಿನ ಮಣ್ಣಿಗೆ ಅನುಗುಣವಾಗಿ ಅದು ಸಹಜವಾಗಿ ಮೊಳಕೆಯೊಡೆಯುವ ಬಗೆಯನ್ನು ನಾವು ಹುಡುಕಿಕೊಳ್ಳಬೇಕಾಗಿದೆ. ‘ಯಾವುದೇ ಸಮುದಾಯದ ಏಳ್ಗೆಯನ್ನು ಅಳೆಯಬೇಕಾದರೆ ಆ ಸಮುದಾಯದ ಸ್ತ್ರೀಯರ ಏಳ್ಗೆಯನ್ನು ಪರಿಗಣಿಸಬೇಕು’ ಎಂದು ಮಹಿಳೆಯರ ಸ್ಥಿತಿಗತಿಯನ್ನು ಸಮಾಜದ ಏಳ್ಗೆಯ ಸೂಚ್ಯಂಕವಾಗಿ ಪರಿಗಣಿಸಿದ ಅಂಬೇಡ್ಕರ್ ನನಗೆ ಮಹಿಳಾವಾದದ ಹರಿಕಾರರಾಗಿ ಕಾಣುತ್ತಾರೆ. ಹೆಣ್ಣೊಬ್ಬಳು ಗಂಡಸರ ಸಮಾನವಾಗಿ ಕೂತು ಸಾಮಾಜಿಕ, ಧರ್ಮಾರ್ಥ ಚರ್ಚೆಗಳಲ್ಲಿ ಭಾಗವಹಿಸುತ್ತಿದ್ದ ಮಹಾಮನೆ ನನಗೆ ಮುಖ್ಯವಾಗುತ್ತದೆ.

ಲೇಖಕಿ ಕವಯಿತ್ರಿ

ಬರಹ ಇಷ್ಟವಾಯಿತೆ?

 • 6

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !