ಹಂಪಿ ಕನ್ನಡ ವಿಶ್ವವಿದ್ಯಾಲಯ: ಈಗಲೂ ಮಲ್ಲಿಕಾ ಘಂಟಿ ಕುಲಪತಿ!

ಶುಕ್ರವಾರ, ಮೇ 24, 2019
29 °C

ಹಂಪಿ ಕನ್ನಡ ವಿಶ್ವವಿದ್ಯಾಲಯ: ಈಗಲೂ ಮಲ್ಲಿಕಾ ಘಂಟಿ ಕುಲಪತಿ!

Published:
Updated:
Prajavani

ಹೊಸಪೇಟೆ: ಈಗಲೂ ಮಲ್ಲಿಕಾ ಎಸ್‌. ಘಂಟಿಯವರೇ ಇಲ್ಲಿನ ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿ!

ಹೌದು, ಕನ್ನಡ ವಿ.ವಿ. ವೆಬ್‌ಸೈಟ್‌ಗೆ ಭೇಟಿ ನೀಡಿದರೆ ಇಂತಹದ್ದೊಂದು ವಿಷಯ ಎಂತಹವರಿಗೂ ಅಚ್ಚರಿ ಮೂಡಿಸದೆ ಇರದು. 

ಇಷ್ಟೇ ಅಲ್ಲ, ರಾಜ್ಯದಲ್ಲಿ ಸರ್ಕಾರ ಬದಲಾದರು ಈಗಲೂ ಬಸವರಾಜ ರಾಯರಡ್ಡಿ ಅವರೇ ಉನ್ನತ ಶಿಕ್ಷಣ ಸಚಿವರಾಗಿದ್ದಾರೆ. ಅವರು ವಿ.ವಿ. ಸಹ ಕುಲಾಧಿಪತಿಗಳಾಗಿದ್ದಾರೆ. ಪ್ರೊ.ಡಿ. ಪಾಂಡುರಂಗಬಾಬು ಅವರ ನಂತರ ಮೂವರು ಕುಲಸಚಿವರಾಗಿದ್ದಾರೆ. ಆದರೆ, ಈಗಲೂ ಪಾಂಡುರಂಗಬಾಬು ಅವರೇ ಕುಲಸಚಿವರು ಎಂಬ ಮಾಹಿತಿ ವಿ.ವಿ. ವೆಬ್‌ಸೈಟಿನಲ್ಲಿದೆ.

ವಿ.ವಿ. ನೂತನ ಕುಲಪತಿಯಾಗಿ ಪ್ರೊ. ಸ.ಚಿ. ರಮೇಶ್‌ ಅವರನ್ನು ನೇಮಿಸಿ ರಾಜ್ಯಪಾಲರು ಫೆ. 20ರಂದು ಆದೇಶ ಹೊರಡಿಸಿದ್ದರು. ಹೊಸ ಕುಲಪತಿ ಬಂದು ಸುಮಾರು ಎರಡು ತಿಂಗಳಾಗುತ್ತ ಬಂದಿದೆ. ಆದರೆ, ಹೊಸ ಕುಲಪತಿ, ಸಹ ಕುಲಾಧಿಪತಿ, ಕುಲಸಚಿವರ ಹೆಸರು ಅಪ್‌ಡೇಟ್‌ ಮಾಡಿಲ್ಲ. ಕುಲಪತಿ ಪ್ರೊ. ಮಲ್ಲಿಕಾ ಎಸ್‌. ಘಂಟಿಯವರ ಹೆಸರಿನ ಜತೆಗೆ ಅವರ ಭಾವಚಿತ್ರ ಕೂಡ ವೆಬ್‌ಸೈಟಿನಲ್ಲಿ ರಾರಾಜಿಸುತ್ತಿದೆ.

‘ಹಂಪಿ ಕನ್ನಡ ವಿಶ್ವವಿದ್ಯಾಲಯವು ರಾಜ್ಯದ ಏಕೈಕ ಭಾಷಿಕ ವಿ.ವಿ. ಆಗಿದೆ. ಸಂಶೋಧನೆಯೇ ಅದರ ಮುಖ್ಯ ಉದ್ದೇಶ. ಭಾಷೆ ಸೇರಿದಂತೆ ಅನೇಕ ವಿಷಯಗಳ ಕುರಿತು ಸಂಶೋಧನೆ ನಡೆದಿವೆ. ಈಗಲೂ ನಡೆಯುತ್ತಿವೆ. 25 ವರ್ಷಗಳನ್ನು ಪೂರೈಸಿ ಇತ್ತೀಚೆಗೆ ಬೆಳ್ಳಿಹಬ್ಬಕ್ಕೆ ವಿ.ವಿ. ಸಾಕ್ಷಿಯಾಗಿದೆ. ಇಂತಹ ಸಂದರ್ಭದಲ್ಲೂ ವಿ.ವಿ. ವೆಬ್‌ಸೈಟ್‌ ಅಪ್‌ಡೇಟ್‌ ಆಗದೇ ಇರುವುದು ದುರದೃಷ್ಟಕರ’ ಎನ್ನುತ್ತಾರೆ ಹಿರಿಯ ಲೇಖಕ ಮೃತ್ಯುಂಜಯ ರುಮಾಲೆ.

‘ಕನ್ನಡ ವಿ.ವಿ. ಕಾರ್ಯಚಟುವಟಿಕೆಗಳು, ಶೈಕ್ಷಣಿಕ ಸಂಶೋಧನಾತ್ಮಕ ಕೆಲಸಗಳನ್ನು ನಾಡಿನ ಜನ ಬಹಳ ಸೂಕ್ಷ್ಮವಾಗಿ ನೋಡುತ್ತಿರುತ್ತಾರೆ. ಹಾಗಾಗಿ ತುರ್ತಾಗಿ ವೆಬ್‌ಸೈಟ್‌ನಲ್ಲಿನ ಮಾಹಿತಿ ಅಪ್‌ಡೇಟ್‌ ಮಾಡಬೇಕು’ ಎಂದು ಆಗ್ರಹಿಸಿದರು.

‘ವಿ.ವಿ. ಆಡಳಿತ ವಿಭಾಗದ ಮಾಹಿತಿಯೇ ಸರಿಯಾಗಿ ಅಪ್‌ಡೇಟ್‌ ಆಗಿಲ್ಲ ಎಂದರೆ ಶೈಕ್ಷಣಿಕ ಚಟುವಟಿಕೆಗಳ ಮಾಹಿತಿ ಕೂಡ ಅಪ್‌ಡೇಟ್‌ ಆಗಿರುವುದಿಲ್ಲ. ಇದರಿಂದ ವಿದ್ಯಾರ್ಥಿಗಳು ಅನೇಕ ಸಲ ಮಾಹಿತಿ ಗೊತ್ತಾಗದೆ ಪೇಚಿಗೆ ಸಿಲುಕಿದ್ದಾರೆ. ತಂತ್ರಜ್ಞಾನದಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ಈಗಲೂ ಅದಕ್ಕೆ ಹೊಂದಿಕೊಳ್ಳದಿದ್ದರೆ ಕಷ್ಟ. ಆನ್‌ಲೈನ್‌ನಲ್ಲಿ ಪುಸ್ತಕ ಖರೀದಿಸುವ ಕಾಲವಿದು. ವಿ.ವಿ.ಯ ಪ್ರತಿಯೊಂದು ಚಟುವಟಿಕೆಗಳ ಕುರಿತು ಜನರಿಗೆ ವೆಬ್‌ಸೈಟ್‌ ಮೂಲಕ ಗೊತ್ತಾಗಬೇಕು. ಆ ಕೆಲಸ ಬೇಗ ಆಗಬೇಕು’ ಎಂದು ಹೆಸರು ಬಹಿರಂಗ ಪಡಿಸಲು ಇಚ್ಛಿಸದ ಸಂಶೋಧನಾ ವಿದ್ಯಾರ್ಥಿ ತಿಳಿಸಿದರು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !