ಸೌಕರ್ಯಕ್ಕಾಗಿ ಮತ್ತೆ ನಕ್ಸಲರು ಬರಬೇಕೇ?

7
ದಟ್ಟ ಮಳೆಕಾಡಿನ ನಡುವಿನ ಕುಗ್ರಾಮ ಮಲ್ಲಂದೂರು ಗ್ರಾಮಸ್ಥರ ಪ್ರಶ್ನೆ

ಸೌಕರ್ಯಕ್ಕಾಗಿ ಮತ್ತೆ ನಕ್ಸಲರು ಬರಬೇಕೇ?

Published:
Updated:
Deccan Herald

ಮಲ್ಲಂದೂರು (ತೀರ್ಥಹಳ್ಳಿ ತಾ): ನಕ್ಸಲರು ಇಲ್ಲಿಂದ ಹೋದ ನಂತರ ಮೂಲ ಸೌಕರ್ಯಗಳಿಗೂ ಪರದಾಡುವಂತಹ ಪರಿಸ್ಥಿತಿ ಮತ್ತೆ ಎದುರಾಗಿದೆ. ಕುಡಿಯುವ ನೀರು, ರಸ್ತೆ, ವಿದ್ಯುತ್ ಸಂಪರ್ಕ ಪಡೆಯಲೂ ಮತ್ತೆ ನಕ್ಸಲರು ಬರಬೇಕಾ? 
– ಇದು ನಕ್ಸಲ್‌ ಪೀಡಿತ ಪ್ರದೇಶ ಆಗುಂಬೆ ಸಮೀಪದ ಮಲ್ಲಂದೂರು ಗ್ರಾಮಸ್ಥರ ಪ್ರಶ್ನೆ.

ನಕ್ಸಲರು ಸಮೀಪದ ಕಾಡುಗಳಲ್ಲಿ ಅಲೆಯುವಾಗ ಸರ್ಕಾರ ಇಲ್ಲಿನ ಗ್ರಾಮಗಳ ಅಭಿವೃದ್ಧಿಗೆ ಸಾಕಷ್ಟು ಪ್ಯಾಕೇಜ್ ನೀಡಿತ್ತು. ಅಂದಿನ ಜಿಲ್ಲಾಧಿಕಾರಿ ಪಂಕಜ್‌ಕುಮಾರ್ ಪಾಂಡೆ ಒಂದೇ ದಿನ 72 ಕುಟುಂಬಗಳಿಗೆ ಹಕ್ಕುಪತ್ರ ವಿತರಿಸಿದ್ದರು. ದಶಕಗಳ ನಂತರ ಡಾಂಬರು ರಸ್ತೆ ಕಂಡಿದ್ದೆವು. ರಾಜ್ಯದಲ್ಲೇ ಅಧಿಕ ಮಳೆ ಬೀಳುವ ಈ ಪ್ರದೇಶದಲ್ಲಿ ಕುಡಿಯುವ ನೀರಿಗೂ ಹಾಹಾಕಾರ ಇತ್ತು. ಸಾಕಷ್ಟು ತೆರೆದ ಬಾವಿಗಳನ್ನು ತೆಗೆಸಿಕೊಡಲಾಯಿತು. ಭೂಮಿ ಒಡೆತನ ನೀಡಲಾಯಿತು. ಈಗ ಇರುವ ಸೌಕರ್ಯ ಹಾಳಾದರೂ ಕೇಳುವವರೇ ಇಲ್ಲ ಎನ್ನುವುದು ಸ್ಥಳೀಯರ ಅಳಲು.

6ನೇ ತರಗತಿಗೆ 6 ಕಿ.ಮೀ. ನಡೆಯಬೇಕು:

ಆಗುಂಬೆಯಿಂದ 6 ಕಿ.ಮೀ. ದೂರದಲ್ಲಿ ದಟ್ಟ ಮಳೆಕಾಡಿನ ಮಧ್ಯೆ ಇರುವ ಈ ಗ್ರಾಮದಲ್ಲಿ 80 ಕುಟುಂಬಗಳು ವಾಸಿಸುತ್ತಿವೆ. 1ರಿಂದ 5ನೇ ತರಗತಿವರೆಗೆ ಸರ್ಕಾರಿ ಶಾಲೆ ಇದೆ. 6ನ ತರಗತಿಗೆ ಅಲ್ಲಿನ ಮಕ್ಕಳು ಆಗುಂಬೆಗೆ ಹೋಗಬೇಕು. ಬಸ್ ಸೌಕರ್ಯವಿಲ್ಲ. ಅಷ್ಟೂ ದೂರ ನಡೆದುಕೊಂಡೇ ಹೋಗಬೇಕು. ಇಲ್ಲವೇ ಆಟೊರಿಕ್ಷಾಗೆ ₨ 150 ಕೊಡಬೇಕು. ಅಷ್ಟು ದುಡ್ಡುಕೊಡುವ ಶಕ್ತಿ ಅಲ್ಲಿನ ಶೇ2ರಷ್ಟು ಕುಟುಂಬಗಳಿಗೂ ಇಲ್ಲ. ಹಾಗಾಗಿ, ಬಹುತೇಕ ಮಕ್ಕಳು ದಟ್ಟ ಕಾಡಿನ ಮಧ್ಯೆಯ ಹಾದಿಯಲ್ಲಿ ನಡೆದುಕೊಂಡು ಓಡಾಡುತ್ತಾರೆ. ನಾಲ್ಕು ವರ್ಷಗಳ ಹಿಂದೆ ಒಂಟಿ ಕಾಡಾನೆಯೊಂದು ಗ್ರಾಮದ ಒಬ್ಬರನ್ನು ತುಳಿದು ಕೊಂದ ನಂತರ ಮಕ್ಕಳು ನಡೆದುಕೊಂಡು ಓಡಾಡಲು ಭಯಪಡುತ್ತಿದ್ದಾರೆ. ಇಂತಹ ಸಮಸ್ಯೆಗಳ ಮಧ್ಯೆಯೇ ಅಲ್ಲಿನ ಶೇ 90ರಷ್ಟು ಮಕ್ಕಳು ಶಿಕ್ಷಣ ಪಡೆದಿದ್ದಾರೆ. ಹಲವರು ಎಂಜಿನಿಯರಿಂಗ್, ಎಂಬಿಎ ಸೇರಿದಂತೆ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.

ಕಿತ್ತು ಹೋಗಿದೆ ಡಾಂಬರ್ ರಸ್ತೆ:

ನಕ್ಸಲ್‌ ಪ್ಯಾಕೇಜ್‌ನಲ್ಲಿ ಹಿಂದೆ ಗ್ರಾಮಕ್ಕೆ ಕಿರಿದಾದ ಡಾಂಬರ್ ರಸ್ತೆ ನಿರ್ಮಿಸಲಾಗಿತ್ತು. ಈಗ ಎಲ್ಲ ಕಿತ್ತು ಹೋಗಿದೆ. ಗುಂಡಿಗಳು ಬಿದ್ದಿವೆ. ಆದರೆ, ದುರಸ್ತಿ ಕಾರ್ಯ ಆಗಿಲ್ಲ. ಅದೇ ರಸ್ತೆಯಲ್ಲಿ ನಿತ್ಯವೂ ಸಂಚರಿಸುವ ಅನಿವಾರ್ಯತೆ ಗ್ರಾಮಸ್ಥರದ್ದು. ಕಾಡಾನೆ, ಕಾಡು ಪ್ರಾಣಿಗಳ ಹಾವಳಿ ಪರಿಣಾಮ ಕತ್ತಲಾದ ನಂತರ ಗ್ರಾಮಕ್ಕೆ ಹೋಗಲು ಹೆದರುತ್ತಾರೆ. ಕೆಲಸದ ನಿಮಿತ್ತ ಹೊರಗೆ ಹೋದವರು ತಡವಾದರೆ ಆಗುಂಬೆ ಅಥವಾ ತೀರ್ಥಹಳ್ಳಿಯಲ್ಲೇ ತಂಗಿ ಬೆಳಿಗ್ಗೆ ಗ್ರಾಮದತ್ತ ಮುಖ ಮಾಡುತ್ತಾರೆ.

ಒಂದು ಬೆಳೆ ಭತ್ತವೇ ಆಧಾರ:

ಭಾರಿ ಮಳೆ ಸುರಿಯುವ ಈ ಪ್ರದೇಶದಲ್ಲಿ ಮಳೆಗಾಲದಲ್ಲಿ ಒಂದು ಬೆಳೆ ಭತ್ತ ಬೆಳೆಯುತ್ತಾರೆ. ಪ್ರತಿ ಕುಟುಂಬಗಳಿಗೂ ಒಂದು, ಎರಡು ಎಕರೆ ಜಮೀನು ಇದೆ. ಕೆಲವರು ಸಣ್ಣ ಪ್ರಮಾಣದಲ್ಲಿ ಅಡಿಕೆ ತೋಟ ಮಾಡಿದ್ದಾರೆ. ಆದರೆ, ಹೆಚ್ಚಿನ ಮಳೆ, ಕೊಳೆ ರೋಗದ ಕಾರಣ ಮರಗಳು ಏಳಿಗೆ ಹೊಂದಿಲ್ಲ. ಫಸಲು ಕೈಸೇರುತ್ತಿಲ್ಲ. ಒಂದಯ ಬೆಳೆ ಭತ್ತದಲ್ಲೇ ಎಲ್ಲ ಕುಟುಂಬಗಳ ಜೀವನ ಸಾಗುತ್ತಿದೆ. ಕಲಿತವರು ಊರಿನಿಂದ ದೂರ ಹೋಗಿ ಸ್ವಯಂ ಉದ್ಯೋಗ ಮಾಡುತ್ತಾ ಅಲ್ಲೇ ನೆಲಸಿದ್ದಾರೆ. 

‘ಬಸ್‌ ಸೌಕರ್ಯ ಸೇರಿದಂತೆ ಮೂಲ ಸೌಕರ್ಯ ಇಲ್ಲದ ಈ ಊರಿಗೆ ಹೆಣ್ಣು ಕೊಡಲು ಯಾರೂ ಮುಂದೆ ಬರುವುದಿಲ್ಲ. ಹಾಗಾಗಿ, ಓದಿದ ಹುಡುಗರು ಸಣ್ಣಪುಟ್ಟ ಕೆಲಸ ಮಾಡಿಕೊಂಡು ಪೇಟೆಯಲ್ಲೇ ನೆಲೆಸಿದ್ದಾರೆ. ಹಬ್ಬ, ಶುಭ ಕಾರ್ಯಗಳಿಗೆ ಬಂದು ಹೋಗುತ್ತಾರೆ. ನಮಗೂ ಅವರು ಅಲ್ಲೇ ಇರಲಿ ಎನಿಸಿದೆ. ನಮ್ಮ ತಲೆ ಮಾರಿನ ನಂತರ ಈ ಊರು ಖಾಲಿಯಾಗಬಹುದು’ ಎಂದು ವಿಷಾದ ವ್ಯಕ್ತಪಡಿಸಿದರು ಗ್ರಾಮದ ಜಯಮ್ಮ, ಸಾವಿತ್ರಮ್ಮ, ವಿನೋದಮ್ಮ.

ಹುಲಿ ಸಂರಕ್ಷಣಾ ಯೋಜನೆ: ಈ ಪ್ರದೇಶ ಪರಿಸರ ಸೂಕ್ಷ್ಮ ವಲಯ, ಹಲಿ ಸಂರಕ್ಷಣಾ ಪ್ರದೇಶ ಎಂದು ಘೋಷಿಸಲಾಗಿದೆ. ಹಾಗಾಗಿ, ಇಲ್ಲಿನ ಜನರು ಕಾಡಿನ ಉತ್ಪನ್ನ ಸಂಗ್ರಹಿಸಲೂ ಅರಣ್ಯಕ್ಕೆ ಹೋಗಲು ಬುಡುವುದಿಲ್ಲ. ಮನೆ ಕಟ್ಟಲು ಸಾಲ ಸೌಲಭ್ಯ ಸಿಗುವುದಿಲ್ಲ. ಮಳೆ ಬಂದು, ಮರ ಬಿದ್ದು ವಿದ್ಯುತ್ ವ್ಯತ್ಯವಾದರೆ ದುರಸ್ತಿಗೆ ವಾರ, ತಿಂಗಳು ಕಾಯಬೇಕು. ಜೀವನ ನರಕವಾಗಿದೆ ಎಂದು ಅಳಲು ತೋಡಿಕೊಂಡರು ಗ್ರಾಮದ ಯುವಕ ವಿನಯ್. 

ಮೂಲ ಸೌಕರ್ಯ, ಕಾಡನೆ ಹಿಡಿಯುವುದು ಸೇರಿದಂತೆ ಹಲವು ಬೇಡಿಕೆ ಈಡೇರಿಕೆಗೆ ಸರ್ಕಾರ ಕ್ರಮ ಕೈಗೊಳ್ಳಬೇಕು. ಇಲ್ಲಿನ ಜನರಿಗೆ ವಿಶೇಷ ಪ್ಯಾಕೇಜ್ ನೀಡಬೇಕು ಎಂದು ಆಗ್ರಹಿಸುತ್ತಾರೆ ಆಗುಂಬೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಹಸಿರು ಮನೆ ನಂದನ್.

 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !