ಉಗ್ರರು ಸುಟ್ಟ ಶಾಲೆಗಳನ್ನು ಮತ್ತೆ ಕಟ್ಟಲು ಮಲಾಲ ಆಗ್ರಹ

7

ಉಗ್ರರು ಸುಟ್ಟ ಶಾಲೆಗಳನ್ನು ಮತ್ತೆ ಕಟ್ಟಲು ಮಲಾಲ ಆಗ್ರಹ

Published:
Updated:

ಪೆಶಾವರ : ಗಿಲ್ಗಿಟ್‌–ಬಾಲ್ಟಿಸ್ಟಾನ್ ಪ್ರಾಂತ್ಯದ ಚಿಲಾಸ್ ಪಟ್ಟಣದಲ್ಲಿ ಶುಕ್ರವಾರ ರಾತ್ರಿ ದುಷ್ಕರ್ಮಿಗಳಿಂದ ಬೆಂಕಿಗೆ ಆಹುತಿಯಾದ 12 ಶಾಲೆಗಳ ಮರು ನಿರ್ಮಾಣಕ್ಕೆ ನೊಬೆಲ್ ಪ್ರಶಸ್ತಿ ಪುರಸ್ಕೃತೆ ಮಲಾಲ ಯೂಸುಫ್‌ಝೈ ಆಗ್ರಹಿಸಿದ್ದಾರೆ. 

‘ಹೆಣ್ಣುಮಕ್ಕಳ ಆರು ಶಾಲೆಗಳೂ ದಾಳಿಗೆ ಒಳಗಾಗಿವೆ. ಹೆಣ್ಣುಮಕ್ಕಳು ಅಧ್ಯಯನದಲ್ಲಿ ತೊಡಗಿರುವುದು ತೀವ್ರಗಾಮಿಗಳಲ್ಲಿ ಭಯ ಹುಟ್ಟಿಸಿದೆ ಎಂಬುದು ಈ ದಾಳಿಯಿಂದ ತಿಳಿಯುತ್ತದೆ’ ಎಂದು ಮಲಾಲ ಹೇಳಿದ್ದಾರೆ. 

‘ತಕ್ಷಣವೇ ಶಾಲೆಗಳನ್ನು ಮರು ನಿರ್ಮಿಸಿ, ಮಕ್ಕಳು ಮತ್ತೆ ಶಾಲೆಗೆ ಬರುವಂತಾಗಬೇಕು. ಈ ಮೂಲಕ ಮಕ್ಕಳಿಗೆ ಶಿಕ್ಷಣ ಪಡೆಯುವ ಹಕ್ಕು ಇದೆ ಎಂಬುದನ್ನು ಜಗತ್ತಿಗೆ ಸಾರಬೇಕು’ ಎಂದಿದ್ದಾರೆ.

ಇ್ರಮಾನ್ ಖಂಡನೆ:
ಘಟನೆಯನ್ನು ಖಂಡಿಸಿರುವ ಪಾಕಿಸ್ತಾನದ ನಿಯೋಜಿತ ಪ್ರಧಾನಿ ಇಮ್ರಾನ್ ಖಾನ್, ದುಷ್ಕರ್ಮಿಗಳ ವರ್ತನೆಯನ್ನು ಒಪ್ಪಿಕೊಳ್ಳಲಾಗದು ಎಂದಿದ್ದಾರೆ.

‘ಶಾಲೆಗಳಿಗೆ ಭದ್ರತೆ ನೀಡುತ್ತೇವೆ. ಶಿಕ್ಷಣ, ಅದರಲ್ಲೂ ಹಣ್ಣಮಕ್ಕಳ ಶಿಕ್ಷಣಕ್ಕೆ ಒತ್ತು ಕೊಡಲು ಸರ್ಕಾರ ಬದ್ಧವಾಗಿದೆ. ‘ಹೊಸ ಪಾಕಿಸ್ತಾನ’ದಲ್ಲಿ (ನಯಾ ಪಾಕಿಸ್ತಾನ್) ಹೆಣ್ಣುಮಕ್ಕಳ ಶಿಕ್ಷಣವೂ ಆದ್ಯತೆಯ ವಿಷಯವಾಗಿದೆ’ ಎಂದಿದ್ದಾರೆ. 

10 ಶಂಕಿತರ ಬಂಧನ: 
ಶಾಲೆಗಳಿಗೆ ಬೆಂಕಿಯಿಟ್ಟ ಪ್ರಕರಣ ಸಂಬಂಧ ಪೊಲೀಸರು 10 ಮಂದಿ ಶಂಕಿತರನ್ನು ಬಂಧಿಸಿದ್ದಾರೆ. ಆರೋಪಿಗಳನ್ನು ದರೂಲ್ ತಂಜೀರ್ ಪೊಲೀಸ್ ಠಾಣೆಯಲ್ಲಿ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಗಿಲ್ಗಿಟ್ ಬಾಲ್ಟಿಸ್ತಾನ ಸರ್ಕಾರದ ವಕ್ತಾರ ಫೈಜುಲ್ಲಾ ಹೇಳಿದ್ದಾರೆ. 

ಸ್ಥಳಕ್ಕೆ ಭೇಟಿ ನೀಡಿದ ಸರ್ಕಾರದ ಮುಖ್ಯ ಕಾರ್ಯದರ್ಶಿ, ಕಟ್ಟಡ ದುರಸ್ತಿಗೆ ಸೂಚನೆ ನೀಡಿದರು.

‘ಹೆಣ್ಣುಮಕ್ಕಳ ಶಿಕ್ಷಣದ ಮೇಲೆ ಉಗ್ರರ ಕಣ್ಣು’

ಪಾಕಿಸ್ತಾನದಲ್ಲಿ ಬಾಲಕಿಯರ ಶಾಲೆಗಳು ದುಷ್ಕರ್ಮಿಗಳ ದಾಳಿಗೆ ಒಳಗಾಗುತ್ತಲೇ ಇವೆ. 2011ರಲ್ಲಿ ಚಿಲಾಸ್‌ನಲ್ಲಿ ನಡೆದ ಕಡಿಮೆ ತೀವ್ರತೆಯ ಸ್ಫೋಟದಲ್ಲಿ ಎರಡು ಶಾಲೆಗಳು ಭಾಗಶಃ ಹಾನಿಗೊಂಡಿದ್ದವು. 2004ರಲ್ಲಿ ಇದೇ ಪ್ರದೇಶದಲ್ಲಿ ಬಾಲಕಿಯರು ಓದುವ 8 ಶಾಲೆಗಳು ಸೇರಿದಂತೆ ಒಂಬತ್ತು ಶಾಲೆಗಳು ಬೆಂಕಿಗೆ ತುತ್ತಾಗಿದ್ದವು. 

ಕಳೆದ 10 ವರ್ಷಗಳಲ್ಲಿ ಖೈಬರ್ ಪಖ್ತುಂಖ್ವಾ ಮತ್ತು ಬುಡಕಟ್ಟು ಪ್ರದೇಶಗಳಲ್ಲಿ 1,500 ಶಾಲೆಗಳು ದಾಳಿಗೆ ಒಳಗಾಗಿವೆ. 

ಪಾಕಿಸ್ತಾನದಲ್ಲಿ ತಾಲಿಬಾನ್ ಮತ್ತು ಇತರೆ ಭಯೋತ್ಪಾದಕ ಸಂಘಟನೆಗಳು ಮುಖ್ಯವಾಗಿ ಹೆಣ್ಣುಮಕ್ಕಳು ಓದುವ ಶಾಲೆಗಳನ್ನು ಗುರಿಯಾಗಿಸಿದ ಪರಿಣಾಮ, ಸಾವಿರಾರು ಮಕ್ಕಳ ಶಿಕ್ಷಣಕ್ಕೆ ಅಡ್ಡಿಯಾಗಿದೆ ಎಂದು ಮಾನವಹಕ್ಕು ಕಾವಲು ಪಡೆ (ಎಚ್‌ಆರ್‌ಡಬ್ಲ್ಯು) 2017ರಲ್ಲಿ ವರದಿ ನೀಡಿತ್ತು. 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !