ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಲಪ್ರಭಾ ಭರ್ತಿ: ದಾಖಲೆಯ ನೀರು

Last Updated 7 ಆಗಸ್ಟ್ 2019, 20:00 IST
ಅಕ್ಷರ ಗಾತ್ರ

ಬೆಳಗಾವಿ: ಜಿಲ್ಲೆಯ ಸವದತ್ತಿ ಬಳಿ ಮಲಪ್ರಭಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ನವಿಲುತೀರ್ಥ ಜಲಾಶಯ ಏಳು ವರ್ಷಗಳ ಬಳಿಕ ಭರ್ತಿಯಾಗಿದ್ದು, ಒಳಹರಿವು ಮತ್ತು ಹೊರ ಹರಿವಿನ ವಿಷಯದಲ್ಲಿ ಇದುವರೆಗಿನ ಎಲ್ಲ ದಾಖಲೆಗಳನ್ನು ಮುರಿದಿದೆ.

ಸದ್ಯ ಜಲಾಶಯದ ಒಳಹರಿವು 71,182 ಕ್ಯುಸೆಕ್‌ ಇದೆ. 58 ಸಾವಿರ ಕ್ಯುಸೆಕ್‌ ಹೊರಹರಿವು ಇದೆ. ಜಲಾಶಯ ನಿರ್ಮಿಸಿ 46 ವರ್ಷ ಆಗಿದ್ದು, ಈ ಅವಧಿಯಲ್ಲಿ ಇಷ್ಟೊಂದು ಪ್ರಮಾಣದಲ್ಲಿ ನೀರು ಬಂದಿದ್ದು ಮತ್ತು ಹೊರ ಹೋಗಿದ್ದು ಇದೇ ಮೊದಲು ಎಂದು ಜಲಾಶಯದ ಮೇಲ್ವಿಚಾರಕ ಎಂಜಿನಿಯರ್‌ ಮುದಿಗೌಡರ ತಿಳಿಸಿದರು. 2005ರಲ್ಲಿ 22 ಸಾವಿರ ಕ್ಯುಸೆಕ್‌ ನೀರು ಹೊರಬಿಟ್ಟಿದ್ದೇ ಅತಿ ಹೆಚ್ಚು!

37 ಟಿಎಂಸಿ ಅಡಿ ನೀರು ಸಂಗ್ರಹಿಸುವ ಸಾಮರ್ಥ್ಯದ ಈ ಜಲಾಶಯ, ಇದುವರೆಗೂ ಕೇವಲ ಆರು ಬಾರಿ ಮಾತ್ರ ಭರ್ತಿಯಾಗಿದೆ (1997, 2004, 2005, 2006, 2012, 2019).

ಮಲಪ್ರಭಾ ಉಗಮ ಸ್ಥಳವಾದ ಖಾನಾಪುರ ತಾಲ್ಲೂಕಿನ ಕಣಕುಂಬಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬಿಟ್ಟುಬಿಡದೇ ಮಳೆ ಸುರಿಯುತ್ತಿರುವ ಕಾರಣ ನದಿಗೆ ಅಪಾರ ಪ್ರಮಾಣದಲ್ಲಿ ನೀರು ಹರಿದುಬರುತ್ತಿದೆ. ಏಳು ದಿನಗಳಲ್ಲಿ 2,394 ಮಿ.ಮೀ ದಾಖಲೆಯ ಮಳೆಯಾಗಿದೆ. ಜಲಾಶಯದಿಂದ ಬಿಟ್ಟಿರುವ ನೀರು ರಾಮದುರ್ಗ, ಬಾದಾಮಿ, ರೋಣ ಮೂಲಕ ಹೋಗಿ ಕೂಡಲಸಂಗಮದಲ್ಲಿ ಕೃಷ್ಣಾ ನದಿ ಸೇರುತ್ತದೆ.

ಕುಡಿಯುವ ಉದ್ದೇಶ: ಬೆಳಗಾವಿ ಜಿಲ್ಲೆಯ ಬೈಲಹೊಂಗಲ, ಸವದತ್ತಿ, ರಾಮದುರ್ಗ, ಧಾರವಾಡ ಜಿಲ್ಲೆಯ ಧಾರವಾಡ, ಹುಬ್ಬಳ್ಳಿ, ನವಲಗುಂದ, ಗದಗ ಜಿಲ್ಲೆಯ ನರಗುಂದ ಹಾಗೂ ರೋಣ ಪಟ್ಟಣಗಳಿಗೆ ಕುಡಿಯುವ ನೀರು ಪೂರೈಸುವುದು; ಕೃಷಿ ಹಾಗೂ ಜಲ ವಿದ್ಯುತ್‌ ಉತ್ಪಾದಿಸುವ ಉದ್ದೇಶದಿಂದ 1973ರಲ್ಲಿ ಜಲಾಶಯ ನಿರ್ಮಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT