ಎಲ್ಲರ ಚಿತ್ತ ಈಗ ಬಂಜಾರ, ದಲಿತರತ್ತ

ಶನಿವಾರ, ಏಪ್ರಿಲ್ 20, 2019
29 °C
ಶಾಣಪ್ಪಗೆ ಪ್ರತಿಯಾಗಿ ರತ್ನಪ್ರಭಾ, ಜಾಧವಗೆ ಎದುರೇಟು ನೀಡಲು ‘ತ್ರಿಮೂರ್ತಿಗಳು’

ಎಲ್ಲರ ಚಿತ್ತ ಈಗ ಬಂಜಾರ, ದಲಿತರತ್ತ

Published:
Updated:
Prajavani

ಕಲಬುರ್ಗಿ: ಗುಲಬರ್ಗಾ ಮೀಸಲು ಕ್ಷೇತ್ರದ ಚುನಾವಣಾ ಕಣ ದಲಿತರು ಮತ್ತು ಬಂಜಾರ ಸಮಾಜದ ನಡುವಿನ ಹೋರಾಟ ಎಂಬಂತೆ ಬಿಂಬಿತವಾಗುತ್ತಿದೆ.

ಈ ಎರಡೂ ಸಮುದಾಯಗಳು ಇಲ್ಲಿ ಪ್ರಬಲವಾಗಿರುವುದರಿಂದ ಆ ಮತಗಳನ್ನು ಸೆಳೆಯುವ ಇಲ್ಲವೆ ವಿಭಜಿಸುವ ಯತ್ನ ಕಾಂಗ್ರೆಸ್‌ ಮತ್ತು ಬಿಜೆಪಿಯಿಂದ ನಡೆಯುತ್ತಿದ್ದು, ಅದು ಈಗ ನಿರ್ಣಾಯಕ ಹಂತ ತಲುಪಿದೆ.

ಕಾಂಗ್ರೆಸ್‌ ಅಭ್ಯರ್ಥಿ ಮಲ್ಲಿಕಾರ್ಜುನ ಖರ್ಗೆ ಬಲಗೈಗೆ ಸೇರಿದವರು. ಬಿಜೆಪಿ ಅಭ್ಯರ್ಥಿ ಡಾ.ಉಮೇಶ ಜಾಧವ ಬಂಜಾರ ಸಮುದಾಯದವರು. ರಾಜ್ಯದಲ್ಲಿ ಬಂಜಾರ ಸಮುದಾಯ ಸಹ ಪರಿಶಿಷ್ಟ ಜಾತಿಯ ಪಟ್ಟಿಯಲ್ಲಿದೆ.

ಮೂಲ ಅಸ್ಪೃಶ್ಯರಲ್ಲಿ ಬಲಗೈ ಪಂಗಡ ಕಾಂಗ್ರೆಸ್‌ ಜೊತೆ ಹಾಗೂ ಎಡಗೈ ಪಂಗಡ ಬಿಜೆಪಿಯೊಂದಿಗೆ ಇದೆ ಎಂದೇ ಬಿಂಬಿಸಲಾಗುತ್ತಿದೆ. ಬಿಜೆಪಿ ಸಹ ಎಡಗೈ ಪಂಗಡದ ಈ ಭಾಗದ ಹಿರಿಯ ನಾಯಕ ಕೆ.ಬಿ.ಶಾಣಪ್ಪ ಅವರನ್ನು ರಾಜ್ಯಸಭೆ, ವಿಧಾನ ಪರಿಷತ್‌ಗೂ ನಾಮ
ಕರಣ ಮಾಡಿ ಈ ಭಾಗದ ಅವರ ಸಮುದಾಯದ ಮತಗಳನ್ನು ಹಿಡಿದಿಟ್ಟುಕೊಳ್ಳುವ ಯತ್ನ ಮಾಡಿತ್ತು. ಶಾಣಪ್ಪ ಅವರು ಖರ್ಗೆ ಅವರಿಗೆ ಪರ್ಯಾಯ ನಾಯಕ ಎಂಬಂತೆ ಬಿಂಬಿತವಾಗಿದ್ದರು.

ಬದಲಾದ ರಾಜಕೀಯ ಸನ್ನಿವೇಶದಲ್ಲಿ ಶಾಣಪ್ಪ ಅವರು ಕಾಂಗ್ರೆಸ್‌ ಸೇರಿ ಖರ್ಗೆ ಅವರ ಜೊತೆ ಕೈಜೋಡಿಸಿದ್ದು, ಪ್ರಚಾರಕ್ಕೂ ಧುಮುಕಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಅವರು ನಾಮಪತ್ರ ಸಲ್ಲಿಸಲು ತಮ್ಮೊಂದಿಗೆ ಶಾಣಪ್ಪ ಅವರನ್ನೂ ಕರೆದೊಯ್ದಿದ್ದರು. ಆ ಮೂಲಕ ಎಡ–ಬಲ ಪಂಗಡಗಳು ಒಂದಾಗಿದ್ದೇವೆ ಎಂಬ ಸಂದೇಶ ಸಾರುವುದು ಇದರ ಉದ್ದೇಶವಾಗಿತ್ತು ಎನ್ನುತ್ತವೆ ಮೂಲಗಳು.

ಶಾಣಪ್ಪ ಅವರ ನಿರ್ಗಮನದಿಂದ ಆಗಿರುವ ‘ಹಾನಿ’ ತುಂಬಿಸಿಕೊಳ್ಳಲು ಮುಂದಾಗಿರುವ ಬಿಜೆಪಿ, ಅವರ ಸಮುದಾಯದವರಾದ ರಾಜ್ಯ ಸರ್ಕಾರದ ನಿವೃತ್ತ ಮುಖ್ಯಕಾರ್ಯದರ್ಶಿ ಕೆ.ರತ್ನಪ್ರಭಾ ಅವರನ್ನು ಕಲಬುರ್ಗಿಗೆ ಕರೆತಂದು ಪಕ್ಷಕ್ಕೆ ಸೇರಿಸಿಕೊಂಡಿದೆ. ರತ್ನಪ್ರಭಾ ಅವರು ಬೀದರ್‌, ರಾಯಚೂರಲ್ಲಿ ಜಿಲ್ಲಾಧಿಕಾರಿ ಹಾಗೂ ಕಲಬುರ್ಗಿ ವಿಭಾಗದ ಪ್ರಾದೇಶಿಕ ಆಯುಕ್ತರಾಗಿ ಕೆಲಸ ಮಾಡಿದ್ದವರು. ಹೀಗಾಗಿ ಅವರ ಮೂಲಕ ಆ ಸಮುದಾಯದ ಮತ ಸೆಳೆಯುವ ಮತ್ತು ಈ ಮತಗಳು ಕೈಬಿಟ್ಟು ಹೋಗುವುದನ್ನು ತಡೆಯುವ ಪ್ರತಿ ತಂತ್ರ ಬಿಜೆಪಿಯದು.

ಬಿಜೆಪಿಯ ಈ ತಂತ್ರಗಾರಿಕೆ ಇಷ್ಟಕ್ಕೆ ನಿಂತಿಲ್ಲ. ಬಿಜೆಪಿ ಗುಲಬರ್ಗಾ ಲೋಕಸಭಾ ಕ್ಷೇತ್ರದ ಉಸ್ತುವಾರಿಯನ್ನಾಗಿ ವಿಧಾನ ಪರಿಷತ್‌ ಸದಸ್ಯ ಎನ್‌.ರವಿಕುಮಾರ್‌ ಅವರನ್ನು ನೇಮಿಸಿದೆ. ಅವರು ಇಲ್ಲಿಯೇ ಠಿಕಾಣಿ ಹೂಡಿ ತಮ್ಮ ಅಭ್ಯರ್ಥಿಯನ್ನು ಗೆಲ್ಲಿಸಲು ಪರಿಶ್ರಮ ಪಡುತ್ತಿದ್ದಾರೆ. ರವಿಕುಮಾರ ಸಹ ಎಡಗೈ ಪಂಗಡಕ್ಕೆ ಸೇರಿದವರು.

ಇದು ಎಡ–ಬಲದ ಕತೆಯಾದರೆ, ಬಂಜಾರ ಸಮುದಾಯದ ಮತಗಳನ್ನು ಹಿಡಿದಿಟ್ಟುಕೊಳ್ಳುವ ಮತ್ತು ವಿಭಜಿಸುವ ತಂತ್ರಗಳೂ ಬಹಿರಂಗವಾಗಿಯೇ ನಡೆಯುತ್ತಿವೆ.

‘ದೇಶದಲ್ಲಿ ಬಂಜಾರ ಸಮುದಾಯದ ಒಬ್ಬರೂ ಸಂಸದರಿಲ್ಲ. ನಮ್ಮ ಸಮುದಾಯದ ಒಬ್ಬರಾದರೂ ಸಂಸದರಾಗಬೇಕು ಎಂಬುದು ಧರ್ಮಗುರು ರಾಮರಾವ್‌ ಮಹಾರಾಜರ ಬಯಕೆ’ ಎನ್ನುತ್ತಿರುವ ಬಿಜೆಪಿ ಅಭ್ಯರ್ಥಿ ಡಾ.ಉಮೇಶ ಜಾಧವ ಅವರು ತಮ್ಮ ಸಮಾಜವನ್ನು ಭಾವನಾತ್ಮಕವಾಗಿ ಒಟ್ಟಾಗಿಸುವ ಯತ್ನದಲ್ಲಿ ತೊಡಗಿದ್ದಾರೆ. ‘ಧರ್ಮಗುರುವಿನ ಹೆಸರು ರಾಜಕೀಯಕ್ಕೆ ಎಳೆತಂದಿರುವುದು ಸರಿಯಲ್ಲ’ ಎಂದು ಅವರದ್ದೇ ಸಮುದಾಯದ ಕೆಲವರು ಆಕ್ಷೇಪವನ್ನೂ ವ್ಯಕ್ತಪಡಿಸುತ್ತಿದ್ದಾರೆ.

ಇನ್ನೊಂದೆಡೆ ಬಿಜೆಪಿಯಲ್ಲಿ ಲೋಕಸಭೆ ಟಿಕೆಟ್‌ ಆಕಾಂಕ್ಷಿಗಳಾಗಿದ್ದ ಬಂಜಾರ ಸಮಾಜದ ಮೂವರ ಪೈಕಿ ಬಾಬುರಾವ ಚವ್ಹಾಣ, ಸುಭಾಸ ರಾಠೋಡ ಇಬ್ಬರೂ ಕಾಂಗ್ರೆಸ್‌ ತೆಕ್ಕೆಗೆ ಜಾರಿದ್ದಾರೆ.

ಬಂಜಾರ ಸಮಾಜದ ಹಿರಿಯ ಮುಖಂಡ ರೇವೂನಾಯಕ ಬೆಳಮಗಿ ಅವರಿಗೂ ಬೇಡಿಕೆ ಬಂದಿದೆ. ಲೋಕಸಭೆಯ ಎರಡು ಚುನಾವಣೆಯಲ್ಲಿ ಖರ್ಗೆ ವಿರುದ್ಧ ಬಿಜೆಪಿಯಿಂದ ಸ್ಪರ್ಧಿಸಿದ್ದ ಬೆಳಮಗಿ ಈಗ ಜೆಡಿಎಸ್‌ನಲ್ಲಿದ್ದಾರೆ. ಕಾಂಗ್ರೆಸ್‌–ಜೆಡಿಎಸ್‌ ಜಂಟಿ ಪ್ರಚಾರದಲ್ಲಿ ಅವರಿಗೆ ಪ್ರಮುಖ ಸ್ಥಾನ ನೀಡಲಾಗುತ್ತಿದ್ದು, ಆ ಮೂಲಕ ಬಂಜಾರ ಮತಗಳನ್ನು ವಿಭಜನೆ ಮಾಡುವ ತಂತ್ರವನ್ನು ಕಾಂಗ್ರೆಸ್‌ ಹೆಣೆಯುತ್ತಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 1

  Sad
 • 0

  Frustrated
 • 1

  Angry

Comments:

0 comments

Write the first review for this !