ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿ–ಮೇಲ್‌: 2 ಹಂತದ ಸುರಕ್ಷತೆಗಿಲ್ಲ ಗಮನ

Last Updated 7 ಫೆಬ್ರುವರಿ 2018, 19:30 IST
ಅಕ್ಷರ ಗಾತ್ರ

‘ಊರು ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಹಾಕಿದರು’ ಎನ್ನುವ ಜಾಯಮಾನದವರೇ ಹೆಚ್ಚು. ಈ ತಂತ್ರಜ್ಞಾನ ಯುಗದಲ್ಲಿ ಸುರಕ್ಷತೆಗೆ ಹೆಚ್ಚು ಆದ್ಯತೆ ನೀಡದೇ ಹೋದರೆ ವೈಯಕ್ತಿಕ ಮಾಹಿತಿಯಷ್ಟೇ ಅಲ್ಲ, ಹಣವನ್ನೂ ಕಳೆದುಕೊಳ್ಳುವ ಅಪಾಯ ಕಟ್ಟಿಟ್ಟಬುತ್ತಿ. ಹೀಗಿದ್ದರೂ ಜನರು ಆ ಬಗ್ಗೆ ಹೆಚ್ಚು ಗಮನ ನೀಡುತ್ತಿಲ್ಲ. ಹೆಚ್ಚು ಕ್ಲಿಷ್ಟವಾದ ‍ಪಾಸ್‌ವರ್ಡ್‌ ಬಳಸಿ, ಜಾಲತಾಣದ ಸುರಕ್ಷಿತ ಬಳಕೆ ಹೇಗೆ, ಗ್ಯಾಜೆಟ್‌ಗಳಲ್ಲಿ ವೈಯಕ್ತಿಕ ಮಾಹಿತಿ ಕಾಪಾಡಿಕೊಳ್ಳುವುದು ಹೇಗೆ ಎಂದು ಕೆಲ ಸಂಸ್ಥೆಗಳು ಪದೇ ಪದೇ ವರದಿ ಪ್ರಕಟಿಸಿ ಗಮನ ಸೆಳೆಯುತ್ತವೆ.

ಮೇಲ್‌ ಹ್ಯಾಕ್‌ ಆಗಿ ವೈಯಕ್ತಿಕ ಮಾಹಿತಿ ಸೋರಿಕೆಯಾಗುವ ಸುದ್ದಿಗಳು ವರದಿಯಾಗುತ್ತಲೇ ಇರುತ್ತವೆ. ಅದರಿಂದ ರಕ್ಷಣೆ ಪಡೆಯಲು ಅನುಸರಿಸಬೇಕಾದ ಸುರಕ್ಷತಾ ಕ್ರಮಗಳ ಬಗ್ಗೆ ಆಗಾಗ್ಗೆ ಸಂಬಂಧಪಟ್ಟ ಕಂಪನಿಗಳು, ತಜ್ಞರು ಎಚ್ಚರಿಕೆ ನೀಡುತ್ತಲೇ ಇರುತ್ತಾರೆ. ಇಷ್ಟಾದರೂ ಅದನ್ನೆಲ್ಲಾ ಗಂಭೀರವಾಗಿ ಪರಿಗಣಿಸಿ ಅನುಸರಿಸುವವರು ಬೆರಳೆಣಿಕೆ ಮಂದಿ ಮಾತ್ರ ಎನ್ನುವುದು ವಾಸ್ತವ.

ಅತಿ ಹೆಚ್ಚು ಬಳಕೆಯಲ್ಲಿರುವ ಜಿ–ಮೇಲ್‌ ಅನ್ನೇ ಗಮನಿಸುವುದಾದರೆ, ಅದರಲ್ಲಿ ಇ–ಮೇಲ್‌ ಸುರಕ್ಷತೆಗೆ ಎರಡು ಹಂತದ ಸುರಕ್ಷತಾ ಆಯ್ಕೆಗಳಿವೆ. ಅದನ್ನೂ ಇತ್ತೀಚೆಗೆ ನೀಡಿರುವುದೇನಲ್ಲ. ಸರಿಸುಮಾರು ಏಳು ವರ್ಷಗಳಿಂದಲೂ ಆ ಆಯ್ಕೆ ಇದೆ. ಹೀಗಿದ್ದರೂ, ಗೂಗಲ್‌ ಖಾತೆಯನ್ನು ಸಕ್ರಿಯವಾಗಿ ಬಳಸುತ್ತಿರುವವರಲ್ಲಿ ಶೇ 10ರಷ್ಟು ಮಂದಿ ಮಾತ್ರವೇ ಎರಡು ಹಂತದ ಸುರಕ್ಷತೆಯನ್ನು ಬಳಸುತ್ತಿದ್ದಾರೆ ಎಂದು ವರದಿಯೊಂದು ತಿಳಿಸಿದೆ.

ಬಹಳಷ್ಟು ಬಳಕೆದಾರರಿಗೆ ಜಿ–ಮೇಲ್‌ನಲ್ಲಿ ಇರುವ ಸುರಕ್ಷತಾ ಆಯ್ಕೆಗಳ ಬಗ್ಗೆ ಅರಿವೇ ಇಲ್ಲ. ಜಿ–ಮೇಲ್‌ನಲ್ಲಿ ಇರುವ ಎರಡು ಹಂತದ ಸುರಕ್ಷತಾ ಆಯ್ಕೆಯನ್ನು ಕಡ್ಡಾಯ ಏಕೆ ಮಾಡಿಲ್ಲ ಎನ್ನುವುದು ಕೆಲವರ ಪ್ರಶ್ನೆಯಾಗಿದೆ. ಎರಡು ಹಂತದ ಸುರಕ್ಷತೆಗಾಗಿ ಬಳಕೆದಾರನ ಮೊಬೈಲ್‌ಗೆ ಎಸ್‌ಎಂಎಸ್‌ ಮೂಲಕ ಕೋಡ್‌ ಬರುತ್ತದೆ. ಆದರೆ ಅದನ್ನು ಬಳಸುವ ಬಗ್ಗೆಯೇ ಸಮಸ್ಯೆ ಹೊಂದಿದ್ದಾರೆ ಎಂದು ಗೂಗಲ್‌ನ ಸಾಫ್ಟ್‌ವೇರ್ ಎಂಜಿನಿಯರ್‌ ಗ್ರೆಜಾರ್ಗ್‌ ಮಿಲ್ಕ್‌ ಹೇಳಿದ್ದಾರೆ.

ಡೆಸ್ಕ್‌ಟಾಪ್‌ ಕಂಪ್ಯೂಟರ್‌ಗಳಲ್ಲಿ ಜಿ–ಮೇಲ್‌ ಖಾತೆ ಬಳಸುವಾಗ, ಲಾಗಿನ್‌ ಐಡಿ ಮತ್ತು ಪಾಸ್‌ವರ್ಡ್‌ ನೀಡಿದ ಬಳಿಕ Sign in ಆಯ್ಕೆ ಪಕ್ಕದಲ್ಲಿಯೇ ಇರುವ ‘Stay signed in’ ನಲ್ಲಿ ಟಿಕ್‌ ಮಾರ್ಕ್ ಇದ್ದರೆ ಅದನ್ನು ಅನ್‌ಟಿಕ್‌ ಮಾಡಬೇಕು. ಹಾಗೆ ಮಾಡದೇ Sign in ಆದರೆ, ಮುಂದೆ ಬೇರೆಯಾರಾದರೂ ಜಿ–ಮೇಲ್‌ಗೆ ಲಾಗಿನ್ ಆಗಲು ಹೋದಾಗ ನಿಮ್‌ ಲಾಗಿನ್‌ ಐಡಿ ಮತ್ತು ಪಾಸ್‌ವರ್ಡ್‌ ಡಿಫಾಲ್ಟ್‌ ಆಗಿ ಬರುತ್ತದೆ. ಅವರು Sign in ಕ್ಲಿಕ್‌ ಮಾಡಿದರೆ ಬಹಳ ಸುಲಭವಾಗಿ ನಿಮ್ಮ ಖಾತೆಗೆ ಪ್ರವೇಶ ಪ‍ಡೆಯಬಹುದು. ಕೆಲವು ಬ್ರೌಸರ್‌ಗಳಲ್ಲಿ, ಮತ್ತೊಮ್ಮೆ ಲಾಗಿನ್‌ ಆಗುವಾಗ ಸರಳವಾಗುವಂತೆ ‘ನಿಮ್ಮ ಪಾಸ್‌ವರ್ಡ್ ಸೇವ್‌ ಮಾಡಿ ಇಡಲೇ? ಎನ್ನುವ ನೋಟಿಫಿಕೇಷನ್‌ ಸಹ ಬರುತ್ತದೆ. ಆ ಕ್ಷಣಕ್ಕೆ Never for this time ಎಂಬ ಆಯ್ಕೆಯನ್ನು ಒತ್ತಿ. ಪಾಸ್‌ವರ್ಡ್‌ ಸೇವ್ ಮಾಡುವ ಆಯ್ಕೆಯೇ ಬರದಂತೆ ಮಾಡಲು ಬ್ರೌಸರ್ ಸೆಟಿಂಗ್ಸ್‌ನಲ್ಲಿ ಪಾಸ್‌ವರ್ಡ್ ಆ್ಯಂಡ್‌ ಫಾರ್ಮ್ಸ್‌ ಆಯ್ಕೆ ಕ್ಲಿಕ್ ಮಾಡಿದರೆ ಅಲ್ಲಿ ಮ್ಯಾನೇಜ್‌ ಪಾಸ್‌ವರ್ಡ್ಸ್‌ ಆಯ್ಕೆಯಲ್ಲಿ ಆಫರ್‌ ಟು ಸೇವ್‌ ಯುವರ್ ಪಾಸ್‌ವರ್ಡ್‌ ಮೇಲೆ ಕ್ಲಿಕ್ಕಿಸಿ. ಅಲ್ಲಿ ಪಾಸ್‌ವರ್ಡ್‌ ಸೇವ್‌ ಮಾಡುವ ಆಯ್ಕೆಯನ್ನು ತೆಗೆಯಿರಿ.

ಎರಡು ಹಂತದ ಸುರಕ್ಷತೆ ಹೇಗೆ?
ಜಿ–ಮೇಲ್‌ ಖಾತೆ ತೆರೆಯಲು ಬಳಕೆದಾರರ ಹೆಸರು ಮತ್ತು ರಹಸ್ಯ ಪದಗಳನ್ನು ಕೀಲಿಸಿದ ನಂತರ ಖಾತೆಗಳ ಜತೆ ಜೋಡಿಸಿರುವ ಮೊಬೈಲ್‌ ಸಂಖ್ಯೆಗೆ ಒಟಿಪಿ (One Time Password) ಸಂಖ್ಯೆ ಬರುತ್ತದೆ. ಬೇರೊಬ್ಬರು ನಿಮ್ಮ ಖಾತೆಯ ಪಾಸ್‌ವರ್ಡ್‌ ಹ್ಯಾಕ್‌ ಮಾಡಿ ತೆರೆಯಲು ಪ್ರಯತ್ನಿಸಿದರೆ ಕೂಡಲೆ ನಿಮ್ಮ ಮೊಬೈಲ್‌ಗೆ ಒಟಿಪಿ ಸಂಖ್ಯೆ ಬರುತ್ತದೆ. ಆಗ ನೀವು ಎಚ್ಚರ ವಹಿಸಬಹುದು.

ಜಿ–ಮೇಲ್ ಟೂ ಸ್ಟೆಪ್‌ ವೆರಿಫಿಕೇಷನ್‌ ಮಾಡಲು www.google.com/landing/2step/ ಎಂದು ಜಾಲ ತಾಣಪುಟದಲ್ಲಿ ಟೈಪ್ ಮಾಡಿ ಆ್ಯಕ್ಟಿವೇಟ್‌ ಮಾಡಿಕೊಳ್ಳಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT