ಪ್ರಧಾನಿಗೆ ಪ್ರಜಾಪ್ರಭುತ್ವದಲ್ಲಿ‌ ನಂಬಿಕೆ‌ ಇಲ್ಲ: ಉಗ್ರಪ್ಪ

7
ಕ್ಷೇತ್ರವನ್ನು ದೇಶದಲ್ಲೇ ಮಾದರಿಯನ್ನಾಗಿಸುವೆ

ಪ್ರಧಾನಿಗೆ ಪ್ರಜಾಪ್ರಭುತ್ವದಲ್ಲಿ‌ ನಂಬಿಕೆ‌ ಇಲ್ಲ: ಉಗ್ರಪ್ಪ

Published:
Updated:

ಬಳ್ಳಾರಿ: ಹೊಸ ವರ್ಷದಲ್ಲಿ ಜನರ ಸಮಸ್ಯೆಗಳ‌ ನಿವಾರಣೆಗೆಂದು ಕಚೇರಿಯನ್ನು ಆರಂಭಿಸಲಾಗಿದೆ. ಮಿತ್ರಪಕ್ಷಗಳ ಸಹಕಾರದಿಂದ‌ ಕ್ಷೇತ್ರವನ್ನು ದೇಶದಲ್ಲೇ ಮಾದರಿಯನ್ನಾಗಿ ಮಾಡಲಾಗುವುದು ಎಂದು ಸಂಸದ ವಿ.ಎಸ್‌. ಉಗ್ರಪ್ಪ ತಿಳಿಸಿದರು.

ನಗರದ‌ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಬುಧವಾರ ಸಂಸದರ ಕಚೇರಿಯನ್ನು ಉದ್ಘಾಟಿಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರ ಮತ್ತು ಜನತೆಯ ನಡುವೆ ಸೇತುವೆಯಾಗಿ ಸಂಸದರ ಕಚೇರಿಯು ಕಾರ್ಯನಿರ್ವಹಿಸಲಿದೆ ಎಂದರು.

ಕ್ಷೇತ್ರದಲ್ಲಿ‌ ಅನೇಕ ಸಮಸ್ಯೆಗಳಿವೆ. ಮೂಲಸೌಕರ್ಯ ಕೊರತೆಗಳಿವೆ. ಜೊತೆಗೆ ಹೆಚ್ಚಿನ ಸಂಪತ್ತು ಇದೆ. ಮಾನವ ಸಂಪನ್ಮೂಲವಿದೆ. ಇವೆಲ್ಲವನ್ನೂ ಸದ್ಬಳಕೆ‌ ಮಾಡಿಕೊಂಡರೆ ಖಂಡಿತ ಮಾದರಿ ಕ್ಷೇತ್ರವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕೃಷಿ ಭೂಮಿಯನ್ನು ಕೈಗಾರಿಕೆ ಸ್ಥಾಪನೆಗೆ ಹತ್ತಾರು ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಂಡು ಎಂಟು ‌ವರ್ಷಕ್ಕೂ‌ ಹೆಚ್ಚಾದರೂ ಕ್ರಮ ಕೈಗೊಂಡಿಲ್ಲ. ಕಾರ್ಖಾನೆ ಸ್ಥಾಪನೆಯಾಗಿದ್ದಿದ್ದರೆ‌ ಲಕ್ಷಾಂತರ ಜನರಿಗೆ ಉದ್ಯೋಗ ದೊರಕುತ್ತಿತ್ತು ಎಂದರು.

ಈ ಬಗ್ಗೆ ರಾಜ್ಯ ಸರ್ಕಾರದ ಗಮನ ಸೆಳೆದಿದ್ದು, ಭೂಮಿಯನ್ನು ಕೈಗಾರಿಕೆಗೆ ಬಳಸಬೇಕು ಅಥವಾ ರೈತರಿಗೆ ವಾಪಸ್ ನೀಡಬೇಕು ಎಂದು ಕೋರಲಾಗಿದೆ ಎಂದರು. ಜಮೀನಿನಲ್ಲಿ‌ ಸರ್ಕಾರವೇ ಉದ್ದಿಮೆ‌ ಸ್ಥಾಪಿಸುವುದಾದರೆ ಅದೂ ಆಗಲಿ ಎಂದು ಅಭಿಪ್ರಾಯಪಟ್ಟರು‌.

ಕೈಗಾರಿಕೆ ಸ್ಥಾಪನೆ ಕುರಿತು ಈ ಮುಂಚೆ ಜಿಲ್ಲೆಯ‌ ಸಂಸದರಾಗಿದ್ದವರು, ಶಾಸಕರು ಸರ್ಕಾರದ ಗಮನ ಸೆಳೆಯಬೇಕಿತ್ತು ಎಂದರು.

ಅದಿರು ಉತ್ಪಾದನೆ ಆದಾಯದ ಶೇ 85 ರಷ್ಟನ್ನು ಪ್ರೀಮಿಯಂ ಆಗಿ ವಾಣಿಜ್ಯ ಮತ್ತು‌ ಕೈಗಾರಿಕೆ ಇಲಾಖೆಗೆ ಪಾವತಿಸಬೇಕು ಎಂದು ಎನ್ಎಂಡಿಸಿಗೆ ಷರತ್ತು ವಿಧಿಸಿರುವುದರಿಂದ ಉದ್ದಿಮೆ ಸ್ಥಗಿತಗೊಂಡಿದೆ. ಈ ಬಗ್ಗೆ ಕ್ರಮ ವಹಿಸಲು ಸರ್ಕಾರದ ಗಮನ ಸೆಳೆಯುವೆ.‌ಎನ್ಎಂಡಿಸಿಯೊಂದಕ್ಕೇ ಈ ಷರತ್ತನ್ನು ವಿಧಿಸಿದ್ದರೆ ಅದು ತಪ್ಪು ಎಂದರು.

ಹಂಪಿ‌ ಉತ್ಸವ: ಉತ್ಸವ ನಡೆಯಲೇಬೇಕು. ಉತ್ಸವಕ್ಕಾಗಿ 2.10 ಕೋಟಿ ರುಪಾಯಿ ಮೀಸಲಿದೆ. ಉತ್ಸವದ ರೂಪುರೇಷೆಯನ್ನು ಸಿದ್ಧಪಡಿಸುವಂತೆ ಉಸ್ತುವಾರಿ ಸಚಿವ ಶಿವಕುಮಾರ್ ತಿಳಿಸಿದ್ದಾರೆ ಎಂದರು.

ಉತ್ಸವಕ್ಕೆ ವಿದೇಶಿ ಕಲಾವಿದರನ್ನು ಕರೆಸುವ ಅಗತ್ಯವಿಲ್ಲ. ಸ್ಥಳೀಯ ‌ಕಲಾವಿದರನ್ನೇ ಬಳಸಿ ಸರಳವಾಗಿ ಆಚರಿಸಬಹುದು ಎಂದು ಅಭಿಪ್ರಾಯಪಟ್ಟರು.

ಮೋದಿ, ಷಾ ಅವರಿಗೆ ಪ್ರಜಾಪ್ರಭುತ್ವದಲ್ಲಿ‌ ನಂಬಿಕೆ‌ ಇಲ್ಲ

ಪ್ರಧಾನಿ ಮೋದಿ, ಬಿಜೆಪಿ ಅಧ್ಯಕ್ಷ ಅಮಿತ್ ಷಾ ಅವರಿಗೆ ಪ್ರಜಾಪ್ರಭುತ್ವ‌ ಮತ್ತು ಸಂಸದೀಯ ವ್ಯವಸ್ಥೆಯಲ್ಲಿ‌ ನಂಬಿಕೆ‌ ಇಲ್ಲ. ಪ್ರಧಾನಿಯು ಒಂದು ತಿಂಗಳ ಸಂಸತ್ ಅಧಿವೇಶನದಲ್ಲಿ ಒಂದು ಗಂಟೆ ಕಾಲವೂ ಹಾಜರಾಗಲಿಲ್ಲ ಎಂದು ದೂರಿದರು. 

ರಫೇಲ್ ಯುದ್ಧ ವಿಮಾನ ಖರೀದಿಯಲ್ಲಿ ಅಕ್ರಮ ‌ನಡೆಸಿ‌ ಪಡೆದ 35 ಸಾವಿರ ಕೋಟಿ ಕಿಕ್‌ಬ್ಯಾಕ್ ಹಣವನ್ನೇ ಆಪರೇಷನ್ ಕಮಲಕ್ಕೆ ಬಳಸಲಾಗುತ್ತಿದೆ ಎಂದು ಆರೋಪಿಸಿದರು.

ಬಿಜೆಪಿ ವಚನ ಭ್ರಷ್ಟವಾಗಿದೆ. ಜನಾದೇಶದ ವಿರೋಧಿಯಾಗಿದ್ದು ನಿರಾಶಗೊಂಡಿದೆ. ಮೋದಿ ವಿರುದ್ಧದ ಅಲೆಯನ್ನು ದೇಶದಲ್ಲಿ ತಡೆಯುವ ಪ್ರಯತ್ನದ ಭಾಗವಾಗಿಯೇ ಕರ್ನಾಟಕದಲ್ಲಿ ಆಪರೇಷನ್ ಕಮಲ ನಡೆಯುತ್ತಿದೆ. ಅದನ್ನು ನಿಲ್ಲಿಸದಿದ್ದರೆ ಮುಂದಿನ ಚುನಾವಣೆಯಲ್ಲಿ ದೇಶದ ಜನ ಮೋದಿ‌, ಅಮಿತ್ ಷಾ ಮತ್ತು ಯಡಿಯೂರಪ್ಪ ಮುಕ್ತ ವ್ಯವಸ್ಥೆಯನ್ನು ಜಾರಿಗೆ ತರುತ್ತಾರೆ ಎಂದು ಹೇಳಿದರು.

ಆಪರೇಷನ್ ನಡೆಸಲು ಬಿಜೆಪಿ ಮಹಾರಾಷ್ಟ್ರ, ಹರಿಯಾಣ ಮತ್ತು ದೆಹಲಿ ಸರ್ಕಾರವನ್ನು ದುರ್ಬಳಕೆ ಮಾಡಿಕೊಂಡು ಕರ್ನಾಟಕದ ಮಾನ ಕಳೆದಿದೆ ಎಂದು ದೂರಿದರು.

ಸರ್ಕಾರಕ್ಕೆ ನೀಡಿದ ಬೆಂಬಲವನ್ನು ವಾಪಸ್ ಪಡೆದ ಇಬ್ಬರು ಪಕ್ಷೇತರರಿಗೆ ದೇವರು ಒಳ್ಳೆಯ ಬುದ್ಧಿ ಕೊಡಲಿ ಎಂದರು.

ಸಂಪರ್ಕಕ್ಕೆ‌ ಸಿಗದ‌ ನಾಗೇಂದ್ರ

ಶಾಸಕರಾದ ಗಣೇಶ್ ಮತ್ತು ಭೀಮಾನಾಯ್ಕ ಕಾಂಗ್ರೆಸ್ ಜೊತೆಗಿರುತ್ತಾರೆ. ಆದರೆ ಸಹೋದರನಂತಿರುವ ಶಾಸಕ ಬಿ. ನಾಗೇಂದ್ರ ಅವರು ಹಲವು ದಿನಗಳಿಂದ‌ ಸಂಪರ್ಕಕ್ಕೆ‌ ಸಿಕ್ಕಿಲ್ಲ ಎಂದು ಉಗ್ರಪ್ಪ ತಿಳಿಸಿದರು.

ಅಧಿಕಾರದ ಅವಕಾಶ ನಮ್ಮ‌ ಬಳಿಗೆ‌ ಬರುವವರೆಗೂ ಕಾಯುವಂತೆ ನಾಗೇಂದ್ರ ಅವರಿಗೆ‌ ತಿಳಿಸಿರುವೆ.‌ ಸಮನ್ವಯ ಸಮಿತಿ‌ ಅಧ್ಯಕ್ಷ ಸಿದ್ದರಾಮಯ್ಯ ಅವರೊಂದಿಗೂ ಮಾತನಾಡಲು ಅವಕಾಶ ದೊರಕಿಸಿರುವೆ ಎಂದರು.

ಬಿಜೆಪಿಯವರಿಗೆ ಸರ್ಕಾರ ರಚಿಸಲು ಜನಾದೇಶ ಇಲ್ಲ. ವಾಮ ಮಾರ್ಗಗಳನ್ನು ಹಿಡಿಯುತ್ತಿರುವ‌ ಬಿಜೆಪಿ ಸಂವಿಧಾನಕ್ಕೆ ಅಪಚಾರ ಮಾಡುತ್ತಿದೆ ಎಂದರು.

ಕಾಂಗ್ರೆಸ್ ಶಾಸಕರು ಜನಾಭಿಪ್ರಾಯವನ್ನು ಅರ್ಥ ಮಾಡಿಕೊಂಡು ಸಮ್ಮಿಶ್ರ ಸರ್ಕಾರದ ಜೊತೆ ಇರುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು

ಬರಹ ಇಷ್ಟವಾಯಿತೆ?

 • 8

  Happy
 • 1

  Amused
 • 2

  Sad
 • 0

  Frustrated
 • 5

  Angry

Comments:

0 comments

Write the first review for this !